ಯುಕೆಪಿಗಾಗಿ ಮೊಳಗಲಿ ಸಂಘಟಿತ ಧ್ವನಿ
Team Udayavani, Aug 22, 2019, 10:36 AM IST
ಅಮರೇಗೌಡ ಗೋನವಾರ
ಹುಬ್ಬಳ್ಳಿ : ರಾಜ್ಯದ ಹೆಚ್ಚಿನ ಭೂ ಭಾಗ ಹೊಂದಿದ ಹಾಗೂ ಸುಮಾರು 15.36 ಲಕ್ಷ ಎಕರೆ ಪ್ರದೇಶಕ್ಕೆ ನೀರೊದಗಿಸುವ ಉದ್ದೇಶದ ಕೃಷ್ಣಾ ಮೇಲ್ದಂಡೆ ಯೋಜನೆ(ಯುಕೆಪಿ)ಯು ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಣೆಯಾಗುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಸಂಸದರು, ಶಾಸಕರು, ಸಂಘ-ಸಂಸ್ಥೆಗಳಿಂದ ಸಂಘಟಿತ ಧ್ವನಿ ಮೊಳಗಬೇಕಿದೆ.
ಈಗಾಗಲೇ ದೇಶದ 16 ಯೋಜನೆಗಳು ರಾಷ್ಟ್ರೀಯ ಸೌಲಭ್ಯ ಪಡೆದಿವೆ. ಯುಕೆಪಿ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆ ಪಟ್ಟಿಗೆ ಸೇರುವ ಎಲ್ಲ ಅರ್ಹತೆ ಹೊಂದಿದೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಸಿಎಂ ಯಡಿಯೂರಪ್ಪನವರು, ಯುಕೆಪಿಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಘೋಷಿಸಬೇಕೆಂದು ಮನವಿ ಮಾಡಿರುವುದು ಈ ಭಾಗದ ಜನರ ಬೇಡಿಕೆಗೆ ಪುಷ್ಟಿ ದೊರೆತಂತಾಗಿದೆ.
1964, ಮೇ 22ರಂದು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಂದ ಅಡಿಗಲ್ಲು ಕಂಡಿದ್ದ ಆಲಮಟ್ಟಿ ಜಲಾಶಯ, ಯುಕೆಪಿ ಯೋಜನೆ ಕಾಮಗಾರಿ ಸುಮಾರು 42 ವರ್ಷಗಳ ನಂತರ ಪೂರ್ಣಗೊಂಡಿತ್ತು. ಅಂದಾಜು 120 ಕೋಟಿ ವೆಚ್ಚದ ಯೋಜನೆ, 10,371 ಕೋಟಿ ವೆಚ್ಚದಲ್ಲಿ ಜಲಾಶಯ ಇನ್ನಿತರ ಕಾರ್ಯಗಳು ಪೂರ್ಣಗೊಂಡಿದ್ದವು. 1976ರಲ್ಲಿ ನ್ಯಾ| ಆರ್.ಎಸ್. ಬಚಾವತ್ ಆಯೋಗ ಹಾಗೂ 2010ರಲ್ಲಿ ನ್ಯಾ|ಬ್ರಿಜೇಶಕುಮಾರ ಆಯೋಗ ಕರ್ನಾಟಕ-ಮಹಾರಾಷ್ಟ್ರ ಹಾಗೂ ಅವಿಭಜಿತ ಆಂಧ್ರಕ್ಕೆ ನೀರು ಹಂಚಿಕೆ ಮಾಡಿದೆ.
ರಾಷ್ಟ್ರೀಯ ಯೋಜನೆ ಯಾಕೆ?: ಕೇಂದ್ರ ಸರ್ಕಾರ 11ನೇ ಹಣಕಾಸು ಯೋಜನೆಯಡಿ ರಾಷ್ಟ್ರೀಯ ನೀರಾವರಿ ಯೋಜನೆ ಘೋಷಿಸಿತ್ತು. ಈ ಮಾನ್ಯತೆ ಪಡೆಯಲು ಯಾವುದೇ ಯೋಜನೆಯು ಅಂತಾರಾಜ್ಯ ಯೋಜನೆಯಾಗಿರಬೇಕು, ಸುಮಾರು ಎರಡು ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶಕ್ಕೆ ನೀರೊದಗಿಸಬೇಕು, ನೀರು ಹಂಚಿಕೆ ವಿವಾದ ಇತ್ಯರ್ಥಗೊಂಡಿರಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ದೃಷ್ಟಿಯಿಂದಲೂ ಯುಕೆಪಿ ರಾಷ್ಟ್ರೀಯ ಯೋಜನೆ ಸ್ಥಾನದ ಅರ್ಹತೆ ಹೊಂದಿದೆ.
ರಾಷ್ಟ್ರೀಯ ನೀರಾವರಿ ಯೋಜನೆಯಡಿ ಆಂಧ್ರದ ಪೋಲಾವರಂ, ಮಹಾರಾಷ್ಟ್ರದ ಗೋಸಿ ಖುದ್‌ರ್ ಸೇರಿದಂತೆ ಒಟ್ಟು 16 ಯೋಜನೆಗಳು ಸೇರ್ಪಡೆಗೊಂಡಿವೆ. ಪಂಜಾಬ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ ಸೇರಿವೆ. ಆದರೆ, ಕರ್ನಾಟಕದ ಯಾವುದೇ ಯೋಜನೆ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಆಂಧ್ರದ ಪೋಲಾವರಂ ಯೋಜನೆ 16,010 ಕೋಟಿ ರೂ.ಗಳ ಪರಿಷ್ಕೃತ ಅಂದಾಜು ವೆಚ್ಚ ಹೊಂದಿದ್ದು, 4.68 ಲಕ್ಷ ಹೆಕ್ಟೇರ್‌ಗೆ ನೀರೊದಗಿಸಲಿದೆ, ಮಹಾರಾಷ್ಟ್ರದ ಗೋಸಿ ಖುದ್‌ರ್ ಯೋಜನೆ 7,777 ಕೋಟಿ ರೂ.ಅಂದಾಜು ವೆಚ್ಚದ್ದಾಗಿದ್ದು, 2.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ. ಆದರೆ ಯುಕೆಪಿ ಯೋಜನೆ ಒಟ್ಟು 6.48 ಲಕ್ಷ ಹೆಕ್ಟೇರ್‌ಗೆ ನೀರು ಒದಗಿಸುತ್ತಿದ್ದು, ಮೂರನೇ ಹಂತದ ಯೋಜನೆಗೆ ಅಂದಾಜು 82 ಸಾವಿರ ಕೋಟಿ ಅವಶ್ಯಕತೆ ಇದೆ. ರಾಜ್ಯ ಸರ್ಕಾರ ಇದುವರೆಗೆ ಕೇವಲ 7 ಸಾವಿರ ಕೋಟಿ ಬಿಡುಗಡೆ ಮಾಡಿದೆ.
ಆದರೆ ಇದು ರಾಷ್ಟ್ರೀಯ ನೀರಾವರಿ ಯೋಜನೆಯಾದರೆ ಯೋಜನೆಯ ಒಟ್ಟು ವೆಚ್ಚದ ಶೇ.90 ಅನುದಾನವನ್ನು ಕೇಂದ್ರ ಭರಿಸಲಿದೆ. ಜತೆಗೆ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಅನುದಾನ ಬಿಡುಗಡೆಯಾದ 18 ತಿಂಗಳೊಳಗೆ ಆಡಿಟ್ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಬೇಕೆಂಬ ಹಲವು ನಿಯಮಗಳೊಂದಿಗೆ ಹಣ ನೀಡಲಾಗುತ್ತದೆ. ಹೀಗಾಗಿ ಯುಕೆಪಿ ಯೋಜನೆ ಆರ್ಥಿಕ ಕೊರತೆ ಇಲ್ಲದೆ ಪೂರ್ಣಗೊಳ್ಳಲಿದೆ.
ಯುಕೆಪಿ ಮೊದಲ ಹಂತದಲ್ಲಿ ಆಲಮಟ್ಟಿ-ನಾರಾಯಣಪುರ ಜಲಾಶಗಳಿಂದ 119 ಟಿಎಂಸಿ ಅಡಿ ನೀರು ಬಳಕೆ ಹಕ್ಕು ಪಡೆದಿದ್ದೇವೆ. ಎರಡನೇ ಹಂತದಲ್ಲಿ 54 ಟಿಎಂಸಿ ಅಡಿ ನೀರಿನ ಪಾಲಿದ್ದು, ಮೂರನೇ ಹಂತ ಜಾರಿಗೊಳ್ಳಬೇಕಿದೆ.
ರಾಜ್ಯ ಸರ್ಕಾರ ಯುಕೆಪಿ ಮೂರನೇ ಹಂತದಡಿ 2011ರ ಡಿಸೆಂಬರ್‌ನಲ್ಲಿ ಕ್ರಿಯಾಯೋಜನೆ ರೂಪಿಸಿತ್ತು. ಇದರಡಿ 130 ಟಿಎಂಸಿ ಅಡಿ ನೀರು ಬಳಸಬಹುದಾಗಿದೆ. ಆಲಮಟ್ಟಿ ಜಲಾಶಯ ಎತ್ತರವನ್ನು 519.6 ರಿಂದ 524.256 ಮೀಟರ್‌ಗೆ ಎತ್ತರಿಸುವುದು, ಇದಕ್ಕಾಗಿ ಬಾಗಲಕೋಟೆಯ ಕೆಲ ಭಾಗ ಸೇರಿದಂತೆ 22 ಗ್ರಾಮಗಳು ಹಾಗೂ ಒಂದು ಲಕ್ಷ ಎಕರೆಯಷ್ಟು ಭೂಮಿ ಮುಳುಗಡೆಯಾಗಲಿದ್ದು, ಈ ಯೋಜನೆಗೆ 17 ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚ ರೂಪಿಸಲಾಗಿದೆ. ಇದರಡಿ ವಿವಿಧ ಏತ ನೀರಾವರಿ ಯೋಜನೆಗಳು, ನಾರಾಯಣಪುರ ಬಲದಂಡೆ ನಾಲೆ ವಿಸ್ತರಣೆ ಒಳಗೊಂಡಿದೆ.
ಬಿಜೆಪಿಗೆ ಹೆಚ್ಚು ಲಾಭ
ಯುಕೆಪಿಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಆಗಲಿದೆ. ರಾಜ್ಯ-ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿ ಬಿಜೆಪಿಗೆ ಹೆಚ್ಚಿನ ಬಲವೆಂದರೆ ಉತ್ತರ ಕರ್ನಾಟಕ. ಯುಕೆಪಿಗೆ ರಾಷ್ಟ್ರೀಯ ಯೋಜನೆ ಸ್ಥಾನ ಕೊಡಿಸಿ, ಸಕಾಲದಲ್ಲಿ ಯೋಜನೆ ಪೂರ್ಣಕ್ಕೆ ಶ್ರಮಿಸಿದರೆ, ಉತ್ತರದಲ್ಲಿ ಬಿಜೆಪಿ ಬಲ ಇನ್ನಷ್ಟು ಸದೃಢಗೊಳ್ಳಲಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ನೀರಾವರಿ ಯೋಜನೆ ಪಟ್ಟಿಗೆ ಸೇರಬೇಕೆಂಬುದು ನಮ್ಮೆಲ್ಲರ ಒತ್ತಾಯ. ಈ ಕುರಿತು ಉತ್ತರ ಕರ್ನಾಟಕದ ವಿವಿಧ ಮುಖಂಡರು, ಸಂಘಟಕರ ಜತೆ ಸಂಪರ್ಕಿಸಲಾಗುತ್ತಿದೆ. ಶೀಘ್ರವೇ ಹುಬ್ಬಳ್ಳಿಯಲ್ಲಿ ಪ್ರಮುಖರ ಸಭೆ ಕರೆಯಲಾಗುವುದು. ಯೋಜನೆ ವಿಚಾರವಾಗಿ ಕೇಂದ್ರ-ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು.
•ಅಶೋಕ ಚಂದರಗಿ,
ಅಧ್ಯಕ್ಷರು, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಬೆಳಗಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.