ಜೀವಾ ಉಳ್ಯಾಂಗಿಲ್ ಅನ್ಕೊಂಡಿದ್ವಿ!
ಜಲದಡಿ ಸಿಲುಕಿದ ಜಮಖಂಡಿ ತಾಲೂಕು•ಸಾಮಗ್ರಿ ಹುಡಕಬಹುದ್ರಿ-ಜೀವಾ ಎಲ್ಲಿ ಹುಡ್ಕೋದು•ಜೀವಾ ಉಳಿದಿದ್ದೇ ದೊಡ್ಡ ಮಾತು
Team Udayavani, Aug 24, 2019, 1:29 PM IST
ಮಲ್ಲೇಶ ಆಳಗಿ
ಜಮಖಂಡಿ: ಅವತ್ತ ಬುಧವಾರ ರಾತ್ರಿ ಇತ್ರಿ. ನೀರು ಜಾಸ್ತಿ ಬರಬಹುದು, ನೀವು ಮನಿ ಖಾಲಿ ಮಾಡಬೇಕ್ರಿ ಅಂತ ಪಂಚಾಯಿತಿಯವರು ಹೇಳಿದ್ರು. ಒಮ್ಮೀ ನೀರ್ ಬಂದಿಲ್ಲ. ಮೇಲಾಗಿ ನಮ್ಮೂರಾಗ್ ಮಳಿನೂ ಆಗಿಲ್ಲ. ನೀರೆಲ್ಲಿ ಬರ್ತೈತಿ ಅನ್ಕೊಂಡು ಸುಮ್ನಿದ್ವಿ. ಗುರುವಾರ ಸಂಜಿಮುಂದ್ ಮನಿ ಮುಂದ್ ನೀರ್ ಬಂತು. ಮ್ಯಾಳಿಗಿ ಮ್ಯಾಗ್ ಹತ್ತಿ ಕುಂತ್ವಿ. ಎರಡ್ ತಾಸ್‌ನಾಗ್ ನೀರ ಹೊಕ್ಕದ್ ಅನ್ಕೊಂಡ್ವಿ. ಮ್ಯಾಳಗಿ ಮ್ಯಾಗೂ ನೀರು ಬಂತು. ಈಜಾಡಿ ಊರಗ್ ಹೊರಗ ಬರ್ಲಾಕ್ ಹತ್ತೇವು. ನೀರ್ ಹೆಚ್ಚಿಗೇ ಆಗ್ಲಾಕ್ ಹತ್ತಿತ್ತು. ನಾವೇನ್ ಬದುಕಿ ಹೊಳ್ಳಿ ಊರಿಗಿ ಬರಾಂಗಿಲ್ ಅನ್ಕೊಂಡ್ವಿ. ಆದ್ರ ದೇವ್ರ ದೊಡ್ಡಾವ್. ನಾವೆಲ್ಲ ಉಳಿದೇವು. ಸಾಮಾನ್ ಹಾಳಾದ್ರ ಮತ್ ತಗೋಬಹುದು. ಜೀವಾ ಎಲ್ಲಿ ತಗೊಳ್ಳೋದ್ರಿ…
ಮುತ್ತೂರಿನ ಯುವಕ ಹೀಗೆ ಹೇಳುತ್ತಿದ್ದಾಗ, ಪ್ರವಾಹದಿಂದ ಅನುಭವಿಸಿದ ಸಂಕಷ್ಟದ ಅರಿವಾಗುತ್ತಿತ್ತು. ಇಡೀ ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹಕ್ಕೆ ಮುಳುಗಿದ ಮೊದಲ ಗ್ರಾಮ ಮುತ್ತೂರ ಮತ್ತು ಮೈಗೂರು. ಈ ಎರಡು ಗ್ರಾಮಗಳು ಕೃಷ್ಣಾ ನದಿಯಿಂದ 1.5 ಕಿ.ಮೀ. ದೂರದಲ್ಲಿದ್ದರೂ, ಇಡೀ ಗ್ರಾಮ ಸುತ್ತ ಮೊದಲು ನೀರು ಬಂದಿತ್ತು. ಎರಡೇ ಗಂಟೆಯಲ್ಲಿ ಇಡೀ ಊರಿನ ಮನೆಗಳು ನೀರಲ್ಲಿ ನಿಂತಿದ್ದವು. ಗ್ರಾಮಸ್ಥರು, ಎಂದೂ ಕಾಣದ ಪ್ರವಾಹ ಕಂಡು, ಭಯ ಭೀತಿಗೊಂಡಿದ್ದರು. ಜಿಲ್ಲಾ, ತಾಲೂಕು ಆಡಳಿತ ನೀರಿನಲ್ಲಿದ್ದ ಜನರನ್ನು ಕಾಪಾಡಲು ಹರಸಾಹಸವೇ ಪಟ್ಟಿತ್ತು.
ಈಗ ನೀರು ಇಳಿಮುಖವಾಗಿದೆ. ಊರು ಬಿಟ್ಟು ಹೋದವರೆಲ್ಲ ಮನೆಗೆ ಬಂದು ನೋಡಿದರೆ, ಕರಳು ಹಿಂಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಳು-ಕಡಿ ಮೊಳಕೆಯೊಡೆದಿದೆ. ಮನೆಯ ಮಾಳಿಗೆ ಮೇಲೆ ಬಿಟ್ಟು ಹೋಗಿದ್ದ ಸಾಕಿದ ನಾಯಿ ಸತ್ತು ಬಿದ್ದಿದೆ. ಇಲಿ-ಹೆಗ್ಗಣಗಳು ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿವೆ. ಈ ಭಾಗದ ಅತಿಹೆಚ್ಚಿನ ಪ್ರಮಾಣದಲ್ಲಿದ್ದ ಇಲಿ-ಹೆಗ್ಗಣ ಸಂತತಿಯೇ ಸತ್ತು ಹೋಗಿದೆ. ಹೀಗಾಗಿ ಇಡೀ ಊರ್ ತುಂಬಾ ದುರ್ವಾಸನೆ ಬೀರುತ್ತಿದೆ. ಮರಳಿ ಬದುಕು ಕಟ್ಟಿಕೊಳ್ಳಲು ಹಲವು ತಿಂಗಳು-ವರ್ಷವೇ ಬೇಕಾದ ಸ್ಥಿತಿ ಉಂಟಾಗಿದೆ.
ಭಯಂಕರ ನೀರು: 1914ರಲ್ಲಿ ಅತಿಹೆಚ್ಚು ಪ್ರವಾಹ ಬಂದ ಉದಾಹರಣೆ ಟಕ್ಕೋಡದಲ್ಲಿ ಬ್ರಿಟಿಷರು ನೆಟ್ಟ ಕಲ್ಲು ಹೇಳುತ್ತದೆ. ಅದಾದ ಬಳಿಕ ಸುಮಾರು ನಾಲ್ಕೈದು ಬಾರಿ ಪ್ರವಾಹ ಬಂದಿದೆಯಾದರೂ, ಇಂತಹ ರಣಭೀಕರ ನೀರು ಎಂದೂ ಬಂದಿಲ್ಲ. ಕೃಷ್ಣಾ ನದಿ ಪಾತ್ರದಲ್ಲಿ 1.35ರಿಂದ 1.50 ಲಕ್ಷ ಕ್ಯೂಸೆಕ್ ನೀರು ಹರಿಯುವ ಸಾಮರ್ಥ್ಯವಿದೆ. ಅದಕ್ಕೂ ಹೆಚ್ಚು ನೀರು ಬಂದರೆ, ನದಿ ಅಕ್ಕ-ಪಕ್ಕದ ಗ್ರಾಮಗಳ ಸುತ್ತ ನೀರು ಬರುವುದು ಸಾಮಾನ್ಯ. ಇದನ್ನು ಪ್ರತಿವರ್ಷ ಅನುಭವಿಸಿದ ಅನುಭವ ಇಲ್ಲಿನ ಜನರಿಗಿದೆ. ಆದರೆ, ಮನೆಯ ಜಗಲಿ ವರೆಗೂ ನೀರು ಬಂದಿದ್ದು ಯಾರೂ ಕಂಡಿಲ್ಲ. ಕನಿಷ್ಠ ಒಂದು ಹೊತ್ತಿನ ಊಟದ ಸಾಮಾಗ್ರಿ ತೆಗೆದುಕೊಳ್ಳಲೂ ಬಿಡದಂತೆ ವೇಗವಾಗಿ ಹರಿದ ಬಂದ ನೀರಿಗೆ ಈಚಿನ ದಿನಗಳಲ್ಲಿ ನಡೆದಿಲ್ಲ. ಆದರೆ, ಈ ಬಾರಿ ಬಂದ ಪ್ರವಾಹದಲ್ಲಿ ಜೀವವೇ ಹೋದಂತ ಸ್ಥಿತಿ ಅನುಭವಿಸಿದವರು ಬಹಳಷ್ಟಿದ್ದಾರೆ.
ಬೀದಿಯಲ್ಲೇ ಬದುಕು: ತಾಲೂಕಿನ ಸುಮಾರು 27ಕ್ಕೂ ಹೆಚ್ಚು ಹಳ್ಳಿಗಳು ಸದ್ಯ ಸಂಕಷ್ಟ ಅನುಭವಿಸಿವೆ. ಪ್ರತಿ ವರ್ಷ ಎಷ್ಟೇ ನೀರು ಬಂದರೂ ತಾಲೂಕಿನ ಕನಿಷ್ಠ 16ರಿಂದ 23 ಗ್ರಾಮಗಳ ಸುತ್ತಲೂ ಮಾತ್ರ ನೀರು ಬರುತ್ತಿತ್ತು. ಈ ಬಾರಿ ಮನೆಯ ಮಾಳಿಗೆಯ ಮೇಲೂ ನೀರು ಬಂದಿದ್ದು ಕಂಡ ಹಿರಿಯರೂ, ಇದೆಂತ ನೀರಪ್ಪಾ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ನದಿ ದಂಡಿಯ ಮನೆಗಳಿಗೆ ನೀರು ಬಂದರೆ ಗ್ರಾಮದ ದೇವಸ್ಥಾನ, ಶಾಲೆ, ಅಂಗನವಾಡಿ ಇಲ್ಲವೇ ಎತ್ತರದ ಪ್ರದೇಶಕ್ಕೆ ಹೋಗಿ ಆಶ್ರಯ ಪಡೆದಿದ್ದರು. ಈ ಬಾರಿ ಆಶ್ರಯ ಕೊಡುವ ದೇವಸ್ಥಾನ, ಶಾಲೆಗೂ ನೀರಲ್ಲಿ ಮುಳುಗಿವೆ. ಪ್ರತಿವರ್ಷ ಶ್ರಾವಣದಲ್ಲಿ ಭಕ್ತರಿಯಿಂದ ಮಾಡುತ್ತಿದ್ದ ದೇವರ ಜಾತ್ರೆಗಳು ಈ ಬಾರಿ ನಡೆಯಲಿಲ್ಲ. ಶ್ರಾವಣ ಸಂಭ್ರಮ ಯಾರಿಗೂ ಬರಲಿಲ್ಲ. ಪಂಚಮಿಯ ಉಂಡಿ ತಿಂದು, ಹೆಣ್ಣು ಮಕ್ಕಳಿಗೆ ಕೊಬ್ಬರಿ-ಕುಬಸ ಕೊಟ್ಟು ತಾಯ್ತನ-ಸಹೋದರತ್ವ ಮರೆಯುತ್ತಿದ್ದ ಗ್ರಾಮೀಣರ ಬದುಕು ಈಗ ರಸ್ತೆಗೆ ಬಂದಿದೆ. ರಸ್ತೆಗಳ ಪಕ್ಕದಲ್ಲೇ ಜೋಪಡಿ ಹಾಕಿ, ಬದುಕು ನಡೆಸುತ್ತಿದ್ದಾರೆ. ಇಂತಹ ಕ್ರೂರ ಬದುಕು, ನಮ್ಮ ವೈರಿಗಳಿಗೂ ಬರಬಾರದು ಎನ್ನುತ್ತಾರೆ ಮೈಸೂರಿನ ಸಂತ್ರಸ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.