ಸವಾಲಿನ ಚುನಾವಣೆ
ಖಂಡ್ರೆ-ಭಗವಂತ ಖೂಬಾ ಪರ ತುರುಸಿನ ಪ್ರಚಾರ
Team Udayavani, Apr 21, 2019, 10:59 AM IST
ಆಳಂದ: ಈ ಕ್ಷೇತ್ರದ ಸ್ಥಿತಿ ವಿಭಿನ್ನವಾಗಿದ್ದು, ಶಾಸಕ ಸುಭಾಷ ಗುತ್ತೇದಾರ ಹಾಗೂ ಮಾಜಿ ಶಾಸಕ ಬಿ.ಆರ್. ಪಾಟೀಲ ನಡುವೆ ಈ ಲೋಕಸಭೆ ಚುನಾವಣೆ ಸವಾಲಿನ ಪ್ರಶ್ನೆಯಾಗಿದೆ. ಆಳಂದ ತಾಲೂಕು ಕಲಬುರಗಿ ಜಿಲ್ಲೆ ವ್ಯಾಪ್ತಿಗೆ ಬಂದರೂ, ಬೀದರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ರಣರಣ ಬಿಸಿಲು ಇದ್ದರೂ ಏ. 23ರಂದು ನಡೆಯಲಿರುವ ಚುನಾವಣೆಗಾಗಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಬೆಂಬಲಿಗರು ತುರುಸಿನ ಪ್ರಚಾರ ಕೈಗೊಂಡಿದ್ದಾರೆ.
ಹಿಂದೆ ನಡೆದ ಲೋಕಸಭೆ ಚುನಾವಣೆ ಪರಿಸ್ಥಿತಿಯನ್ನು ಅವಲೋಕಿಸಿದರೆ ಸ್ಥಳೀಯ ಮುಖಂಡರು ಅಷ್ಟೊಂದು ಜವಾಬ್ದಾರಿ ಹೊರುತ್ತಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ಸೇರಿದಂತೆ ಅವರ ಕುಟುಂಬಸ್ಥರು, ಸ್ಥಳೀಯ ಮುಖಂಡರು ಮನೆ-ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ ಎನ್ನುವುದೇ ವಿಶೇಷವಾಗಿದೆ.
ಬೀದರ ಕ್ಷೇತ್ರಕ್ಕೆ ಸ್ಪರ್ಧಿಸಿದವರು 22 ಮಂದಿ ಕಣದಲ್ಲಿದ್ದರೂ ಆಳಂದ ವಿಧಾನಸಭಾ ಕ್ಷೇತ್ರ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ ಕಂಡುಬಂದಿದೆ. ದೇಶ ಉಳಿಯಬೇಕಾದರೆ ಮೋದಿ ಮತ್ತೊಮ್ಮೆ ಪ್ರಧಾನಿ
ಆಗಬೇಕು ಎಂದು ಬಿಜೆಪಿ ಸಮರ್ಥಕರು ಹೇಳಿಕೊಂಡರೆ, ಮೋದಿ ಪ್ರಧಾನಿ ಆದರೆ ಜನ ಸಾಮಾನ್ಯರ ಆಶೋತ್ತರಗಳಿಗೆ ತಿಲಾಂಜಲಿ ಇಡುತ್ತಾರೆ. ಯಾವುದೇ ಕಾರಣಕ್ಕೂ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬರಕೂಡದು ಎಂದು ಕಾಂಗ್ರೆಸ್ ಬೆಂಬಲಿತ
ಮತದಾರರು ಪಣತೊಟ್ಟಿದ್ದಾರೆ.
ಪ್ರತಿಷ್ಠೆ ಪ್ರಶ್ನೆ: ಲೋಕಸಭೆ ಚುನಾವಣೆಯಲ್ಲಿ ವಿಜಯದ ಮಾಲೆ ಯಾವ ಪಕ್ಷದ ಅಭ್ಯರ್ಥಿ ಕೊರಳಿಗೆ ಬೀಳುತ್ತದೆ ಎನ್ನುವುದು ಈ ಕ್ಷೇತ್ರದಲ್ಲಿ ಮುಖ್ಯವಾಗಿಲ್ಲ. ಆದರೆ ಸ್ಥಳೀಯವಾಗಿ ಯಾವ ಪಕ್ಷದವರು ಹೆಚ್ಚು ಮತ ಪಡೆದರು ಎನ್ನುವುದೇ
ಇಲ್ಲಿನ ರಾಜಕಾರಣಿಗೆ ಮುಖ್ಯವಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿರುವ ಸುಭಾಷ ಗುತ್ತೇದಾರ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಇಲ್ಲದಿದ್ದರೂ 30 ಸಾವಿರಕ್ಕೂ ಹೆಚ್ಚು ಮತಗಳು ಬಿಜೆಪಿ ಅಭ್ಯರ್ಥಿಗೆ ಬರುವಂತೆ ನೋಡಿಕೊಂಡಿದ್ದು, ಈ ಬಾರಿ 60 ಸಾವಿರ ಮತಗಳ ಅಂತರದಿಂದ ಲೀಡ್ ಪಡೆಯಲಾಗುವುದು ಎಂದು ಸವಾಲು ಹಾಕಿದ್ದಾರೆ. ಇದರಿಂದಾಗಿ ಕೆರಳಿರುವ ಮಾಜಿ ಶಾಸಕ ಬಿ.ಆರ್.ಪಾಟೀಲ ಕೂಡಾ ಕಸರತ್ತು ಆರಂಭಿಸಿದ್ದಾರೆ.
ಅಖಾಡದಲ್ಲಿದ್ದಾರೆ 22 ಅಭ್ಯರ್ಥಿಗಳು: ಈಶ್ವರ ಖಂಡ್ರೆ (ಕಾಂಗ್ರೆಸ್), ಭಗವಂತ ಖೂಬಾ (ಬಿಜೆಪಿ), ಎಸ್.ಎಚ್. ಬುಖಾರಿ (ಬಿಎಸ್‌ಪಿ), ಅಂಬರೀಷ ಕೆಂಚಾ (ಉತ್ತಮ ಪ್ರಜಾಕೀಯ ಪಕ್ಷ), ಮೌಲ್ವಿ
ಜಮೀರೋದ್ದೀನ (ಎನ್‌ಡಿಪಿ), ಸುಗ್ರೀವ ಭರತ ಕಚುವೆ (ಕೆಕೆಜೆಎಚ್
ಎಸ್‌ಪಿ), ಸಂತೋಷ ರಾಠೊಡ (ಬಿಜೆಕೆಡಿ
ಡೆಮೊಕ್ರೆಟಿಕ್), ಮೊಹ್ಮದ ಯುಸೂಫ್
ಖದೀರ್ (ಪಿಎಸ್‌ಪಿ), ಮೌಲಾಸಾಬ ಪರೀದಾಸಾಬ
(ಎಬಿಎಂಎಲ್ ಸೆಕ್ಯೂಲರ್), ದಯಾನಂದ ಸೈಬಣ್ಣ
(ಎಪಿಒಐ), ರಾಜಮಬೀ ದಸ್ತಗೀರ (ಬಿಬಿಕೆಡಿ), ಮೊಮದ್ ಅಬ್ದುಲ್ ವಕೀಲ್ (ಬಿಪಿಪಿ) ಸೇರಿದಂತೆ 22 ಮಂದಿ ಅಖಾಡದಲ್ಲಿದ್ದಾರೆ.
ಕಳೆದ ಲೋಕಸಭೆಯಲ್ಲಿ ಪಡೆದ ಮತಗಳು: ಧರ್ಮಸಿಂಗ್ (ಕಾಂಗ್ರೆಸ್) 3,67,068, ಭಗವಂತ ಖೂಬಾ (ಬಿಜೆಪಿ), 4.59,290, ಬಂಡೆಪ್ಪ ಖಾಶೆಂಪುರ (ಜೆಡಿಎಸ್) 58.728 ಮತಗಳನ್ನು ಪಡೆದಿದ್ದರು.
ಒಟ್ಟು ಮತದಾರರು: 17,50,417, ಪುರುಷ 9,07,293, 8,43,077 ಮಹಿಳಾ ಮತದಾರರು ಇದ್ದಾರೆ.
ಮಹಾದೇವ ವಡಗಾಂವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.