64 ಪುರಾತನ ಬಾವಿಗಳ ಪುನಶ್ಚೇತನ
•ಮುಂದಿನ ಬೇಸಿಗೆಗೆ ಈಗಲೇ ಸಿದ್ಧತೆ •ಮಹಾನಗರ ಪಾಲಿಕೆಯಿಂದ ಮಹತ್ತರ ಕಾರ್ಯ
Team Udayavani, Jun 13, 2019, 9:56 AM IST
ಕಲಬುರಗಿ: ಹೀರಾಪುರ ಬಡಾವಣೆಯಲ್ಲಿ ಬಾವಿ ಸ್ವಚ್ಛಗೊಳಿಸುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿ.
ರಂಗಪ್ಪ ಗಧಾರ
ಕಲಬುರಗಿ: ಮಳೆ ಕೊರತೆ ಮತ್ತು ನಿರಂತರ ರಣ ಬಿಸಿಲು ವಾತಾವರಣವಿರುವ ಜಿಲ್ಲೆಯಲ್ಲಿ ಪ್ರತಿ ವರ್ಷವೂ ನೀರಿನ ಅಭಾವ ತಲೆದೋರುತ್ತಲೇ ಇದೆ. ಬೇಸಿಗೆಯಲ್ಲಿ ನೀರು ಪೂರೈಸಲು ಆಡಳಿತ ಯಂತ್ರ ಅನೇಕ ರೀತಿಯಲ್ಲಿ ತಾಪತ್ರಯ ಪಡುತ್ತಿದೆ. ಹೀಗಾಗಿ ಮುಂದಿನ ಬೇಸಿಗೆ ಸವಾಲು ಎದುರಿಸಲು ಮಹಾನಗರ ಪಾಲಿಕೆ ಈಗಲೇ ಸನ್ನದ್ಧವಾಗುತ್ತಿದ್ದು, ನಗರದಲ್ಲಿರುವ ಐತಿಹಾಸಿಕ, ಪುರಾತನ ಬಾವಿಗಳನ್ನು ಪುನರುಜ್ಜೀವನಗೊಳಿಸುವ ಮಹತ್ತರ ಕಾರ್ಯಕ್ಕೆ ಮುಂದಾಗಿದೆ.
ಜಿಲ್ಲೆಯನ್ನು ಸತತ ಮೂರು ವರ್ಷಗಳಿಂದ ಬರಗಾಲ ಕಾಡುತ್ತಿದೆ. ಅದರಲ್ಲೂ ಕಳೆದ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಸಂಪೂರ್ಣ ಕೈಕೊಟ್ಟಿರುವುದಿಂದ ಸಾರ್ವಜನಿಕರು ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶ ಮಾತ್ರವಲ್ಲದೇ ಮಹಾನಗರದ ನಾಗರಿಕರು ನೀರಿಗಾಗಿ ಅನೇಕ ರೀತಿಯಲ್ಲಿ ಪಡಿಪಾಟಲು ಪಡುತ್ತಿದ್ದಾರೆ. ಜನರಿಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಬೆವರು ಸುರಿಸುತ್ತಿದ್ದಾರೆ.
ಜಲ ಮೂಲಗಳೇ ಇಲ್ಲದ ಕಾರಣ ಪ್ರಸಕ್ತ ಮುಂಗಾರು ಆರಂಭಗೊಂಡಿದ್ದರೂ ನೀರಿನ ಬವಣೆ ನೀಗಿಲ್ಲ. ನಗರದ ವಿವಿಧ ಬಡಾವಣೆಗಳಿಗೆ ನಿರಂತರವಾಗಿ ಪ್ರತಿನಿತ್ಯ 30ಕ್ಕೂ ಅಧಿಕ ಟ್ರಿಪ್ ಟ್ಯಾಂಕರ್ ಮೂಲಕವೇ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ಮುಂದಿನ ಬೇಸಿಗೆಯಲ್ಲಿ ಇಂತಹ ತೊಂದರೆ ಎದುರಾಗಬಾರದು. ಕನಿಷ್ಟ ದಿನ ಬಳಕೆಗಾದರೂ ನೀರು ಸಿಕ್ಕರೆ ಸಾಕು ಎನ್ನುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಪಾಳು ಬಿದ್ದ ಬಾವಿಗಳಿಗೆ ಕಾಯಕಲ್ಪ ಕಲ್ಪಿಸಲು ತೀರ್ಮಾನಿಸಿದ್ದಾರೆ.
64 ಬಾವಿಗಳ ಗುರುತು: ನಗರದಲ್ಲಿ ನೀರಿನ ಸೆಲೆ ಹೊಂದಿರುವ ಹಲವು ಪುರಾತನ ಬಾವಿಗಳಿವೆ. ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವುಗಳ ಸ್ವಚ್ಛ ಕಾರ್ಯಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಬಾವಿಗಳ ಪುನರುಜ್ಜೀವನಕ್ಕೆಂದು ಮಹಾನಗರ ಪಾಲಿಕೆಯು 64 ಬಾವಿಗಳನ್ನು ಗುರುತಿಸಿ ಪಟ್ಟಿಯನ್ನು ಮಾಡಿದೆ.
ನಗರಾದ್ಯಂತ ಇರುವ ಬಾವಿಗಳನ್ನು ಮೂರು ವಲಯಗಳಾಗಿ ಪಟ್ಟಿ ತಯಾರಿಸಲಾಗಿದೆ. ಇವುಗಳಲ್ಲಿ ಹಲವು ಕಸದ ರಾಶಿ ತುಂಬಿ ಹಾಳಾಗಿದ್ದರೆ, ಕೆಲವು ಬಾವಿಗಳಲ್ಲಿ ನೀರಿರುವುದರಿಂದ ಅದರ ಬಳಕೆಯೂ ಆಗುತ್ತಿದೆ. ಗುರುತಿಸಿರುವ ಬಾವಿಗಳಲ್ಲಿ ಮಾಡಬೇಕಾದ ಕಾರ್ಯವನ್ನೂ ಸಿದ್ಧಪಡಿಸಿಕೊಳ್ಳಲಾಗಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಈಗಾಗಲೇ ಹೀರಾಪುರ ಬಡಾವಣೆಯ ಶಂಕಲಿಂಗ ಬಾವಿ ಸೇರಿದಂತೆ ಮೂರು ಬಾವಿಗಳನ್ನು ಪಾಲಿಕೆ ನೌಕರರು ಸ್ವಚ್ಛಗೊಳಿಸಿದ್ದಾರೆ. ಬಾವಿಗಳಲ್ಲಿ ಸಂಗ್ರಹವಾಗಿದ್ದ ಅಶುದ್ಧ ನೀರು, ಬೇಕಾಬಿಟ್ಟಿ ಎಸೆದ ಕಸದ ರಾಶಿ, ಬಾವಿಯಲ್ಲಿ ತುಂಬಿದ್ದ ಹೂಳನ್ನು ಯಂತ್ರೋಪಕರಣ ಬಳಸಿ ಹೊರ ತೆಗೆಯಲಾಗಿದೆ. ನೀರಿನ ಝರಿ ಬಂಡೆಗಳ ಸಂದಿಯಿಂದ ಕೆಲವೆಡೆ ಚಿಮ್ಮಿದರೆ, ಮತ್ತೆ ಕೆಲವೆಡೆ ನೀರು ಬಸಿಯುತ್ತಿರುವುದು, ಸುತ್ತ-ಮುತ್ತಲಿನ ನಿವಾಸಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.
ಬಳಕೆಯಲ್ಲಿ 15 ಬಾವಿಗಳು: ಪಾಲಿಕೆಯವರು ಗುರುತಿಸಿರುವ 64 ಬಾವಿಗಳ ಪೈಕಿ 15 ಬಾವಿಗಳಲ್ಲಿ ನೀರು ಇದ್ದು, ದಿನವೂ ಬಳಕೆಯಾಗುತ್ತಿದೆ. ಇದರಲ್ಲಿ ಹೀರಾಪುರದಲ್ಲೇ ಐತಿಹಾಸಿಕ 12 ಬಾವಿಗಳಿದ್ದು, ಐದು ಬಾವಿಗಳು ಉಪಯೋಗದಲ್ಲಿವೆ. ಜತೆಗೆ ರಾಜಪೂರ, ಗುಬ್ಬಿ ಕಾಲೋನಿ, ತಾರ್‌ಫೈಲ್, ದತ್ತ ನಗರ, ನಯಾ ಮೊಹಲ್ಲಾ ಮತ್ತು ಕೋರಂಟಿ ಹನುಮಾನ ಮಂದಿರ ಎದುರುಗಡೆ ಇರುವ ಬಾವಿಗಳಲ್ಲಿ ಜೀವ ಜಲವಿದೆ. ಈ ಬಾವಿಗಳಲ್ಲೂ ಹೂಳೆತ್ತುವ ಕಾರ್ಯ ಮಾಡಿ ಸಂರಕ್ಷಿಸಲು ನಿರ್ಧರಿಸಲಾಗಿದೆ.
4 ಕೋಟಿ ರೂ. ವೆಚ್ಚ: ಮಹಾನಗರ ಪಾಲಿಕೆ ಗುರುತಿಸಿರುವ ಎಲ್ಲ 64 ಬಾವಿಗಳ ಸ್ವಚ್ಛತೆಗೆ 4 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಕಸದ ತ್ಯಾಜ್ಯ ಮತ್ತು ಹೂಳೆತ್ತುವ ಯಂತ್ರೋಪಕರಣಗಳಿಗಾಗಿ ಅನುದಾನ ಬೇಕಾಗುತ್ತದೆ. ಹೀಗಾಗಿ ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲು ಪಾಲಿಕೆ ತೀರ್ಮಾನಿಸಿದೆ. ಈಗಾಗಲೇ ಪಾಲಿಕೆಯು ಸ್ವಚ್ಛಗೊಳಿಸಿದ ಬಾವಿಗಳಲ್ಲಿ ನೀರು ಸಂಗ್ರಹವಾಗಿದೆ. ಸರ್ಕಾರದಿಂದ ಅನುದಾನ ಬಂದು ಎಲ್ಲ ಬಾವಿಗಳು ಶುದ್ಧಗೊಂಡರೆ ನೀರಿನ ಕೊರತೆ ನೀಗುವ ವಿಶ್ವಾಸವನ್ನು ಪಾಲಿಕೆ ಅಧಿಕಾರಿಗಳು ಹೊಂದಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ಕೊರತೆ ಕಡಿಮೆ ಮಾಡಲು 64 ಬಾವಿಗಳನ್ನು ಗುರುತಿಸಿ ಪುನರುಜ್ಜೀವನಗೊಳಿಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳೊಂದಿಗೂ ಚರ್ಚಿಸಲಾಗಿದೆ. ಎಲ್ಲ ಬಾವಿಗಳ ಸ್ವಚ್ಛತೆಗೆ ಅಂದಾಜು 4 ಕೋಟಿ ರೂ. ವೆಚ್ಚವಾಗಲಿದೆ. ಆದರೆ, ಇದು ಮಹಾನಗರ ಪಾಲಿಕೆಗೆ ದೊಡ್ಡ ಮೊತ್ತವಾಗಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.
•ಬಿ. ಫೌಜಿಯಾ ತರನ್ನುಮ್,
ಆಯಕ್ತರು, ಮಹಾನಗರ ಪಾಲಿಕೆ, ಕಲಬುರಗಿ
20 ವರ್ಷಗಳ ಹಿಂದೆ ಶಂಕಲಿಂಗ ಬಾವಿ ತುಂಬಾ ನೀರಿತ್ತು. ಬಾವಿಯಲ್ಲಿ ಸುಮಾರು 70 ಮೆಟ್ಟಿಲುಗಳಿದ್ದು, ಬರೀ ನಾಲ್ಕು ಮೆಟ್ಟಿಲು ಇಳಿದರೆ ನೀರು ಸಿಗುತ್ತಿತ್ತು. ಇದೇ ಬಾವಿ ನೀರನ್ನು ಸ್ನಾನ ಮಾಡಲು, ಬಟ್ಟೆ ತೊಳೆಯಲು ಬಳಸುತ್ತಿದ್ದೆವು. ಆಗ ನೀರಿಗಾಗಿ ಬಾವಿ ಸುತ್ತ ಜನ ಸೇರುತ್ತಿದ್ದೆವು. ನಾನು ಇದೇ ಬಾವಿ ನೀರು ಬಳಸಿ ಮನೆ ಕಟ್ಟಿದ್ದೇನೆ. ಮನೆ ಬಾಗಿಲಿಗೆ ನಳದ ನೀರು ಬಂದ ಬಳಿಕ ಬಾವಿ ನೀರು ಯಾರೂ ಬಳಸುತ್ತಿಲ್ಲ. ಈಗ ಪಾಲಿಕೆಯವರು ಬಾವಿ ಸ್ವಚ್ಛಗೊಳಿಸಿ ಒಳ್ಳೆ ಕೆಲಸ ಮಾಡಿದ್ದಾರೆ.
•ಗುಂಡಮ್ಮ ಹೊಸಮನಿ,
ಹಿರಿಯ ನಿವಾಸಿ, ಹೀರಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.