ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ
2020ರ ಜೂನ್ 30ರೊಳಗೆ ನಡೆಯಬೇಕಿದೆ ಚುನಾವಣೆ ಹಾಲಿ ಸದಸ್ಯರಿಂದ ಪಕ್ಷದ ನಾಯಕರ ಮೇಲೆ ಒತ್ತಡ ಪ್ರೊ| ಸಂಕನೂರು ಪರ ಸಚಿವ ಜಗದೀಶ ಶೆಟ್ಟರ ಒಲವು?
Team Udayavani, Oct 10, 2019, 3:54 PM IST
ಅಮರೇಗೌಡ ಗೋನವಾರ
ಹುಬ್ಬಳ್ಳಿ: ಅವಿಭಜಿತ ಧಾರವಾಡ ಜಿಲ್ಲೆ ಹಾಗೂ ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತು ಆಯ್ಕೆಗೆ ಬಿಜೆಪಿಯಲ್ಲಿ ಟಿಕೆಟ್ ಪೈಪೋಟಿ ಶುರುವಾಗಿದೆ. ವಿಧಾನ ಪರಿಷತ್ತು ಸದಸ್ಯ ಪ್ರೊ| ಎಸ್.ವಿ. ಸಂಕನೂರು ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ತೀವ್ರ ಯತ್ನ ನಡೆಸಿದ್ದರೆ, ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಈ ಬಾರಿ ಟಿಕೆಟ್ ನೀಡಿಕೆ ಚಿಂತನೆ ಗಟ್ಟಿಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಪಶ್ಚಿಮ ಪದವೀಧರ ಕ್ಷೇತ್ರಕ್ಕೆ 2020ರ ಜೂನ್ 30ರೊಳಗೆ ಚುನಾವಣೆ ನಡೆಯಬೇಕಿದೆ.
ಈಗಾಗಲೇ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೊಂದು ಕಡೆ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ, ಕಿತ್ತುಕೊಳ್ಳಲು ಕಾಂಗ್ರೆಸ್ ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿವೆ. ಪಶ್ಚಿಮ ಪದವೀಧರ ಕ್ಷೇತ್ರದ ಹಾಲಿ ಸದಸ್ಯ ಪ್ರೊ|ಎಸ್.ವಿ. ಸಂಕನೂರು, ಎರಡನೇ ಬಾರಿಗೆ ತಮಗೇ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರ ಮನವೊಲಿಕೆಗೆ ಮುಂದಾಗಿದ್ದರೆ, ಈ ಬಾರಿ ಟಿಕೆಟ್ ನೀಡಿಕೆಗೆ ತಮ್ಮನ್ನುಪರಿಗಣಿಸುವಂತೆ ಐದಾರು ಬಿಜೆಪಿ ಮುಖಂಡರು ಪಕ್ಷದ ವರಿಷ್ಠರ ಮೇಲೆ ಒತ್ತಡಕ್ಕೆ ಮುಂದಾಗಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರ ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿದೆ. ಈ ಕ್ಷೇತ್ರದಲ್ಲಿ ಜನಸಂಘದ ವೈ.ಎಸ್. ಪಾಟೀಲ 1984ರವರೆಗೆ ಪ್ರತಿನಿಧಿಸಿದ್ದರು. 1984ರಲ್ಲಿ ಅವರು ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದರು. 1984ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಚ್.ಕೆ. ಪಾಟೀಲ ಪಶ್ಚಿಮ ಪದವೀಧ ಕ್ಷೇತ್ರದಿಂದ ವಿಧಾನ ಪರಿಷತ್ ಪ್ರವೇಶ ಮಾಡುವ ಮೂಲಕ ತಮ್ಮ ಚುನಾವಣಾ ರಾಜಕೀಯ ಜೀವನ ಆರಂಭಿಸಿದ್ದರು.
ಸತತ ನಾಲ್ಕು ಬಾರಿ ಕ್ಷೇತ್ರ ಪ್ರತಿನಿಧಿಸಿದ್ದ ಎಚ್.ಕೆ. ಪಾಟೀಲ, ಸಚಿವ, ಪರಿಷತ್ತು ವಿಪಕ್ಷ ನಾಯಕ ಸೇರಿದಂತೆ ವಿವಿಧ ಸ್ಥಾನಗಳನ್ನು ನಿಭಾಯಿಸಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ಗೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಬಿಜೆಪಿಯ ಮೋಹನ ಲಿಂಬಿಕಾಯಿ ಎಚ್.ಕೆ. ಪಾಟೀಲರನ್ನು ಸೋಲಿಸಿ ವಿಧಾನ ಪರಿಷತ್ತುಗೆ ಪಾದಾರ್ಪಣೆ ಮಾಡಿದ್ದರು.2014ರಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರೊ| ಎಸ್.ವಿ. ಸಂಕನೂರು, ವಿಧಾನ ಪರಿಷತ್ತು ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರ ಪುತ್ರ ಜೆಡಿಎಸ್ ಅಭ್ಯರ್ಥಿ ವಸಂತ ಹೊರಟ್ಟಿ ವಿರುದ್ಧ ಸುಮಾರು 14 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ, ಚುನಾವಣೆಯಲ್ಲಿ ಮೂರು ಬಾರಿ ಹಿನ್ನಡೆ ಕಂಡು
ನಾಲ್ಕನೇ ಬಾರಿಗೆ ಯಶಸ್ಸು ಸಾಧಿಸಿದ್ದರು. 1990 ಮತ್ತು 1996ರಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಂಕನೂರು ಗೆಲ್ಲಲು ಸಾಧ್ಯವಾಗಿರಲಿಲ್ಲ.
2010ರಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್‌ನ ಬಸವರಾಜ ಹೊರಟ್ಟಿ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು. ಬಿಜೆಪಿಯಲ್ಲಿ ಹೆಚ್ಚಿದ ಪೈಪೋಟಿ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆಗೆ ಇನ್ನು ಎಂಟು ತಿಂಗಳು ಅವಧಿ ಇದೆ. ಈಗಾಗಲೇ ಬಿಜೆಪಿಯಲ್ಲಿ ಚುನಾವಣೆ ತಯಾರಿ ಪ್ರಕ್ರಿಯೆಗಳಿಗೆ ಚಾಲನೆ ನೀಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಜಿಲ್ಲೆಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಸಭೆಗಳನ್ನು ಮಾಡಿ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಹೊಸ ಮತದಾರ ನೋಂದಣಿಗೆ ಜವಾಬ್ದಾರಿ ನೀಡಲಾಗಿದೆ.
ಅವಿಭಜಿತ ಧಾರವಾಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳ ಬಿಜೆಪಿ ನಾಯಕರು ಈಗಾಗಲೇ ಪೂರ್ವಭಾವಿ ಸಭೆ ನಡೆಸಿ, ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಕುರಿತು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಿಂದ ಇನ್ನೊಮ್ಮೆ ಸ್ಪರ್ಧಿಸಲು ತಮಗೇ ಅವಕಾಶ ನೀಡಬೇಕೆಂದು ವಿಧಾನ ಪರಿಷತ್ತು ಸದಸ್ಯ ಪ್ರೊ| ಎಸ್.ವಿ. ಸಂಕನೂರು ಪಕ್ಷದ ನಾಯಕರ ಮೇಲೆ ಒತ್ತಡ ತರುತ್ತಿದ್ದು, ಸಚಿವ ಜಗದೀಶ ಶೆಟ್ಟರ ಅವರು ಸಂಕನೂರು ಅವರ ಪರ ಒಲವು
ಹೊಂದಿದ್ದಾರೆಂದು ಹೇಳಲಾಗುತ್ತಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಈ ಬಾರಿ ಬಿಜೆಪಿಯಿಂದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಧಾರವಾಡ ವಿಭಾಗೀಯ ಪ್ರಭಾರಿ ಲಿಂಗರಾಜ ಪಾಟೀಲ, ವಿಧಾನ ಪರಿಷತ್ತು ಮಾಜಿ ಸದಸ್ಯ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಗದುಗಿನ ರವಿ ದಂಡಿನ್,ಹಾವೇರಿ ಜಿಲ್ಲೆ ಹಾನಗಲ್ಲದ ಭೋಜರಾಜ ಕರೂದಿ ಇನ್ನಿತರರ ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸುಳಿದಾಡುತ್ತಿವೆ ಎನ್ನಲಾಗಿದೆ.
ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ಈ ಬಾರಿ ಬಿಜೆಪಿ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸಬೇಕೆಂಬ ಕುರಿತು ಪಕ್ಷ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಮತ್ತೂಮ್ಮೆ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಹಾಲಿ ಸದಸ್ಯ ಪ್ರೊ| ಎಸ್.ವಿ. ಸಂಕನೂರು ಯಶಸ್ವಿಯಾಗುತ್ತಾರೋ ಅಥವಾ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ದೊರೆಯುತ್ತದೆಯೋ ಮುಂದಿನ ಕೆಲ ತಿಂಗಳಲ್ಲಿ ಬಿಜೆಪಿ ವರಿಷ್ಠರು ತೀರ್ಮಾನಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.