ಮಳೆ ಬಿದ್ದ ಮೇಲ್ಯಾಕೆ ಮೇವು ಬ್ಯಾಂಕ್!
•ಬರಗಾಲದಾಗ ಸುಮ್ಮನಿದ್ದು ಮಳೆಗಾಲದಲ್ಲಿ ಎಚ್ಚೆತ್ತ ಪಶುಪಾಲನಾ-ಪಶು ವೈದ್ಯ ಇಲಾಖೆ
Team Udayavani, Jul 19, 2019, 9:55 AM IST
ಹಾವೇರಿ: ತಾಲೂಕಿನ ಗುತ್ತಲದಲ್ಲಿ ಅಧಿಕಾರಿಗಳು ಮೇವು ಬ್ಯಾಂಕ್ ಉದ್ಘಾಟಿಸಿದರು.
ಹಾವೇರಿ: ಬರಗಾಲದಾಗ ಸುಮ್ಮನಿದ್ದು, ಈಗ ಮಳೆ ಬಿದ್ದ ಮೇಲೆ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಎಚ್ಚೆತ್ತಿಕೊಂಡಂತಿದೆ.ಬೇಸಿಗೆಯಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿ ರೈತರ ನೆರವಿಗೆ ಬರಬೇಕಿದ್ದ ಇಲಾಖೆ ಈಗ ಮಳೆ ಬಂದ ಮೇಲೆ ಜಿಲ್ಲೆಯಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆದು ಆಶ್ಚರ್ಯ ಮೂಡಿಸಿದೆ.
ಕಳೆದ ವರ್ಷ ಮುಂಗಾರು-ಹಿಂಗಾರು ಎರಡೂ ಮಳೆಗಳು ಕೈ ಕೊಟ್ಟು ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿತ್ತು. ಸರ್ಕಾರ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿತ್ತು. ಕಳೆದ ಬೇಸಿಗೆ ಮಾರ್ಚ್‌ನಿಂದ ಮೇವರೆಗೆ ಈ ಬಾರಿ ಒಂದು ಹನಿ ಮಳೆ ಬಾರದೆ ಜಾನುವಾರುಗಳು ನೀರು, ಮೇವಿನ ತೀವ್ರ ಸಮಸ್ಯೆ ಎದುರಿಸಿದವು. ಜೂನ್ ತಿಂಗಳು ಕಳೆದರೂ ಮಳೆಯಾಗಲಿಲ್ಲ. ಆಗಲೂ ರೈತರ ನೆರವಿಗೆ ಬಾರದ ಪಶು ಇಲಾಖೆ ಈಗ ಮಳೆ ಬಿದ್ದು ಜಾನುವಾರುಗಳಿಗೆ ಹಸಿರು ಮೇವು ಸಿಗುತ್ತಿರುವ ಸಂದರ್ಭದಲ್ಲಿ ಪಶು ಇಲಾಖೆ ಜಿಲ್ಲೆಯ ಏಳು ತಾಲೂಕುಗಳಲ್ಲಿ ಮೇವು ಬ್ಯಾಂಕ್ ಆರಂಭಿಸಿ ನಗೆಪಾಟಲಿಗೀಡಾಗಿದೆ.
ಮೇವಿನ ಕೊರತೆ ಕಾರಣದಿಂದ ಜಿಲ್ಲೆಯಲ್ಲಿ ನೂರಾರು ರೈತರು ತಮ್ಮ ಜಾನುವಾರುಗಳನ್ನು ಸಿಕ್ಕಷ್ಟು ದುಡ್ಡಿಗೆ ಮಾರಿದರು. ಆಗಲೂ ಕರುಣೆ ತೋರದ ಇಲಾಖೆ ಈಗ ಯಾವ ಪುರುಷಾರ್ಥಕ್ಕಾಗಿ ಮೇವು ಬ್ಯಾಂಕ್ ತೆರೆದಿದೆ ಎಂಬ ಆಕ್ರೋಶದ ಪ್ರಶ್ನೆ ರೈತರದ್ದಾಗಿದೆ. ಮೇವು ಬ್ಯಾಂಕ್ ತೆರೆದು ಮೂರ್‍ನಾಲ್ಕು ದಿನ ಕಳೆದರೂ ರೈತರು ಮೇವು ಖರೀದಿಸದೆ ಇರುವುದು ಜಿಲ್ಲೆಯಲ್ಲಿ ಜಾನುವಾರುಗಳಿಗೆ ಈಗ ಮೇವಿನ ಕೊರತೆ ಇಲ್ಲ ಎಂಬುದನ್ನು ತೋರ್ಪಡಿಸುತ್ತಿದೆ.
ಮರೆ ಮಾಚಿದ ವಾಸ್ತವ: ಬೇಸಿಗೆ ದಿನಗಳಲ್ಲಿ ಮೇವಿನ ಕೊರತೆಯುಂಟಾಗಿದ್ದಾಗ ಬರ ನಿರ್ವಹಣೆ ವೇಳೆ ಪಶು ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಸಾಕಷ್ಟು ಮೇವಿನ ಸಂಗ್ರಹವಿದೆ. ಜಿಲ್ಲೆಯಲ್ಲಿ ಮೇವಿನ ಕೊರತೆ ಇಲ್ಲ ಎಂದು ಹೇಳುತ್ತಲೇ ಬಂದರೆ ವಿನಃ ಮೇವು ಬ್ಯಾಂಕ್ ತೆರೆಯುವ ಪ್ರಯತ್ನ ಮಾಡಲಿಲ್ಲ. ಕೆಲ ರೈತರು ಪಕ್ಕದ ಜಿಲ್ಲೆಗಳಿಂದ ದುಬಾರಿ ದರಕ್ಕೆ ಮೇವು ಖರೀದಿಸಿ ತಮ್ಮ ಜಾನುವಾರುಗಳ ಹೊಟ್ಟೆ ತುಂಬಿಸುವ ಕಾರ್ಯ ಮಾಡಿದರೆ, ಇಲಾಖೆ ಅಧಿಕಾರಿಗಳು ಮಾತ್ರ ವಾಸ್ತವ ಅರಿಯದೆ ಮೇವು ದಾಸ್ತಾನು ಇದೆ ಎನ್ನುತ್ತಲೇ ಬಂದಿದ್ದು ವಿಪರ್ಯಾಸ.
ಜಾನುವಾರು ಎಷ್ಟಿದೆ?: ಜಿಲ್ಲೆಯಲ್ಲಿ 3,44,428 ಜಾನುವಾರುಗಳಿವೆ. ಹಾವೇರಿ ತಾಲೂಕಿನಲ್ಲಿ 47,767, ಹಿರೇಕೆರೂರು ತಾಲೂಕಿನಲ್ಲಿ 58,857, ಹಾನಗಲ್ಲ ತಾಲೂಕಿನಲ್ಲಿ 70,753, ರಾಣಿಬೆನ್ನೂರು ತಾಲೂಕಿನಲ್ಲಿ 61,253, ಶಿಗ್ಗಾವಿ ತಾಲೂಕಿನಲ್ಲಿ 40,869, ಬ್ಯಾಡಗಿ ತಾಲೂಕಿನಲ್ಲಿ 34,222, ಸವಣೂರು ತಾಲೂಕಿನಲ್ಲಿ 30,707 ಜಾನುವಾರುಗಳಿವೆ. ಜೂನ್ 29ವರೆಗೂ ಅಧಿಕಾರಿಗಳು ಜಿಲ್ಲೆಯಲ್ಲಿ 202432 ಮೆಟ್ರಿಕ್ ಟನ್ ಮೇವು ದಾಸ್ತಾನು ಇದೆ ಎಂದು ವರದಿ ನೀಡುತ್ತಲೇ ಬಂದು ಈಗ ಏಕಾಏಕಿ ಮೇವು ಬ್ಯಾಂಕ್ ತೆರೆದಿದ್ದಾರೆ. ಅಧಿಕಾರಿಗಳ ನಡೆ ಬಗ್ಗೆ ಸಂಶಯ ಮೂಡಿಸಿದೆ.
ಪಶು ಇಲಾಖೆ ಮಳೆಗಾಲದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಿದ್ದು,ಅದು ಯಾರಿಗೆ ಉಪಯೋಗವಾಗುತ್ತದೆ ಎಂಬುದೇ ಯಕ್ಷಪ್ರಶ್ನೆ. ಯಾರೂ ಮೇವು ಖರೀದಿಸದಿದ್ದರೆ ಸರ್ಕಾರದ ಹಣ ಅಕ್ಷರಶಃ ಪೋಲಾಗುವುದಂತೂ ಸತ್ಯ.
ಮೇವು ಬ್ಯಾಂಕ್‌ನಲ್ಲಿ ದಿನವೊಂದಕ್ಕೆ ಒಂದು ಜಾನುವಾರುವಿಗೆ 5 ಕೆ.ಜಿ ಯಂತೆ ಒಂದು ವಾರಗಳ ಕಾಲ ಮೇವು ನೀಡಲಾಗುವುದು. ಖಾಲಿಯಾದ ನಂತರ ಮತ್ತೆ ಪಡೆಯಬಹುದು. ಒಂದು ಕೆ.ಜಿ ಮೇವಿಗೆ 2ರೂ. ದರ ನಿಗದಿಪಡಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ಮೇವು ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ. ರೈತ ಬಾಂಧವರು ಸದರಿ ಮೇವಿನ ಲಭ್ಯತೆಯನ್ನು ಅವಶ್ಯಕತೆಗೆ ತಕ್ಕಂತೆ ಸದುಪಯೋಗ ಪಡಿಸಿಕೊಳ್ಳಬೇಕು.•ಪಿ.ಎನ್. ಹುಬ್ಬಳ್ಳಿ, ಸಹಾಯಕ ನಿರ್ದೇಶಕರು, ಪಶು ಇಲಾಖೆ.
•ಎಚ್.ಕೆ. ನಟರಾಜ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.