ಕಲಬುರಗಿಗೆ ಬರೋದಿಲ್ವೇ ಸಚಿವರು?
ಬಿಜೆಪಿ ಸರ್ಕಾರದಿಂದ ಜಿಲ್ಲೆಗೆ ಮತ್ತೂಂದು ಶಾಕ್ •ಭದ್ರವಿಲ್ಲದ ಬ್ಯಾರೇಜ್ ಗೇಟು: ಪೋಲಾಗುತ್ತಿದೆ ನೀರು
Team Udayavani, Aug 22, 2019, 10:04 AM IST
ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಕಬ್ಬಿನ ಗದ್ದೆಗೆ ನುಗ್ಗಿರುವ ನೀರು. (ಸಂಗ್ರಹ ಚಿತ್ರ)
ಕಲಬುರಗಿ: ಸಚಿವ ಸಂಪುಟದಲ್ಲಿ ಕಲಬುರಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡದೇ ಅನ್ಯಾಯ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ, ಇದೀಗ ಜಿಲ್ಲೆಯ ಪ್ರವಾಹ ಪ್ರದೇಶಗಳ ಪರಿಶೀಲನೆಗೆ ಸಚಿವರನ್ನೂ ನೇಮಿಸದೆ ಜನರ ಕೆಂಗಣ್ಣಿಗೆ ಗುರಿಯಾಗಿದೆ.
ಮಂಗಳವಾರ ಸಚಿವ ಸಂಪುಟ ರಚನೆಯಾಗಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿ ಅವಲೋಕನಕ್ಕೆ ಜಿಲ್ಲೆಗೆ ತಲಾ ಒಬ್ಬರಂತೆ ಸಚಿವರನ್ನು ನೇಮಿಸಲಾಗಿದೆ. 19 ಜಿಲ್ಲೆಗಳಿಗೆ ಒಟ್ಟು 15 ಜನ ನೂತನ ಸಚಿವರನ್ನು ನೇಮಿಸಿ ಪ್ರವಾಹದ ವಸ್ತು ಸ್ಥಿತಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ.
ಆದರೆ, ಭೀಮಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿ ಸಂಭವಿಸಿದ್ದರೂ ಸ್ಥಳ ಪರಿಶೀಲನೆ ಮತ್ತು ಸಂತ್ರಸ್ತರ ಸಮಸ್ಯೆ ಆಲಿಸಲು ಯಾರೊಬ್ಬರನ್ನು ನೇಮಿಸಿಲ್ಲ. ಜಿಲ್ಲೆಯಲ್ಲಿ ಬಿಜೆಪಿಯ ಐವರು ಶಾಸಕರನ್ನು ಗೆಲ್ಲಿಸಿದ್ದರೂ ಸಚಿವ ಸ್ಥಾನ ನೀಡದಿರುವ ಬಗ್ಗೆ ಈಗಾಗಲೇ ಜನರಲ್ಲಿ ಆಕ್ರೋಶ ಭುಗಿಲೆದ್ದಿದೆ.
ಇದರ ಬೆನ್ನಲ್ಲೇ ಜಿಲ್ಲೆಯ ಪ್ರವಾಹಗಳ ಪ್ರದೇಶಗಳಿಗೂ ಸಚಿವರನ್ನು ಕಳುಹಿಸದೆ ಬಿಜೆಪಿ ಸರ್ಕಾರ ಜಿಲ್ಲೆ ಬಗ್ಗೆ ನಿರ್ಲಕ್ಷ್ಯ ತೋರಲಾಗಿದೆ. ಜಿಲ್ಲೆಯ ಜನತೆಯನ್ನು ಸಂಪೂರ್ಣವಾಗಿ ವಂಚಿಸುತ್ತಿದೆ ಎನ್ನುವ ಆರೋಪಗಳು ವ್ಯಕ್ತವಾಗುತ್ತಿದೆ.
ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬರಗಾಲ ಇದ್ದು. ಈ ವರ್ಷವೂ ಸರಿಯಾಗಿ ಮಳೆಯಾಗಿಲ್ಲ. ಪಕ್ಕದ ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅನಿರೀಕ್ಷಿತವಾಗಿ ಪ್ರವಾಹ ಸಂಭವಿಸಿ, ಭೀಮಾ ನದಿ ಪಾತ್ರದ ಅಫಜಲಪುರ, ಚಿತ್ತಾಪುರ, ಕಲಬುರಗಿ, ಜೇವರ್ಗಿ ತಾಲೂಕಿನ ಜನತೆ ತೊಂದರೆಗೆ ಈಡಾಗಿದ್ದಾರೆ.
ಭೀಮಾ ನದಿ ಪ್ರವಾಹದಿಂದ ಉಂಟಾದ ಹಾನಿ ಬಗ್ಗೆ ಈಗಾಗಲೇ ಜಿಲ್ಲಾಡಳಿತ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪ್ರವಾಹದಿಂದ ಭೂ ಕುಸಿತ, ನೀರು ನುಗ್ಗಿ ಬೆಳೆ ಮತ್ತು ಆಸ್ತಿ-ಪಾಸ್ತಿ ನಷ್ಟವಾಗಿದೆ. ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ಇದನ್ನು ಸರಿಪಡಿಸಲು ಮತ್ತು ಜನತೆಗೆ ಮೂಲಭೂತ ಸೌಕರ್ಯ ಕಲ್ಪಿಸಲು 31.40 ಕೋಟಿ ರೂ.ಗಳಷ್ಟು ಅನುದಾನದ ಅವಶ್ಯಕತೆ ಇದೆ ಎಂದು ಖುದ್ದು ಜಿಲ್ಲಾಡಳಿತ ತನ್ನ ವರದಿಯಲ್ಲಿ ಸರ್ಕಾರಕ್ಕೆ ತಿಳಿಸಿದೆ.
ಇಷ್ಟಾದರೂ, ರಾಜ್ಯ ಸರ್ಕಾರ ಜಿಲ್ಲೆಯ ಪ್ರವಾಹ ಪ್ರದೇಶಗಳ ಪರಿಶೀಲನೆಗೆ ಸಚಿವರನ್ನು ಕಳುಹಿಸದೇ ಇರುವುದು ಎಷ್ಟು ಸರಿ? ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಲ್ಲದೇ, ಜಿಲ್ಲೆಯಲ್ಲಿ ಉಂಟಾದ ಪ್ರವಾಹ ಪೀಡಿತ ಸ್ಥಳಗಳಿಗೂ ಸಚಿವರನ್ನು ಕಳುಹಿಸದೆ ಬಿಜೆಪಿ ಸರ್ಕಾರ ಯಾಕೆ ಅನ್ಯಾಯ ಮಾಡುತ್ತಿದೆ ಎಂದು ಜಿಲ್ಲೆಯ ಜನತೆ ಪ್ರಶ್ನಿಸುತ್ತಿದ್ದಾರೆ.
ಹರಿದು ಹೋದ 40 ಟಿಎಂಸಿ ನೀರು: ವಾರ ಕಾಲ ಭೀಮಾ ನದಿ ಪ್ರವಾಹ ಉಂಟಾಗಿ ಬರೋಬ್ಬರಿ 40 ಟಿಎಂಸಿ ಅಡಿಗೂ ಅಧಿಕ ನೀರು ಹರಿದು ಹೋಗಿದೆ. ಪ್ರವಾಹ ನಿಂತು ಹೋದರೂ ಈಗಲೂ ಅಳಿದುಳಿರುವ ನೀರು ಭೀಮಾ ನದಿಯಿಂದ ಸುಮ್ಮನೇ ಹರಿದು ಹೋಗುತ್ತಿದೆ.
ಭೀಮಾ ನದಿಗೆ ಕಟ್ಟಲಾಗಿರುವ ಬ್ಯಾರೇಜ್‌ಗಳ ಗೇಟುಗಳು ಸರಿಯಾಗಿರದ ಕಾರಣ ನೀರನ್ನು ತಡೆದು ನಿಲ್ಲಿಸುತ್ತಿಲ್ಲ. 2017ರಲ್ಲಿ ಗೇಟುಗಳನ್ನು ಹಾಕಿದಾಗ ನೀರು ಬಂದ ವೇಳೆ ಗೇಟುಗಳನ್ನು ತೆರೆಯದ ಕಾರಣ ಕಲ್ಲೂರ-ಚಿನ್ಮಳ್ಳಿ ಸೇತುವೆ ಒಡೆದು ಹೋಗಿದ್ದರಿಂದ ಈಗ ಬ್ಯಾರೇಜ್ ಗೇಟುಗಳನ್ನು ಹಾಕಲು ಅಧಿಕಾರಿಗಳು ಮುಂದಾಗುತ್ತಿಲ್ಲ.
ನಮ್ಮಲ್ಲಿ ಮೊದಲೇ ಮಳೆ ಇಲ್ಲ. ಬ್ಯಾರೇಜ್‌ನಲ್ಲಿ ನೀರು ತುಂಬಿಸಿಟ್ಟರೆ ಅಂತರ್ಜಲ ಹೆಚ್ಚುತ್ತದೆಯಲ್ಲದೇ ಕುಡಿಯಲು ಹಾಗೂ ಬೆಳೆಗಳಿಗೆ ಅನುಕೂಲವಾಗುತ್ತದೆ ಎನ್ನುವುದು ರೈತರ ಕಳಕಳಿಯ ಮನವಿಯಾಗಿದೆ. ಆದರೆ, ಬಡ ರೈತನ ಮನವಿಗೆ ಯಾರೂ ಕಿವಿಗೊಡುತ್ತಿಲ್ಲ. ನೀರು ಹರಿದು ಪೋಲಾಗುವ ಬದಲು ತಡೆದು ನಿಲ್ಲಿಸಿದರೆ ಮಳೆ ಇಲ್ಲದೇ ಒಣಗಿ ಹೋಗುತ್ತಿರುವ ಬೆಳೆಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.
ಕಲಬುರಗಿ ಜಿಲ್ಲೆ ಜನತೆ ಪಾಲಿಗೆ ರಾಜ್ಯದಲ್ಲಿ ಸರ್ಕಾರ ಇದೆಯೋ, ಇಲ್ಲವೋ ಎನ್ನುವ ಸಂಶಯ ಕಾಡುತ್ತಿದೆ. ಅನಿರೀಕ್ಷಿತವಾಗಿ ಭೀಮಾ ನದಿಗೆ ಬಂದ ಪ್ರವಾಹದಿಂದ ಸಾಕಷ್ಟು ಬೆಳೆ, ಆಸ್ತಿ-ಪಾಸ್ತಿ ನಷ್ಟವಾಗಿದೆ. ಅದರಲ್ಲೂ ಅಫಜಲಪುರ ಕ್ಷೇತ್ರದಲ್ಲಿ ಪ್ರವಾಹದಿಂದ ಅತಿ ಹೆಚ್ಚು ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಜನತೆಗೆ ಸರ್ಕಾರದ ಸ್ಪಂದನೆ ಅಗತ್ಯವಾಗಿದೆ. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 25 ದಿನಗಳ ನಂತರ ಮಂತ್ರಿ ಮಂಡಲ ರಚಿಸಿದೆ. ಅಲ್ಲದೇ, ಜಿಲ್ಲಾ ಉಸ್ತುವಾರಿ ಸಚಿವರನ್ನೂ ನೇಮಿಸಿಲ್ಲ. ಈಗ ಜಿಲ್ಲೆಯ ಪ್ರವಾಹ ಪ್ರದೇಶಗಳ ಪರಿಶೀಲನೆಗೆ ಬೇರೆ ಸಚಿವರನ್ನೂ ಕಳುಹಿಸಿಲ್ಲ. ಹೀಗಾದರೆ ನಾವು ಯಾರ ಬಳಿ ಸಂಕಷ್ಟ ಹೇಳಿಕೊಳ್ಳಬೇಕೆಂಬ ಪ್ರಶ್ನೆ ಕಾಡುತ್ತಿದೆ. ಪ್ರವಾಹ ಪರಿಹಾರ ವಿತರಣೆಯಲ್ಲಿ ತಾರತಮ್ಯವಾದಲ್ಲಿ ಕ್ಷೇತ್ರದ ಜನತೆ, ರೈತರೊಂದಿಗೆ ಬೀದಿಗೆ ಇಳಿದು ಪ್ರತಿಭಟನೆ ಮಾಡಲಾಗುವುದು.
•ಎಂ.ವೈ. ಪಾಟೀಲ,
ಶಾಸಕರು, ಅಫಜಲಪುರ
ಬ್ಯಾರೇಜ್‌ಗಳಿಗೆ ಗೇಟು ಹಾಕದಿರಲು ಮತ್ತೂಂದು ಕಾರಣವಿದೆ ಎನ್ನಲಾಗುತ್ತಿದೆ. ನೀರು ಖಾಲಿಯಾದ ನಂತರ ಅಕ್ರಮ ಮರಳಗಾರಿಕೆಗೆ ಅವಕಾಶ ಮಾಡಿಕೊಡಲು ಬ್ಯಾರೇಜ್‌ಗಳಿಗೆ ಗೇಟು ಹಾಕುತ್ತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಎಂಟು ವರ್ಷಗಳ ಹಿಂದೆ ಇದೇ ಭೀಮಾ ನದಿಯ ಬ್ಯಾರೇಜ್‌ಗಳ ಗೇಟನ್ನು ಎತ್ತಿ ನೀರು ಖಾಲಿ ಮಾಡಿ, ತದನಂತರ ಮರಳನ್ನು ಲೂಟಿ ಮಾಡಲಾಗಿತ್ತು. ಈ ಕುರಿತು ತನಿಖಾ ವರದಿಯಲ್ಲಿ ದೃಢಪಟ್ಟಿದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಿಲ್ಲ. ಈಗಲೂ ಮರಳು ದಂಧೆಕೋರರಿಗೆ ಸಹಾಯ ಮಾಡಲು ಗೇಟುಗಳನ್ನು ಹಾಕದೇ ನೀರು ಹರಿ ಬಿಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.