ಬಿಎಸ್‌ಎಸ್‌ಕೆ ಕಾರ್ಮಿಕರ ಪ್ರತಿಭಟನೆ
ಹುಮನಾಬಾದ: ವೇತನ ಪಾವತಿಸಲು ಆಗ್ರಹಿಸಿ ಬಿಎಸ್‌ಎಸ್‌ಕೆ ಕಾರ್ಮಿಕ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆ ವೇಳೆ ನಡೆದ ವಾಗ್ವಾದವನ್ನು ಪೊಲೀಸರು ಶಾಂತಗೊಳಿಸಿದರು.
Team Udayavani, Jul 10, 2019, 12:54 PM IST
ಹುಮನಾಬಾದ: ವೇತನ ಪಾವತಿಸಲು ಆಗ್ರಹಿಸಿ ಬಿಎಸ್‌ಎಸ್‌ಕೆ ಕಾರ್ಮಿಕ ಸಂಘಟನೆ ನಡೆಸುತ್ತಿದ್ದ ಪ್ರತಿಭಟನೆ ವೇಳೆ ನಡೆದ ವಾಗ್ವಾದವನ್ನು ಪೊಲೀಸರು ಶಾಂತಗೊಳಿಸಿದರು.
ಹುಮನಾಬಾದ: ವೇತನ ಪಾವತಿಗೆ ಆಗ್ರಹಿಸಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ಕಾರ್ಮಿಕರು ಮಂಗಳವಾರ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳಿಗೆ ಕಾರ್ಖಾನೆ ಎದುರು ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕಾರ್ಖಾನೆ ಸಾಮಾನ್ಯ ಗುಂಪಿನ ಕಾರ್ಮಿಕರ ಸಂಘಟನೆ ಅಧ್ಯಕ್ಷ ಅರ್ಜುನರಾವ್ ಮಾನ್ವಿಕರ್, ಕಾರ್ಖಾನೆಯಲ್ಲಿ 16 ಕೋಟಿಗೂ ಅಧಿಕ ಮೊತ್ತದ ಸಕ್ಕರೆ ಇದೆ. ಬೇರೆ ಎಲ್ಲ ಹಣ ಪಾವತಿಗೂ ನಿಮ್ಮಲ್ಲಿ ಹಣ ಇರುತ್ತದೆ. 3 ವರ್ಷಗಳಿಂದ ಪಾವತಿಸದೇ ಬಾಕಿ ಉಳಿದುಕೊಂಡ ವೇತನಕ್ಕಾಗಿ ಮಾತ್ರ ಹಣ ಇರುವುದಿಲ್ಲ ಎಂದರೇ ಏನರ್ಥ. ಉಳಿದುಕೊಂಡಿದ್ದು ಮೂರು ವರ್ಷದ ವೇತನ. ಅದರಲ್ಲಿ ಕೇವಲ ಎರಡು ತಿಂಗಳ ವೇತನ ಪಾವತಿಸಿದರೆ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ. ಶೀಘ್ರ ಬಾಕಿ ಪಾವತಿಸದಿದ್ದರೇ ಉಗ್ರ ಸ್ವರೂಪದ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಕಾರ್ಖಾನೆಯ ಹಂಗಾಮಿ ಅಧ್ಯಕ್ಷ ದತ್ತಾತ್ರೇಯ ಬಾಕಿಪಳ್ಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕಲ್ಲಪ್ಪ ಅವರಿಗೆ ಎಚ್ಚರಿಕೆ ನೀಡಿದರು.
ಹೈ.ಕ.ಕಾರ್ಮಿಕ ಪಡೆ ಬೆಂಬಲ: ಸಕ್ಕರೆ ಕಾರ್ಖಾನೆ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಿ ಹೈ.ಕ. ಕಾರ್ಮಿಕ ಪಡೆ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಪಾಂಚಾಳ ಮಾತನಾಡಿ, ಮೂರು ವರ್ಷಗಳಿಂದ ಕಾರ್ಮಿಕರ ವೇತನ ಪಾವತಿಸದೇ ಬಾಕಿ ಉಳಿಸಿದ್ದು ಸರಿಯಲ್ಲ. ಬಾಕಿ ವೇತನವನ್ನು ಇಂತಿಷ್ಟೇ ದಿನಗಳಲ್ಲಿ ಪಾವತಿಸುವ ಕುರಿತು ಲಿಖೀತ ದಾಖಲೆ ನೀಡುವಂತೆ ಆಗ್ರಹಿಸಿದರು.
ಈ ವೇಳೆ ಕಾರ್ಖಾನೆ ಅಧ್ಯಕ್ಷ ದತ್ತಾತ್ರೇಯ ಬಾಚಿಪಳ್ಳಿ ಮಾತನಾಡಿ, ವೇತನ ಪಾವತಿ ವಿಷಯ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಮಧ್ಯದ ಮನೆ ಮಾತು. ಅದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಮಧ್ಯ ಪ್ರವೇಶಿಸಲು ನೀವ್ಯಾರು ಎಂದು ಪ್ರಶ್ನಸಿದರು. ಇದ್ದಕ್ಕೆ ಹೈ.ಕ. ಕಾರ್ಮಿಕ ಪಡೆ ಹಾಗೂ ಕಾರ್ಖಾನೆ ಆಡಳಿತ ಮಂಡಳಿ ಮಧ್ಯ ವಾಗ್ವಾದ ನಡೆಯಿತು. ಸಾಧ್ಯವಾದಷ್ಟು ಶೀಘ್ರ ಬಾಕಿ ಪಾವತಿಸಲು ಶಕ್ತಿಮೀರಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮುಖಂಡರ ನಡುವೆ ವಾಗ್ವಾದ: ಈ ವೇಳೆ ಕಾರ್ಖಾನೆ ಕಾರ್ಮಿಕ ಸಂಘಟನೆ ಸಾಮಾನ್ಯ ಗುಂಪಿನ ಅಧ್ಯಕ್ಷ ಅರ್ಜುನರಾವ್ ಮಾತನಾಡಿ, ಇದು ನಮ್ಮ ಮನೆಯ ಮಾತು. ಮಾತುಕತೆಯ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳುತ್ತೇವೆ. ನಮ್ಮ ಸಮಸ್ಯೆ ಬಗ್ಗೆ ಹೋರಾಟ ನಡೆಸಲು ನೀವ್ಯಾರು. ನಿಮ್ಮನ್ನು ಕರೆಸಿದವರ್ಯಾರು. ಮೊದಲು ಇಲ್ಲಿಂದ ಕದಲಿ. ಮೊತ್ತೂಮ್ಮೆ ಕಾಣಿಸಿಕೊಂಡರೆ ನಿಮ್ಮ ವಿರುದ್ಧವೇ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಹೈ.ಕ. ಕಾರ್ಮಿಕ ಪಡೆ ಪದಾಧಿಕಾರಿಗಳಿಗೆ ಎಚ್ಚರಿಸಿದರು. ಈ ವೇಳೆ ಕಾರ್ಖಾನೆಯ ಕಾರ್ಮಿಕ ಸಂಘಟನೆಯ ಇನ್ನೊಂದು ಗುಂಪು ಹೈ.ಕ. ಕಾರ್ಮಿಕ ಪಡೆಯ ಪದಾಧಿಕಾರಿಗಳನ್ನು ಬೆಂಬಲಿಸಿತು. ಇದು ಭಾರಿ ರ್ಚಚೆಗೆ ಗ್ರಾಸವಾಯಿತು.
ಕಳೆದ ವರ್ಷ 7 ತಿಂಗಳ ಕಾಲ ನಮ್ಮ ಮನೆಗೆ ವಿದ್ಯುತ್ ಸೌಲಭ್ಯವಿಲ್ಲದ ಕಾರಣ ಮನೆಯಲ್ಲಿ ಬೆಳಕಿಲ್ಲದೇ ಕುಡಿಯಲು ನೀರು, ಹೊಟ್ಟೆಗೆ ಹಿಟ್ಟಿಲ್ಲದಾಗ ನೀವೆಲ್ಲಿ ಹೋಗಿದ್ದೀರಿ? ಈಗ ಯಾರೋ ಕೆಲವರ ಕರೆಯ ಮೇರೆಗೆ ಬಂದು ಹೀಗೆ ಪ್ರತಿಭಟನೆ ನಾಟಕ ಆಡಿ ಏನು ಸಾಧಿಸಲು ಬಂದಿದ್ದೀರಿ? ಇಲ್ಲಿ ಮತ್ತೂಮ್ಮೆ ಕಾಣಿಸಿಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಕಾರ್ಖಾನೆಯ ಕಾರ್ಮಿಕ ಸಂಘಟನೆ ಸಾಮಾನ್ಯ ಗುಂಪಿನ ಮಹಿಳೆಯರು ಎಚ್ಚರಿಸಿದರು. ಅನ್ಯ ಮಾರ್ಗವಿಲ್ಲದೇ ಹೈ.ಕ. ಕಾರ್ಮಿಕ ಪಡೆಯ ಪದಾಧಿಕಾರಿಗಳು ಅಲ್ಲಿಂದ ಹೊರಟು ಹೋದ ಪ್ರಸಂಗ ನಡೆಯಿತು.
ಇದಕ್ಕೂ ಮುನ್ನ ಕಾರ್ಖಾನೆ ಸಂಭಾಂಗಣದಲ್ಲಿ ಕಾರ್ಖಾನೆ ಹಂಗಾಮಿ ಅಧ್ಯಕ್ಷ ದತ್ತಾತ್ರೇಯ ಬಾಚಿಪಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಮಿಕರಿಗೆ ಕಳೆದ ಹಂಗಾಮಿನ 3 ತಿಂಗಳ ಪೈಕಿ 2 ತಿಂಗಳ ವೇತನ ಪಾವತಿಸಲು ನಿರ್ಧರಿಸಿದ್ದೇ ಕಾರ್ಮಿಕರ ಪ್ರತಿಭಟನೆ ನಡೆಯಲು ಕಾರಣವಾಯಿತು. ಕಾರ್ಖಾನೆಯ ನಿರ್ದೇಶಕರಾದ ಪರಮೇಶ್ವರ ಪಾಟೀಲ, ಅಶೋಕ ಪಾಟೀಲ, ಶಿವಪುತ್ರ ಸಾದಾ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.