ಕುಟುಂಬ ನಿರ್ವಹಣೆಯಲ್ಲಿ ತಾಯಂದಿರ ಪಾತ್ರ ಮುಖ್ಯ
Team Udayavani, Sep 30, 2018, 4:04 PM IST
ರಾಣಿಬೆನ್ನೂರ: ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ತಾಯಂದಿರ ಪಾತ್ರ ಬಹು ಮುಖ್ಯವಾಗಿದೆ. ಮನೆಯ ಕುಟುಂಬದ ನಿರ್ವಹಣೆಯ ಜೊತೆಗೆ ಆ ಕುಟುಂಬದ ಶೈಕ್ಷಣಿಕ ಪ್ರಗತಿಯೂ ತಾಯಂದಿರ ಜವಾಬ್ದಾರಿಯಾಗಬೇಕು. ಮಗುವಿಗೆ ಮೊದಲ ಗುರು ತಾಯಿ ಹೀಗಿರುವಾಗ ಮೊದಲ ಶಿಕ್ಷಣ ತಾಯಿಯಿಂದಲೇ ಪ್ರಾರಂಭವಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ನಿವೃತ್ತ ಶಿಕ್ಷಕ ಜೆ.ಎಂ.ಮಠದ ಹೇಳಿದರು.
ಶನಿವಾರ ತಾಲೂಕಿನ ಚೌಡಯ್ಯದಾನಪುರದಲ್ಲಿ ತಾಪಂ ಶಿಶು ಅಭಿವೃದ್ಧಿ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಹಮ್ಮಿಕೊಂಡಿದ್ದ ಹರನಗಿರಿ ವಲಯ ಮಟ್ಟದ ಪ್ರಧಾನ ಮಂತ್ರಿ ಮಾತೃವಂದನಾ ಸಪ್ತಾಹ, ಪೋಷಣಾ ಅಭಿಯಾನ ಮತ್ತು ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಯಂದಿರು ಹೆಚ್ಚಾಗಿ ಟಿವಿ ಮುಂದೆ ಕಾಲ ಕಳೆಯುವುದರಿಂದ ಮತ್ತು ಮೊಬೈಲ್‌ನಲ್ಲಿ ನಿರತರಾಗುವುದರಿಂದ ಮಕ್ಕಳ ಮೇಲೂ ಅಗಾಧವಾದ ಪರಿಣಾಮ ಬೀರಲಿದೆ. ಇದರಿಂದ ಮಕ್ಕಳ ಬೆಳವಣಿಗೆಯೂ ಸಹ ಕುಂಠಿತಗೊಳ್ಳುವುದರ ಜೊತೆಗೆ ಮಕ್ಕಳ ಬುದ್ಧಿಮಟ್ಟ ಕ್ಷೀಣಿಸುತ್ತದೆ. ಇಂತಹ ಬೆಳವಣಿಗೆಯಿಂದ ಮಕ್ಕಳು ಸಮಾಜದಲ್ಲಿ ಪ್ರಗತಿ ಹೊಂದಲು ಅಸಾಧ್ಯವಾಗುತ್ತದೆ ಎಂದರು.
ಮಾತೃ ವಂದನಾ ಯೋಜನೆಯ ಜಿಲ್ಲಾ ಕಾರ್ಯಕ್ರಮ ಸಂಯೋಜಕಿ ಯಶೋಧ ಪಾಟೀಲ ಮಾತನಾಡಿ, ತಾಯಂದಿರು ಮತ್ತು ಮಕ್ಕಳು ಆರೋಗ್ಯವಂತರಾಗಿರಲಿ ಎಂಬ ಸದುದ್ದೇಶದಿಂದ ಕೇಂದ್ರ ಸರಕಾರವು ಮಾತೃ ವಂದನಾ ಯೋಜನೆಯನ್ನು ಜಾರಿಗೊಳಿಸಿದೆ. ಇದನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಮುನ್ನಡೆದಾಗ ಇಂತಹ ಯೋಜನೆಗಳು ಜಾರಿಯಾಗಿದ್ದಕ್ಕೂ ಸಾರ್ಥಕವಾಗುತ್ತದೆ ಎಂದರು.
ಹೆಚ್ಚಾಗಿ ಪೌಷ್ಟಿಕಾಂಶ ಆಹಾರವನ್ನು ಸೇವನೆ ಮಾಡಿದರೆ ಬೌದ್ಧಿಕವಾಗಿ ಬೆಳೆಯುವುದರ ಜೊತೆಗೆ ದೈಹಿಕವಾಗಿ ಸದೃಢರಾಗಿ ಬೆಳೆಯಲು ಸಾಧ್ಯವಾಗುತ್ತದೆ. ಆದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಹಿಂದೇಟು ಹಾಕುತ್ತಿರುವಾಗ ಕೇಂದ್ರ ಸರಕಾರವು ಮಾತೃ ವಂದನಾ ಯೋಜನೆ ಜಾರಿಗೊಳಿಸಿ ಗರ್ಭಿಣಿಯ ಮತ್ತು ಮಗುವಿನ ಆರೋಗ್ಯ ಕಾಪಾಡಲು ನೆರವು ನೀಡುತ್ತಿರುವುದು ಶ್ಲಾಘನೀಯ ಎಂದರು.
ವಲಯ ಮೇಲ್ವಿಚಾರಕಿ ಪ್ರತಿಭಾ ಕುಲಕರ್ಣಿ ಮಾತನಾಡಿ, ಮಕ್ಕಳ ಸಂಸ್ಕೃತಿ ಸಂಸ್ಕಾರ ಕುಟುಂಬದ ಸದಸ್ಯರ ಮೇಲೆ ಅವಲಂಬಿತವಾಗಿರುತ್ತದೆ. ಅದರಲ್ಲೂ ತಂದೆ-ತಾಯಿಯರ ಪಾತ್ರ ಬಹು ಮುಖ್ಯವಾಗಿರುತ್ತದೆ. ಮನೆಯ ಸದಸ್ಯರು ಸಂಸ್ಕಾರವಂತರಾದರೆ ಮಕ್ಕಳು ಸಂಸ್ಕಾರವಂತರಾಗುತ್ತರೆ. ಕೇವಲ ಅಂಕಗಳಿಗೋಸ್ಕರ ಮಕ್ಕಳಿಗೆ ಶಿಕ್ಷಣ ಕೊಡಿಸದೆ ಉತ್ತಮ ಸಂಸ್ಕಾರ, ಗುರು-ಹಿರಿಯರನ್ನು ಗೌರವಿಸುವ ತಂದೆ-ತಾಯಿಯರನ್ನು ಪೂಜಿಸುವ ಶಿಕ್ಷಣ ಕಲಿಸಬೇಕು ಎಂದರು.
ಯಲ್ಲಪ್ಪ ಬಾಲಣ್ಣನವರ, ಆರೋಗ್ಯ ಸಹಾಯಕ ಅಜಯ್ ವಿರಕ್ತಮಠ ಸೇರಿದಂತೆ ಮತ್ತಿತರರು ಕಾರ್ಯಕ್ರಮ ಕುರಿತು ಮಾತನಾಡಿದರು. ಇದೇ ಸಂದರ್ಭದಲ್ಲಿ ಸೀಮಂತ ಕಾರ್ಯಕ್ರಮ ನೆರವೇರಿತು. ಅಂಗನವಾಡಿಯ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ನೆರೆದ ಜನರ ಮನ ರಂಜಿಸಿದರು. ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಂಗನವಾಡಿ ಮೇಲ್ವಿಚಾರಕಿ ಶೋಭಾ ಹುಲ್ಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ತಿರಕಮ್ಮ ಸಿದ್ದಪ್ಪನವರ, ಸದಸ್ಯ ಲಕ್ಷ್ಮಣ ದೀಪಾವಳಿ, ವೀರಣ್ಣ ನಾಗಪ್ಪ ಬನ್ನಿಮಟ್ಟಿ, ವೀರೇಶ ಮಲ್ಲಪ್ಪ ಚಕ್ರಸಾಲಿ, ಚಂದ್ರಪ್ಪ ದಳವಾಯಿ, ಮಂಜುಳಾ ಓಬಣ್ಣನವರ, ಅಂಗನವಾಡಿ ಕಾರ್ಯಕರ್ತರು, ಸಹಾಯಕಿಯರು ಇದ್ದರು. ಜ್ಯೋತಿ ಅರಸಪ್ಪನವರ ಪ್ರಾರ್ಥಿಸಿದರು. ಅಂಗನವಾಡಿ ವನಜಾಕ್ಷಿ ಪೂಜಾರ ನಿರೂಪಿಸಿದರು. ಮಂಗಳಾ ಉಪ್ಪಿನ ಸ್ವಾಗತಿಸಿದರು. ಶಾರದಾ ಓಲೇಕಾರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.