ಜನಪ್ರತಿನಿಧಿಗಳಿಗೆ ಪತ್ರಕರ್ತರು ಅಂಕುಶ ಹಾಕಲಿ: ದೇವೇಂದ್ರಪ್ಪ
Team Udayavani, Jul 8, 2019, 5:02 PM IST
ಹೊಸಪೇಟೆ: ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕವು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸದ ವೈ. ದೇವಂದ್ರಪ್ಪ ಮಾತನಾಡಿದರು.
ಹೊಸಪೇಟೆ: ಪತ್ರಕರ್ತರು ಜನಪ್ರತಿನಿಧಿಗಳಿಗೆ ಅಂಕುಶ ಹಾಕಬೇಕು. ಆಗ ಅವರು ಎಚ್ಚರಿಕೆಯಿಂದ ಇರುತ್ತಾರೆ ಎಂದು ಸಂಸದ ವೈ. ದೇವೇಂದ್ರಪ್ಪ ಹೇಳಿದರು.
ನಗರದ ಗುಂಡಾ ಸಸ್ಯ ಉದ್ಯಾನದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕು ಘಟಕವು ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಕ್ರಮ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಹಾಗೂ ವಸತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದರು.
ಶಾಸಕ ಆನಂದ ಸಿಂಗ್ ಮಾತನಾಡಿ, ಬ್ರೇಕಿಂಗ್ ಸುದ್ದಿಯಿಂದ ಮಾಧ್ಯಮಗಳು ಹೊರಗಡೆ ಬರಬೇಕು. ವಾಸ್ತವ ಸುದ್ದಿಗಳನ್ನು ಬಿತ್ತರಿಸಬೇಕು. ಸಮಾಜವನ್ನು ಸರಿದಾರಿಯಲ್ಲಿ ನಡೆಸುವಂತ ಜವಾಬ್ದಾರಿ ಅವರ ಮೇಲಿದೆ. ಅವರು ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು.
ಸೈನಿಕರು ದೇಶದ ಗಡಿಯನ್ನು ರಕ್ಷಣೆ ಮಾಡುತ್ತಾರೆ. ಆದರೆ, ಪತ್ರಕರ್ತರು ದೇಶದ ಒಳಗಿನ ಸಮಾಜವನ್ನು ಕಾಯುವ ಸೈನಿಕರು. ಹೊಗಳಿಕೆ ಮತ್ತು ತೆಗಳಿಕೆಯನ್ನು ಸಮಾನವಾಗಿ ಸ್ವೀಕರಿಸಬೇಕು. ಪತ್ರಕರ್ತರಿಗೆ ನಿವೇಶನ ನೀಡಲು ಅಗತ್ಯ ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
ಪ್ರಸ್ತುತ ಪತ್ರಿಕೋದ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳು ಕುರಿತು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ಆರೋಗ್ಯ ಪೂರ್ಣವಾದ ಸಮಾಜ ಹಾಗೂ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ಶಿಕ್ಷಕ ಹಾಗೂ ಪತ್ರಕರ್ತರ ಹುದ್ದೆಗಳು ಕೃತಜ್ಞತೆಯಿಂದ ಕೂಡಿವೆ. ಅವರು ಮೌಲ್ಯಗಳೊಂದಿಗೆ ಬದ್ಧರಾಗಿರಬೇಕಾಗುತ್ತದೆ. ವಯಕ್ತಿಯ ನಿಲುವುಗಳನ್ನು ಒದಿಗೊತ್ತಿ ಸಮಾಜ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಪತ್ರಕರ್ತ ಬಸಾಪುರ ಬಸವರಾಜ ಪ್ರಾಸ್ತಾವಿಕ ಮಾತನಾಡಿದರು.
ಇದಕ್ಕೂ ಮುನ್ನ ಗುಂಡಾ ಸಸ್ಯ ಉದ್ಯಾನದಲ್ಲಿ ಗಣ್ಯರು ಸಸಿಗಳನ್ನು ನೆಟ್ಟರು. ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ಪತ್ರಕರ್ತರ ಮಕ್ಕಳಾದ ಮಧುಮಿತ ಹಾಗೂ ಎಲ್.ವಿ. ಚೇತನ ಅವರನ್ನು ಸನ್ಮಾನ ಮಾಡಲಾಯಿತು. ಅಂಗಡಿ ವಾಮದೇವ ಕಲಾವಿದ ತಂಡ ಹಾಗೂ ಅಂಜಲಿ ಭರತ ನಾಟ್ಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ, ಸಂಘದ ಗೌರವ ಅಧ್ಯಕ್ಷ ಟೈಗರ್ ಪಂಪಣ್ಣ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸರಾವ್, ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಗುಜ್ಜಲ್ ಶಿವರಾಮಪ್ಪ, ಅರಣ್ಯ ಅಧಿಕಾರಿಗಳಾದ ಮೋಹನ್, ಎನ್.ಬಸವರಾಜ, ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುನಾಥ, ರಾಮಚಂದ್ರಗೌಡ ಸೇರಿದಂತೆ ಪತ್ರಕರ್ತರು, ಪತ್ರಿಕಾ ಏಜೆಂಟ್ರು, ಪತ್ರಿಕಾ ವಿತರಕರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.