ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಿ: ಉದಾಸಿ
ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ ಸೂಚನೆ
Team Udayavani, Jul 14, 2022, 5:25 PM IST
ಹಾವೇರಿ: ಬ್ಯಾಂಕ್ ಶಾಖೆಗಳಿಲ್ಲದ ಹೆಚ್ಚು ಜನಸಂಖ್ಯೆಯುಳ್ಳ ಜಿಲ್ಲೆಯ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸುವಂತೆ ಬ್ಯಾಂಕರ್ ಗಳಿಗೆ ಸಂಸದ ಶಿವಕುಮಾರ ಉದಾಸಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಆರ್‌ಬಿಐ ಮಾರ್ಗಸೂಚಿ ಅನ್ವಯ ಐದು ಸಾವಿರ ಜನಸಂಖ್ಯೆ ಇರುವ ಪ್ರದೇಶದಲ್ಲಿ ಬ್ಯಾಂಕ್ ಶಾಖೆ ಆರಂಭಿಸಬೇಕು. ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಹೊಸದಾಗಿ ಬ್ಯಾಂಕ್ ಶಾಖೆ ಆರಂಭಿಸಲು ಮೊದಲಿನಿಂದಲೂ ಹೇಳಲಾಗುತ್ತಿದೆ. ಆದರೆ, ಈವರೆಗೂ ಕ್ರಮ ಕೈಗೊಂಡಿಲ್ಲ. ಆರ್‌ಬಿಐನವರು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದಿನ ಸಭೆಯೊಳಗೆ ಕನಿಷ್ಟ ಹೆಚ್ಚಿನ ಜನಸಂಖ್ಯೆಯುಳ್ಳ ಗ್ರಾಮಗಳಲ್ಲಿ ಬ್ಯಾಂಕ್ ಶಾಖೆ ಆರಂಭಿಸಬೇಕೆಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಚಿಸಿದರು.
ಬ್ಯಾಂಕ್‌ಗೆ ಬರುವ ಗ್ರಾಹಕರೊಂದಿಗೆ ಗೌರವದಿಂದ ವರ್ತಿಸಬೇಕು. ಬೇರೆ ಬೇರೆ ರಾಜ್ಯದಿಂದ ಜಿಲ್ಲೆಯ ಬ್ಯಾಂಕ್‌ಗಳಿಗೆ ಬರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪರ್ಕ ಭಾಷೆ ಕಲಿಯಬೇಕೆಂದು ಸಲಹೆ ನೀಡಿದರು.
ಶಾಸಕ ಹಾಗೂ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಹಾಗೂ ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಮಾತನಾಡಿ, ಮನರೇಗಾ ಕೂಲಿ ಹಣವನ್ನು ಸಾಲದ ಖಾತೆಗೆ ಜಮೆ ಮಾಡಿಕೊಳ್ಳಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದೇ ರೀತಿ, ಶೈಕ್ಷಣಿಕ ಸಾಲಗಳ ಅರ್ಜಿಗಳ ಬಗ್ಗೆ ನಿರಾಸಕ್ತಿ ವಹಿಸಲಾಗುತ್ತಿದೆ. ಹಾಗಾಗಿ, ಮನರೇಗಾ ಹಣವನ್ನು ಸಾಲದ ಖಾತೆಗೆ ಜಮೆ ಮಾಡಬಾರದು ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಸೂಚಿಸಿದರು.
ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಕೆಲವು ಬ್ಯಾಂಕ್‌ಗಳಲ್ಲಿ ರೈತರು ಎಲ್ಲ ದಾಖಲೆ ಸಲ್ಲಿಸಿದರೂ ಸಾಲದ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ರೈತರಿಗೆ ಸಕಾಲಕ್ಕೆ ಸಾಲ ಮಂಜೂರು ಮಾಡಬೇಕೆಂದು ಸೂಚನೆ ನೀಡಿದರು.
ಸಾಲ ಯೋಜನೆ ಕುರಿತಂತೆ ಸಭೆಗೆ ಮಾಹಿತಿ ನೀಡಿದ ಅಗ್ರಣೀಯ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಪ್ರಭುದೇವ ಅವರು, ಪ್ರಸಕ್ತ 2022-23ನೇ ಸಾಲಿಗೆ ಜಿಲ್ಲೆಯಲ್ಲಿ 3753.88 ಕೋಟಿ ಸಾಲ ವಿತರಣೆ ಗುರಿ ನಿಗದಿಪಡಿಸಲಾಗಿದೆ. ಕಳೆದ ಸಾಲಿಗಿಂತ 363.33 ಕೋಟಿ ರೂ. ಹೆಚ್ಚುವರಿಯಾಗಿದೆ ಎಂದು ಮಾಹಿತಿ ನೀಡಿದರು.
ಆದ್ಯತಾ ರಂಗಕ್ಕೆ 3397.91ಕೋಟಿ ರೂ. ಗುರಿ ನಿಗದಿಪಡಿಸಿದ್ದು, ಕಳೆದ ಸಾಲಿಗಿಂತ 330.92 ಕೋಟಿ ರೂ. ಹೆಚ್ಚುವರಿಯಾಗಿದೆ. ಕೃಷಿ ರಂಗಕ್ಕೆ 2185.05 ಕೋಟಿ ನಿಗದಿಪಡಿಸಲಾಗಿದೆ. ಕಳೆದ ಸಾಲಿಗಿಂತ 277.59 ಕೋಟಿ ರೂ. ಹೆಚ್ಚುವರಿಯಾಗಿದೆ. ಈ ಪೈಕಿ ಬೆಳೆ ಸಾಲ 1554.05 ಕೋಟಿ ರೂ. ಆಗಿದೆ. ಕಳೆದ ಸಾಲಿನ ಗುರಿಗೆ 104.48 ಕೋಟಿ ರೂ. ಹೆಚ್ಚವರಿಯಾಗಿದೆ. ಕೃಷಿಯೇತರ ರಂಗಕ್ಕೆ 668.66 ಕೋಟಿ ರೂ. ಗುರಿ ನಿಗದಿಪಡಿಸಲಾಗಿದೆ. ಕಳೆದ ಸಾಲಿಗಿಂತ 44.64 ಕೋಟಿ ರೂ. ಹೆಚ್ಚುವರಿಯಾಗಿದೆ. ಇತರೆ ಆದ್ಯತಾ ರಂಗಕ್ಕೆ 544.20 ಕೋಟಿ ರೂ. ಗುರಿ ನಿಗ ದಿಪಡಿಸಲಾಗಿದೆ. ಕಳೆದ ಸಾಲಿಗಿಂತ 43.43 ಕೋಟಿ ರೂ. ಹೆಚ್ಚುವರಿ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಜೂನ್ -2022ರ ಅಂತ್ಯಕ್ಕೆ ದುರ್ಬಲ ವರ್ಗದವರಿಗೆ 3888.34 ಕೋಟಿ ರೂ., ಡಿಆರ್‌ಐಯಡಿ 2.21 ಕೋಟಿ ರೂ. ವಿತರಣೆ ಮಾಡಲಾಗಿದೆ. ಮಹಿಳೆಯರಿಗೆ 2664.80 ಕೋಟಿ ರೂ. ಹಾಗೂ ಅಲ್ಪಸಂಖ್ಯಾತರಿಗೆ 907 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ.
ಪುನರ್ ರಚಿಸಿದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ) ಹಾವೇರಿ ಜಿಲ್ಲೆಯ ಮುಂಗಾರು 2022-23ನೇ ಋತುವಿನಲ್ಲಿ 58,960 ನೋಂದಣಿಯಾಗಿದ್ದು, ರಾಜ್ಯದಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಬ್ಯಾಂಕ್ ಆಫ್ ಬರೋಡ ಉಪ ಪ್ರಾದೇಶಿಕ ಮುಖ್ಯಸ್ಥ ಪ್ರಶಾಂತ ವಿ.ಕಡಲೆ, ಆರ್‌ಬಿಐ ಎಲ್‌ಡಿಒ ಶಾಂತಪ್ರಕಾಶ ಎಸ್., ಕೆವಿಜಿ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಟಿ.ವಿ.ಭಾಗವತ ಭಾಗವಹಿಸಿದ್ದರು.
ಸರ್ಕಾರದ ಸಬ್ಸಿಡಿ ಹಣ ಸಾಲದ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ಸರ್ಕಾರದ ಸಬ್ಸಿಡಿ ಹಣ ಹಾಗೂ ಮನರೇಗಾ ಹಣ ಸಾಲದ ಖಾತೆಗೆ ಜಮೆ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. –ಶಿವಕುಮಾರ ಉದಾಸಿ, ಸಂಸದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.