ಸಂತ ಶರೀಫ ಅಜ್ಜನ ಜಾತ್ರೆ ನಾಳೆಯಿಂದ
Team Udayavani, Mar 14, 2019, 10:50 AM IST
ಶಿಗ್ಗಾವಿ: ಬೋಧ ಒಂದೇ ಬ್ರಹ್ಮನಾದ… ಒಂದೇ ಎಂಬ ಹಾಡಿನ ಮೂಲಕವೇ ಜೀವನದ ತಿರುಳನ್ನು ಉಣಬಡಿಸಿದ ಕರ್ನಾಟಕದ ಕಬೀರ, ಭಾವೈಕ್ಯತೆಯ ಹರಿಕಾರ ಜನಪದ ಸಂತ ಕವಿಗಳೇ ಶಿಶುವಿನಾಳದ ಷರೀಫ್‌ಜ್ಜ ಕೇವಲ ಜನಪದ, ತತ್ವಪದಕಾರನಲ್ಲ, ಕಾಲಜ್ಞಾನಿಯೂ ಹೌದು, ವಿಜ್ಞಾನಿಯೂ ಹೌದು.
ಗುಡಿಯ ನೋಡಿರಣ್ಣ…ದೇಹದ ಗುಡಿಯ ನೋಡಿರಣ್ಣ…., ತರವಲ್ಲ ತಗಿ ನಿನ್ನ ತಂಬೂರಿ-
ಸ್ವರ…, ಅಳಬೇಡ ತಂಗಿ ಅಳಬೇಡ.. ಎನ್ನುವ ತತ್ವ ಸಂದೇಶಗಳು ಇಡೀ ಮನುಕುಲ ಬದುಕಿಗೆ ಬೆಳಕು ಚೆಲ್ಲಿದ ತತ್ವಪದಗಳು. ಇಂತಹ ಸಾವಿರಾರು ಪದಗಳು ಇಂದಿಗೂ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದು ಮಹಾಪುರುಷ ಸಂತ ಶಿಶುವಿನಾಳ ಷರೀಫರು.
ಉನ್ನತ ಧಾರ್ಮಿಕ ಪರಂಪರೆ ಇತಿಹಾಸವಿರುವ ನಾಡಿನಲ್ಲಿ ಅನೇಕ ಶರಣರು, ಸಾಹಿತಿಗಳು ಜನ್ಮ ತಾಳಿ ನಾಡು-ನುಡಿಗಾಗಿ ತಮ್ಮದೆಯಾದ ಕೂಡುಗೆ ನೀಡಿದ್ದಾರೆ. ಅಂತಹ ಹಲವರಲ್ಲಿಯೇ ಕರ್ನಾಟಕದ ಬೀರ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಹರಿಕಾರ ಶಿಶುವಿನಾಳ ಷರೀಫ್ ಶಿವಯೋಗಿಗಳು ಸಮಾಜದಲ್ಲಿನ ಅಂಕು-ಡೊಂಕು ತಿದ್ದಿದವರು.
ಸುಂದರ ಸಮಾಜ ನಿರ್ಮಿಸಲು, ಸಾಮಾಜಿಕ ನ್ಯೂನತೆಯನ್ನು ತಮ್ಮದೆ ಶೈಲಿಯಲ್ಲಿ ರಚಿಸಿ, ವಿಡಂಭನೆಯ ರೀತಿಯಲ್ಲಿಯೇ ಹಾಡಿನ ಮೂಲಕ ತಿದ್ದಿ ಬುದ್ದಿ ಹೇಳುವ ಶಿಶುವಿನಾಳ ಷರೀಫರು ಕೇವಲ ಕವಿಗಳಲ್ಲ; ಮಹಾತ್ಮರು. ತಮ್ಮ ತತ್ವಪದಗಳಿಂದ ನಮ್ಮ ಸಾಮಾಜಿಕ ವ್ಯವಸ್ಥೆ ಮತ್ತು ಜೀವನ ಸಾರ ತಿಳಿಸಿ, ಇಡೀ ಮನು ಕುಲ ಪರಿವರ್ತಿಸಲು ಯತ್ನಿಸಿದವರು.
ನಾಡಿನುದ್ದಕ್ಕೂ ಸಂಚರಿಸಿ ಅಪಾರ ಅನುಭವ ಮೂಲಕ ಬದುಕಿನ ಮೌಲ್ಯ ಹಾಗೂ ಜಂಜಾಟಗಳನ್ನು ಸಹಜ ಪದಗಳ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಮಾಡಿದ್ದಾರೆ. ಲೋಕದ ಚಿಂತಿ ಮಾಡಬೇಕಂತಿ, ಯಾರ ಬೇಡಾಂತರಾ ಮಾಡಪ್ಪ ಚಿಂತಿ… ಎಂದು ಸಾಮಾಜಿಕ ಸಂದೇಶ ಸಾರಿದ್ದಾರೆ. ದೇವಾಲಯ, ಮಠ ಮಂದಿರಗಳನ್ನು ಸ್ಥಾಪಿಸಿದೇ ಊರೂರು ಸುತ್ತುತ್ತ ಒಂದೇ ಕಡೆ ನೆಲೆ ನಿಲ್ಲದೆ ಜನಮನ ತಲುಪಿದ ಸದಾ ಸಂಚಾರಿಯಾಗಿದ್ದರು.
ಷರೀಫರು ಧರ್ಮದಿಂದ ಮುಸಲ್ಮಾನರಾದರೂ ಧರ್ಮ ದೃಷ್ಟಿಯಿಂದ ವಿಶ್ವಮಾನವರಾಗಿ ಜಗ ಕಲ್ಯಾಣಕ್ಕಾಗಿ ಶ್ರಮಿಸಿ ಶ್ರೀಮಂತ ಎನಿಸಿದರು. ಹೀಗಾಗಿ ಅವರ ಜೀವನದ ಸಂದೇಶಗಳು ಭವಿಷ್ಯತ್ವ ಜನತೆಗೆ ದಾರ್ಶನಿಕವಾಗಿ ಉಳಿದಿವೆ. ಕಾಲ ಚಕ್ರ ಉರುಳಿ ಸೂರ್ಯ, ಚಂದ್ರ ಇರುವ ವರೆಗೂ ಸಂತ ಷರೀಫರು ನಾಡಿಗೆ ನೀಡಿದ ಸಂದೇಶಗಳು ಅಮರವಾಗಿವೆ.
ಮಳೆ ನೀರು ಮತ್ತೆ ಹರಿದು ನದಿ ಮೂಲಕ ಸಮುದ್ರವನ್ನೇ ಸೇರುವಂತೆ ಎಲ್ಲ ತತ್ವಗಳ ಮೂಲ ಒಂದೇ ಎಂಬ ವಿಶಾಲ ತತ್ವಸಾರ ಅವರದಾಗಿತ್ತು. ತಿಳಿಗನ್ನಡದ ಸರಳವಾಗಿರುವ ಅವರ ಬೇಡಗಿನ ಹಾಡುಗಳಲ್ಲಿ ಆಧ್ಯಾತ್ಮದ ಸೋಗಡು ತುಂಬಿದೆ. ಯಾವ ಮತ ಪಂಥಗಳಿಗೆ ಸೇರದ ಶಿಶುವಿನಾಳ ಗ್ರಾಮದ ಷರೀಫರ ಸಮಾದಿ ಸರ್ವಧರ್ಮದ ಸಮನ್ವಯದ ಹರಿಕಾರರ ಪ್ರವಾಸಿ ತಾಣವಾಗಿ ಸಮಾನತೆಯ ಸಂದೇಶ ಇಂದಿಗೂ ಸಾರುತ್ತಿಹುದು.
ಹುಲಗೂರ ಖಾದರಶಾ ಅವರ ವರ ಪ್ರಸಾದದಿಂದ ಜನಿಸಿದ ಷರೀಫರು, ಕಳಸದ ಗುರು ಗೋವಿಂದ ಭಟ್ಟರಿಂದ ಸಂತ ಶಿಖಾಮಣಿಯಾಗಿ ರೂಪಗೊಂಡು ಮರೆಯಲಾಗದ ಮಹಾನುಭಾವರಾದರು. ಸರ್ಕಾರ ಷರೀಫರ ಸ್ಮರಣೆಯಾಗಿ ಅಧ್ಯಾತ್ಮಿಕ ಅಧ್ಯಯನ ಕೇಂದ್ರ, ಪ್ರವಾಸಿ ನಿಲಯ, ಬೃಹದಾಕಾರದ ಗ್ರಂಥಾಲಯ, ಕಲಾಭವನ, ಸಮುದಾಯ ಭವನ ನಿರ್ಮಿಸುವ ಜೊತೆಗೆ ಉತ್ತಮ ಪ್ರವಾಸಿ ಕೇಂದ್ರವನ್ನಾಗಿ ರೂಪಿಸಿರುವುದು ಇಲ್ಲಿನ ಜನತೆಗೆ ಸಂತಸದ ಸಂಗತಿಯಾಗಿದೆ.
ಜಾತ್ರಾ ಮಹೋತ್ಸವ
ತಾಲೂಕಿನ ಶಿಶುವಿನಹಾಳ ಗ್ರಾಮದ ಶರೀಫ್‌ಗಿರಿಯಲ್ಲಿ ಗುರು ಗೋವಿಂದ ಭಟ್ಟರ ಹಾಗೂ ಸಂತ ಷರೀಫರ ಜಾತ್ರಾ ಮಹೋತ್ಸವವು ಮಾ.15 ರಿಂದ 17ರ ವರೆಗೆ ನಡೆಯಲಿದೆ. ಮಾ. 15 ರಂದು ಬೆಳಗ್ಗ 9 ಗಂಟೆಗೆ ಭಾವೈಕ್ಯ ಧ್ವಜಾರೋಹಣ ಜರುಗಲಿದ್ದು, ಸಾಯಂಕಾಲ 4 ಗಂಟೆಗೆ ಶಿಶುನಾಳೀ ಶನ ದೇವಸ್ಥಾನದಿಂದ ಶರೀಫಗಿರಿಗೆ ವಾದ್ಯ ವೈಭವಗಳೊಂದಿಗೆ ತೇರಿನ ಕಳಸದ ಮೆರವಣಿಗೆ, ನಂತರ ಕಳಸಾರೋಹಣ ಜರುಗುವುದು. ಮಹಾರಥೋತ್ಸವವು ಮಾರ್ಚ್ 16 ರಂದು ಸಂಜೆ 6 ಗಂಟೆಗೆ ಜರುಗಲಿದ್ದು, ಮಾ. 17 ರಂದು ಕಡುಬಿನ ಕಾಳಗ ನಡೆಯಲಿದೆ. ಹುಬ್ಬಳ್ಳಿ ಬೇಕರಿ ಮಾಲೀಕ ವಿಶ್ವನಾಥಸಾ, ಅಶೋಕ ದಲಬಂಜನ್, ದಾವಣಗೆರೆ ಶಿಲ್ಪಿ ಗುರೂಜಿ, ಗಣೇಶ ಗುಡಿ ಭಜನಾ ಸಂಘ, ಶಿರಗುಪ್ಪಿ ಗುರುಲಿಂಗೇಶ್ವರ ದಾಸೋಹ ಸಮಿತಿ, ಯಲಿವಾಳ ಗ್ರಾಮಸ್ಥರಿಂದ ಅನ್ನ ದಾಸೋಹ ಸೇವೆ ಜರುಗಲಿದೆ. ಜಾತ್ರೆಗೆ ಬರುವ ಭಕ್ತರಿಗೆ ಹುಬ್ಬಳ್ಳಿ, ಹಾವೇರಿ, ಶಿಗ್ಗಾವಿ, ಸವಣೂರ, ಲಲಕ್ಷ್ಮೇಶ್ವರ, ಗುಡಗೇರಿಯಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.