ಶಾಲೆ ಅವ್ಯವಸ್ಥೆಗೆ ತಹಶೀಲ್ದಾರ್ ಗರಂ
•ಶೌಚಾಲಯವಾಗಿದೆ ಗೋದಾಮು-ಕಾರದ ಪುಡಿ ಬಿಸಿನೀರೇ ಸಾಂಬಾರ್
Team Udayavani, Jul 4, 2019, 10:12 AM IST
ಜಗಳೂರು: ಶಾಲೆಯಲ್ಲಿ ಕಡತ ಪರಿಶೀಲನೆ ನಡೆಸುತ್ತಿರುವ ತಹಶೀಲ್ದಾರ್ ತಿಮ್ಮಣ್ಣ.
ಜಗಳೂರು: ಮಕ್ಕಳ ಬಿಸಿಯೂಟದ ಸಂಬಾರ್‌ನಲ್ಲಿ ತರಕಾರಿ ಇಲ್ಲ, ಶೌಚಾಲಯವಿದ್ದರೂ ಬಳಕೆ ಮಾಡದೆ ಗೊದಾಮು ಮಾಡಿಕೊಂಡಿರುವುದು, ಮಣ್ಣು ಮಿಶ್ರಿತ ನೀರು ಮಕ್ಕಳಿಗೆ ನೀಡುತ್ತಿರುವುದನ್ನು ಕಂಡು ತಹಶೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಗರಂ ಆದರು.
ಪಟ್ಟಣದ ಚಳ್ಳಕೆರೆ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಪಾಠಶಾಲೆಗೆ ದಿಢೀರ್ ಭೇಟಿ ನೀಡಿದ ತಹಶೀಲ್ದಾರರು ಶಾಲೆಯ ಪರಿಶೀಲನೆ ನಡೆಸಿದರು.
ಅಡುಗೆ ಕೊಣೆಗೆ ನೋಡಿದ ಅವರು, ಸಿಂಟೆಕ್ಸ್ ಟ್ಯಾಂಕ್‌ನಲ್ಲಿ ಮಣ್ಣು ಮಿಶ್ರಿತ ನೀರು ಕಂಡು ಕೆಂಡಾಮಂಡಲವಾಗಿ, ನಿಮ್ಮ ಮನೆಯಲ್ಲಿ ಇಂಥ ನೀರನ್ನು ಕುಡಿಯುತ್ತೀರಾ? ಏನೂ ಅರಿಯದ ಮಕ್ಕಳಿಗೆ ಇಂಥ ನೀರನ್ನು ಕೊಡುತ್ತೀರಲ್ಲ. ನಿಮಗೆ ನಾಚಿಕೆಯಾಗಬೇಕು ಎಂದು ಮುಖ್ಯ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು.
ನಂತರ ಶೌಚಾಲಯ ಪರಿಶೀಲನೆ ನಡೆಸಿದರೆ ಅದನ್ನು ಗೋದಾಮು ಮಾಡಿರುವುದು ಕಂಡು ಬಂತು. ಸರ್ ಮಕ್ಕಳೆಲ್ಲ ಬಯಲು ಶೌಚಾಲಯಕ್ಕೆ ತೆರಳುತ್ತಾರೆ ಎಂದು ಶಿಕ್ಷಕರು ವಿವರಿಸಿದರು. ಇದನ್ನು ಸರಿಪಡಿಸದಿದ್ದರೆ ನಿಮ್ಮ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ತಹಶೀಲ್ದಾರ್‌ರು, ಊಟದ ಸಮಯವಾದ್ದರಿಂದ ಅಲ್ಲಿಯೇ ಊಟಕ್ಕೆ ಕುಳಿತರು. ಸಾಂಬಾರ್‌ನಲ್ಲಿ ತರಕಾರಿ ಇಲ್ಲ. ಕಾರದ ಪುಡಿ ಹಾಕಿ ಕುದಿಸಿದ ನೀರನ್ನು ಕೊಡುತ್ತಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂಥ ಅವ್ಯವಸ್ಥೆ ಬೇರೆ ಎಲ್ಲೂ ಇಲ್ಲ. ಸಮಾಜವನ್ನು ತಿದ್ದುವ ನೀವೇ ಅರ್ಥ ಮಾಡಿಕೊಳ್ಳಬೇಕು. ಇವರಿಗೆ ನೋಟಿಸ್ ನೀಡಿ ಎಂದು ಆರ್‌ಐಗೆ ಸೂಚನೆ ನೀಡಿದರು. ಆರ್.ಐ. ಸಮೀರ್, ಕುಬೇಂದ್ರನಾಯ್ಕ, ಪ್ರಕಾಶ್, ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.