ಎಸ್ಸಿಪಿ-ಟಿಎಸ್ಪಿ ಕಾಮಗಾರಿ ಮುಗಿಸಿ
ಉಸ್ತುವಾರಿಗೆ ಸಮಾಜ ಕಲ್ಯಾಣ ಉಪ ನಿರ್ದೇಶಕ ನೋಡಲ್ ಅಧಿ ಕಾರಿಯಾಗಿ ನೇಮಕ
Team Udayavani, Dec 19, 2019, 12:01 PM IST
ವಿಜಯಪುರ: ಕೃಷ್ಣಾಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವ ವಿಶೇಷ ಘಟಕ ಗಿರಿಜನ ಉಪಯೋಜನಡಿಯ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ವಿಧಾನಸಭಾ ಸಚಿವಾಲಯದ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಕಲ್ಯಾಣ ಸಮಿತಿ ಅಧ್ಯಕ್ಷ ಎಸ್. ಅಂಗಾರ ಹೇಳಿದರು.
ಬುಧವಾರ ಜಿಲ್ಲೆಯ ಆಲಮಟ್ಟಿ ಕೃಷ್ಣಾಭಾಗ್ಯ ಜಲ ನಿಗಮ ವ್ಯವಸ್ಥಾಪಕ ನಿರ್ದೇಶಕರ ಆಡಳಿತ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಭೆಯ ವಿವರ ನೀಡಿದ ಅವರು, ನನ್ನ ನೇತೃತ್ವದಲ್ಲಿನ ವಿಧಾನಸಭಾ ಸಚಿವಾಲಯದ ಅನುಸೂಚಿತ ಜಾತಿ ಹಾಗೂ ಅನುಸೂಚಿತ ಪಂಗಡ ಕಲ್ಯಾಣ ಸಮಿತಿ ವಿಜಯಪುರ ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ, ಅನುದಾನ ಸಮರ್ಪಕ ಬಳಕೆ ಇನ್ನಿತರ ಕಾರ್ಯಚಟುವಟಿಕೆ ಪರಿಶೀಲನೆಗೆ ಆಗಮಿಸಿದ್ದು, ಬೇನಾಳ ಹಾಗೂ ನಾಲತವಾಡ ಗ್ರಾಮಗಳಲ್ಲಿ ವಿವಿಧ ಯೋಜನೆಗಳ ಪರಿಶೀಲನೆ ನಡೆಸಲಿದೆ ಎಂದರು.
ಮೂರು ವರ್ಷಗಳಲ್ಲಿ ಕೆಬಿಜೆಎನ್ನೆಲ್ ಪ್ರಮುಖ ನೀರಾವರಿ ಯೋಜನೆಗಳಿಗೆ ಮಂಜೂರಾದ ಅನುದಾನದಲ್ಲಿ 2016-17ನೇ ಆರ್ಥಿಕ ವರ್ಷದಲ್ಲಿ 4139.56 ಕೋಟಿ ರೂ ಅನುದಾನ ಖರ್ಚಾಗಿದ್ದು, ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ ಅಡಿ 197.25 ಕೋಟಿ ರೂ. ಬಳಸಿದೆ. 2017-18ನೇ ಸಾಲಿನಲ್ಲಿ 4427.93 ಕೋಟಿ ರೂ. ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ 485.15 ಕೋಟಿ ರೂ ಹಾಗೂ 2018-19ನೇ ಸಾಲಿನಲ್ಲಿ ಖರ್ಚು ಮಾಡಿದ 4193.01 ಕೋಟಿ ರೂ. ಅನುದಾನದಲ್ಲಿ ವಿಶೇಷ ಘಟಕ ಗಿರಿಜನ ಉಪ ಯೋಜನೆ ಅಡಿ 478.79 ಕೋಟಿ ರೂ. ಖರ್ಚು ಮಾಡಿದೆ. ಪ್ರಮುಖವಾಗಿ ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ನೀರಾವರಿ ಮತ್ತು ನೀರಾವರಿಯೇತರ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ ಎಂದರು.
ಆದ್ಯತೆ ಮೇಲೆ ಕಾಮಗಾರಿ ಪೂರ್ಣ: ಕೃಷ್ಣಾಭಾಗ್ಯ ಜಲ ನಿಗಮದ ವ್ಯಾಪ್ತಿಯಲ್ಲಿ ಬರುವ ಎಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಮಿತಿಯೂ ಪರಿಶೀಲಿಸಿದೆ. ಕೆಲವು ಕಾಮಗಾರಿ ಹೊರತುಪಡಿಸಿ ಹೆಚ್ಚಿನ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ವಿಶೇಷವಾಗಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಅನುದಾನ ಸಮರ್ಪಕ ಬಳಕೆ ಕುರಿತು ಪರಿಶೀಲಿಸಿದ್ದು, ಆದ್ಯತೆ ಮೇಲೆ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಮಿತಿ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು.
ಕೃಷ್ಣಾಭಾಗ್ಯ ಜಲ ನಿಗಮದ ವಿಶೇಷ ಘಟಕ ಹಾಗೂ ಗಿರಿಜನ ಉಪ ಯೋಜನೆ ಅಡಿಯ ಕಾಮಗಾರಿಗಳ ಮೇಲುಸ್ತುವಾರಿಗಾಗಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಈ ನಿಗಮದ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಯೋಜನೆಗಳ ಕುರಿತಂತೆ ವರದಿ ಸಹ ಸಲ್ಲಿಸಲು ಸೂಚಿಸಲಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಮಂಜೂರಾದ ಅನುದಾನವನ್ನು ಸಮಯಕ್ಕೆ ಸರಿಯಾಗಿ ಸದ್ಭಳಕೆ ಮಾಡಬೇಕು. ಜೊತೆಗೆ ಯೋಜನೆಗಳನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವಂತೆ ತಾಕೀತು ಮಾಡಿದ್ದೇವೆ. ಸದರಿ ಯೋಜನೆಗಳ ಪರಿಶೀಲನೆ ನಡೆಸಿದ್ದು, ಗುಣಮಟ್ಟದ ಮತ್ತು ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಸಮಿತಿ ಸದಸ್ಯರಾದ ಎನ್.ಮಹೇಶ, ಬಸವರಾಜ ಮತ್ತಿಮೂಡ, ಟಿ.ಪಿ. ಪರಮೇಶ್ವರ ನಾಯ್ಕ, ಅಬ್ಬಯ್ಯ ಪ್ರಸಾದ, ಬಸನಗೌಡ ದದ್ದಲ, ಡಿ.ಎಸ್. ಹೂಲಗೇರಿ, ಎಚ್.ಕೆ. ಕುಮಾರಸ್ವಾಮಿ, ಡಾ| ಕೆ.ಶ್ರೀನಿವಾಸ ಮೂರ್ತಿ, ಆರ್.ಧರ್ಮಸೇನ, ಆರ್.ಪ್ರಸನ್‌ಕುಮಾರ, ಕೆ.ಪಿ. ನಂಜುಂಡಿ ವಿಶ್ವಕರ್ಮ, ಕೆ.ಎ. ತಿಪ್ಪೇಸ್ವಾಮಿ, ತಿಪ್ಪಣ್ಣ ಕಮಕನೂರು, ಕೃ.ಭಾ.ಜ.ನಿ ವ್ಯವಸ್ಥಾಪಕ ನಿರ್ದೇಶಕ ಎನ್.ಜಯರಾಂ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಪಂ ಸಿಇಒ ಗೋವಿಂದರಡ್ಡಿ, ಅಧೀಕ್ಷಕ ಅಭಿಯಂತರ ಡಿ.ಬಸವರಾಜ, ಜಗದೀಶ ಠೊಡ, ಮುಖ್ಯ ಅಭಿಯಂತರ ಆರ್.ಪಿ. ಕುಲಕರ್ಣಿ, ಎಫ್. ಎಸ್.ಪಾಟೀಲ, ಪ್ರದೀಪ ಮಿತ್ರ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.