ನಿಮ್ಮ ಪರವೂ ನಾನು ಶ್ರಮಿಸಿರುವೆ: ಧ್ರುವ
Team Udayavani, Mar 24, 2019, 1:32 PM IST
ನಂಜನಗೂಡು: ನಿಮ್ಮ ಗೆಲುವಿಗೂ ನಾನು ದುಡಿದಿದ್ದೇನೆ, ಅದೇ ರೀತಿ ನಿಮ್ಮಿಂದಲೂ ಸಹಕಾರ ಪಡೆದಿದ್ದೇನೆ ಎಂದು ಮಾಜಿ ಸಚಿವ ಶ್ರೀನಿವಾಸಪ್ರಸಾದ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ತಿರುಗೇಟು ನೀಡಿದರು.
ನಗರದ ಸಾಹುಕಾರ ಲಿಂಗಣ್ಣವರ ಛತ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಸಮಾಜದ ಅತ್ಯಂತ ಹಿರಿಯ, ಧುರೀಣ ರಾಜಕಾರಣಿ ಎಂಬ ಭಾವನೆಯಿಂದ ನಿಮ್ಮನ್ನು ಗೌರವದಿಂದ ಕಂಡಿದ್ದೇನೆ. ರಾಜ್ಯದ ಹಿರಿಯ ರಾಜಕಾರಣಿಯಾಗಿರುವ ನಿಮ್ಮಿಂದ ಇಂತಹ ಕೀಳುಮಟ್ಟದ ಟೀಕೆಗಳನ್ನು ಯಾರೂ ನಿರೀಕ್ಷಿಸಿರಲಿಲ್ಲ.
ಚುನಾವಣೆಗಳು ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಗುರಿ ಕುರಿತಾದ ಹೋರಾಟದ ಕಣವಾಗಬೇಕೆ ಹೊರತು ಪರಸ್ಪರ ಬೈಯ್ದಾಡಿಕೊಂಡು ಅಸಹ್ಯಕರ ವಾತಾವರಣ ಸೃಷ್ಟಿರುವ ವೇದಿಕೆಯಾಗಬಾರದು ಎಂದು ತೀಕ್ಷವಾಗಿ ಪ್ರತಿಕ್ರಿಯಿಸಿದರು.
ಸಮಾರಂಭವೊಂದರಲ್ಲಿ ಧ್ರುವನಾರಾಯಣ ತಮ್ಮ ಉತ್ತರಾಧಿಕಾರಿ ಎಂದು ನೀವೇ ಘೋಷಿಸಿದ್ದೀರಿ. ಇದೀಗ ಏಕೆ ತಮ್ಮನ್ನು ಹೀನಾಯವಾಗಿ ತೆಗಳುತ್ತಿದ್ದೀರಿ?, ಪಕ್ಷದಲ್ಲಿ ಇರುವವರಿಗೂ ನಿಮ್ಮನ್ನು ಗೌರವದಿಂದ ಕಂಡು ಕೊನೆಗಳಿಗೆಯವರೆಗೂ ನಿಮ್ಮನ್ನು ಉಳಿಸಿಕೊಳ್ಳಲು ಹೆಣಗಾಡಿದೆ.
ಈಗ ಚುನಾವಣಾ ಕಣವನ್ನು ಗೌರವಯುತವಾಗಿ ಎದುರಿಸೋಣ ಎಂದು ಮನವಿ ಮಾಡಿದರು. ನಿಮ್ಮ ಅಳಿಯ ಶಾಸಕನಾಗಿದ್ದಾರೆ. ಆ ಹುದ್ದೆಯ ಘನತೆ ಗೌರವ ತಿಳಿದು ಮಾತನಾಡಲಿ ಎಂದು ಹರ್ಷವರ್ಧನ್ ಅವರಿಗೆ ತಿರುಗೇಟು ನೀಡಿದರು.
ಮತದಾರರಿಗೆ ಆಯ್ಕೆ: ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕ್ಷೇತ್ರದಲ್ಲಿ ಕ್ರಿಯಾಶೀಲ ಸಂಸದ ಅಥವಾ ವಿಶ್ರಾಂತ ಸಂಸದರು ಬೇಕೇ ಎಂಬುದನ್ನು ಮತದಾರರು ಆಯ್ಕೆ ಮಾಡಿಕೊಳ್ಳುವ ಸಮಯ ಬಂದಿದೆ ಎಂದು ಪ್ರಸಾದ್‌ರನ್ನು ಕಾಲೆಳೆದರು.
ಧ್ರುವನಾರಾಯಣ ಹಾಗೂ ತಾವು ಪರಸ್ಪರ ಐದು ಚುನಾವಣೆಗಳಲ್ಲಿ ಎದುರಾಳಿಗಳಾಗಿದ್ದೇವೆ. ಆದರೆ, ಅವರು ಅದೃಷ್ಟವಂತರು, ತಾನು ದುರಾದೃಷ್ಟ ರಾಜಕಾರಣಿಯಾಗಿ ಸತತವಾಗಿ ಸೋಲು ಅನುಭವಿಸಿದೆ ಎಂದು ವಿಷಾದಿಸಿದರು.
ಸಭೆಯಲ್ಲಿ ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್, ಶಾಸಕರಾದ ಯತೀಂದ್ರ, ಅನಿಲ್ ಚಿಕ್ಕಮಾದು, ಮಾಜಿ ವಿಧಾನಪರಿಷತ್ ಸದಸ್ಯ ಧರ್ಮಸೇನಾ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೂಗಶೆಟ್ಟಿ, ಗುರುಸ್ವಾಮಿ. ಪಿ.ಶ್ರೀನಿವಾಸ್,
ರಂಗಸ್ವಾಮಿ, ರಮೇಶ, ಮುಖಂಡರಾದ ಎಸ್.ಸಿ. ಬಸವರಾಜು, ಎನ್.ಶ್ರೀನಿವಾಸ್, ಗಣೇಶ ಪ್ರಸಾದ, ಶ್ರೀಕಂಠ ಕುರಿಹುಂಡಿ, ಮಹೇಶ, ಜಿ. ಕಿಟ್ಟಪ್ಪ, ಜಿಪಂ ಸದಸ್ಯರಾದ ಲತಾ, ಪುಷ್ಪಾ, ನಗರಸಭೆ ಮಾಜಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ಮಾರುತಿ, ನಂದಕುಮಾರ್, ಮಾದಪ್ಪ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.