ಚಿಂಚೋಳಿ ಶುಗರ್ಸ್: ಸಾಲ ಮನ್ನಾದಿಂದ ರೈತ ವಂಚಿತ
Team Udayavani, May 13, 2019, 10:07 AM IST
ಕಲಬುರಗಿ: ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಸ್ಥಾಪನೆಯಾಗಿ ರೈತರ ಕಬ್ಬು ನುರಿಸಬೇಕಿದ್ದ ಚಿಂಚೋಳಿ ಶುಗರ್ಸ್ ಮಿಲ್ಸ್ ಲಿ. ಕಾರ್ಖಾನೆ ಭೂಮಿಯ ಮೇಲೆ ಸಾಲ ಎತ್ತಿದ್ದಲ್ಲದೇ ಕಾರ್ಖಾನೆ ವ್ಯಾಪ್ತಿಯ ಹಲವು ಹಳ್ಳಿಗಳ ರೈತರ ಹೆಸರಿನ ಮೇಲೂ ಸಾಲ ಎತ್ತಿ ಹಾಕಿರುವುದು ಬಯಲಿಗೆ ಬಂದಿದೆ.
2012ರಲ್ಲಿ ರೈತರಿಗೆ ಕಬ್ಬಿನ ಬೀಜ ಹಾಗೂ ರಸಗೊಬ್ಬರ ನೀಡಲಾಯಿತು. ಈ ಸಂದರ್ಭದಲ್ಲಿ ಕೆಲವು ಕಾಗದ ಪತ್ರಗಳ ಮೇಲೆ ಸಹಿ ಹಾಕಿಸಿಕೊಳ್ಳಲಾಯಿತು. ರೈತರು ಕಬ್ಬು ಬೆಳೆದರು. ಆದರೆ ಮುಂದೆ ಕಟಾವು ಮಾಡಿದಾಗ ಕಾರ್ಖಾನೆ ಶುರುವಾಗಲೇ ಇಲ್ಲ. ಬೇರೆ ಕಡೆಯೂ ಕಬ್ಬು ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ರೈತರು ಕಬ್ಬಿಗೆ ಬೆಂಕಿ ಹಚ್ಚಿದರು. ಇದಾದ ಬಳಿಕ ರೈತರಿಗೆ ಕೆಲ ಕಾಗದಗಳ ಮೇಲೆ ಸಹಿ ಹಾಕಿಕೊಂಡು ಅಮಾಯಕ ರೈತರ ಸಾಲ ಎತ್ತಿ ಹಾಕಿರುವುದು ಗಮನಕ್ಕೆ ಬಂತು.
ಜಿಲ್ಲೆಯ ಆಳಂದ ಸಕ್ಕರೆ ಕಾರ್ಖಾನೆಯವರು ರೈತರ ಹೆಸರಿನ ಸಾಲ ಎತ್ತಿ ತದನಂತರ ಸಾಲ ಮರುಪಾವತಿ ಮಾಡದೇ ಇದ್ದಾಗ ಬ್ಯಾಂಕ್‌ನವರು ನೋಟಿಸ್ ನೀಡಿದ ನಂತರ ಪ್ರಕರಣ ಬಯಲಿಗೆ ಬಂದಿದ್ದರೆ, ಇಲ್ಲಿ ರೈತರು ಸಾಲ ಪಡೆಯಲು ಸಹಕಾರಿ ಕೇಂದ್ರ ಬ್ಯಾಂಕ್‌ನ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸಾಲ ಪಡೆಯಲು ಹೋದಾಗ ಗಮನಕ್ಕೆ ಬಂದಿದೆ. ತದನಂತರ ತಮ್ಮ ಹೆಸರಿನ ಮೇಲೆ ಚಿಂಚೋಳಿ ಸಕ್ಕರೆ ಕಾರ್ಖಾನೆಯವರು ಸಾಲ ಎತ್ತಿದ್ದಾರೆ. ಇದರಿಂದ ತುಂಬಾ ಅನ್ಯಾಯವಾಗಿದೆ. ಅಲ್ಲದೇ ಸಾಲ ಮನ್ನಾದಿಂದ ವಂಚಿತರಾಗುವಂತಾಗಿದೆ ಎಂದು ಚಿಂಚೋಳಿ ಕ್ಷೇತ್ರದ ಹಿಂದಿನ ಶಾಸಕರಾದ ಸುನೀಲ ವಲ್ಯಾಪುರೆ ಹಾಗೂ ಡಾ| ಉಮೇಶ ಜಾಧವ ಗಮನಕ್ಕೆ ತಂದಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ನ್ಯಾಯಾಲಯ ಮೆಟ್ಟಿಲೇರಿದ ರೈತರು: ಜನಪ್ರತಿನಿಧಿಗಳಿಂದ ಉತ್ತಮ ಸ್ಪಂದನೆ ಸಿಗದೇ ಇದ್ದಾಗ ರೈತರೇ ಪೊಲೀಸ ಠಾಣೆಗೆ ಹೋದರು. ಆದರೆ ಠಾಣೆಯಲ್ಲಿ ದೂರು ಸ್ವೀಕರಿಸದೇ ಇದ್ದಾಗ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತದನಂತರ ನ್ಯಾಯಾಲಯದ ನಿರ್ದೇಶನ ಮೇರೆಗೆ ಕೊಂಚಾವರಂ ಠಾಣೆಯಲ್ಲಿ ಮೊಕದ್ದಮೆ ದಾಖಲಾಯಿತು. ನ್ಯಾಯಾಲಯವು ಈ ಪ್ರಕರಣ 420 ಎಂದು ಪರಿಗಣಿಸಿ ಆದೇಶ ನೀಡಿತು. ಆದರೆ ರೈತರೀಗ ತಮ್ಮ ಹೆಸರಿನ ಸಾಲ ಎತ್ತಿರುವುದಕ್ಕೆ ಸೂಕ್ತ ಕ್ರಮಕ್ಕಾಗಿ ಹಾಗೂ ತದನಂತರ ಸಾಲ ಮನ್ನಾದಿಂದ ವಂಚಿತರಾಗಿದ್ದಕ್ಕೆ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ. ಚಿಂಚೋಳಿ ತಾಲೂಕಿನ ಶಾದೀಪುರ ಗ್ರಾಮದ ರೈತರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ರಾಜೇಂದ್ರ ಪೂಜಾರಿ ಹಾಗೂ ಇತರ ರೈತರು ನ್ಯಾಯದ ಮೆಟ್ಟಿಲು ಹತ್ತಿದ್ದಾರೆ.
ಶಾದೀಪುರ ಗ್ರಾಮದ ರೈತರೊಬ್ಬರೇ ಹೀಗೆ ಅನ್ಯಾಯಕ್ಕೆ ಒಳಗಾಗಿಲ್ಲ. ಇದೇ ತೆರನಾಗಿ ಹಲವು ರೈತರು ವಂಚನೆಗೆ ಒಳಗಾಗಿದ್ದಾರೆ. ಅತ್ತ ಸಕ್ಕರೆ ಕಾರ್ಖಾನೆಯೂ ಪ್ರಾರಂಭವಾಗಿಲ್ಲ. ಮತ್ತೂಂದೆಡೆ ತಮ್ಮ ಹೆಸರಿನ ಸಾಲ ಎತ್ತಲಾಗಿದೆ. ಹೀಗಾಗಿ ತಮ್ಮ ಬದುಕು ಅತ್ಯಂತ ದುಸ್ಥರವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ ಅನ್ನದಾತರು.
ಇದು ಅತ್ಯಂತ ದೊಡ್ಡಮಟ್ಟದ ವಂಚನೆ ಪ್ರಕರಣವಾಗಿದ್ದರಿಂದ ಉನ್ನತ ಮಟ್ಟದ ತನಿಖೆ ನಡೆದಾಗ ನಿಖರವಾಗಿ ಎಷ್ಟು ರೈತರ ಮೇಲೆ ಎಷ್ಟು ಸಾಲ ಎತ್ತಿ ಹಾಕಿರುವುದು ಬಯಲಿಗೆ ಬರುತ್ತದೆ. ರೈತರ ಹೋರಾಟಕ್ಕೆ ಸೂಕ್ತ ಬೆಂಬಲ ಸಿಕ್ತಾ ಇಲ್ಲ. ಹೀಗಾಗಿ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತಾಗಿದೆ. ಇದಕ್ಕೆಲ್ಲ ರಾಜಕೀಯ ಇಚ್ಚಾಶಕ್ತಿ ಬೇಕು ಎನ್ನುತ್ತಿದ್ದಾರೆ ರೈತರು.
ತಮ್ಮ ಹೆಸರಿನ ಮೇಲೆ ಸಾಲ ಎತ್ತಿ ಹಾಕಿದ್ದಲ್ಲದೇ ರಾಜ್ಯ ಸರ್ಕಾರದ 50 ಸಾವಿರ ರೂ. ಹಾಗೂ ಈಗ ಒಂದು ಲಕ್ಷ ರೂ. ಸಾಲ ಮನ್ನಾದ ಸೌಲಭ್ಯದಿಂದಲೂ ವಂಚಿತರಾಗುವಂತಾಗಿದೆ. ಈ ನಿಟ್ಟಿನಲ್ಲಿ ನ್ಯಾಯ ಪಡೆಯಲು ನ್ಯಾಯಾಲಯ ಕಟ್ಟೆ ಹತ್ತಲಾಗಿದೆ. ಸಕ್ಕರೆ ಕಾರ್ಖಾನೆಯವರು ತಮ್ಮ ಮೇಲೆ ನಡೆಸಿರುವ ವಂಚನೆ ಪ್ರಕರಣ ಕುರಿತಾಗಿ ಮಾಜಿ ಶಾಸಕರಾದ ಸುನೀಲ ವಲ್ಯಾಪುರೆ ಹಾಗೂ ಡಾ| ಉಮೇಶ ಜಾಧವ ಗಮನಕ್ಕೂ ತಂದರೂ ಕ್ಯಾರೆ ಎಂದಿಲ್ಲ. ನಮಗೆ ಯಾರಿಂದಲೂ ಸ್ಪಂದನೆ ಸಿಗುತ್ತಿಲ್ಲ.
•ರಾಜೇಂದ್ರ ಪೂಜಾರಿ, ಶಾದಿಪುರ ರೈತ
ಹಣಮಂತರಾವ ಭೈರಾಮಡಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.