ಸಮೃದ್ಧ ಕೃಷಿಗೆ ಮಾದರಿಯಾದ ಯುವ ರೈತ
Team Udayavani, Mar 8, 2020, 3:54 PM IST
ಹಾವೇರಿ: ಅಸಮರ್ಪಕ ಮಳೆಯಿಂದ ಬೇಸತ್ತ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಯುವ ರೈತನೋರ್ವ ಕೊಳವೆಬಾವಿಗೆ ನೀರು ಇಂಗಿಸಿ ಅಂತರ್ಜಲ ಹೆಚ್ಚು ಮಾಡಿ ಗಮನಸೆಳೆದಿದ್ದಾನೆ.
ಈ ಯುವ ರೈತನ ಹೆಸರು ಶಂಕರ್ ಸೋಗಲಿ. ಕುನ್ನೂರು ಗ್ರಾಮದ ನಿವಾಸಿಯಾದ ಶಂಕರ ಐಟಿಐ ಪದವೀಧರ. ತಮ್ಮ ಹೊಲದಲ್ಲಿ ಕೊರೆಸಿದಂತಹ ಕೊಳವೆಬಾವಿಯ ನೀರಿನ ಇಳುವರಿಯನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡು ಅಲ್ಪ ಜಮೀನಿನಲ್ಲಿ ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ.
ಆರಂಭದಲ್ಲಿ ಕೊಳವೆಬಾವಿಯಲ್ಲಿ ಕೇವಲ ಎರಡು ಇಂಚಿನಷ್ಟು ಮಾತ್ರ ನೀರು ಬಿದ್ದಿತ್ತು. ತನ್ನ 1.29ಗುಂಟೆ ಜಮೀನಿಗೆ ನೀರು ಉಣಿಸಲು ಪರದಾಡುತಿದ್ದರು. ನೀರಿನ ಪ್ರಮಾಣ ಹೆಚ್ಚಿಸಲು ಅವರು ಕಂಡು ಕೊಂಡ ಮಾರ್ಗ ನೀರು ಇಂಗಿಸುವಿಕೆ. ಜಮೀನಲ್ಲಿ ತೋಡಿದ ಕೊಳವೆಬಾವಿ ಸಮೀಪದಲ್ಲಿಯೇ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿದರು. ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ, ಎರಡು ಮೀಟರ್ ಆಳವಾದ ಗುಂಡಿಯನ್ನು ತೆಗೆದು, ಗುಂಡಿಯಲ್ಲಿ ಎರಡು ಫೂಟ್ ಮರಳು, ಎರಡು ಫೂಟ್ ಇದ್ದಿಲು, ಎರಡು ಫೂಟ್ ದಪ್ಪದಾದ ಜಲ್ಲಿ ಕಲ್ಲು ತುಂಬಿಸಿದರು. ಇದರ ಪ್ರತಿಫಲವಾಗಿ ಗುಂಡಿಯಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಭೂಮಿಗೆ ಇಂಗಿಸಿದ್ದಾರೆ. ಇದರ ಪರಿಣಾಮ ಕೇವಲ ಎರಡು ಇಂಚು ನೀರಿನ ಇಳುವರಿಯ ಕೊಳವೆಬಾವಿ ಇದೀಗ ದ್ವಿಗುಣಗೊಂಡು ನಾಲ್ಕು ಇಂಚು ನೀರು ಹೊರಹೊಮ್ಮುತ್ತಿದೆ.
ಇದಲ್ಲದೆ ಹೊಲದ ಸುತ್ತಲೂ ತಿರುವು ಕಾಲುವೆಯಿಂದ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಇಂಗುಗುಂಡಿಗೆ ಸೇರಿಸುವ ಕೆಲಸ ಮಾಡಲಾಗಿದೆ. ಈ ಪ್ರಯೋಗದಿಂದ ತಮ್ಮ ಹೊಲದಲ್ಲಿನ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯಬಹುದು. ಹೀಗೆ ಮಾಡುವುದರಿಂದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು ತೊಂಬತ್ತು ಲಕ್ಷ ಲೀಟರ್ ಗೂ ಅಧಿಕ ಮಳೆ ನೀರನ್ನು ಇಂಗುತ್ತದೆ. ಒಂದು ಬೆಳೆ ಬೆಳೆಯಲು ಪರದಾಡುತ್ತಿದ್ದ ನನಗೆ ಮೂರು ಬೆಳೆಯನ್ನು ಬೆಳೆಯುವಷ್ಟು ತೇವಾಂಶ ಭೂಮಿಯಲ್ಲಿದೆ ಎನ್ನುತ್ತಾರೆ ಶಂಕರ್.
ಈ ಪ್ರಯೋಗದಲ್ಲಿ ಮತ್ತಷ್ಟು ಸುಧಾರಣೆಕಂಡುಕೊಂಡ ಶಂಕರ್, ಇಂಗುಗುಂಡಿಯನ್ನು ಕೇವಲ ಮಣ್ಣು, ಕಲ್ಲುಗಳನ್ನು ಬಳಸಿ ನಿರ್ಮಿಸುವ ವಿಧಾನವನ್ನು ಬದಲಿಸಿ, ಹೊಸದಾಗಿ ಸಿಮೆಂಟ್ ರಿಂಗು, ಜಲ್ಲಿ, ಮರಳನ್ನು ಬಳಸಿಕೊಂಡು ಸುಲಭವಾದ ರೀತಿಯಲ್ಲಿ ನೀರನ್ನು ಇಂಗಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಮಳೆಗಾಲದಲ್ಲಿ ಇಂಗುಗುಂಡಿಗಳು ಮುಚ್ಚಿಹೋಗುವುದು ತಪ್ಪಿದೆ.
ಭರಪೂರ ಕೃಷಿ: ಕೇವಲ 1.29 ಗುಂಟೆ ಜಮೀನು ಮಾತ್ರ ಹೊಂದಿರುವ ಶಂಕರ್ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬಹು ಬೆಳೆಗಳ ಪದ್ಧತಿಯನ್ನು ಅನುಸರಿಸಿದ್ದಾರೆ. ಈ ಜಮೀನಿನಲ್ಲಿ 303 ಅಡಿಕೆ ಸಸಿ, 1200 ಅಂಗಾಂಶಬಾಳೆ, 300 ಶ್ರೀಗಂಧದ ಗಿಡಗಳು, 10 ತೆಂಗಿನ ಗಿಡ, 100 ಲಿಂಬು, ಐದು ಪೇರಲೆ, ಹೊಲದ ಸುತ್ತಲೂ 1120 ಗಾಳಿಮರಗಳು ಹಾಗೂ ಔಷ ಧೀಯ ಸಸ್ಯಗಳಾದ ಲಿಂಬೆಹುಲ್ಲು (ನೆಗಡಿ), ಮಾಗಣಿ ಬೇರು (ಉಪ್ಪಿನ ಕಾಯಿ ತಯಾರಿಸಲು), ಬಿಳಿ ಗಲಗುಂಜಿ (ಧ್ವನಿ ಸರಿಪಡಿಸಲು), ಪತ್ರಿ ಪಟ-ಪಟ (ಕಿಡ್ನಿ ಹರಳು), ಒಂದೇಲಗಾ (ನೆನಪಿನ ಶಕ್ತಿ ಹೆಚ್ಚಿಸುವುದು), ಮಧುನಾಸಿನಿ (ಸಕ್ಕರೆ ಕಾಯಿಲೆ) ಯಂತಹ ಆಯುರ್ವೇದದ ಔಷ ಧಿಯ ಸಸ್ಯಗಳನ್ನು ಬೆಳೆಸಿ ರುವುದು ವಿಶೇಷವಾಗಿದೆ.
ತೋಟಗಾರಿಕೆ ಇಲಾಖೆ ಸಹಾಯ ಪಡೆದು ಹತ್ತು ಗುಂಟೆಯಲ್ಲಿ ನೆರಳು ಪರದೆ ನಿರ್ಮಿಸಿಕೊಂಡು ತರಕಾರಿ ಬೆಳೆಯನ್ನುಬೆಳೆಯುತ್ತಾರೆ. ಜಮೀನಿಗೆ ಬೇಕಾಗುವ ಸಾಯವ ಗೊಬ್ಬರ ತಯಾರಿಸಲು ಎರೆಹುಳ ತೊಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ದೇಶಿ ಆಕಳು ಸಾಕಾಣಿಕೆಯಿಂದ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶಿ ಹಸುವಿನಿಂದ ಬಿಜಾಮೃತ, ಜೀವಾಮೃತ, ಹೋದಿಕೆ, ವಾಪಾಸಾ ಹಂತಗಳನ್ನು ಅನುಸರಿಸುತ್ತಿದ್ದಾರೆ. ಈ ಎಲ್ಲ ಪದ್ಧತಿಯ ಅನುಸರಣೆಗೆ ಮಹಾರಾಷ್ಟ್ರದ ಸಹಜ ಕೃಷಿ ಪದ್ಧತಿಯ ಸುಭಾಷ ಪಾಳೆಕೆರ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದಿರುವುದಾಗಿ ತಿಳಿಸುತ್ತಾರೆ. ಇಡೀ ಜಗತ್ತೇ ಇಸ್ರೇಲ್ ಮಾದರಿಯ ಕೃಷಿಪದ್ಧತಿ ಅನುಸರಿಸುವ ತವಕದಲ್ಲಿದ್ದರೆ ನಮ್ಮಲ್ಲಿಯೇ ಸದ್ದಿಲ್ಲದೆ ನೈಸರ್ಗಿಕ ಕೃಷಿ ಪದ್ಧತಿ ಮತ್ತು ಇಂಗುಗುಂಡಿಗಳ ಕ್ರಮದಿಂದ ಲಾಭದಾಯಕ ಕೃಷಿಯಲ್ಲಿ ತೊಡಗಿರುವ ಕುನ್ನೂರ ಶಂಕರ್ ಯುವ ರೈತರಿಗೆ ಮಾದರಿಯಾಗಿದ್ದಾರೆ.
ದೇಶ-ವಿದೇಶಗರಿಂದ ಪ್ರಶಂಸೆ : ಯುವ ರೈತನ ಈ ಹೊಸ ಪ್ರಯೋಗವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ವಿದೇಶಿಯರಿಗೆ ಪರಿಚಯಿಸಿದೆ. ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ ಸೇರಿದಂತೆ ಏಳು ರಾಷ್ಟ್ರದ ರೈತ ಪ್ರತಿನಿಧಿ ಗಳು ಕುನ್ನೂರ ಗ್ರಾಮದ ಶಂಕರ್ ಅವರ ಜಮೀನಿಗೆ ಬಂದು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇವರ ಈ ಪ್ರಯೋಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2017ರ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್ ಕೊಡಮಾಡುವ ಕೃಷಿ ಸಿಂಚನ ಪ್ರಶಸ್ತಿ, 2019-20ನೇ ಸಾಲಿನ ಹಾವೇರಿ ಜಿಲ್ಲಾಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.