ಉಪ ಕದನದಿಂದ ರತ್ನಪ್ರಭಾ ದೂರ
ಉಮೇಶ ಜಾಧವ್ ಪುತ್ರನಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನ?
Team Udayavani, May 17, 2019, 10:03 AM IST
ಕಲಬುರಗಿ: ಲೋಕಸಭಾ ಚುನಾವಣಾ ಸಮಯದಲ್ಲಿ ಬಿಜೆಪಿ ಸೇರಿ ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿದ್ದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಯಿಂದ ದೂರವೇ ಉಳಿದಿದ್ದಾರೆ.
ರಾಜ್ಯದ ಉನ್ನತ ಹುದ್ದೆಯಲ್ಲಿದ್ದ ರತ್ನಪ್ರಭಾ ರಾಜಕೀಯ ಪ್ರವೇಶಿಸುವ ಮೂಲಕ ಗಮನ ಸೆಳೆದಿದ್ದರು. ವಿಶೇಷವೆಂದರೆ ಅವರು ರಾಜಕೀಯಕ್ಕೆ ಬರುವ ಮುನ್ನವೇ ಕಲಬುರಗಿ ಇಲ್ಲವೇ ಇತರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಲಿದ್ದಾರೆ ಎಂಬ ಪುಕಾರು ಜೋರಾಗಿಯೇ ಎದ್ದಿತ್ತು. ಕೊನೆಗೆ ಕಲಬುರಗಿಯಲ್ಲಿ ಡಾ| ಉಮೇಶ ಜಾಧವ್ ನಾಮಪತ್ರ ಸಲ್ಲಿಕೆ ದಿನ ಮಾಜಿ ಸಿಎಂ ಯಡಿಯೂರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು.
ಅನಂತರದಲ್ಲಿ ಜಾಧವ್ ಪರ ಅಬ್ಬರದ ಪ್ರಚಾರದಲ್ಲಿ ರತ್ನಪ್ರಭಾ ತೊಡಗಿಸಿಕೊಂಡಿದ್ದರು. ದಲಿತ ಸಮುದಾಯಕ್ಕೆ ಸೇರಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಜಾತಿ ಅಸ್ತ್ರವಾಗಿಯೂ ಅವರನ್ನು ಬಿಜೆಪಿ ಬಳಸಿಕೊಂಡಿತ್ತು. ಮೇಲಾಗಿ ರತ್ನಪ್ರಭಾ ಕೂಡ ಖರ್ಗೆ ಅವರನ್ನು ನೇರವಾಗಿ ಟೀಕಿಸುವ ಮೂಲಕ ಚುನಾವಣಾ ಕಾವು ಹೆಚ್ಚಿಸಿದ್ದರು.
ನಿವೃತ್ತಿ ನಂತರ ಖಾಲಿ ಇರುವ ಬದಲು ಜನ ಸೇವೆ ಮಾಡಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಮೆಚ್ಚಿ ರಾಜಕೀಯಕ್ಕೆ ಬಂದಿರುವುದಾಗಿ ಸ್ವತಃ ಅವರೇ ಹೇಳಿಕೊಂಡಿದ್ದರು. ಆದರೆ, ಲೋಕಸಭಾ ಚುನಾವಣೆ ಬೆನ್ನಲ್ಲೇ ಚಿಂಚೋಳಿ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದರೂ ಇದುವರೆಗೆ ಅವರು ಎಲ್ಲೂ ಕಾಣಿಸಿಕೊಂಡಿಲ್ಲ.
ಈ ನಡುವೆ ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲೂ ಕೆ.ರತ್ನಪ್ರಭಾ ಅವರ ಹೆಸರು ಕೇಳಿ ಬಂದಿತ್ತು. ನಾನೂ ಚಿಂಚೋಳಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂಬುದಾಗಿ ಹೇಳಿಕೊಂಡಿದ್ದರು. ಆದರೆ ಡಾ| ಉಮೇಶ ಜಾಧವ್ ಪುತ್ರನಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನದಿಂದ ದೂರ ಉಳಿದರೋ? ಇಲ್ಲವೇ ಬಿಜೆಪಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂಬುದು ಸ್ಪಷ್ಟವಾಗಬೇಕಿದೆ.
ಜಿದ್ದಿಗೆ ಬಿದ್ದವರಂತೆ ಪ್ರಚಾರ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅಳಿವು-ಉಳಿವು ಮೇ 19ರಂದು ನಡೆಯುವ ಚಿಂಚೋಳಿ ಮತ್ತು ಕುಂದಗೋಳ ಉಪಚುನಾವಣೆ ಫಲಿತಾಂಶದ ಮೇಲೆ ನಿರ್ಣಯವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೀಗಾಗಿ ಎರಡು ಕ್ಷೇತ್ರಗಳ ಗೆಲುವಿಗೆ ಬಿಜೆಪಿ ಮತ್ತು ಮೈತ್ರಿ ಪಕ್ಷದ ನಾಯಕರು ಇನ್ನಿಲ್ಲದ ತಂತ್ರ, ಪ್ರತಿತಂತ್ರ ರೂಪಿಸುತ್ತಿದ್ದಾರೆ.
ಚಿಂಚೋಳಿಯಲ್ಲಿ ವೀರಶೈವ-ಲಿಂಗಾಯತರ ನಂತರ ಪರಿಶಿಷ್ಟ ಮತದಾರರ ಪಾತ್ರವೇ ನಿರ್ಣಾಯಕವಾಗಿದೆ. ಶೋಷಿತ ಸಮುದಾಯದ ಎಸ್‌ಟಿ, ಎಸ್‌ಟಿ ಹಾಗೂ ಲಂಬಾಣಿ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ. ಜತೆಗೆ ತೆಲಂಗಾಣ ಗಡಿ ಭಾಗಕ್ಕೆ ಚಿಂಚೋಳಿ ಹೊಂದಿಕೊಂಡಿದ್ದರಿಂದ ಕ್ಷೇತ್ರದಲ್ಲಿ ತೆಲುಗು ಭಾಷಿಕರ ಮತಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ. ಚಿಂಚೋಳಿ ತಾಲೂಕಿನ ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ತೆಲಂಗಾಣದ ವಿಕಾರಬಾದ್ ಹಾಗೂ ಸಂಗಾರೆಡ್ಡಿ ಜಿಲ್ಲೆಗಳಿದ್ದು, ಅಲ್ಲಿ ಚಿಂಚೋಳಿ ಮತಕ್ಷೇತ್ರದ ಜನತೆ ನೆಲೆಸಿದ್ದಾರೆ.
ವಿಕಾರಬಾದ್‌ನ ತಾಂಡೂರು ಒಂದರಲ್ಲೇ ಮೂರು ಸಾವಿರಕ್ಕೂ ಅಧಿಕ ಜನ ಚಿಂಚೋಳಿ ಕ್ಷೇತ್ರದ ಮತದಾರರಿದ್ದಾರೆ. ಅಲ್ಲದೇ, ಚಿಂಚೋಳಿಯ ಕೊಂಚವರಂ ವ್ಯಾಪ್ತಿಯಲ್ಲಿ ತೆಲುಗು ಭಾಷಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಚಿಂಚೋಳಿ ಮತಕ್ಷೇತ್ರದಲ್ಲಿ ಸುಮಾರು 15 ಸಾವಿರದಷ್ಟು ಮತದಾರರು ತೆಲುಗು ಭಾಷಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಇಲ್ಲಿ ಜಾತಿ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ತೆಲುಗು ಭಾಷಿಕರನ್ನು ಸೆಳೆಯುವ ಯತ್ನ ಎರಡೂ ಪಕ್ಷಗಳಿಂದಲೂ ನಡೆಯುತ್ತಿದೆ.
ಗಡಿಯಾಚೆ ಬಿಜೆಪಿ ಸಮಾವೇಶ: ತೆಲುಗು ಭಾಷಿಕರ ಮೇಲೆ ದೃಷ್ಟಿ ನೆಟ್ಟು ಬಿಜೆಪಿ ಬುಧವಾರ ಗಡಿಯಾಚೆಯ ತಾಂಡೂರಿನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿತ್ತು. ಬಿಜೆಪಿ ರಾಜಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಅಲ್ಲದೇ, ಜನತೆಯನ್ನು ಸೆಳೆಯಲೆಂದು ಹೈದ್ರಾಬಾದ್‌ನಿಂದ ತೆಲುಗು ಹಾಸ್ಯ ನಟ ಬಾಬು ಮೋಹನ್ ಅವರನ್ನು ಕರೆಸಲಾಗಿತ್ತು.
ಆದರೆ, ಅದೇ ಹೈದ್ರಾಬಾದ್‌ನವರೇ ಆದ ತೆಲುಗು ಭಾಷಿಕರೂ ಆದ ಕೆ. ರತ್ನಪ್ರಭಾ ತಾಂಡೂರು ಸಮಾವೇಶದಿಂದಲೂ ದೂರ ಉಳಿದಿದ್ದರು. ಹೀಗಾಗಿ ಖರ್ಗೆ ವಿರುದ್ಧದ ಹೋರಾಟಕ್ಕೆ ಮಾತ್ರ ರತ್ನಪ್ರಭಾ ಸೀಮಿತವಾದರೋ ಅಥವಾ ಬಿಜೆಪಿ ನಾಯಕರು ಅವರನ್ನು ನಿರ್ಲಕ್ಷ್ಯಿಸುತ್ತಿದ್ದಾರೆಯೇ ಎಂಬುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕರೆದಿಲ್ಲ.. ಬಂದಿಲ್ಲ…
ನಾನು ಕೇವಲ ಕಲಬುರಗಿಗೆ ಸೀಮಿತವಾಗಿ ಬಿಜೆಪಿ ಸೇರ್ಪಡೆ ಗೊಂಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಹೊರತಾಗಿಯೂ ಇತರೆಡೆ ಪ್ರಚಾರ ಮಾಡಿದ್ದೆ. ಚಿಂಚೋಳಿ ಹಾಗೂ ಕುಂದಗೋಳ ಉಪಚುನಾವಣೆಗೆ ಬಿಜೆಪಿ ನಾಯಕರ್ಯಾರು ಕರೆದಿಲ್ಲ. ನನಗೂ ಬರಲು ಆಗಿಲ್ಲ.
•ಕೆ.ರತ್ನಪ್ರಭಾ,
ಬಿಜೆಪಿ ನಾಯಕಿ
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.