ವಿವೇಕ ಸಂದೇಶ ಯುವಜನತೆಗೆ ದಾರಿದೀಪ
Team Udayavani, Jan 13, 2020, 1:00 PM IST
ಗುತ್ತಲ: ದೇಶದ ಸಂಸ್ಕೃತಿ, ಪರಂಪರೆ, ಧರ್ಮದ ಮಹತ್ವವನ್ನು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಪರಿಚಯಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದಿರಲಿ. ಬದಲಾಗಿ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಪಪಂ ಸದಸ್ಯ ನಾಗರಾಜ ಎರಿಮನಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಸಿಡಿಲ ಸಂತ ಸ್ವಾಮಿ ವಿವೇಕಾನಂದರ 157ನೇ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮ ಸನಾತನ ಧರ್ಮವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಡಬೇಕಿದೆ. ಯುವಕರ ಸ್ಫೂರ್ತಿಯಾಗಿರುವ ವಿಶ್ವಗುರು ವಿವೇಕಾನಂದರು ಕೇವಲ 39 ವರ್ಷಗಳಲ್ಲಿ ಅದ್ವಿತೀಯ ಸಾಧನೆಯ ಮೂಲಕ ಭಾರತದ ಕೀರ್ತಿ ತಂದವರು ಎಂದರು.
ಬಂಜಾರ್ ಸಂಘದ ಜಿಲ್ಲಾ ಅಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿ, ಶಿಕಾಗೋ ಸಭೆಯಲ್ಲಿ ಎಲ್ಲರು ತಮ್ಮ ಧರ್ಮವೇ ಶ್ರೇಷ್ಠ ಎಂದರು. ಆದರೆ, ವಿವೇಕಾನಂದರು ಸರ್ವಧರ್ಮ ಸಮನ್ವಯದ ಬಗ್ಗೆ ಹೇಳಿ ಜಗತ್ತಿನ ಕಣ್ಣು ತೆರೆಯಿಸಿದ ಜ್ಞಾನ ಜ್ಯೋತಿ ಎಂದರು. ವಿವೇಕಾನಂದರ ಜನ್ಮ ದಿನವನ್ನು ರಾಷ್ಟ್ರೀಯ ಯುವಕರ ದಿನವನ್ನಾಗಿ ಆಚರಿಸುತ್ತೇವೆ. ಆರೋಗ್ಯವಂತ ಯುವಕರಿದ್ದಲ್ಲಿ ದೇಶದ ನಿರ್ಮಾಣ ಸಾಧ್ಯ. ಪ್ರತಿ ಯುವಕರು ದುರಾಲೋಚನೆ ಬಿಟ್ಟು ಉತ್ತಮ ದೇಶ ಕಟ್ಟುವಲ್ಲಿ ಶ್ರಮ ವಹಿಸಬೇಕು. ಇಂತಹ ನಾಯಕರ ಜೀವನ ಚರಿತ್ರೆ ಓದುವ ಮೂಲಕ ಸಮರ್ಥ ಭಾರತ ಹಾಗೂ ಸದೃಢ ಭಾರತದ ಸಂಕಲ್ಪ ಮಾಡಬೇಕು ಎಂದರು.
ಶಿಕ್ಷಕರಾದ ನಾಗರಾಜ ಕಾಯಕದ ಮಾತನಾಡಿ, ಬಡವರು, ಹಾವಾಡಿಗರ ದೇಶ ಎನ್ನುತ್ತಿದ್ದ ಪಾಶ್ಚಿಮಾತ್ಯರು ಸ್ವಾಮಿವಿವೇಕಾನಂದರ ವೈವಿಧ್ಯೆತೆಯಲ್ಲಿ ಏಕತೆಯನ್ನು ಹೊಂದಿರುವ ಬಗೆಗಿನ ಮಾತುಗಳನ್ನು ಆಲಿಸಿದ ಮೇಲೆ ಅವರ ಕಲ್ಪನೆಯೆ ಬದಲಾಯಿತು ಎಂದರು.
ಪಪಂ ಸದಸ್ಯರಾದ ಲಿಂಗೇಶ ಬೆನ್ನೂರ, ಗುಡ್ಡಪ್ಪ ಗೊರವರ, ಪ್ರಕಾಶ ಸೊಪ್ಪಿನ, ಸಂಜಯ ಗಾಂಧಿ ಸಂಜೀವಣ್ಣನವರ, ಪ್ರಕಾಶ ಬಾರ್ಕಿ, ದಿನೇಶ ಜಾನ್ಮನೆ, ಶಿವಣ್ಣ ಬಂಡಿವಡ್ಡರ, ಪ್ರಶಾಂತ ಬೆನ್ನೂರ, ಡಾ| ಕಿರಣಕುಮಾರ ಬಡಪ್ಪನವರ, ಅರುಣ ಕೆಂಚಮಲ್ಲ, ಮೃತ್ಯುಂಜಯ ರಿತ್ತಿಮಠ, ಕುಮಾರ ಚಿಗರಿ, ಚನ್ನವೀರಯ್ಯ ಸುತ್ತೂರಮಠ, ನವೀನ ದಾಮೋದರ, ಪ್ರಕಾಶ ಹೊನ್ನಮ್ಮನವರ, ಗುರು ಮಠದ, ವಿನಯ ಕೂಡಲಮಠ, ಮಾಲತೇಶ ಮಡಿವಾಳರ, ಬಾಬಣ್ಣ ರಾಣಿಬೆನ್ನುರ, ಅಜಯ ಬುಶಪ್ಪನವರ, ಆನಂದ ಇಟಗಿ, ಗಂಗಾಧರ ಅಗಸಿಬಾಗಿಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.