ಮಕ್ಕಳ ನಂದಗೋಕುಲ..ಈ ಗಾಂಧಿ ಗುರುಕುಲ
ಮೂರೂವರೆ ದಶಕ ಪೂರೈಸಿದ ಗುರುಕುಲವಿದು
Team Udayavani, Oct 2, 2019, 12:32 PM IST
ಹಾವೇರಿ: ಇಲ್ಲಿ ವಿದ್ಯಾರ್ಥಿಗಳು ಗಾಂಧಿ ಟೋಪಿ, ಖಾದಿ ಬಟ್ಟೆ ಧರಿಸುತ್ತಾರೆ. ಶಿಕ್ಷಣ ಜತೆ ಸ್ವಾವಲಂಬಿ ಜೀವನ ಪಾಠ ಕಲಿಯುತ್ತಾರೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ದೊಡ್ಡ ಅಧಿಕಾರಿಗಳಾಗಿದ್ದಾರೆ. ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕೃಷಿಕರಾಗಿದ್ದಾರೆ. ಕೈಕಸುಬು ಮಾಡಿಕೊಂಡು ಹೋಗುವ ಕುಶಲಕರ್ಮಿಗಳೂ ಆಗಿದ್ದಾರೆ. ನೇಕಾರರಾಗಿದ್ದಾರೆ. ಗಾಂಧಿ ತತ್ವವನ್ನು ವಿದ್ಯಾರ್ಥಿ ದಿಸೆಯಲ್ಲೇ ಭಿತ್ತಿ ರೂಢಿಸುವ ಇಂಥ ಅಪರೂಪದ ಶಾಲೆ ಇರುವುದು ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ.
ಈಗ ಈ ಗುರುಕುಲ ಮೂರು ದಶಕಗಳನ್ನು ಯಶಸ್ವಿಯಾಗಿ ಪೂರೈಸಿ ಮುಂದೆ ಸಾಗುತ್ತಿದೆ. ಶಿಕ್ಷಣ ಜತೆಗೆ ನೇಯ್ಗೆ, ತೋಟಗಾರಿಕೆ, ಕೃಷಿ, ನೂಲು, ರೇಷ್ಮೆ, ವ್ಯವಸಾಯ, ಹೈನುಗಾರಿಕೆ ಜತೆಗೆ ಕಂಪ್ಯೂಟರ್ ಶಿಕ್ಷಣವನ್ನೂ ಮಕ್ಕಳಿಗೆ ನೀಡಲಾಗುತ್ತಿದೆ. ತನ್ಮೂಲಕ ಹೊಸರಿತ್ತಿಯಲ್ಲಿರುವ ಈ ಶಾಲೆ ಗಾಂಧಿ ಕನಸನ್ನು ನನಸಾಗಿಸಿದೆ. ಗಾಂಧಿ ತತ್ವಗಳನ್ನು ಇವತ್ತಿಗೂ ಜೀವಂತವಾಗಿ ಕಾಣಲು ಸಿಗುವ ರಾಜ್ಯದ ಏಕೈಕ ಶಾಲೆ ಎಂಬ ಖ್ಯಾತಿಯೂ ಇದಕ್ಕಿದೆ.
ನೂಲು-ನೇಯ್ಗೆ ಬಗ್ಗೆ ವಿಶೇಷವಾದ ತರಗತಿಗಳು ಇಲ್ಲಿ ನಡೆಯುತ್ತವೆ. ತಾವೇ ಸ್ವತಃ ಹತ್ತಿ ಹಿಂಚಿ, ನೂಲು ತೆಗೆದು ತಯಾರಿಸಿದ ಬಟ್ಟೆಗಳನ್ನು ಧರಿಸುವುದು, ತಾವೇ ದುಡಿದು ಬೆಳೆದ ತರಕಾರಿ, ಹಣ್ಣು, ಇತರೆ ಆಹಾರವನ್ನೇ ತಿನ್ನುವುದು ಇಲ್ಲಿಯ ನಿಯಮ. ಇಲ್ಲಿಯ ಪ್ರತಿ ವಿದ್ಯಾರ್ಥಿಯೂ ಬಟ್ಟೆ ನೇಯ್ಗೆಯಲ್ಲಿ ಸಿದ್ಧಹಸ್ತ. ಮುಂಜಾನೆ ಎದ್ದು ಎಲ್ಲರೂ ಸರ್ವಧರ್ಮ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಒಟ್ಟೊಟ್ಟಿಗೆ ಕುಳಿತು ಊಟ ಮಾಡುತ್ತಾರೆ. ಆಟ ಆಡುತ್ತಾರೆ. ಸೂರ್ಯೋದಯವಾಗುತ್ತಿದ್ದಂತೆ ಸರ್ವಧರ್ಮ ಪ್ರಾರ್ಥನೆಯೊಂದಿಗೆ ಮಕ್ಕಳ ನಿತ್ಯದ ಚಟುವಟಿಕೆ ಇಲ್ಲಿ ಪ್ರಾರಂಭವಾಗುತ್ತವೆ. ಮುಂಜಾನೆ 5 ಗಂಟೆಯಿಂದ ಆರಂಭವಾಗುವ ಚಟುವಟಿಕೆ ರಾತ್ರಿ 10ರ ವರೆಗೂ ನಡೆಯುತ್ತವೆ.
ಕೈಂಕರ್ಯ: ಪ್ರತಿನಿತ್ಯ ವಿದ್ಯಾರ್ಥಿಗಳು ಆಟ ಪಾಠದ ಜತೆಗೆ ದನಕರುಗಳ ಮೈ ತೊಳೆಯವುದು. ಹಾಲು ಕರಿಯುವುದು, ಮೇವು ಹಾಕುವುದು ಮಾಡುತ್ತಾರೆ. ಇವುಗಳ ಜತೆಗೆ ತೋಟಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಸಾವಯುವ ಗೊಬ್ಬರ ತಯಾರಿಸಿ, ಕೃಷಿಗೆ ಬಳಸುತ್ತಿದ್ದಾರೆ. 32 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಮಕ್ಕಳೇ ತೆಂಗು, ಚಿಕ್ಕು, ತರಕಾರಿ ಸೇರಿದಂತೆ ಹಲವಾರು ಗಿಡಗಳನ್ನು ಬೆಳೆದಿದ್ದಾರೆ. ಇವುಗಳಿಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಶಾಲಾ ಆವರಣದಲ್ಲಿ ತೆಂಗು, ಚಿಕ್ಕು ಸೇರಿದಂತೆ ವಿವಿಧ ಬೆಳೆ ಬೆಳೆಯಲಾಗಿದೆ. 5ನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ಇಲ್ಲಿನ ವಿದ್ಯಾರ್ಥಿಗಳು ಮತ್ತೂಬ್ಬರನ್ನು ಅವಲಂಬಿಸಿ ಬದುಕು ನಡೆಸುವುದರ ಬದಲಿಗೆ ಸ್ವಾವಲಂಬಿಯಾಗಿ, ಐಷಾರಾಮಿ ಬದುಕಿನ ಬದಲಿಗೆ ಸರಳ ಬದುಕು ನಡೆಸುತ್ತಿದ್ದಾರೆ.
ಗ್ರಾಮೀಣ ಸಂಸ್ಕೃತಿ, ಮರೆಯಾಗುತ್ತಿರುವ ಗುಡಿ ಕೈಗಾರಿಕೆಗಳು, ಖಾದಿ ಉಡುಗೆ-ತೊಡುಗೆ, ಗಾಂಧಿಧೀಜಿಯ ಗ್ರಾಮ ಸ್ವರಾಜ್ಯದ ಗುರಿಗಳು… ಹೀಗೆ ಹತ್ತು ಹಲವರು ಬಗೆಯ ಶಿಕ್ಷಣ ಪಡೆಯುತ್ತಾರೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅವರ ಎಳೆಯ ವಯಸ್ಸಿನಲ್ಲಿಯೇ ರಾಷ್ಟ್ರಾಭಿಮಾನ ಮೂಡುವಂತೆ ಇಲ್ಲಿನ ಪರಿಸರ ನಿರ್ಮಿಸಲಾಗಿದೆ.
ಸಂಪೂರ್ಣ ಖಾದಿಮಯ: ಗುರುಕುಲದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಇತರೆ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಸದಸ್ಯರು ಬಳಸುವ, ತೊಡುವ ಬಟ್ಟೆ ಖಾದಿಯದ್ದೇ ಆಗಿರುತ್ತದೆ. ವಿವಿಧ ಆಕಾರ, ವಿವಿಧ ಬಣ್ಣದಿಂದಾಗಿದ್ದರೂ ಅದು ಖಾದಿಯದ್ದೇ ಆಗಿರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲಾ ಅವಧಿ ನಂತರವಾಗಲಿ ಅಥವಾ ಬಿಡುವಿನ ದಿನವಾಗಲಿ ಸಮವಸ್ತ್ರವಲ್ಲದ ಬಟ್ಟೆ ತೊಡಲೇನೂ ಅಡ್ಡಿಯಿಲ್ಲ. ಆದರೆ, ಅದೂ ಖಾದಿಯದ್ದೇ ಆಗಿರಬೇಕು ಎಂಬುದು ನಿಯಮ. ಇಲ್ಲಿನ ಪ್ರತಿಯೊಬ್ಬ ಸಿಬ್ಬಂದಿ, ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಖಾದಿ ಬಟ್ಟೆಗಳನ್ನು ಇಷ್ಟಪಟ್ಟು ತೊಡುತ್ತಿರುವುದು ರಾಷ್ಟ್ರಕ್ಕೆ ಒಂದು ಮಾದರಿಯಾಗಿದೆ.
ಗಾಂಧಿ ಗುರುಕುಲ ಹುಟ್ಟು: ಈ ಶಾಲೆಯ ಎದುರು ಹಳ್ಳಿಕೇರಿಯವರ ಸುಂದರ ಸ್ಮಾರಕವಿದೆ. ಗುದ್ಲೆಪ್ಪ ಜಿಲ್ಲೆಯ ಹಿರಿಯ ಸ್ವಾತಂತ್ರ ಹೋರಾಟಗಾರ. 1928ರಲ್ಲಿ ಸ್ಥಾಪನೆಯಾದ ಗಾಂಧಿ ಆಶ್ರಮ ರಾಜಕೀಯ ಯೋಧರ ಗರಡಿಮನೆಯಾಗಿತ್ತು. ಹಳ್ಳಿಕೇರಿಯವರಿಗೆ ತಮ್ಮ ಹುಟ್ಟೂರಾದ ಹೊಸರಿತ್ತಿ ಬಗ್ಗೆ ಅಪಾರ ಪ್ರೀತಿ. ಮಹಾತ್ಮ ಗಾಂಧಿ ಯವರ ಆದರ್ಶಗಳನ್ನು ಪ್ರತಿಬಿಂಬಿಸುವ ಗ್ರಾಮೀಣ ಮಕ್ಕಳಿಗಾಗಿ ಒಂದು ಗುರುಕುಲ ಸ್ಥಾಪಿಸಬೇಕೆಂಬುದು ಅವರ ಕನಸಾಗಿತ್ತು. ಅವರ ಕನಸಿನ ಕೂಸೇ ಈ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆ. ಇದಕ್ಕಾಗಿ ಅವರು ವಿವಿಧ ವಸತಿ ಶಾಲೆಗಳಿಗೆ ಭೇಟಿ ನೀಡಿ, ತಜ್ಞರ ಜತೆ ಸಮಾಲೋಚನೆ ನಡೆಸಿ, ಶಿಕ್ಷಣ ತಜ್ಞ ಮ.ಗು. ಹಂದ್ರಾಳರ ಜತೆ ಯೋಜನೆ ರೂಪಿಸಿದರು. ಈ ಯೋಜನೆಯನ್ವಯ 1984 ಅಕ್ಟೋಬರ್ 2ರಂದು ಈ ಅಪರೂಪದ ಶಾಲೆ ಆರಂಭವಾಗಿ ಇಂದಿಗೆ 35 ವರ್ಷ. 1984ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ಇಂದು 240ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಚಿತವಾಗಿ ಶಿಕ್ಷಣ ಪಡೆಯುತ್ತಿದ್ದಾರೆ.
ಪರಿಮಿತ ಪ್ರವೇಶ: ಉಳಿದ ಶಾಲೆಗಳಿಗಿಂತಲೂ ಕೊಂಚ ಭಿನ್ನವಾಗಿರುವ ಈ ಶಾಲೆಯಯಲ್ಲಿ ಶಿಕ್ಷಣ ಪಡೆಯಲು ಸಾವಿರಾರು ವಿದ್ಯಾರ್ಥಿಗಳು ಸೀಟ್‌ಗಾಗಿ ಮುಗಿ ಬೀಳುತ್ತಾರೆ. ಆದರೆ, ಇಲ್ಲಿ ಪ್ರತಿ ವರ್ಷ 5ನೇ ತರಗತಿಗೆ 40 ವಿದ್ಯಾರ್ಥಿಗಳಿಗೆ ಮೀರಿ ಪ್ರವೇಶ ನೀಡಲ್ಲ. ಮಧ್ಯದಲ್ಲಿ ಶಾಲೆ ಬಿಡಲು, ಬೇರೆ ಶಾಲೆಗೆ ಹೋಗಲು ಅವಕಾಶವಿಲ್ಲ. 5 ರಿಂದ 10ನೇ ತರಗತಿಯವರೆಗೆ ಸರಕಾರಿ ಪಠ್ಯದಂತೆಯೇ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಇದರ ಜತೆಗೆ ಸ್ವಾವಲಂಬಿ ಬದುಕು ರೂಪಿಸುವ ಹಾಗೂ ಗಾಂಧಿಧೀಜಿಯವರ ತತ್ವಾದರ್ಶಗಳನ್ನು ಬೋಧಿ ಸಲಾಗುತ್ತದೆ. ಇಲ್ಲಿ ಪ್ರವೇಶ ಪಡೆಯಬೇಕೆಂದರೆ ರಾಜ್ಯದ ಯಾವುದೇ ಮೂಲೆಯ ಗ್ರಾಮಾಂತರ ವಿದ್ಯಾರ್ಥಿಗಳು ನಾಲ್ಕನೇ ತರಗತಿ ಪಾಸಾಗಿರಬೇಕು. ಕೃಷಿ ಬಗ್ಗೆ ಪ್ರೀತಿ ಇರುವವರಿಗೆ ಆದ್ಯತೆ. ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಪಾಸಾಗಿರಬೇಕು. ಲಿಖೀತ-ಮೌಖೀಕ ಪ್ರವೇಶ ಪರೀಕ್ಷೆ ನಡೆಸಿದ ಬಳಿಕ ಆಯ್ಕೆ ಮಾಡಲಾಗುತ್ತದೆ. ಒಟ್ಟಾರೆ ಗಾಂಧಿ ತತ್ವಾದರ್ಶನಗಳನ್ನೇ ಮಾದರಿಯಾಗಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಈ ಗುರುಕುಲ ವಿಶೇಷ ಹಾಗೂ ವಿಶಿಷ್ಟವಾಗಿದೆ.
ಇಲ್ಲಿ ಎಲ್ಲರೂ ಸಹೋದರರಂತೆ ಸಹಕಾರ ಸಹಬಾಳ್ವೆಯಿಂದ ಕಲಿತು ನಲಿಯುತ್ತಿದ್ದಾರೆ. ಉತ್ತಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಆಟ, ಪಾಠದೊಂದಿಗೆ ನಾವು ಸ್ವಾವಲಂಬಿಗಳಾಗಿ ಹೇಗೆ ಜೀವನ ನಡೆಸಬೇಕೆಂಬ ಶಿಕ್ಷಣ ನೀಡಲಾಗುತ್ತದೆ. ಎಲ್ಲ ಕೆಲಸಗಳನ್ನು ವಿದ್ಯಾರ್ಥಿಗಳು ಪ್ರೀತಿಯಿಂದಲೇ ಮಾಡಲು ಪ್ರೇರೇಪಿಸುವ ವಾತಾವರಣ ಇದೆ. ಹಾಗಾಗಿ ಇಲ್ಲಿ ಶಿಕ್ಷಣ ವಿದ್ಯಾರ್ಥಿಗಳಿಗೆ ಖುಷಿ ಕೊಡುತ್ತದೆ. –ಎಸ್.ಎನ್. ಚಳಗೇರಿ, ಪ್ರಾಂಶುಪಾಲರು, ಗುರುಕುಲ
-ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.