ಸರ್ಕಾರಿ ಆಸ್ಪತ್ರೆಯಲ್ಲಿ ಹಣ ವಸೂಲಿ ಖಂಡಿಸಿ ಧರಣಿ
ತಪ್ಪಿತಸ್ಥರ ವಿರುದ್ಧ ಮೇಲಧಿಕಾರಿಗಳು ಕ್ರಮಕ್ಕೆ ಮುಂದಾಗಲಿ
Team Udayavani, Aug 30, 2019, 3:29 PM IST
ಹೊಸಪೇಟೆ: ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಹೊಸಪೇಟೆ: ಆಸ್ಪತ್ರೆಯ ಅವ್ಯವಸ್ಥೆ ಹಾಗೂ ಲಂಚಗುಳಿತನ ಖಂಡಿಸಿ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ನಾಗರಿಕರು, ನಗರದ ಸರ್ಕಾರಿ ಸಾರ್ವಜನಿಕ ಉಪವಿಭಾಗೀಯ (ನೂರು ಹಾಸಿಗೆ)ಆಸ್ಪತ್ರೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಶ್ರಮಿಕ ಭವನದಿಂದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಆಸ್ಪತ್ರೆ ಆವರಣದಲ್ಲಿ ಜಮಾವಣೆಗೊಂಡು,ಆಸ್ಪತ್ರೆಯಲ್ಲಿ ನಡೆಯುತ್ತಿರುವ ಲಂಚಗುಳಿತನಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಹೆರಿಗೆಗೆ ದಾಖಲಾಗುವ ಬಡ ರೋಗಿಗಳಿಂದ 5ರಿಂದ 8 ಸಾವಿರ ರೂ. ಹಣ ವಸೂಲಿ ಮಾಡುತ್ತಿರುವ ಇಲ್ಲಿನ ವೈದ್ಯರು, ಹಣ ಕೊಡಲು ನಿರಾಕರಿಸಿದರೆ, ಏರು ಧ್ವನಿಯಲ್ಲಿ ಬಡ ರೋಗಿಗಳನ್ನು ಗದರಿಸುತ್ತಾರೆ. ಅಲ್ಲದೆ, ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ರೋಗಿಗಳಿಗೆ ಹೊಲಿಗೆ ಬಿಚ್ಚದೆ ಹಾಗೂ ಸರಿಯಾದ ಔಷಧ ನೀಡದೇ ನಿರ್ಲಕ್ಷ್ಯ ಮಾಡುತ್ತಾರೆ ಎಂದು ಆರೋಪಿಸಿದರು.
ರಾತ್ರಿ ಪಾಳಿಯಲ್ಲಿದ್ದ ವೈದ್ಯರು, ಆಸ್ಪತ್ರೆಯಲ್ಲಿ ಇರದೇ ಪರಿಣಾಮ ಕಳೆದ ನಾಲ್ಕು ತಿಂಗಳ ಹಿಂದೆ ಓರ್ವ ಗರ್ಭಿಣಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಂತಾಗಿ, ಗರ್ಭದಲ್ಲಿ ಮಗು ಅಸುನೀಗಿದ ಘಟನೆ ಕಣ್ಮುಂದೆ ಇದೆ. ಈ ಪ್ರಕರಣ ಕುರಿತಂತೆ ಮೇಲಾಧಿಕಾರಿಗಳ ತನಿಖೆ ನಡೆಸಿ ವೈದ್ಯರಿಗೆ ಛೀಮಾರಿ ಹಾಕಿದರೂ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಇಲ್ಲಿಯ ವೈದ್ಯರ ಲಂಚಗುಳಿತನಕ್ಕೆ ಕಡಿವಾಣ ಹಾಕಬೇಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಹೆಚ್ಚಿಸಬೇಕು. ವೈದ್ಯರ ನೇಮಕ ಹಾಗೂ ಅಗತ್ಯ ಔಷಧಿ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಆರ್.ಎಸ್. ಬಸವರಾಜ, ಆರ್.ಭಾಸ್ಕರರೆಡ್ಡಿ, ಯಲ್ಲಾಲಿಂಗ, ಎಂ.ಗೋಪಾಲ. ಕೆ.ಎಂ.ಸಂತೋಷ್, ಕೆ.ರಾಮಾಂಜನಿ, ಎಂ.ಜಂಬಯ್ಯ ನಾಯಕ, ಉಮಾದೇವಿ, ಎಚ್.ಮೋಹನ್ ಕುಮಾರ್, ಮಂಜುನಾಥ ಹಾಗೂ ಆನಂದ ಇನ್ನಿತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.