ಸಿಂದಗಿ ಗೆಲುವು ಬಿಜೆಪಿಗೆ ದಿಕ್ಸೂಚಿ: ಬಿ.ಸಿ.ಪಾಟೀಲ್
Team Udayavani, Nov 7, 2021, 8:30 PM IST
![ಸಿಂದಗಿ ಗೆಲುವು ಬಿಜೆಪಿಗೆ ದಿಕ್ಸೂಚಿ: ಬಿ.ಸಿ.ಪಾಟೀಲ್](https://www.udayavani.com/wp-content/uploads/2021/11/BC-Patil-620x372.jpg)
![ಸಿಂದಗಿ ಗೆಲುವು ಬಿಜೆಪಿಗೆ ದಿಕ್ಸೂಚಿ: ಬಿ.ಸಿ.ಪಾಟೀಲ್](https://www.udayavani.com/wp-content/uploads/2021/11/BC-Patil-620x372.jpg)
ಹಾವೇರಿ: ಕಾಂಗ್ರೆಸ್ ನಾಯಕರು ಉಪಚುನಾವಣೆ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಮೊದಲು ಹೇಳಿದ್ದರು. ಗೆದ್ದ ತತ್‌ಕ್ಷಣ ದಿಕ್ಸೂಚಿ ಎಂದು ಹೇಳುತ್ತಿದ್ದಾರೆ. ಹಾನಗಲ್ ಫಲಿತಾಂಶ ದಿಕ್ಸೂಚಿ ಅನ್ನುವುದಾದರೆ ಸಿಂದಗಿ ಗೆಲುವು ಕೂಡ ಬಿಜೆಪಿಗೆ ದಿಕ್ಸೂಚಿ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಿರೇಕೆರೂರು ತಾಲೂಕು ಸರ್ವಜ್ಞನ ಅಬಲೂರು ಗ್ರಾಮದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾನಗಲ್ ಉಪಚುನಾವಣೆ ಗೆಲುವು 2023ರ ಚುನಾವಣೆಗೆ ಕಾಂಗ್ರೆಸ್ಸಿನ ಆರಂಭ ಅನ್ನುವುದಾದರೆ, ಸಿಂದಗಿಯ ಹೀನಾಯ ಸೋಲು ಕೂಡ ಆರಂಭವೇ ಆಗಬೇಕು. ಹಾನಗಲ್ ಗೆಲುವು ಆರಂಭವಾದರೆ, ಸಿಂದಗಿ ಸೋಲು ಕಾಂಗ್ರೆಸ್‌ನ ಅಂತ್ಯ ಎಂದು ಒಪ್ಪಿಕೊಳ್ಳಬೇಕು ಎಂದರು.
ಪುನೀತ್‌ಗೆ ಪದ್ಮಶ್ರೀ: ಆಗ್ರಹ
ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಅವರಿಗೆ ಪದ್ಮಶ್ರೀ ಕೊಡಬೇಕೆಂದು ಆಗ್ರಹಿಸುತ್ತೇನೆ. ಅವರು ಬದುಕಿದ್ದಾಗಲೇ ಪದ್ಮಶ್ರೀ ಕೊಡಬೇಕಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವವಾದರೆ ಬೆಂಬಲಿಸುತ್ತೇನೆ ಎಂದರು.
ಇದನ್ನೂ ಓದಿ:ಪಕ್ಷ ಮತ್ತು ಸಾಮಾನ್ಯ ಜನರ ನಡುವೆ ನಂಬಿಕೆಯ ಸೇತುವೆಯಾಗಿ :ಪ್ರಧಾನಿ ಮೋದಿ
ಬಿಟ್ ಕಾಯಿನ್ ವಿಚಾರ ಬಗ್ಗೆ ಕೇಳಿದ ಪ್ರಶ್ನೆಗೆ, ಬಿಟ್ ಕಾಯಿನ್ ಎಂದರೇನು ಎಂದೇ ನನಗೆ ಗೊತ್ತಿಲ್ಲ. ಈ ಪ್ರಕರಣದ ಬಗ್ಗೆಯೂ ಮಾಹಿತಿಯಿಲ್ಲ. ಆದರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅದು ಅಕ್ರಮ ಎಂದಾದರೆ ಅದರಲ್ಲಿ ಭಾಗಿಯಾದವರಿಗೆ ಶಿಕ್ಷೆಯಾಗುತ್ತದೆ ಎಂದರು.
ಸಚಿವ ಶಿವರಾಮ್ ಹೆಬ್ಟಾರ್, ಆನಂದ ಸಿಂಗ್, ಯು.ಬಿ.ಬಣಕಾರ ಮತ್ತಿತರರು ಉಪಸ್ಥಿತರಿದ್ದರು.