ನೀರಿನ ಸ್ವಾತಂತ್ರ್ಯ ಕಸಿದುಕೊಂಡಿದ್ದರಿಂದ ನೆರೆ
Team Udayavani, Jul 25, 2019, 1:23 PM IST
ಜೀಯು, ಹೊನ್ನಾವರ
ಹೊನ್ನಾವರ: ಪೂರ್ವ, ಪಶ್ಚಿಮವಾಗಿ ಇಳಿಜಾರಿನಲ್ಲಿರುವ ಜಿಲ್ಲೆಯ ಭೂ ಪ್ರದೇಶದಲ್ಲಿ ನಿವಾಸಿಗಳು ಮತ್ತು ಕೊಂಕಣ ರೇಲ್ವೆ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಮಾಡಿದ ಭೂ ಸ್ಥಿತ್ಯಂತರದಿಂದಾಗಿ ಸಹಜವಾಗಿ ಹಳ್ಳ, ಹೊಳೆ, ನದಿಗೆ ಸೇರಿ ಹರಿದು ಹೋಗುವ ನೀರು ದಿಕ್ಕುತಪ್ಪಿದಂತೆ ಹುಚ್ಚೆದ್ದು ಕಂಡಲ್ಲಿ ನುಗ್ಗಿ ಮನೆ, ಧರೆ ಕೆಡವಿ ಕಷ್ಟಪಟ್ಟು ಸಮುದ್ರ ಸೇರುತ್ತಿದೆ.
ಹತ್ತಾರು ವರ್ಷಗಳಲ್ಲಿ ಒಂದೆರಡು ಬಾರಿ ಮಳೆ ಹೆಚ್ಚಾದಾಗ ಜಿಲ್ಲೆಗೆ ನೆರೆ ಕಾಡುತ್ತಿತ್ತು. ನೋಡನೋಡುತ್ತಿದ್ದಂತೆ ಬೆಟ್ಟದಿಂದ ತನ್ನ ದಾರಿ ಹಿಡಿದು ಹಳ್ಳಿಹಳ್ಳಿಯಿಂದ ಇಳಿದು ಪೇಟೆಯ ರಾಜಾಕಾಲುವೆ ಮಾರ್ಗವಾಗಿ ಸಮುದ್ರ ಸೇರುತ್ತಿತ್ತು. ಈಗ ಪ್ರತಿವರ್ಷ ಮಳೆಗಾಲ ಆರಂಭದಲ್ಲಿ ನೆರೆ ಗ್ಯಾರಂಟಿ. ಈ ವರ್ಷ ಜೂನ್ ತಿಂಗಳಲ್ಲಿ ಮಳೆ ಮಾಯವಾಗಿತ್ತು. ಜುಲೈ 2ನೇ ವಾರದಲ್ಲಿ ಬಿದ್ದ 2ದಿನದ ಮಳೆಗೆ ನೆರೆ ಕೋಲಾಹಲವಾಗಿ ಮಾಧ್ಯಮಗಳಲ್ಲಿ ಮಿಂಚಿತು.
ಕೃತಕ ನೆರೆಗೆ ಪರಿಹಾರ ಜನತೆ, ಜನಪ್ರತಿನಿಧಿಗಳ ಕೈಯಲ್ಲಿದೆ. ನಾಲ್ಕು ದಶಕಗಳ ಹಿಂದೆ ಪಶ್ಚಿಮ ಘಟ್ಟದಲ್ಲಿ ಶೇ. 80-60ರಷ್ಟು ಕಾಡುಗಳಿದ್ದಾಗ ಬಯಲು ಪ್ರದೇಶದಲ್ಲೂ ಕುರುಚಲು ಕಾಡಿತ್ತು. ಆಗ ಮಳೆಗಾಲದಲ್ಲಿ ರಪರಪನೆ ಹೊಡೆಯುವ ಮಳೆ ನೀರನ್ನು ತಡೆಯುವ ಮರಗಳು ನಿಧಾನವಾಗಿ ನೀರನ್ನು ನೆಲಕ್ಕಿಳಿಸಿ, ಗುಟುಕುಗುಟುಕಾಗಿ ಭೂಮಿಗೆ ಕುಡಿಸಿ, ಹುಲ್ಲಿನ ಮೇಲೆ ಹರಿಸಿ ಹೊಳೆ, ಹಳ್ಳ ಸೇರಿಸುತ್ತಿದ್ದವು.
ಈಗ ಪೂರ್ವಕ್ಕೆ ನೋಡಿದರೆ ಕುರುಚಲು ಕಾಣುವುದಿಲ್ಲ. ಕಾಡು ನಾಶವಾಯಿತು. ರಪರಪನೆ ಬೀಳುವ ಮಳೆ ಗುಡ್ಡ ಅಗೆದು ಸಮತಟ್ಟು ಮಾಡಿ, ಕಂಡಲ್ಲಿ ತೋಟ, ಮನೆ ಮಾಡುವಾಗ ಅಗೆದು ರಾಶಿಹಾಕಿದ ಧರೆಯ ಮಣ್ಣನ್ನೆಲ್ಲಾ ಒಡಲು ತುಂಬಿಸಿಕೊಂಡು ಕೆಂಪಾಗಿ, ಜೋರಾಗಿ ಹರಿಯಲು ಆರಂಭಿಸುತ್ತದೆ. ಹೊಳೆ, ಹಳ್ಳ, ನದಿಗಳನ್ನು ತುಂಬಿಸುತ್ತಾ ಆಳ ಕಡಿಮೆ ಮಾಡುತ್ತದೆ. ಇವುಗಳ ದಂಡೆಯಲ್ಲಿದ್ದವರು ಹಳ್ಳ, ಹೊಳೆಗಳನ್ನು ಒತ್ತುವರಿ ಮಾಡಲು ಮುಂಡಿಕೆ ಗಿಡನೆಟ್ಟು ಹಳ್ಳದ ಮಣ್ಣನ್ನೇ ಎತ್ತಿ ಹಾಕಿ ಪ್ರವಾಹದ ಮಾರ್ಗ ಕಿರಿದು ಮಾಡುತ್ತಾರೆ. ಹಳ್ಳಗಳು ಪಾತಳಿ ಮೀರಿ ತೋಟ, ಗದ್ದೆ, ಮನೆ ನುಗ್ಗುತ್ತದೆ. ತಮ್ಮ ತಮ್ಮ ಮನೆ, ತೋಟಗಳಿಗೆ ಪ್ರವಾಹ ನುಗ್ಗದಂತೆ ಕಾಲುವೆ ತೆಗೆದು ಇನ್ನೊಬ್ಬರ ತೋಟಕ್ಕೆ ನುಗ್ಗಿಸುವ ಗೋಡೆ ಕಟ್ಟುವವರಿಂದ ಪ್ರವಾಹ ದಿಕ್ಕೆಟ್ಟು ತನ್ನ ತಾಕತ್ತಿನಂತೆ ಇನ್ನೆಲ್ಲೋ ಮಾರ್ಗ ಹುಡುಕುತ್ತದೆ.
ಇಳಿಜಾರು ದಾಟಿ ಸಮತಟ್ಟು ಪ್ರದೇಶಕ್ಕೆ ಬಂದಾಗ ಕೊಂಕಣ ರೇಲ್ವೆ ಮಾರ್ಗ ಪ್ರವಾಹವನ್ನು ತಡೆಯುತ್ತದೆ. ರೇಲ್ವೆ ಯೋಜನೆ ಆರಂಭವಾದಾಗ ಪ್ರವಾಹದ ದಿಕ್ಕನ್ನು ಎರಡು ವರ್ಷ ಅಧ್ಯಯನ ಮಾಡಿ, ಮೊದಲಿನ ಸ್ಥಳದಲ್ಲಿ ನೀರು ಹರಿಯುವಂತೆ ರೇಲ್ವೆ ಮಾರ್ಗದ ಇಕ್ಕೆಲದಲ್ಲಿ ಕಾಲುವೆ ಮತ್ತು ರಾಜಾಕಾಲುವೆ ನಿರ್ಮಿಸಲಾಗಿತ್ತು. ಇವುಗಳನ್ನು ಯಾವುತ್ತೂ ಸ್ವಚ್ಛಗೊಳಿಸದ ಕಾರಣ ಕಸ, ಗಿಡಗಂಟಿ ತುಂಬಿಕೊಂಡು ಮರಗಳು ಮೇಲೆದ್ದಿವೆ. ಕಾಲುವೆಯ ಕುರುಹೇ ಕಾಣುತ್ತಿಲ್ಲ. ಸಮುದ್ರ ಕಂಡರೂ ಸೇರಲಾಗದೇ ಚಡಪಡಿಸುವ ನೀರು ಗದ್ದೆ, ಮನೆಗಳಿಗೆ ನುಗ್ಗಿ ನಿಲ್ಲುತ್ತದೆ. ತಿಂಗಳುಗಟ್ಟಲೆ ನೀರು ನಿಲ್ಲುವುದರಿಂದ ಸಾಗುವಳಿ ಮಾಡಲಾಗದ ರೈತರು ಮಾರಿಕೊಂಡರು. ಭೂಮಾಫಿಯಾ ಇದನ್ನು ಖರೀದಿಸಿ ಸೈಟ್ ಮಾಡಿ ಮಾರಿದ್ದಾರೆ. ಉಪ್ಪು, ನೀರು ಸಿಹಿನೀರು ಗದ್ದೆಗಳೆಲ್ಲಾ ಮಣ್ಣುತುಂಬಿ ಎತ್ತರಗೊಂಡು ಮನೆ ನಿರ್ಮಾಣವಾಗಿದೆ. ನೀರು ಎಲ್ಲಿಗೆ ಹೋಗಬೇಕು? ಅಳಿದುಳಿದ ಗದ್ದೆಗಳ ಭತ್ತದ ಸಸಿಗಳು ಕೊಳೆಯುತ್ತಿವೆ.
ಈಗ ಎರಡು ವರ್ಷಗಳಿಂದ ಚತುಷ್ಪಥ ಕಾಮಗಾರಿ ಗುಡ್ಡ ಸೀಳಿಕೊಂಡು ನಡೆದಿದೆ. ಅಗಾಧ ಪ್ರಮಾಣದ ಮಣ್ಣು ಸ್ಥಿತ್ಯಂತರವಾಗಿದೆ. ಧರೆ ನೆತ್ತಿಯಮೇಲಿನ ತೂಗುಕತ್ತಿಯಾಗಿದೆ. ಬೆಟ್ಟದಿಂದ ಹರಿದು ಬರುವ ನದಿ, ಹಳ್ಳಗಳ ಎಡಬಲ ದಂಡೆಗಳಲ್ಲಿ ಸಾವಿರಾರು ಎಕರೆ ಅತಿಕ್ರಮಣ ಸಾಗುವಳಿಯಾಗಿದೆ. ಕೊಂಕಣ ರೇಲ್ವೆ ಜೋಡು ಮಾರ್ಗಕ್ಕಾಗಿ ಖರೀದಿಸಿದ ಭೂಮಿಯೆಲ್ಲಾ ಅತಿಕ್ರಮಣದಾರರ ಪಾಲಾಗಿದೆ. ರೇಲ್ವೆ ಹಳಿಯ ಅಕ್ಕಪಕ್ಕದಲ್ಲೇ ಮನೆಗಳೆದ್ದಿವೆ. ಅಂಗಡಿಕಾರರು, ಪೇಟೆಯ ಪಕ್ಕದ ಮನೆಯವರು ತಮ್ಮ ತ್ಯಾಜ್ಯವನ್ನೆಲ್ಲಾ ಗಟಾರಿಗೆ ಸುರಿಯುತ್ತಾರೆ. ಶಿಕ್ಷಣ ಸಂಸ್ಥೆಗಳು ತಮ್ಮ ಸಾವಿರಾರು ವಿದ್ಯಾರ್ಥಿಗಳ ಮೂತ್ರಾಲಯದ ಮತ್ತು ಊಟದ ನಂತರದ ನೀರನ್ನು ಗಟಾರುಗಳಿಗೆ ಹರಿಸುತ್ತವೆ. ಪೇಟೆಗೆ ಬಂದ ಪ್ರವಾಹ ಮಳೆಗಾಲದ ನೀರು ಹೋಗುವ ಗಟಾರಿನಲ್ಲಿ ಹರಿಯಲಾರದೆ ರಸ್ತೆ ಮೇಲೆ ಹರಿಯುತ್ತಿದೆ. ತಗ್ಗುಪ್ರದೇಶದ ಮನೆಗಳೊಳಗೆ ನೀರು ನುಗ್ಗುತ್ತದೆ.
1947ರಲ್ಲಿ ಸ್ವಾತಂತ್ರ್ಯ ಬಂದಾಗ ಉತ್ತರಕನ್ನಡ ಜಿಲ್ಲೆಯ ಜನಸಂಖ್ಯೆ 3ಲಕ್ಷ. ಪ್ಲೇಗು, ಸಿಡುಬು, ಮಲೇರಿಯಾಗಳು ಲಕ್ಷ ಜನರನ್ನು ಬಲಿಪಡೆದಿದ್ದವು. 72ವರ್ಷಗಳಲ್ಲಿ ಊರು ಬಿಟ್ಟವರ ಹೊರತಾಗಿ 13ಲಕ್ಷ ಜನ ಜಿಲ್ಲೆಯಲ್ಲಿದ್ದಾರೆ. ಜಿಲ್ಲೆಯ ಅರ್ಧದಷ್ಟು ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಲ್ಲ. ಮಳೆಗಾಲದಲ್ಲಿ ನೆರೆಕಾಟ ತಪ್ಪುವುದಿಲ್ಲ. ಗುಡ್ಡ ಬೆಟ್ಟದ ನೀರನ್ನು ಅರಣ್ಯ ಇಲಾಖೆ ಮತ್ತು ಖಾಸಗಿ ಭೂಮಿಗೆ ಬಿಡುವ ನೀರನ್ನು ಭೂ ಮಾಲಕರು ಹೊಂಡ ತೆಗೆದು ನೀರಿಂಗಿಸಿದ್ದರೆ ಅಂತರ್ಜಲ ಏರುತ್ತಿತ್ತು. ನೆರೆ ತಪ್ಪುತ್ತಿತ್ತು. ಇಂತಹ ಸಣ್ಣ ಯೋಜನೆ ಜನರ ತಲೆಗೆ ಹೋಗುವುದಿಲ್ಲ. ದೊಡ್ಡ ಯೋಜನೆ ಬರುವುದಿಲ್ಲ. ವರ್ಷವೂ ನೆರೆ, ಪರಿಹಾರ, ಗಂಜಿಕೇಂದ್ರ ತಪ್ಪಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Mudbidri: ಸರಕಾರಿ ಬಸ್ಸಿಗಿಲ್ಲ ನಿಲ್ದಾಣ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.