ಹಳ್ಳಿ ಹೈದರ ಬಾಯಲ್ಲಿ ಇಂಗ್ಲಿಷ್ ಮಂತ್ರ
ಇಂಗ್ಲಿಷ್ ಕಲಿಕೆಗೆ ನಿತ್ಯ ನಾಲ್ಕು ತಾಸು ಮೀಸಲು |ತರಗತಿಗಳಿಗೆ ತೊಂದರೆಯಾಗದಂತೆ ಆಯೋಜನೆ
Team Udayavani, Jul 18, 2019, 12:30 PM IST
ಹುಬ್ಬಳ್ಳಿ: ಬಲ್ಲಾರವಾಡ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಚಟುವಟಿಕೆ ಆಧಾರಿತ ಇಂಗ್ಲಿಷ್ ಕಲಿಕೆಯಲ್ಲಿ ವಿದ್ಯಾರ್ಥಿಗಳು.
ಹುಬ್ಬಳ್ಳಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿರುವ ಇಂಗ್ಲಿಷ್ ಈ ಗ್ರಾಮದ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೀರು ಕುಡಿದಷ್ಟು ಸುಲಭ. ಮಾತೃಭಾಷೆ ಕನ್ನಡದಲ್ಲೇ ಮಾತನಾಡಲು ಹಿಂಜರಿಯುತ್ತಿದ್ದ ವಿದ್ಯಾರ್ಥಿಗಳು ಇದೀಗ ಇಂಗ್ಲಿಷ್‌ನಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿನ ಈ ಬದಲಾವಣೆ ಗ್ರಾಮಸ್ಥರು ಹಾಗೂ ಪಾಲಕರನ್ನು ನಿಬ್ಬೆರಗಾಗಿಸಿದೆ.
ನವಲಗುಂದ ತಾಲೂಕಿನ ಬಲ್ಲಾರವಾಡ ಗ್ರಾಮದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇದೀಗ ಇಂಗ್ಲಿಷ್ ಕಲವರ ಕೇಳಿ ಬರುತ್ತಿದೆ. ಗ್ರಾಮೀಣ ಶೈಲಿಯಲ್ಲಿ ಮಾತನಾಡುತ್ತಿದ್ದ ಮಕ್ಕಳು ಇಂಗ್ಲಿಷ್‌ನಲ್ಲಿ ಸಂವಹನ ಮಾಡುವಷ್ಟರ ಮಟ್ಟಿಗೆ ತಯಾರಾಗಿದ್ದಾರೆ. ಕುಂತರೂ-ನಿಂತರೂ ಇಂಗ್ಲಿಷ್ ಎನ್ನುವಷ್ಟರ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವೇದಿಕೆ ಮೇಲೆ ನಿಂತು ಧೈರ್ಯವಾಗಿ ಪರಸ್ಪರ ಸಂವಹನ ಮಾಡುತ್ತಿದ್ದಾರೆ. ಕನ್ನಡದಷ್ಟು ಇಂಗ್ಲಿಷ್ ಕಷ್ಟವೇನಲ್ಲ ಎನ್ನುವ ಮಟ್ಟಿಗೆ ಇಲ್ಲಿನ ವಿದ್ಯಾರ್ಥಿಗಳು ಸಿದ್ಧವಾಗಿದ್ದು, ಶಾಲೆಗೆ ಬರುವ ಅತಿಥಿಗಳೊಂದಿಗೆ ಇಂಗ್ಲಿಷ್ ಭಾಷೆಯಲ್ಲೇ ಮಾತನಾಡಿಸಿ ದಂಗು ಬಡಿಸುತ್ತಿದ್ದಾರೆ. ಇಂತಹ ಬದಲಾವಣೆಗೆ ಕಾರಣವಾಗಿದ್ದು ದೇಶಪಾಂಡೆ ಫೌಂಡೇಶನ್‌ನ ‘ಸ್ಕಿಲ್ ಇನ್ ವಿಲೇಜ್’ ಯೋಜನೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಯನ್ನು ಈ ಶಾಲೆ ವಿದ್ಯಾರ್ಥಿಗಳು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ, ಹಿಂಜರಿಕೆಯಿಲ್ಲದೆ ಇಂಗ್ಲಿಷ್ ಭಾಷೆಯಲ್ಲಿ ಸಂವಹನ ಮಾಡುತ್ತಿದ್ದಾರೆ. ನಿತ್ಯ ನಾಲ್ಕು ಗಂಟೆ ಇಂಗ್ಲಿಷ್ ಕಲಿಕೆಗೆ ಮೀಸಲಿಟ್ಟಿದ್ದು, ಶಾಲೆಯ ತರಗತಿಗಳಿಗೆ ಯಾವುದೇ ತೊಂದರೆಯಾಗದಂತೆ ಬೆಳಿಗ್ಗೆ 2 ತಾಸು ಹಾಗೂ ಸಂಜೆ 2 ತಾಸು ತರಗತಿಗಳು ನಡೆಯುತ್ತಿವೆ. ಚಟುವಟಿಕೆ ಆಧಾರಿತ ಕಲಿಕಾ ಮಾದರಿ ಅನುಸರಿಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸ್ಕಿಲ್ ಇನ್ ವಿಲೇಜ್ ಯೋಜನೆ ಹತ್ತಿರವಾಗಿ ಪರಿಣಮಿಸಿದ್ದು, ಫೌಂಡೇಶನ್ ಮೂಲ ಉದ್ದೇಶ ಸಾಕಾರಗೊಳ್ಳುತ್ತಿದೆ. ಕಳೆದ ಒಂದು ವರ್ಷದಿಂದ ಈ ತರಗತಿ ನಡೆಯುತ್ತಿದ್ದು, ಫೌಂಡೇಶನ್‌ನ ಶಿಕ್ಷಕಿಯೊಬ್ಬರು ಬೋಧನೆ ಮಾಡುತ್ತಿದ್ದಾರೆ.
ಪ್ರಾಯೋಗಿಕ ಯೋಜನೆಯಡಿ ಈ ಶಾಲೆ ಆಯ್ಕೆ ಮಾಡಿಕೊಂಡಿದ್ದು, 4-8 ನೇ ತರಗತಿ ವಿದ್ಯಾರ್ಥಿಗಳು ಇಂಗ್ಲಿಷ್ ಭಾಷಾ ಕಲಿಕೆಗೆ ಸೂಕ್ತ ಎಂದು ನಿರ್ಧರಿಸಿ ಇವರ ಕಲಿಕಾ ಸಾಮರ್ಥ್ಯಕ್ಕೆ ಪೂರಕವಾಗಿ ಹೈದರಬಾದ್ ಮೂಲದ ಸಂಸ್ಥೆ ಮೂಲಕ ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಆಲಿಸುವುದು, ಮಾತನಾಡುವಿಕೆ, ಓದುವಿಕೆ, ಬರವಣಿಗೆ ಅಧಾರ ಮೇಲೆ ಚಟುವಟಿಕೆ ಮೂಲಕ ಕಲಿಸಲಾಗುತ್ತಿದೆ. ಇತ್ತೀಚೆಗೆ ಉತ್ತರ ಕರ್ನಾಟಕ ಭಾಗದಲ್ಲಿ 60 ಶಾಲೆ, ತೆಲಂಗಾಣದಲ್ಲಿ 20 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ಇದೀಗ 35 ಶಾಲೆಗಳಲ್ಲಿ ಕಲಿಕೆ ಆರಂಭವಾಗಿದೆ.
ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ್ದ ವಿವಿಧ ದೇಶಗಳ ಪ್ರತಿನಿಧಿಗಳೊಂದಿಗೆ ಇಂಗ್ಲಿಷ್‌ನಲ್ಲಿ ಸಂವಹನ ಮಾಡುವ ಮೂಲಕ ವಿದ್ಯಾರ್ಥಿಗಳು ಅಚ್ಚರಿ ಮೂಡಿಸಿದ್ದರು. ಈ ವಿದ್ಯಾರ್ಥಿಗಳಲ್ಲಿನ ಬದಲಾವಣೆ ಗಮನಿಸಿರುವ ಸುತ್ತಲಿನ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ತಮ್ಮ ಶಾಲೆಗಳಲ್ಲಿ ಇದನ್ನು ಆರಂಭಿಸುವಂತೆ ಬೇಡಿಕೆ ಸಲ್ಲಿಸುವಷ್ಟರ ಮಟ್ಟಿಗೆ ಸ್ಕಿಲ್ ಇನ್ ವಿಲೇಜ್ ಪರಿಣಾಮ ಬೀರಿದೆ. ಕೆಲ ಶಾಲೆ ಶಿಕ್ಷಕರು ಕೂಡ ಇದಕ್ಕೆ ಮನಸೋತಿದ್ದಾರೆ. ಆರಂಭದಲ್ಲಿ ಯೋಜನೆ ಕುರಿತು ಗ್ರಾಮಸ್ಥರು ಹಾಗೂ ಶಿಕ್ಷಕರಲ್ಲಿ ಫೌಂಡೇಶನ್ ವತಿಯಿಂದ ಮಾಹಿತಿ ನೀಡಿದಾಗ ಇಂತಹ ಬದಲಾವಣೆ ನಿರೀಕ್ಷಿಸಿರಲಿಲ್ಲ. ಆದರೆ ತಮ್ಮ ಮಕ್ಕಳು ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದನ್ನು ಕಂಡು ಪಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು
Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ
Udupi: ಬಿಎಸ್ಸೆನ್ನೆಲ್ ಟವರ್ ನಿರ್ವಹಣೆ ಹೊಣೆ ಪಂಚಾಯತ್ ಹೆಗಲಿಗೆ
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.