ಪ್ರತಿಭಾವಂತರ ಪ್ರೋತ್ಸಾಹವೇ ಮಹತ್ಕಾರ್ಯ
ಹೋಬಳಿಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಿಕಾಂಗ್ರೆಸ್ ಅವಧಿಯಲ್ಲಿ ಏಳು ಕಾಲೇಜು ಆರಂಭ
Team Udayavani, Jan 2, 2020, 10:50 AM IST
ಕಲಬುರಗಿ: ಬರೀ ಮಾತುಗಳಲ್ಲಿ ಸುಂದರ ಸಮಾಜ ಕಟ್ಟಲು ಸಾಧ್ಯವಿಲ್ಲ. ಪ್ರತಿಭಾವಂತರನ್ನು ಗುರುತಿಸಿ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುವುದೇ ಮಹತ್ಕಾರ್ಯವಾಗಿದ್ದು, ಈ ಮೂಲಕ ಸುಂದರ ಸಮಾಜ ನಿರ್ಮಿಸಲು ಸಾಧ್ಯವಾಗಲಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಬುಧವಾರ ಸಂಜೆ ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮಷ್ಟಕ್ಕೆ ನಾವು ಬದುಕುವುದು ದೊಡ್ಡದಲ್ಲ. ಸಮಾಜಕ್ಕಾಗಿ, ಪರರಿಗಾಗಿ ನಾವು ಜೀವಿಸಬೇಕು. ಮಾಡುವ ಕೆಲಸದಲ್ಲಿ ನಿಸ್ವಾರ್ಥ ಇರಬೇಕು. ನಿಸ್ವಾರ್ಥದಿಂದ ನೆಮ್ಮದಿ ಸಿಗುತ್ತದೆ. ಪ್ರೋತ್ಸಾಹ ಮತ್ತು ಸಹಾಯದಲ್ಲಿ ಹಿರಿಯ ವೈದ್ಯರಾದ ಡಾ|
ಪಿ.ಎಸ್. ಶಂಕರ ಅವರದ್ದು ಎತ್ತಿದ ಕೈಯಾಗಿದ್ದು, ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದರು.
ಕಳೆದ 20 ವರ್ಷಗಳಿಂದ ವಿದ್ಯಾರ್ಥಿ ವೇತನ ಕೊಡುವ ಮೂಲಕ ಬಡ ವೈದ್ಯ ವಿದ್ಯಾರ್ಥಿಗಳಿಗೆ ಡಾ| ಪಿ.ಎಸ್.ಶಂಕರ ನೆರವಾಗುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಅವರು ತಮ್ಮದೇ ಪ್ರತಿಷ್ಠಾನ ಸ್ಥಾಪಿಸಿ ಮಾಡುತ್ತಿರುವುದು ದೊಡ್ಡ ಸಾಧನೆ ಎಂದು ಶ್ಲಾಘಿಸಿದರು.
ಉಳ್ಳವರಿಗೆ ಮಾತ್ರ ವೈದ್ಯಕೀಯ ಪದವಿ ಎನ್ನುವ ಮನೋಭಾವ ಇತ್ತು. ಹೀಗಾಗಿ ತಾವು ವೈದ್ಯಕೀಯ ಸಚಿವರಾಗಿದ್ದಾಗ ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ನಿರ್ಣಯ ತೆಗೆದುಕೊಂಡಿದ್ದೆವು. ಐದು ವರ್ಷ ಅವಧಿಯಲ್ಲೇ ಕಲಬುರಗಿ ಸೇರಿದಂತೆ ಏಳು ಕಡೆಗಳಲ್ಲಿ ಕಾಲೇಜು ಆರಂಭಿಸಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಂದ ಜನ ಸಾಮಾನ್ಯರಿಗೂ ಉತ್ತಮವಾದ ಚಿಕಿತ್ಸೆ ಸಿಗುತ್ತಿದ್ದು, ನಂತರ ಬಂದಿರುವ ಸರ್ಕಾರಗಳು ಮುಂದುವರಿಸಿಕೊಂಡು ಹೋಗುತ್ತಿವೆ. ಹೋಬಳಿ ಮಟ್ಟದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯಾಗಬೇಕಿದೆ ಎಂದರು.
ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಎಚ್.ಎಲ್. ಚಲುವರಾಜು, ನಾನು ಹಿಂದುಳಿದ ಚಾಮರಾಜನಗರ ಜಿಲ್ಲೆಯಿಂದ ಬಂದವನು. ಕನ್ನಡ ಮತ್ತು ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಇರಲಿಲ್ಲ. ಆದರೂ, ಕನ್ನಡದಲ್ಲಿ ವೈದ್ಯಕೀಯ ಮಾಹಿತಿ ಸಿಗಬೇಕೆಂಬ ಉದ್ದೇಶದಿಂದ ಪುಸ್ತಕಗಳ ರಚನೆ ಮಾಡಿದೆ. ಬೆಲೆ ಜಾಸ್ತಿಯಾದರೆ ಯಾರು ಕೊಂಡುಕೊಳ್ಳತ್ತಾರೆ ಎನ್ನುವ ಭಯ ಇತ್ತು. ಆದರೀಗ ನನ್ನ ಸಾಹಿತ್ಯ ಗುರುತಿಸಿ ಪ್ರಶಸ್ತಿ ಸಂದಿರುವುದು ಸಂತೋಷ ತಂದಿದೆ ಎಂದರು.
ವೈದ್ಯಶ್ರೀ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಡಾ| ಲಕ್ಷ್ಮಣ ಎಚ್. ಬಿದರಿ ಮಾತನಾಡಿ, ನಾವು ಸಮಾಜಕ್ಕೆ ಏನಾದರೂ ಕೊಟ್ಟರೆ, ಸಮಾಜ ನಮಗೆ ಮರಳಿ ಕೊಡುತ್ತದೆ. ನೂರು ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆ, ಹೃದಯದ ರಂಧ್ರಗಳ ಮುಚ್ಚುವ ಶಸ್ತ್ರಚಿಕಿತ್ಸೆ, ಹಿರಿಯರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಮಾಜಕ್ಕೆ ಅನುಕೂಲವಾಗುವ ಕೆಲಸ ಮಾಡಲಾಗಿದೆ. ನಮ್ಮ ಆಸ್ಪತ್ರೆಗೆ ಕಲಬುರಗಿ ವೈದ್ಯರ ಕೊಡುಗೆ, ಸಹಕಾರ ಬಳಹವಿದೆ ಎಂದು ಹೇಳಿದರು.
ಖ್ಯಾತ ವೈದ್ಯ ಡಾ| ಪಿ.ಎಸ್. ಶಂಕರ, ಡಾ| ಪಿ.ಎಸ್. ಶಂಕರ ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ್, ಕಾರ್ಯಾಧ್ಯಕ್ಷ ಡಾ| ಎಚ್. ವೀರಭದ್ರಪ್ಪ, ಕಾರ್ಯದರ್ಶಿ ಪ್ರೊ| ನರೇಂದ್ರ ಬಡಶೇಷಿ,
ಎಂ.ಸದಾನಂದ, ಡಾ| ಎಸ್.ಎ. ಮಾಲಿಪಾಟೀಲ, ಡಾ| ಪಿ.ಎಂ. ಬಿರಾದಾರ ಸೇರಿದಂತೆ ವಿದ್ಯಾರ್ಥಿವೇತನ ಫಲಾನುಭವಿಗಳು, ಪೋಷಕರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.