ಕಕ್ಕೇರಾಗೆ ಉಪ ಅಂಚೆ ಕಚೇರಿ ಭಾಗ್ಯ ಯಾವಾಗ?
ಜನಪ್ರತಿನಿ ಧಿಗಳ ವೈಫಲ್ಯಕ್ಕೆ ಬೇಸರಕಂಪ್ಯೂಟರ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಪರದಾಟ
Team Udayavani, Dec 23, 2019, 12:45 PM IST
ಬಾಲಪ್ಪ ಎಂ.ಕುಪ್ಪಿ
ಕಕ್ಕೇರಾ: ಹುಣಸಗಿ ಉಪ ಕಚೇರಿ ಅಧೀನದಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಕಕ್ಕೇರಾ ಅಂಚೆ ಶಾಖೆಗೆ ಮೇಲ್ದರ್ಜೆಗೇರುವ ಭಾಗ್ಯ ಇನ್ನು ಕೂಡಿ ಬಂದಿಲ್ಲ. ನಿಜಾಮನ ಆಡಳಿತದಲ್ಲಿಯೇ ಹೆಚ್ಚುವರಿ ವಿಭಾಗೀಯ ಉಪ ಅಂಚೆ ಕಚೇರಿ (ಇಡಿಎಸ್‌ಒ) ಇದಾಗಿತ್ತು. 2006ರಲ್ಲಿ ಡಿ-ಗ್ರೇಡ್ ಶಾಖೆಯನ್ನಾಗಿ ಪರಿವರ್ತನೆ ಮಾಡಲಾಯಿತು. ಅಲ್ಲದೇ ಪುರಸಭೆ ಹೊಂದಿದ್ದ ಪಟ್ಟಣಕ್ಕೆ ಉಪ ಕಚೇರಿ ಕಲ್ಪಿಸಬೇಕೆಂಬ ನಿಯಮವಿದ್ದರೂ ಹುಣಸಗಿ ವ್ಯಾಪ್ತಿಯಲ್ಲೇ ಸೇವೆ ಸಲ್ಲಿಸುವಂತಾಗಿದೆ.
ಈಗ ಹುಣಸಗಿ ತಾಲೂಕಿನಿಂದ ಕಕ್ಕೇರಾ ಪಟ್ಟಣ ವಿಂಗಡಣೆಯಾಗಿ ಸುರಪುರ ತಾಲೂಕಿಗೆ ಒಳಪಟ್ಟಿದೆ. ಆದರೂ ಅಂಚೆ ಸೇವೆ ಮಾತ್ರ ಹುಣಸಗಿ ಅಧೀನದಲ್ಲೇ ಇದೆ. ಪ್ರತಿನಿತ್ಯ ನೋಂದಾಯಿತವಾದ ಸುಮಾರು 80 ಪತ್ರಗಳು ಬರುತ್ತವೆ. 15 ಪತ್ರಗಳು ಹೊರಗೆ ಹೋಗುತ್ತವೆ. ಅಲ್ಲದೇ ವಿವಿಧ ಯೋಜನೆಯಡಿ 600 ಪಿಂಚಣಿದಾರರು ಉಳಿತಾಯ ಖಾತೆ ಮೂಲಕ ಹಣ ಪಡೆಯುತ್ತಿದ್ದರೆ, 500 ಪಿಂಚಣಿದಾರರು ಮನಿಆರ್ಡರ್ ಮೂಲಕ ಹಣ ಪಡೆಯುತ್ತಿದ್ದಾರೆ.
ಸುಮಾರು 50 ರಿಂದ 60 ಸಾವಿರ ರೂ. ವರೆಗೂ ಪ್ರತಿನಿತ್ಯ ವ್ಯವಹಾರ ನಡೆಯುತ್ತದೆ. ದಿನಕ್ಕೆ 15 ಸಾವಿರ ರೂ. ಗ್ರಾಹಕರಿಂದ ಹಣ ಸಂಗ್ರಹವಾಗುತ್ತದೆ. ಪಿಂಚಣಿದಾರರಿಗೆ ಹಣದ ಕೊರತೆ ಇದ್ದಾಗ ಹುಣಸಗಿ ಉಪ ಕಚೇರಿಯಿಂದ ಹಣ ತಂದು ಗ್ರಾಹಕರಿಗೆ ವಿತರಿಸುವ ಸಮಸ್ಯೆ ಆಗಾಗ ಎದುರಾಗುತ್ತದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
400 ಜನರು ಐಪಿಪಿಬಿ (ಭಾರತೀಯ ಅಂಚೆ ಪಾವತಿ ಬ್ಯಾಂಕ್) ಉಳಿತಾಯ ಖಾತೆ ತೆರೆದಿದ್ದಾರೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ 160 ಹೆಣ್ಣು ಮಕ್ಕಳು ಖಾತೆ ಹೊಂದಿದ್ದಾರೆ. 150 ಜನರ (ಆರ್‌ಡಿ) ಮರುಕಳಿಸುವ ಠೇವಣಿ ಇದೆ. 60 ಜನ ಗ್ರಾಮೀಣ ಅಂಚೆ ಜೀವೆ ವಿಮೆ ಮಾಡಿಸಿದ್ದಾರೆ. ಆದಾಗ್ಯೂ ಉಪ ಕಚೇರಿ ಕಲ್ಪಿಸುವುದು ಅವಶ್ಯಕ ಎನ್ನುತ್ತಾರೆ ಜನರು.
ಇಲ್ಲದ ಸೌಲಭ್ಯ: ಮಾಹಿತಿ ಹಕ್ಕು ಕೇಳುವ ಗ್ರಾಹಕರಿಗೆ ಪೋಸ್ಟಲ್ ಆರ್ಡರ್ ಸೌಲಭ್ಯ, ಎನ್ ಎಸ್‌ಸಿ (ರಾಷ್ಟ್ರೀಯ ಉಳಿತಾಯ ಪತ್ರ), ಎಂಆಯ್ ಎಸ್(ತಿಂಗಳ ಉಳಿತಾಯ ಪತ್ರ), ಉದ್ಯೋಗಕ್ಕಾಗಿ ಆನ್‌ಲೈನ್ ಅರ್ಜಿ ಹಾಕುವ ಅಭ್ಯರ್ಥಿಗಳಿಗೆ ಚಲನ್ ತುಂಬುವ ಸೌಲಭ್ಯ ಇಲ್ಲದೇ ಅಭ್ಯರ್ಥಿಗಳು ಪರದಾಡಬೇಕಿದೆ. ಕಂಪ್ಯೂಟರ್ ಹಾಗೂ ಆನ್‌ಲೈನ್ ವ್ಯವಸ್ಥೆ ಇಲ್ಲದೇ ದರ್ಪಣ ಯಂತ್ರದ ಮೂಲಕವೇ ಎಲ್ಲ ವ್ಯವಹಾರ ನಡೆಸುವ ಸಮಸ್ಯೆಯನ್ನು ಸಿಬ್ಬಂದಿ
ಎದುರಿಸುತ್ತಿದ್ದಾರೆ.
ಸಿಬ್ಬಂದಿ ವಿವರ: ಬಿಪಿಎಂ (ಬ್ರ್ಯಾಂಚ್ ಪೋಸ್ಟ್ ಮಾಸ್ಟರ್) ಹುದ್ದೆ-1, ಜಿಡಿಎಸ್(ಗ್ರಾಮೀಣ ಡಾಕ್ ಸೇವಕ) ಹುದ್ದೆ-1, ಇಡಿಎಂಸಿ (ಎಡಿಷನಲ್ ಮೇಲ್ ಬದಲಾವಣೆ) ಹುದ್ದೆ-1 ಸೇರಿದಂತೆ ಒಟ್ಟು ಮೂರು ಜನ ಸೇವೆ ಸಲ್ಲಿಸುತ್ತಿದ್ದು, ಸಿಬ್ಬಂದಿ ಕೊರತೆ ಇಲ್ಲ. ಸುಮಾರು ವರ್ಷಗಳಿಂದಲೂ ಶಾಖಾ ಕಚೇರಿ ಇರುವ ಇಲ್ಲಿಗೆ ಅಗತ್ಯ ಸಿಬ್ಬಂದಿ ಸೌಕರ್ಯದೊಂದಿಗೆ ಉಪ ಕಚೇರಿಯನ್ನಾಗಿಸಲು ಕಲಬುರಗಿ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಅಧಿಕಾರಿಗಳು ಮುತುವರ್ಜಿ ವಹಿಸಬೇಕಾಗಿದೆ.
ಹಳೆ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಂಚೆ ಶಾಖೆ ಕಚೇರಿ ನಡೆಸಿಕೊಂಡು ಬರಲಾಗುತ್ತಿದೆ. ಇದಕ್ಕಾಗಿ ಪುರಸಭೆಯಿಂದ ಅನುಮತಿ ನೀಡಲಾಗಿದೆ. ಗ್ರಾ.ಪಂ ಹೆಸರು ಬದಲಾಗಿ ಅಂಚೆ ಕಚೇರಿ ಎಂದು ಹೆಸರು ಬರೆಸಿಲ್ಲ.
ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವೈಫಲ್ಯದಿಂದ ಇಲ್ಲಿಗೆ ಪ್ರತ್ಯೇಕ ಉಪ ಅಂಚೆ ಕಚೇರಿ ವಿಳಂಬವಾಗಿದೆ. ಇದು ವಿಪರ್ಯಾಸದ ಸಂಗತಿ. ಈ ಹಿಂದೆಯೂ ಸಂಬಂಧಿಸಿದವರಿಗೆ ಮನವಿ ಮಾಡಲಾಗಿದೆ. ಜನಸಾಂದ್ರತೆ ಇರುವ ಪಟ್ಟಣಕ್ಕೆ ಕೂಡಲೇ ಉಪ ಕಚೇರಿ ನೀಡಬೇಕು.
ಬುಚ್ಚಪ್ಪ ನಾಯಕ,
ರೈತ ಸಂಘಟನೆ, ಜಿಲ್ಲಾ ಕಾರ್ಯದರ್ಶಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.