ಬೆಳಗುತ್ತಿ-ಮಲ್ಲಿಗೇನಹಳ್ಳಿ ಶಾಲೆಗೆ ಬೆಳ್ಳಿ ಹಬ್ಬದ ಸಂಭ್ರಮ
ಕಳೆದ 10 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.90ಕ್ಕೂ ಹೆಚ್ಚು ದಾಖಲು
Team Udayavani, Nov 14, 2019, 11:22 AM IST
ಹೊನ್ನಾಳಿ: ನ್ಯಾಮತಿ ತಾಲೂಕಿನ ಬೆಳಗುತ್ತಿ-ಮಲ್ಲಿಗೇನಹಳ್ಳಿ ಅವಳಿ ಗ್ರಾಮಗಳ ಸರ್ಕಾರಿ ಪ್ರೌಢಶಾಲೆಯ ಬೆಳ್ಳಿ ಮಹೋತ್ಸವ ಸಮಾರಂಭ ನ.17 ಮತ್ತು 18ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಕೆ.ನಾಗೇಂದ್ರಪ್ಪ ಹೇಳಿದರು.
ಬೆಳಗುತ್ತಿ-ಮಲ್ಲಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳಗುತ್ತಿ-ಮಲ್ಲಿಗೇನಹಳ್ಳಿ ಸರ್ಕಾರಿ ಪ್ರೌಢಶಾಲೆ ಜೂನ್ 16, 1993ರಲ್ಲಿ ಪ್ರಾರಂಭವಾಗಿ ಇಲ್ಲಿಯವರೆಗೆ ಎಲ್ಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ. ಕಳೆದ 10 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಶೇ.90ಕ್ಕೂ ಹೆಚ್ಚು ದಾಖಲಾಗಿದೆ. 2017-18 ಮತ್ತು 2018-19ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ನೂರಕ್ಕೆ ನೂರರಷ್ಟು ದಾಖಲಾಗಿದ್ದು, ಉತ್ತಮ ಶಿಕ್ಷಕರಿದ್ದರೆ ಸರ್ಕಾರಿ ಶಾಲೆಗಳೂ ಉತ್ತಮ ಫಲಿತಾಂಶ ತರಬಲ್ಲವು ಎಂದು ನಮ್ಮ ಪ್ರೌಢಶಾಲೆ ತೋರಿಸಿಕೊಟ್ಟಿದೆ ಎಂದು ಹೇಳಿದರು.
ಪ್ರೌಢಶಾಲೆ ಅಭಿವೃದ್ಧಿ ಹೊಂದುತ್ತಿರುವುದನ್ನು ಮನಗಂಡ ಶಾಲಾಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರು ಬೆಳ್ಳಿಹಬ್ಬ ಆಚರಣೆಗೆ ಒಕ್ಕೊರಲಿನ ಒಪ್ಪಿಗೆ ನೀಡಿ ಸಹಕರಿಸುತ್ತಿದ್ದಾರೆ ಎಂದರು. ಬೆಳ್ಳಿ ಮಹೋತ್ಸವದ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರ ತರಲಾಗುತ್ತಿದ್ದು ಬೆಳಗುತ್ತಿ ಮತ್ತು ಮಲ್ಲಿಗೇನಹಳ್ಳಿ ಗ್ರಾಮಗಳನ್ನು ಬಿಂಬಿಸುವ ಬೆಳಗು-ಮಲ್ಲಿಗೆ ಎಂದು ಸ್ಮರಣ ಸಂಚಿಕೆಗೆ ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
25 ವರ್ಷಗಳ ಅವಧಿ ಯಲ್ಲಿ 23 ಎಸ್ಸೆಸ್ಸೆಲ್ಸಿ ಬ್ಯಾಚ್ ಗಳಾಗಿದ್ದು, ಈ ಎಲ್ಲಾ ಹಳೆ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಪುರಸ್ಕರಿಸಲಾಗುವುದು. 25 ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಶಿಕ್ಷಕರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದ್ದು, ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ ವರ್ಷ 625ಕ್ಕೆ 601 ಅಂಕ ಗಳಿಸಿದ ವಿದ್ಯಾರ್ಥಿನಿ ಪಲ್ಲವಿ ಅವರನ್ನು ಸನ್ಮಾನಿಸಲಾಗುವುದು ಎಂದರು.
ಬೆಳ್ಳಿ ಮಹೋತ್ಸವವನ್ನು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಎಸ್.ಸುರೇಶ್‌ಕುಮಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗಹಿಸುವರು ಎಂದು ಹೇಳಿದರು.
ನ.18ರ ಸೋಮವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಶಾಸಕರಾದ ಡಿ.ಜಿ.ಶಾಂತನಗೌಡ, ಡಾ|ಡಿ.ಬಿ. ಗಂಗಪ್ಪ ಸೇರಿದಂತೆ ಇತರ ಜನಪ್ರತಿನಿಧಿಗಳು ಭಾಗವಹಿಸುವರು. ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಂ.ಜಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.
ಎಸ್‌ಡಿಎಂಸಿ ಅಧ್ಯಕ್ಷ ಆನಂದಪ್ಪ, ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಂ.ಜಿ.ಬಸವರಾಜಪ್ಪ, ಗೌರವಾಧ್ಯಕ್ಷ ತಿಮ್ಮಪ್ಪ, ಸಂಘಟನಾ ಕಾರ್ಯದರ್ಶಿ ನಾಗರಾಜಪ್ಪ, ಸದಸ್ಯ ಓಂಕಾರಪ್ಪ, ಶಿಕ್ಷಕರಾದ ಶಿವಲಿಂಗಪ್ಪ, ಯೋಗೇಶ್, ಸೋಮಶೇಖರ್, ವಿಶ್ವನಾಥ್ ಉಪಸ್ಥಿತರಿದ್ದರು.