ಖಾತ್ರಿ ಯೋಜನೆ ಬಳಸಿ ಕೆರೆ ಅಭಿವೃದ್ಧಿ
•ಜಿಪಂ ಸಿಇಒ ಲೀಲಾವತಿ ಮಾಹಿತಿ•ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಣೆ
Team Udayavani, May 17, 2019, 5:00 PM IST
ಸವಣೂರು ತಾಲೂಕಿನ ಗುಂಡೂರ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಮಿಕರೊಂದಿಗೆ ಶ್ರಮದಾನ ಮಾಡಿ ಮಾತನಾಡಿದ ಜಿಪಂ ಸಿಇಓ ಕೆ. ಲೀಲಾವತಿ.
ಸವಣೂರು: ಈ ವರ್ಷ ನೈಸರ್ಗಿಕ ಜಲಸಂರಕ್ಷಣೆಗೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಕಾಮಗಾರಿ ಕೈಗೊಳ್ಳುವ ಮೂಲಕ ಕೆರೆ-ಕಟ್ಟೆಗಳ ಅಭಿವೃದ್ಧಿ ಮಾಡಲಾಗುವುದು ಎಂದು ಜಿಪಂ ಸಿಇಓ ಕೆ. ಲೀಲಾವತಿ ಹೇಳಿದರು.
ತಾಲೂಕಿನ ಗುಂಡೂರ ಗ್ರಾಮದಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆಗೆ ನೀರು ಹೋಗುವ ಕಾಲುವೆ ನಿರ್ಮಾಣ ಹಾಗೂ ಕೆರೆ ಹೂಳು ತೆಗೆಯುವ ಕಾಮಗಾರಿ ವೀಕ್ಷಣೆ ಹಾಗೂ ಕೂಲಿಕಾರ್ಮಿಕರಿಗೆ ಉದ್ಯೋಗ ಚೀಟಿ ವಿತರಿಸಿ, ಕಾರ್ಮಿಕರೊಂದಿಗೆ ಶ್ರಮದಾನ ಮಾಡಿ ಮಾತನಾಡಿದರು.
ತಾಲೂಕಿನ ಪ್ರತಿಯೊಂದು ಕೆರೆ ಕಟ್ಟೆಗಳಲ್ಲಿ ನೀರು ನಿಲ್ಲದೆ ಅಂರ್ತಜಲಮಟ್ಟ ತೀರಾ ಕುಸಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಕೂಲಿಕಾರ್ಮಿಕರು ಪಟ್ಟಣ, ನಗರ ಪ್ರದೇಶಗಳಿಗೆ ಉದ್ಯೋಗ ಅರಸಿಕೊಂಡು ಗುಳೆ ಹೋಗುತ್ತಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಜನರಿಗೆ ಉದ್ಯೋಗ ಕಲ್ಪಿಸಲಾಗುತ್ತಿದೆ ಎಂದರು.
ತಾಪಂ ಇಓ ಎಸ್‌ಎಂಡಿ ಇಸ್ಮಾಯಿಲ್ ಮಾತನಾಡಿ, ಬಡ ಕೂಲಿ ಕಾರ್ಮಿಕರು ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಕೆಲಸ ಮಾಡುವುದನ್ನು ತಪ್ಪಿಸಲು ತಮ್ಮ ಗ್ರಾಮದಲ್ಲಿಯೇ ಸಾಕಷ್ಟು ಕಾಮಗಾರಿಗಳನ್ನು ಜಾರಿಗೆ ತರಲಾಗಿದೆ. ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ತಾಪಂ ಎಡಿ ಸದಾನಂದ ಅಮರಾಪೂರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಕಾರಿಗಳಾದ ವಿಜಯಲಕ್ಷ್ಮೀ ಗಣತಿ, ಯೋಗೇಶ ಚಾಕರಿ, ಚಂದ್ರು ಲಮಾಣಿ, ಭೋಜರಾಜ ಲಮಾಣಿ, ಎಂ.ಕೆ. ಬಡಿಗೇರ, ರವಿ ಗಾಣಗೇರ, ಶೈಲಾ, ಗೀತಾ ಕರೆಮ್ಮನವರ, ದೇವರಾಜ ಚವ್ಹಾಣ, ಪರಮೇಶ ಸಂಕಮ್ಮನವರ, ಗುಂಡೂರ ಗ್ರಾಮದ ಕೂಲಿ ಕಾರ್ಮಿಕರು ಗ್ರಾಮಸ್ಥರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.