ಹೊಸಪೇಟೆಗಿದೆ ಜಿಲ್ಲಾ ಕೇಂದ್ರದ ಅರ್ಹತೆ
ಪಶ್ಚಿಮ ತಾಲೂಕುಗಳಿಂದಿದೆ ರೈಲ್ವೆ-ರಸ್ತೆ ಸಂಪರ್ಕ ಖರ್ಚು ಅಗ್ಗ-ಕಡಿಮೆ ಸಮಯದಲ್ಲಿ ಪ್ರಯಾಣ
Team Udayavani, Oct 5, 2019, 12:41 PM IST
ಪಿ. ಸತ್ಯನಾರಾಯಣ
ಹೊಸಪೇಟೆ: ಜನಸಂಖ್ಯೆ, ಭೌಗೋಳಿಕ ಅಂತರ, ಸಾರಿಗೆ ಸಂಪರ್ಕ, ಜಲ ಮೂಲ, ವ್ಯಾಪಾರ ವಾಣಿಜ್ಯ ಸಂಬಂಧ, ಚಾರಿತ್ರಿಕ ಹಿನ್ನೆಲೆ, ಆರ್ಥಿಕ ಸದೃಢತೆ ವಿಶ್ಲೇಷಿಸಿದಾಗ ಹೊಸಪೇಟೆ ಪ್ರಸ್ತಾವಿತ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾಗುವ ಅರ್ಹತೆ ಹೊಂದಿದೆ.
ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚಿಸಿದ ನಂತರವೂ ಈ ಎರಡೂ ಜಿಲ್ಲೆಗಳ ಭೌಗೋಳಿಕ ವ್ಯಾಪ್ತಿ ಹಾಗೂ ಜನಸಂಖ್ಯೆ ಪ್ರಮಾಣ ಚಿಕ್ಕಬಳ್ಳಾಪುರ, ರಾಮನಗರ, ಉಡುಪಿ, ಕೊಡಗು ಹಾಗೂ ಯಾದಗಿರಿ ಜಿಲ್ಲೆಗಿಂತಲೂ ಅಧಿಕವಾಗಿರಲಿದೆ. ಹೀಗಾಗಿ ವಿಭಜನೆ ಬಳಿಕವೂ ಬಳ್ಳಾರಿ ಜಿಲ್ಲೆಯ ಅಸ್ತಿತ್ವ ಸುಭದ್ರವಾಗಿಯೇ ಉಳಿಯುತ್ತದೆ. ಭೌಗೋಳಿಕ ಅಂತರ: ನೂತನ ಜಿಲ್ಲಾ ಕೇಂದ್ರ ತಾಲೂಕು ಕೇಂದ್ರಗಳಿಂದ ಕಡಿಮೆ ಅಂತರದಲ್ಲಿದ್ದಷ್ಟು ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಹಕಾರಿಯಾಗುತ್ತದೆ.
ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು, ಹೋಬಳಿ ಕೇಂದ್ರಗಳಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಜತೆಗೆ ಸಾರ್ವಜನಿಕರು ಸಹ ಸರ್ಕಾರಿ ಕೆಲಸಕ್ಕೆ ಕಡಿಮೆ ವೆಚ್ಚ, ಸಮಯದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಬಹುದು.
ಹೊಸಪೇಟೆ ಜಿಲ್ಲಾ ಕೇಂದ್ರವಾದರೆ ಇದರ ವ್ಯಾಪ್ತಿಗೆ ಬರುವ ತಾಲೂಕು ಕೇಂದ್ರಗಳ ಅಂತರ ಸರಾಸರಿ 60 ಕಿ.ಮೀ.ನಷ್ಟಿರುತ್ತದೆ. ಆದರೆ ಹಾಲಿ ಬಳ್ಳಾರಿ ಜಿಲ್ಲಾ ಕೇಂದ್ರವು ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿಯ ಕೆಲವು ಹೋಬಳಿ ಕೇಂದ್ರಗಳಿಂದ 180ರಿಂದ 200 ಕಿಮೀ.ನಷ್ಟು ದೂರವಿದೆ.
ಸಾರಿಗೆ ಸಂಪರ್ಕ: ಪಶ್ಚಿಮದ ತಾಲೂಕುಗಳಿಂದ ಹೊಸಪೇಟೆಗೆ ನೇರ ರೈಲ್ವೆ, ರಸ್ತೆ ಸಂಪರ್ಕ ಇರುವುದರಿಂದ ಆ ಭಾಗದ ಜನರು ಕಡಿಮೆ ಖರ್ಚು ಹಾಗೂ ಕಡಿಮೆ ಸಮಯದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗಿ ಅದೇ ದಿನ ವಾಪಸ್ಸಾಗಬಹುದು. ಅಲ್ಲದೇ ಹೊಸಪೇಟೆ ಎರಡು ರಾಷ್ಟ್ರೀಯ ಹೆದ್ದಾರಿ, ಜೋಡಿ ರೈಲು ಮಾರ್ಗ, ವಿಮಾನಯಾನ ಸಂಪರ್ಕ ಹೊಂದಿದ್ದು, ರಾಜ್ಯದ ರಾಜಧಾನಿಯನ್ನು ಒಳಗೊಂಡಂತೆ ದೇಶದ ಪ್ರಮುಖ ನಗರಗಳಿಗೆ ಹೋಗಿ ಬರಲು ಅನುಕೂಲವಾಗಿದೆ.
ವಿಪುಲ ಜಲ ಸಂಪನ್ಮೂಲ: ಜಿಲ್ಲಾ ಕೇಂದ್ರ ರಚಿಸಲು ವಿಪುಲ ನೀರಿನ ಲಭ್ಯತೆ ಅತ್ಯಗತ್ಯ ಎಂಬುದನ್ನು ಜಿಲ್ಲಾ ಪುನರ್ ವಿಂಗಡನಾ ಸಮಿತಿ ಪ್ರತಿಪಾದಿಸಿದೆ. ಈ ನಿಟ್ಟಿನಲ್ಲಿ ತುಂಗಭದ್ರಾ ಜಲಾಶಯ ಹತ್ತಿರದಲ್ಲೇ ಇರುವುದರಿಂದ ವರ್ಷದ 12ತಿಂಗಳು ಇಲ್ಲಿಗೆ ಬರುವ ಜನರು, ಪ್ರವಾಸಿಗರು ಹಾಗೂ ಭವಿಷ್ಯದಲ್ಲಿ ಜಿಲ್ಲಾ ಕೇಂದ್ರದ ಬೆಳವಣಿಗೆಗೆ ಸಾಕಾಗುವಷ್ಟು ನೈಸರ್ಗಿಕ ಜಲಸಂಪನ್ಮೂಲ ಈ ಭಾಗದಲ್ಲಿದೆ. ಇನ್ನು ವಿಜಯನಗರ ಸಾಮ್ರಾಜ್ಯ ಆಳ್ವಿಕೆ ಕಾಲದಿಂದಲೂ ಜಿಲ್ಲೆಯ ಪಶ್ಚಿಮ ತಾಲೂಕುಗಳ ನಡುವೆ ಪರಸ್ಪರ ವಾಣಿಜ್ಯ ಸಂಬಂಧವಿದೆ. ಹಂಪಿ, ಕಮಲಾಪುರ, ಆನೆಗುಂದಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆಯುವ ಪ್ರಾಚೀನ ಸುಗಂಧಿ ಬಾಳೆ ನೂರಾರು ವರ್ಷಗಳಿಂದ ಉತ್ತರ ಕರ್ನಾಟಕ ಹಾಗೂ ಪಶ್ಚಿಮ ತಾಲೂಕುಗಳಿಗೆ ರವಾನೆಯಾಗುತ್ತದೆ.
ಹೂವಿನಹಡಗಲಿಯಿಂದ ತುಂಗಭದ್ರಾ ನದಿ ಮುಖಾಂತರ ಪ್ರತಿನಿತ್ಯ ದೋಣಿಯಿಂದ ಸರಬರಾಜಾಗುತ್ತಿದ್ದ ಹೂವುಗಳಿಂದ ವಿಜಯನಗರದ ಅರಸರು ವಿರುಪಾಕ್ಷೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದರೆಂಬುದು ಇತಿಹಾಸದಲ್ಲಿ ದಾಖಲಾಗಿದೆ.
ಆರ್ಥಿಕ ಸದೃಢತೆ: ತುಂಗಭದ್ರಾ ಜಲಾಶಯ ನೀರಾವರಿ ಪ್ರದೇಶ, ಕಬ್ಬಿಣದ ಅದಿರಿನ ನೈಸರ್ಗಿಕ ಸಂಪನ್ಮೂಲಗಳಿಂದ ಆರ್ಥಿಕವಾಗಿ ಸದೃಢವಾಗಿದೆ. 2015ರಲ್ಲಿ ಪ್ರಧಾನ ಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಸ್ಥಾಪನೆಯಿಂದ ಗಣಿಬಾಧಿತ ಈ ತಾಲೂಕಿನ ಅಭಿವೃದ್ಧಿ ಯೋಜನೆ ಕೈಗೊಳ್ಳಲು ನೂರಾರು ಕೋಟಿ ಖನಿಜ ನಿಧಿ ಸಂಗ್ರಹವಾಗಿದೆ. ಗಣಿ ಮಾಲೀಕರು ತಾವು ಗಳಿಸುವ ಲಾಭಾಂಶ ಅಥವಾ ಸರ್ಕಾರಕ್ಕೆ ಪಾವತಿಸುವ ತೆರಿಗೆ, ರಾಜಧನದಲ್ಲಿ ಶೇ. 10ರಿಂದ 30 ಹಣ ಜಿಲ್ಲಾ ಖನಿಜ ನಿಧಿಗೆ ಪಾವತಿಸುತ್ತಾರೆ. ಹೀಗಾಗಿ ನೂತನ ಜಿಲ್ಲೆಗೆ ಅಗತ್ಯವಾದ ಕಟ್ಟಡಗಳ ಕಾಮಗಾರಿ, ಮೂಲ ಸೌಲಭ್ಯ ಕಲ್ಪಿಸಲು ಸರ್ಕಾರದ ಬೊಕ್ಕಸದ ಮೇಲೆ ಯಾವುದೇ ಹೊರೆ ಬೀಳದಂತೆ ಜಿಲ್ಲಾ ಖನಿಜ ನಿಧಿಯಿಂದ ಹೊಸ ಪೇಟೆಯನ್ನು ನೂತನ ಜಿಲ್ಲಾ ಕೇಂದ್ರ ನಿರ್ಮಿಸಬಹುದು ಎಂಬ ಅಭಿಪ್ರಾಯ ಕೇಳಿಬಂದಿದೆ.
ವಿಜಯನಗರ ನೂತನ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ನಂತರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ, ನ್ಯಾಯಾಲಯ, ಜಿಪಂ ಹಾಗೂ ಎಸ್‌ಪಿ ಕಚೇರಿಯನ್ನು ಹೊರತುಪಡಿಸಿ ಇತರ ಪ್ರಮುಖ ಜಿಲ್ಲಾ ಮಟ್ಟದ ಕಚೇರಿಗಳನ್ನು ಪಶ್ಚಿಮದ ತಾಲೂಕುಗಳಲ್ಲಿ ಸ್ಥಾಪಿಸಿದರೆ ಜಿಲ್ಲೆಯ ಸಮಾನಾಂತರ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದೂ ಹೇಳಲಾಗಿದೆ.
ಈ ಪ್ರದೇಶದ ಭೌಗೋಳಿಕ ವೈಶಿಷ್ಟ್ಯತೆ, ಚಾರಿತ್ರಿಕೆ ಹಿನ್ನೆಲೆಯಿಂದ ಪ್ರಭಾವಿತನಾಗಿದ್ದು, ಬೆಂಗಳೂರಿಗೆ ಪರ್ಯಾಯವಾಗಿ ಆಡಳಿತಾತ್ಮಕ ರಾಜಧಾನಿ ಮಾಡುವುದಾದರೆ ಹೊಸಪೇಟೆಯೇ ಸೂಕ್ತ ಎಂದು 1992ರಲ್ಲೇ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಚಿರಂಜೀವಿಸಿಂಗ್ ಅವರು ಹೇಳಿದ್ದನ್ನು ಸ್ಮರಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.