ಆಂಗ್ಲ ಮಾಧ್ಯಮ ಶಾಲೆ ಸರ್ಕಾರದ ಮಹತ್ಸಾಧನೆ
Team Udayavani, Jul 7, 2019, 1:03 PM IST
ಹುಮನಾಬಾದ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಸಲಾದ ಆಂಗ್ಲ ಮಾಧ್ಯಮ ಶಾಲೆಯನ್ನು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಉದ್ಘಾಟಿಸಿದರು.
ಹುಮನಾಬಾದ: ಪೂರ್ವ ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿರುವುದು ಮೈತ್ರಿ ಸರ್ಕಾರದ ಹಲವು ಜನಪರ ಯೋಜನೆಗಳ ಪೈಕಿ ಅತ್ಯಂತ ಮಹತದ್ದು. ಆರ್ಥಿಕವಾಗಿ ಹಿಂದುಳಿದವರು ಇದರ ಪ್ರಯೋಜನ ಪಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಪ್ರಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮದ 1ನೇ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗವಾದ ಇಂದು ಆಂಗ್ಲ ಭಾಷೆ ಬಾರದ ವ್ಯಕ್ತಿ ಅನಕ್ಷರಸ್ಥರಿಗೆ ಸಮಾನ. ಉಳ್ಳವರು ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಕಳಿಸುತ್ತಾರೆ. ಬಡವರಿಗೂ ತಮ್ಮ ಮಕ್ಕಳಿಗೆ ಅದೇ ರೀತಿ ಶಿಕ್ಷಣ ಕೊಡಿಸಬೇಕೆಂಬ ಉದ್ದೇಶವಿದ್ದರೂ ಆರ್ಥಿಕ ಸಂಕಷ್ಟದ ಕಾರಣ ಅದು ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಈ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು ಐತಿಹಾಸಿಕ ಸಾಧನೆಯಾಗಿದೆ ಎಂದು ಬಣ್ಣಿಸಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ ಮಾತನಾಡಿ, ಉಳ್ಳವರಂತೆ ಬಡವರ ಮಕ್ಕಳೂ ಆಂಗ್ಲ ಮಾಧ್ಯಮ ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದ ರಾಜ್ಯಾದ್ಯಂತ 1000 ಶಾಲೆ ಆರಂಭಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಆ ಪೈಕಿ ಜಿಲ್ಲೆಯಲ್ಲಿ ತೆರೆಯುತ್ತಿರುವ 26 ಶಾಲೆಗಳ ಪೈಕಿ ಹುಮನಾಬಾದ ಪಟ್ಟಣ ಸೇರಿ ತಾಲೂಕಿನ ಒಟ್ಟು 6 ಕಡೆ ಈ ಶಾಲೆ ಆರಂಭಿಸಲಾಗುತ್ತಿದೆ. ಇದಕ್ಕಾಯೇ ಸರ್ಕಾರ ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿ, ಸಿದ್ಧಗೊಳಿಸಿರುವುದು ಆರೋಗ್ಯಪೂರ್ಣ ಬೆಳವಣಿಗೆ ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸುವುದಕ್ಕಾಗಿ ಈ ಹಿಂದಿನ ಸರ್ಕಾರ ನಡೆಸಿದ್ದ ವಿಶೇಷ ಸಭೆಯಲ್ಲಿ ಕನ್ನಡಪರ ಸಂಘಟನೆಗಳು ವಿರೋಧ ಮಾಡಿದ್ದರಿಂದ ಚರ್ಚೆಯನ್ನು ತಾತ್ಕಾಲಿಕವಾಗಿ ಸಗಿತಗೊಳಿಸಲಾಗಿತ್ತು. ಆದರೆ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಜ್ಞಾನಪೀಠ ಪ್ರಶಶಸ್ತಿ ಪುರಸ್ಕೃತ ಕವಿ ಕುವೆಂಪು ಹೇಳಿದಂತೆ ಸಾಧಕರಿಗೆ ‘ಕನ್ನಡ ತೊಟ್ಟಿಲು- ಇಂಗ್ಲಿಷ್ ಮೆಟ್ಟಿಲು’ ಎಂದದ್ದನ್ನು ಸ್ಮರಿಸಿದರು. ಅವರು ವಿವಿಧ ಕನ್ನಡಪರ ಸಂಘಟನೆಗಳಿಗೆ ಸಲಹೆ ನೀಡಿದ್ದಲ್ಲದೇ ಅಂದು ತೆಗೆದುಕೊಂಡ ದಿಟ್ಟ ನಿರ್ಧಾರದ ಪರಿಣಾಮ ಇಂದು ಆಂಗ್ಲ ಮಾಧ್ಯಮ ಶಾಲೆ ಆರಂಭಗೊಳ್ಳಲು ಸಾಧ್ಯವಾಯಿತು ಎಂದು ಎಂದು ಹೇಳಿದರು.
ತಹಶೀಲ್ದಾರ್ ನಾಗಯ್ಯಸ್ವಾಮಿ ಹಿರೇಮಠ, ತಾಲೂಕು ಪಂಚಾಯಿತಿ ಇಒ ವಿಜಯಕುಮಾರ ಮಡ್ಡಿ, ಬಸವಕಲ್ಯಾಣ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ, ಪುರಸಭೆ ಸದಸ್ಯ ಕಾಳಪ್ಪಗೌಡ್ರು, ಮಹೇಶ ಪಾಟೀಲ, ಡೈಟ್ ಉಪನ್ಯಾಸಕ ಅಮೃತರಾವ್ ಬಸಗುಂಡೆ, ಅಕ್ಷರ ದಾಸೋಹ ಅಧಿಕಾರಿ ಓಂಕಾರ ರೂಗನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರರೆಡ್ಡಿ ಮಾಲೀಪಾಟೀಲ, ತಾಲೂಕು ಘಟಕದ ಅಧ್ಯಕ್ಷ ಮುರಗೇಂದ್ರ ಸಜ್ಜನಶೆಟ್ಟಿ, ಕಾರ್ಯದರ್ಶಿ ರಾಜಕುಮಾರ ಹರನಾಳ್ ಇನ್ನಿತರರು ಇದ್ದರು.
ರಾಜುಸಿಂಗ್ ತಿವಾರಿ ಸಂಗೀತ ಸಂಯೋಜನೆಯಲ್ಲಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಬಿಆರ್‌ಸಿ ಶಿವಕುಮಾರ ಪಾರಶೆಟ್ಟಿ ಸ್ವಾಗತಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚಪ್ಪ ವಾಲಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ರಾಜೋಳೆ ನಿರೂಪಿಸಿದರು. ಪ್ರತಿಭಾ ಪರಿಷತ್ ಅಧ್ಯಕ್ಷ ವೀರಂತರೆಡ್ಡಿ ಜಂಪಾ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.