ವಹಿವಾಟು ಲಾಕ್‌ಡೌನ್
Team Udayavani, Apr 22, 2020, 6:01 PM IST
ಸಾಂದರ್ಭಿಕ ಚಿತ್ರ
ಬ್ಯಾಡಗಿ : ಕೋವಿಡ್ 19 ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ವಹಿವಾಟನ್ನು ಮೇ 3ರ ವರೆಗೆ ಸ್ಥಗಿತಗೊಳಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಧಾರಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ಜರುಗಿಸಲಾಗುವುದು. ಅಲ್ಲಿಯವರೆಗೂ ಎಪಿಎಂಸಿ ಪ್ರಾಂಗಣದ ಒಳಗೆ ಮತ್ತು ಹೊರಗಡೆ ಯಾವುದೇ ವಹಿವಾಟು ನಡೆಸುವ ವರ್ತಕರ ವಿರುದ್ಧ ಕ್ರಮ ಜರುಗಿಸಲು ಮಂಗಳವಾರ ಸ್ಥಳೀಯ ಎಪಿಎಂಸಿಯಲ್ಲಿ ಜರುಗಿದ ಆಡಳಿತ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಳ್ಳಲಾಯಿತು.
ವರ್ತಕರ ಪ್ರತಿನಿಧಿ ಸಿ.ಆರ್. ಪಾಟೀಲ (ಬಾಬಣ್ಣ) ಹಾಗೂ ಸದಸ್ಯ ಚನ್ನಬಸಪ್ಪ ಹುಲ್ಲತ್ತಿ ಮಾತನಾಡಿ, ಮೆಣಸಿನಕಾಯಿ ಜೀವನಾವಶ್ಯಕ ವಸ್ತುವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಅನುಮತಿ ನೀಡುವಂತೆ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ ಎಸ್.ಜಿ. ನ್ಯಾಮಗೌಡ, ಸರ್ಕಾರ ಜೀವನಾವಶ್ಯಕ ವಸ್ತುಗಳ ಪಟ್ಟಿಯಿಂದ ಒಣಮೆಣಸಿನಕಾಯಿ ಕೈಬಿಟ್ಟಿದ್ದು ಹೀಗಾಗಿ ಮಾರುಕಟ್ಟೆಯಲ್ಲಿ ವಹಿವಾಟು ನಿರ್ಬಂಧಕ್ಕೆ ಜಿಲ್ಲಾಡಳಿತ ಕ್ರಮತೆಗೆದುಕೊಂಡಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ಪಡೆದಿರುವ ವರದಿಗಳ ಪ್ರಕಾರ ಸ್ಥಳೀಯ ಎಪಿಎಂಸಿಯಲ್ಲಿ ಸಾಮಾಜಿಕ ಅಂತರ ಅಥವಾ ನಿಯಂತ್ರಣ ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಮಾರುಕಟ್ಟೆ ನಡೆಸಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದರು.
ಅಧ್ಯಕ್ಷ ಕೆ.ಎಸ್. ನಾಯ್ಕರ್ ಮಾತನಾಡಿ, ಪರಪ್ರಾಂತದ ಲಾರಿಗಳ ಆಗಮನ ಮತ್ತು ನಿರ್ಗಮನ ಕೂಡಲೇ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿ, ಈಗಾಗಲೇ ತಾಲೂಕಾಡಳಿತ ಸ್ಪಷ್ಟ ಸೂಚನೆ ನೀಡಿದೆ. ಪರಪ್ರಾಂತದ ಎಲ್ಲ ವಾಹನಗಳ ನಿರ್ಬಂಧಕ್ಕೆ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಿದೆ ಎಂದು ತಿಳಿಸಿದರು.
ಆನ್‌ಲೈನ್ ಪೇಮೆಂಟ್‌ಗೆ ಒತ್ತಾಯ: ಸದಸ್ಯ ಶಿವಣ್ಣ ಕುಮ್ಮೂರ ಮಾತನಾಡಿ, ಮಾರುಕಟ್ಟೆ ಪ್ರಾಂಗಣದಲ್ಲಿ ವಾರದಲ್ಲಿ ಒಂದು ದಿನ ವ್ಯವಹಾರಕ್ಕೆ ಅವಕಾಶ ಕಲ್ಪಿಸಿದ್ದೀರಿ. ಇದರ ಬದಲಾಗಿ ಸೋಮವಾರ ಮತ್ತು ಗುರುವಾರ ಎರಡುದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯದರ್ಶಿಗಳು, ಖರೀದಿದಾರರು ಮತ್ತು ದಲಾಲರು ಇದಕ್ಕೆ ಹೊಂದಿಕೊಳ್ಳದಿರುವುದು ದುರ್ದೈವದ ಸಂಗತಿ, ಇನ್ನಾದರೂ ಆನ್‌ಲೈನ್ ವ್ಯವಸ್ಥೆಗೆ ಒಗ್ಗಿಕೊಳ್ಳುವುದು ಸೂಕ್ತವೆಂದರು. ಶಶಿಧರ ದೊಡ್ಮನಿ ಮಾತನಾಡಿ, ಮಾರುಕಟ್ಟೆ ಗೇಟ್‌ಗಳಿಗೆ ಹೊಂದಿಕೊಂಡಂತೆ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದೆ. ಅನಗತ್ಯವಾಗಿ ಓಡಾಡುವ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯಲು ಸೂಚನೆ ನೀಡಬೇಕು. ವೇಬ್ರಿಡ್ಜ್ಗೆ ಬರುವ ವಾಹನಗಳಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ಉಪಾಧ್ಯಕ್ಷ ಉಳಿವೆಪ್ಪ ಕುರುವತ್ತಿ, ಸದಸ್ಯರಾದ ಡಿ.ಬಿ. ತೋಟದ, ವನಿತಾ ಗುತ್ತಲ, ಮಾಲತೇಶ ಹೊಸಳ್ಳಿ, ಕುಮಾರ ಚೂರಿ, ಶೈಲಾ ರೊಡ್ಡನವರ, ಮಾರುತಿ ಕೆಂಪಗೊಂಡರ, ಹನುಮಂತಪ್ಪ ನಾಯ್ಕರ್ ಇನ್ನಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.