ಮಳೆಯಿಲ್ಲದೇ ಅವಳಿ ತಾಲೂಕು ರೈತರು ಕಂಗಾಲು
Team Udayavani, Jun 29, 2019, 10:20 AM IST
ಹೊನ್ನಾಳಿ: ನೀರಿಲ್ಲದೇ ಹಳ್ಳದಂತೆ ಹರಿಯುತ್ತಿರುವ ತುಂಗಭದ್ರಾ ನದಿ.
•ಎಂ.ಪಿ.ಎಂ. ವಿಜಯಾನಂದಸ್ವಾಮಿ.
ಹೊನ್ನಾಳಿ: ಕಳೆದ ಮೂರ್‍ನಾಲ್ಕು ವರ್ಷಗಳಿಂದ ಮಳೆ ಇಲ್ಲದೆ ಭೀಕರ ಬರಗಾಲ ಎದುರಿಸಿದ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ರೈತರು ಈ ಬಾರಿಯಾದರೂ ಉತ್ತಮ ಮಳೆ ಸುರಿಯಬಹುದೆಂಬ ಆಶಾಭಾವನೆಯಲ್ಲಿದ್ದ ರೈತರಿಗೆ ಜೂನ್ ತಿಂಗಳು ಮುಗಿಯುತ್ತಾ ಬಂದರೂ ಬಿತ್ತನೆಗೂ ಕೂಡ ಭೂಮಿ ಹಸಿಯಾಗುವಷ್ಟು ಮಳೆ ಬಾರದೆ ಜಂಘಾಬಲವೇ ಉಡುಗುವಂತಾಗಿದೆ.
ವಾಡಿಕೆಯಂತೆ ಸಕಾಲದಲ್ಲಿ ಮಳೆಯಾಗದೆ ದಿಕ್ಕು ತೋಚದ ರೈತರು ದಿನವೂ ಆಕಾಶದತ್ತ ಮುಖಮಾಡಿ ಕುಳಿತುಕೊಳ್ಳುವಂತಾಗಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿ ಉತ್ತಮ ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿ ರೈತರು ಇದ್ದರು. ಆದರೆ ಜೂನ್ ಕೊನೆ ವಾರ ಕಳೆಯುತ್ತಾ ಬಂದರೂ ಮಳೆಯಾಗದೆ ರೈತರು ಚಿಂತೆಗೀಡಾಗಿದ್ದಾರೆ. ದಿನ ನಿತ್ಯ ಆಗಾಗ ಮೋಡ ಮುಸುಕಿದ ವಾತಾವರಣ, ನಂತರ ಬೇಸಿಗೆ ಬಿಸಿಲು ಹೀಗೆ ಕಣ್ಣುಮುಚ್ಚಾಲೆ ಆಟ ನಡೆದಿರುತ್ತದೆ.
ಈ ಬಾರಿಯಾದರೂ ಉತ್ತಮ ಬೆಳೆ ಬೆಳೆದು ಮಾಡಿದ ಸಾಲವನ್ನಾದರೂ ತೀರಿಸಿ ನೆಮ್ಮದಿಯಾಗಿರೋಣ ಎಂದು ಯೋಚಿಸಿದ್ದ ರೈತರಿಗೆ ಮಳೆ ಬಾರದೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುಂದೆ ಏನು ಮಾಡೋದು ಎಂದು ರೈತರು ಚಿಂತೆಯಲ್ಲಿ ಮುಳುಗಿದ್ದಾರೆ.
ಈ ವರೆಗೆ ಅವಳಿ ತಾಲೂಕಿನಲ್ಲಿ ವಾಡಿಕೆಯಂತೆ 202.02 ಮಿ.ಮೀ.ನಷ್ಟು ಮಳೆಯಾಗಬೇಕಿತ್ತು ಆದರೆ ಈವರೆಗೆ ಕೇವಲ 92ಮಿ.ಮೀ. ಮಾತ್ರ ಮಳೆಯಾಗಿರುವುದರಿಂದ ರೈತರು ಬಿತ್ತನೆ ಇರಲಿ, ಭೂಮಿಯನ್ನು ಹದ ಕೂಡ ಮಾಡಲಿಕ್ಕೆ ಸಾಧ್ಯವಾಗಿಲ್ಲ.
ತಾಲೂಕಿನಲ್ಲಿ 28,250 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ ಮಳೆಯಾಗದೆ ಇರುವುದರಿಂದ ಮುಸುಕಿನ ಜೋಳ 250, ಹತ್ತಿ 282, ಶೇಂಗಾ 110 ಹಾಗೂ ತೊಗರೆ 2 ಹೆಕ್ಟರ್ ಸೇರಿದಂತೆ 650 ಹೆಕ್ಟರ್ ಪ್ರದೇಶದಲ್ಲಿ ರೈತರು ಭಿತ್ತನೆ ಕಾರ್ಯ ಮಾಡಿದ್ದಾರೆ. ಆದರೆ ಬಿತ್ತಿದ ಬೀಜ ಮೊಳಕೆಯೊಡೆದು ಹೊರ ಬಂದು ಒಣಗಲು ಪ್ರಾರಂಭವಾಗಿದೆ.
ತಾಲೂಕಿನ ಸಾಸ್ವೇಹಳ್ಳಿ ಹೋಬಳಿಯಲ್ಲಿ ಸಾಧಾರಣ ಮಳೆಯಾಗಿರುವುದರಿಂದ ಬಿತ್ತನೆ ಮಾಡಲಿಕ್ಕೆ ತೊಂದರೆ ಇಲ್ಲ ಆದರೆ ಬೆಳಗುತ್ತಿ, ಕಸಬಾ, ಗೋವಿನಕೋವಿ, ನ್ಯಾಮತಿ ಹಾಗೂ ಕುಂದೂರು ಭಾಗದಲ್ಲಿ ಮಳೆಯಾಗದೆ ಇರುವುದರಿಂದ ಬಿತ್ತನೆ ಕಾರ್ಯ ಪ್ರಾರಂಭ ಮಾಡಲು ರೈತರು ಹಿಂದುಮುಂದು ನೋಡುತ್ತಿದ್ದಾರೆ.
ಹಳ್ಳದಂತಾದ ನದಿ: ತುಂಬಿ ಹರಿಯಬೇಕಿದ್ದ ತುಂಗಭದ್ರಾ ನದಿ ಮಲೆನಾಡು ಪ್ರದೇಶದಲ್ಲಿ ಮಳೆ ಇಲ್ಲದೆ ಹಳ್ಳದಂತೆ ಹರಿಯುತ್ತಿದೆ. ಕಾರಹುಣ್ಣಿಮೆ ಸಂದರ್ಭದಲ್ಲಿ ತುಂಬಿದ ನದಿಯನ್ನು ಕಾಗೆ ದಾಟಲೂ ಹೆದರಬೇಕು ಎನ್ನುವ ನಾಣ್ಣುಡಿ ಇಂದು ಉಲ್ಟಾ ಆಗಿರುವುದು ವಿಷಾದನೀಯ.
ಜು. 15 ರವರೆಗೂ ಬಿತ್ತನೆ ಮಾಡಲಿಕ್ಕೆ ರೈತರಿಗೆ ಅವಕಾಶ ಇದೆ. ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ. ಹವಾಮಾನ ಇಲಾಖೆ ವರದಿಯಂತೆ ಇಷ್ಟರಲ್ಲೇ ಮಳೆಯಾಗುವ ಸೂಚನೆ ಇದ್ದು, ಸಾಸ್ವೇಹಳ್ಳಿ ಭಾಗದಲ್ಲಿ ಮಳೆಯಾಗಿದೆ. ಇನ್ನು ಬಾಕಿ ಹೋಬಳಿಗಳಲ್ಲಿ ಮಳೆಯಾಗಿಲ್ಲ.
•ವಿಶ್ವನಾಥ್,
ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕರು, ಹೊನ್ನಾಳಿ.
ಕಳೆದ ಮೂರ್‍ನಾಲ್ಕು ವರ್ಷಗಳಿಂದ ವಾಡಿಕೆಯಂತೆ ಮಳೆಯಾಗದೆ ರೈತರು ಬೆಳೆ ಬೆಳೆಯಲಿಕ್ಕೆ ಆಗದೆ ಮತ್ತಷ್ಟು ಸಾಲಗಾರರಾಗಿದ್ದಾರೆ. ಈಗ ಮತ್ತೆ ಮಳೆ ಕಣ್ಣಾಮುಚ್ಚಾಲೆಯಾಟ ಆಡುತ್ತಿರುವುದರಿಂದ ಈ ಬಾರಿಯೂ ರೈತರ ಬದುಕು ದುಸ್ತರವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸರ್ಕಾರ ಪ್ರತಿ ಎಕರೆಗೆ ಪರಿಹಾರ ನೀಡಬೇಕು.
•ಜಗದೀಶ್ ಕಡದಕಟ್ಟೆ,
ರೈತ ಮುಖಂಡ, ಹೊನ್ನಾಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
MUST WATCH
ಹೊಸ ಸೇರ್ಪಡೆ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ
Udupi: ಜಿಲ್ಲೆಯ ಬ್ಲ್ಯಾಕ್ ಸ್ಪಾಟ್ 30ರಿಂದ 20ಕ್ಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.