ಸೈನಿಕಹುಳು ಕಾಟ: ರೈತರ ಪೀಕಲಾಟ
ಮೆಕ್ಕೆಜೋಳಕ್ಕೆ ತಗುಲಿದ ಹೊಸ ರೋಗ •14 ದಿನದಲ್ಲಿ ಸಂಪೂರ್ಣ ಬೆಳೆ ನಾಶ
Team Udayavani, Jul 25, 2019, 11:25 AM IST
ಹೂವಿನಹಡಗಲಿ: ತಾಲೂಕಿನ ಮುದೇನೂರು ಗ್ರಾಮದ ಎಸ್.ಎಂ. ಜಾನ್ ಹೊಲದಲ್ಲಿನ ಮೆಕ್ಕೆಜೋಳ ಬೆಳೆಗೆ ಹೊಸ ಸೈನಿಕ ಹುಳುವಿನ ಬಾಧೆ ಕಾಣಿಸಿಕೊಂಡಿರುವುದು.
•ವಿಶ್ವನಾಥ ಹಳ್ಳಿಗುಡಿ
ಹೂವಿನಹಡಗಲಿ: ಕೃಷಿಯನ್ನು ನಂಬಿರುವ ರೈತ ಪ್ರತಿ ಹಂತದಲ್ಲಿಯೂ ಹೋರಾಟದ ಬದುಕನ್ನೇ ಕಟ್ಟಿಕೊಂಡಿರುತ್ತಾನೆ. ಪ್ರಕೃತಿ ಜೊತೆಯಲ್ಲಿ, ಮಳೆ ಜೊತೆಯಲ್ಲಿ ಹೀಗೆ ಪ್ರತಿ ಹಂತದಲ್ಲಿಯೂ ಹೋರಾಟ ನಡೆಸಿರುತ್ತಾನೆ. ಈ ಹೋರಾಟದಲ್ಲಿ ಯಶಸ್ಸು ಕಂಡುಕೊಳ್ಳಬೇಕಾದಲ್ಲಿ ರೈತ ತನ್ನ ಅದೃಷ್ಟದ ಜೊತೆಯಲ್ಲಿ ಕೆಲವೊಂದು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅನಿವಾರ್ಯವೆನಿಸುತ್ತದೆ.
ಹಡಗಲಿ ತಾಲೂಕಿನಲ್ಲಿ ಪ್ರಾರಂಭದಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿತ್ತು ಎನ್ನುವ ಹಂತದಲ್ಲಿರುವಾಗ ತಾಲೂಕಿನಲ್ಲಿ ಮಳೆಯಾಗಿತ್ತು. ಈ ಮಳೆಯನ್ನೇ ನಂಬಿ ರೈತರು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬಿತ್ತಿದ್ದಾರೆ. ಬಿತ್ತಿದ ಮೆಕ್ಕೆಜೋಳಕ್ಕೆ ಈಗ ಫಾಲ್ ಆರ್ಮಿ ವಾರ್ಮ ಎನ್ನುವ ಹೊಸ ರೋಗ ಬಾಧೆ ಕಾಣಿಸಿಕೊಂಡಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದು ರೋಗ ಹತೋಟಿಗಾಗಿ ಹೋರಾಟ ಮಾಡುತ್ತಿದ್ದಾರೆ.
ರೋಗದ ಲಕ್ಷಣ: ಈ ಫಾಲ್ ಆರ್ಮಿ ವಾರ್ಮ (ಹೊಸ ಸೈನಿಕ ಹುಳು) ಬಾಧೆಗೆ ಕಾಣಿಸಿಕೊಂಡ ಮೆಕ್ಕೆಜೋಳದ ಎಲೆಗಳು ಪ್ರಾರಂಭದ ಹಂತದಿಂದಲೂ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದು ಸುರುಳಿಯಲ್ಲಿಯೇ ಪ್ರಾರಂಭವಾಗಿ ಎಲೆಗಳ ಮೂಲಕವಾಗಿ ಸಂಪೂರ್ಣ ಹೊಲದಲ್ಲಿರುವ ಬೆಳೆಗೆ ಹರಡುತ್ತದೆ. ಇದು ಹರಡುವ ಪ್ರಮಾಣ ಎಷ್ಟು ವೇಗವಾಗಿರುತ್ತದೆ ಎಂದರೆ ದಾಳಿ ರೂಪದಲ್ಲಿರುವ ಸೈನಿಕ ವೇಗದಲ್ಲಿ ಬೆಳೆಗಳಿಗೆ ಹರಡಿ ಇಡೀ ಬೆಳೆಯನ್ನು ನಷ್ಟ ಮಾಡುವಷ್ಟು ಶಕ್ತಿಶಾಲಿಯಾಗಿರುತ್ತದೆ. ಹೊಸ ಸೈನಿಕ ಹುಳುವಿನ ಜೀವಿತಾವಧಿ ಕೇವಲ 14 ದಿವಸಗಳಿದ್ದು ಅಷ್ಟರಲ್ಲಿಯೇ ಎಲ್ಲವನ್ನು ನಾಶ ಮಾಡಿ ಬಿಡುವಷ್ಟು ಶಕ್ತಿ ಸಾಮರ್ಥ್ಯ ಹೊಂದಿರುತ್ತದೆ.
ರೋಗ ಹತೋಟಿಗೆ ಕೃಷಿ ಇಲಾಖೆಯಿಂದ ಸೂಕ್ತ ಮಾಹಿತಿ
ಹೊಸ ಸೈನಿಕ ಹುಳುವನ್ನು ಹತೋಟಿಗೆ ತರಲು ಕೃಷಿ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು ರೈತರಿಗೆ ಮಾಹಿತಿ ನೀಡುತ್ತಿದ್ದಾರೆ. ರೋಗ ಬಾಧೆ ಕಾಣಿಸಿಕೊಂಡಿರುವ ಬೆಳೆಗೆ ಬೆಲ್ಲ ಹಾಗೂ ಯಾವುದಾದರೊಂದು ವಿಷ ರಾಸಾಯನಿಕ ಬೆರಸಿ ಬೇಕಾದಷ್ಟು ಪ್ರಮಾಣದಲ್ಲಿ ನೀರಿನಲ್ಲಿ ಅಕ್ಕಿ ಹೊಟ್ಟನ್ನು ರಾತ್ರಿ ಪೂರ್ಣ ನೆನೆ ಹಾಕಬೇಕು.ನಂತರದಲ್ಲಿ ಸಂಜೆ ರೋಗ ಬಾಧೆ ಕಾಣಿಸಿಕೊಂಡಿರುವ ಹೊಲದಲ್ಲಿ ಈ ರಾಸಾಯನಿಕ ವಿಷವನ್ನು ಹೊಲದ ತುಂಬೆಲ್ಲ ಸಿಂಪಡಿಸಬೇಕು ಇಲ್ಲವೇ ಚೆಲ್ಲಬೇಕು. ಈ ಕೆಲಸವನ್ನು ಸುತ್ತಮುತ್ತಲಿನ ರೈತರು ಸಾಮೂಹಿಕವಾಗಿ ಮಾಡಬೇಕು. ಇದರಿಂದಾಗಿ ರೋಗ ಹತೋಟಿಗೆ ಬರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ನೀಲಾನಾಯ್ಕ ಹೇಳುತ್ತಾರೆ. ಈಗಾಗಲೇ ನಮ್ಮ ತಾಲೂಕಿನಲ್ಲಿ ಉತ್ತಂಗಿ, ಹೊಳಗುಂದಿ ಒಳಗೊಂಡಂತೆ ಇಟಗಿ ಹೋಬಳಿಯಲ್ಲಿ ಈ ರೋಗ ಕಂಡು ಬಂದಿದ್ದು ರೈತರಿಗೆ ಆಗತ್ಯ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ನಾಲ್ಕು ಎಕರೆ ಹೊಲದಲ್ಲಿ ಮೆಕ್ಕೆಜೋಳ ಹಾಕಲಾಗಿದ್ದು ಈ ಮೆಕ್ಕೆಜೋಳ ಇನ್ನೂ ಪ್ರಾರಂಭ ಹಂತದಲ್ಲಿರುವಾಗಲೇ ಹೊಸ ಸೈನಿಕ ಹುಳುವಿನ ಬಾಧೆಗೆ ತುತ್ತಾಗುತ್ತಿದೆ. ರೈತ ಇದರಿಂದಾಗಿ ಸಂಕಷ್ಟಕ್ಕೆ ಈಡಾಗುತ್ತಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
•ಎಸ್.ಎಂ.ಜಾನ್, ರೈತ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.