ಇಂದಿನಿಂದ ದೇವರ ದರ್ಶನ ಭಾಗ್ಯ
Team Udayavani, Jun 9, 2020, 6:48 AM IST
ಹಾವೇರಿ: ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವು ದೇವಸ್ಥಾನಗಳು, ಚರ್ಚ್, ಮಸೀದಿಗಳು ಭಕ್ತರ ದರ್ಶನಕ್ಕೆ ತೆರೆದುಕೊಂಡರೆ, ಹೊಟೆಲ್‌ಗಳಲ್ಲಿ ಗ್ರಾಹಕರಿಗೆ ಊಟ, ಉಪಹಾರ ಸೇವನೆಗೆ ಅವಕಾಶ ದೊರಕಿತು.
75ದಿನಗಳಿಂದ ಮುಚ್ಚಿದ್ದ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸೋಮವಾರ ಬೆಳಗ್ಗೆಯಿಂದಲೇ ಭಕ್ತರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ದೇವರ ದರ್ಶನಕ್ಕೆ ಬರುವ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಗುರುತು ಹಾಕಲಾಗಿತ್ತು. ದೇವಸ್ಥಾನದ ಒಳಗೆ ಪ್ರವೇಶಿಸುವ ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ನೋಡಿಕೊಳ್ಳಲು ಹಾಗೂ ಸ್ಯಾನಿಟೈಸರ್ ಸಿಂಪಡಣೆಗೆ ಕೆಲವೆಡೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ಎ ದರ್ಜೆಯ ಒಂದು, ಬಿ ದರ್ಜೆಯ 11 ಹಾಗೂ ಸಿ ದರ್ಜೆಯ 1200 ದೇವಸ್ಥಾನಗಳಿದ್ದು ಎಲ್ಲ ದೇವಸ್ಥಾನಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಇವುಗಳ ಪಾಲನೆಯ ಮೇಲುಸ್ತುವಾರಿಯನ್ನು ಆಯಾ ತಹಶೀಲ್ದಾರರು ವಹಿಸಿಕೊಂಡಿದ್ದಾರೆ. ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಯಾವುದೇ ವಿಶೇಷ ಪೂಜೆ, ಹೋಮ- ಹವನ, ಪ್ರಸಾದ, ತೀರ್ಥ ವ್ಯವಸ್ಥೆ ಇರಲಿಲ್ಲ. ಜಿಲ್ಲೆಯ ಪ್ರಮುಖ ದೇವಸ್ಥಾನಗಳಾದ ದೇವರಗುಡ್ಡ ಮಾಲತೇಶ ಹಾಗೂ ಕದರಮಂಡಲಗಿ ಆಂಜನೇಯ ದೇವಸ್ಥಾನಗಳ ಸಮಿತಿಗಳು ಇನ್ನೂ ದೇಗುಲದ ಬಾಗಿಲು ತೆರೆಯಲು ನಿರ್ಧರಿಸಿಲ್ಲ. ಜೂ. 9 ರಂದು ಬಹುತೇಕ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
ಮಸೀದಿ, ಚರ್ಚ್‌ಗಳು ಸಹ ಬಾಗಿಲು ತೆರೆದು ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದರ್ಗಾಗಳಿಗೆ ಭೇಟಿ ನೀಡಿದ ಭಕ್ತರು ಹೂ ಹಾಕಿ ನಮಿಸಿದರು. ಇಲ್ಲಿಯೂ ಸಾಮಾಜಿಕ ಅಂತರ ಕಾಪಾಡಲು ವ್ಯವಸ್ಥೆ ಮಾಡಲಾಗಿತ್ತು.
ಹೋಟೆಲ್‌ಗಳಲ್ಲಿ ಸೇವನೆ: ಲಾಕ್‌ಡೌನ್ ಕಾರಣದಿಂದಾಗಿ ಕಳೆದ ಮೂರು ತಿಂಗಳಿಗೂ ಹೆಚ್ಚು ಅವಧಿ ಬಂದ್ ಆಗಿದ್ದ ಹೋಟೆಲ್‌ಗಳಲ್ಲಿ ಊಟ, ಉಪಹಾರ ಸೇವನೆಗೆ ಸೋಮವಾರ ಅವಕಾಶ ಮಾಡಿಕೊಟ್ಟಿದ್ದರಿಂದ ಜಿಲ್ಲೆಯಲ್ಲಿರುವ 500ಕ್ಕೂ ಹೆಚ್ಚು ಹೊಟೆಲ್‌ಗಳು ವ್ಯಾಪಾರ ಆರಂಭಿಸಿದವು. ಕೆಲವು ಹೊಟೆಲ್‌ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಂಡು ಗ್ರಾಹಕರಿಗೆ ಸೇವೆ ನೀಡಿದವು. ಕೆಲವು ಅಂಗಡಿಗಳಲ್ಲಿ ಸಾಮಾಜಿಕ ಅಂತರದ ದೃಷ್ಟಿಯಿಂದ ಒಂದು ಟೇಬಲ್‌ನಲ್ಲಿ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು. ಪೇಪರ್ ತಟ್ಟೆ, ಪ್ಲಾಸ್ಟಿಕ್ ಚಮಚೆ, ಪೇಪರ್ ಇಲ್ಲವೇ ಪಾಸ್ಟಿಕ್ ಲೋಟದ ವ್ಯವಸ್ಥೆ ಮಾಡಲಾಗಿತ್ತು. ಬಿಸಿನೀರಿನ ವ್ಯವಸ್ಥೆ ಸಹ ಮಾಡಿರುವುದು ಕಂಡು ಬಂತು. ತೆರೆದ ತಾಣಗಳು: ಕಾಗಿನೆಲೆ, ಬಾಡ, ಗೊಟಗೋಡಿ ಸೇರಿದಂತೆ ಜಿಲ್ಲೆಯ ಇನ್ನಿತರ ಪ್ರವಾಸಿತಾಣಗಳು ಸರ್ಕಾರದ ಸೂಚನೆಯಂತೆ ಪ್ರವಾಸಿಗರ ಪ್ರವೇಶಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಆದರೆ, ಜಿಲ್ಲಾಡಳಿತದಿಂದ ಈ ಬಗ್ಗೆ ಅಧಿಕೃತ ಆದೇಶ ಬಾರದ್ದರಿಂದ ಬಹುತೇಕ ತಾಣಗಳು ಸೋಮವಾರ ಪ್ರವಾಸಿಗರ ವೀಕ್ಷಣೆಗೆ ಲಭ್ಯವಾಗಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.