‘ಕಿಸಾನ್’ಗೆ ಎರಡನೇ ಕಂತಿನ ‘ಸಮ್ಮಾನ್ ನಿಧಿ’
ರಾಯಚೂರಲ್ಲಿ ಹೆಚ್ಚು ರೈತರ ಖಾತೆಗೆ ಹಣ ಜಮೆ•ಪ್ರೂಟ್ಸ್ ಆನ್‌ಲೈನ್ ತಂತ್ರಾಂಶ ಅಭಿವೃದ್ಧಿ
Team Udayavani, Aug 9, 2019, 9:48 AM IST
ರಂಗಪ್ಪ ಗಧಾರ
ಕಲಬುರಗಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎರಡನೇ ಕಂತಿನ ಹಣ ಜಮೆ ಪ್ರಕ್ರಿಯೆ ಆರಂಭವಾಗಿದ್ದು, ಇದುವೆರೆಗೂ ಹೈದ್ರಾಬಾದ್-ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ರಾಯಚೂರಿನಲ್ಲಿ ಅತಿ ಹೆಚ್ಚು ರೈತರ ಖಾತೆಗೆ ಹಣ ಜಮಾ ಆಗಿದೆ.
ಕಿಸಾನ್ ಸಮ್ಮಾನ್ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ 2,70,081 ರೈತರು ಹೆಸರು ನೋಂದಾಯಿಸಿದ್ದು, ಇದುವರೆಗೆ ಕೇಂದ್ರ ಸರ್ಕಾರ 1,50,601 ರೈತರನ್ನು ಫಲಾನುಭವಿಗಳೆಂದು ಘೋಷಿಸಿದೆ. ಕಲಬುರಗಿ ಜಿಲ್ಲೆಯಲ್ಲಿ ಮೊದಲ ಕಂತಿನಲ್ಲಿ 97,410 ರೈತರ ಖಾತೆಗೆ ಎರಡು ಸಾವಿರ ರೂ. ಜಮೆ ಆಗಿದೆ. ಎರಡನೇ ಕಂತಿನಲ್ಲಿ ಇದುವರೆಗೆ 5,350 ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ.
ರಾಯಚೂರು ಜಿಲ್ಲೆಯಲ್ಲಿ 2,08,402 ರೈತರು ಹೆಸರು ನೋಂದಾಯಿಸಿಕೊಂಡಿದ್ದು, 1,39,805 ರೈತರನ್ನು ಫಲಾನುಭವಿಗಳೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರಲ್ಲಿ ಮೊದಲ ಕಂತಿನ ಎರಡು ಸಾವಿರ ರೂ. 1,17,455 ರೈತರ ಖಾತೆಗೆ ಜಮೆಯಾಗಿದೆ. ಎರಡನೇ ಕಂತಿನಲ್ಲಿ 20,946 ರೈತರಿಗೆ ಕಿಸಾನ್ ಸಮ್ಮಾನ್ ನಿಧಿ ಜಮೆ ಆಗಿದೆ.
ಅದೇ ರೀತಿ ಬಳ್ಳಾರಿ ಜಿಲ್ಲೆಯಲ್ಲಿ 2,07,419, ಬೀದರ್ ಜಿಲ್ಲೆಯಲ್ಲಿ 1,83,062, ಕೊಪ್ಪಳ ಜಿಲ್ಲೆಯಲ್ಲಿ 1,53,073 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 1,22,993 ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರ ಕ್ರಮವಾಗಿ ಬಳ್ಳಾರಿ-1,22,384, ಬೀದರ್-1,27,483 ಕೊಪ್ಪಳ-1,19,669 ಮತ್ತು ಯಾದಗಿರಿ ಜಿಲ್ಲೆಯ 79,664 ರೈತರನ್ನು ಫಲಾನುಭವಿಗಳೆಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
ಬಳ್ಳಾರಿಯಲ್ಲಿ ಮೊದಲ ಕಂತು 62,018, ಎರಡನೇ ಕಂತು 8,865, ಬೀದರ್ ಜಿಲ್ಲೆಯಲ್ಲಿ ಮೊದಲ ಕಂತು 95,041, ಎರಡನೇ ಕಂತು 2,155, ಕೊಪ್ಪಳ ಜಿಲ್ಲೆಯಲ್ಲಿ 1,03,617, ಎರಡನೇ ಕಂತು 12,365 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಮೊದಲ ಕಂತು 63,914, ಎರಡನೇ ಕಂತಿನಲ್ಲಿ 9,006 ರೈತರ ಖಾತೆಗೆ ನೇರವಾಗಿ ತಲಾ ಎರಡು ಸಾವಿರ ರೂ. ಜಮೆಯಾಗಿದೆ. ಇದರಲ್ಲಿ ಕೆಲ ರೈತರಿಗೆ ಎರಡೂ ಕಂತಿನ ನಾಲ್ಕು ಸಾವಿರ ರೂ. ಪಾವತಿಯಾಗಿದೆ.
ಫಲಾನುಭವಿ ಯಾರು?: ಐದು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಹಾಗೂ ಅತಿ ಸಣ್ಣ ರೈತರು ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಗಳಾಗಿದ್ದಾರೆ. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿದವರು, ಹತ್ತು ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವ ಸರ್ಕಾರಿ ನೌಕಕರು, ಪಿಂಚಣಿದಾರರು ಮತ್ತು ಡಾಕ್ಟರ್, ಎಂಜಿನಿಯರ್, ವಕೀಲರು ಮತ್ತಿತರ ವೃತ್ತಿಪರ ಕುಂಟುಂಬದವರು ಯೋಜನೆ ಫಲಾನುಭವಿಗಳು ಅಲ್ಲ.
ಪ್ರಕ್ರಿಯೆ ಹೇಗೆ?: ರೈತ ಸಂಪರ್ಕ ಕೇಂದ್ರ, ಅಟಲ್ ಜನಸ್ನೇಹಿ ಕಚೇರಿಗಳಿಗೆ ಅರ್ಹ ರೈತರು ಖುದ್ದು ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಅರ್ಜಿ ನಮೂನೆ-ಸಿ ಹಾಗೂ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ ಅರ್ಜಿ ನಮೂನೆ-ಡಿಯನ್ನು ಪಡೆದು ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆಯೊಳಗೊಂಡ ಸ್ವ-ವಿವರಗಳನ್ನು ರೈತರು ಸಲ್ಲಿಸಬೇಕು.
ಯೋಜನೆ ತ್ವರಿತವಾಗಿ ಅನುಷ್ಠಾನ ಗೊಳಿಸಲು ಕೃಷಿಯೊಂದಿಗೆ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಗೆಂದೇ ಫಾರ್ಮರ್ ರಿಜಿಸ್ಟ್ರೇಷನ್ ಆ್ಯಂಡ್ ಯುನಿಫೈಡ್ ಬೆನಿಫಿಶರಿ (ಪ್ರೂಟ್ಸ್) ಎನ್ನುವ ಆನ್‌ಲೈನ್ ತಂತ್ರಾಂಶ (ವೆಬ್‌ಸೈಟ್) ಅಭಿವೃದ್ಧಿ ಪಡಿಸಿದ್ದು, ಅಧಿಕಾರಿಗಳು ಈ ವೆಬ್‌ಸೈಟ್‌ನಲ್ಲಿ ರೈತರ ಮಾಹಿತಿಯನ್ನು ಅಳವಡಿಸುತ್ತಾರೆ. ಅಲ್ಲಿಂದ ನೇರವಾಗಿ ತಹಶೀಲ್ದಾರ್ ಪರಿಶೀಲಿಸಿ ಅರ್ಜಿಗೆ ಅನುಮೋದನೆ ನೀಡಿ ರಾಜ್ಯ ಮಟ್ಟಕ್ಕೆ ರವಾನಿಸುತ್ತಾರೆ.
ಖಾತೆಗೆ ಹಣ ಬರುವ ಸಮಯ
ರೈತರಿಗೆ ಆರ್ಥಿಕ ನೆರವು ಒದಗಿಸುವ ನಿಟ್ಟಿನಲ್ಲಿ ಕಳೆದ ಫೆ.24ರಿಂದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಕೃಷಿ ಚಟುವಟಿಕೆ ಸಂದರ್ಭದಲ್ಲಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಮೂರು ಕಂತಿನಲ್ಲಿ ಎರಡು ಸಾವಿರ ರೂ.ಗಳಂತೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಒಟ್ಟು 6 ಸಾವಿರ ರೂ. ಜಮೆಯಾಗುತ್ತದೆ.
ರಾಶಿಗಾಗಿ ಎರಡು ಸಾವಿರ ರೂ. (ಡಿಸೆಂಬರ್‌ನಿಂದ ಮಾರ್ಚ್), ಬೀಜ, ಗೊಬ್ಬರ ಖರೀದಿಗೆ ಎರಡು ಸಾವಿರ ರೂ. (ಏಪ್ರಿಲ್ನಿಂದ ಜುಲೈ), ಕೀಟನಾಶಕ ಖರೀದಿ, ಖರ್ಚಿಗೆ ಎರಡು ಸಾವಿರ ರೂ. (ಆಗಸ್ಟ್‌ನಿಂದ ನವೆಂಬರ್) ಜಮೆಯಾಗುತ್ತದೆ. ರೈತರಿಗೆ ಆರ್ಥಿಕ ಸಹಾಯ ನೀಡುವುದು ಯೋಜನೆ ಉದ್ದೇಶವಾಗಿದೆ. ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಂಡ ತಿಂಗಳಿನ ಆಧಾರದ ಮೇಲೆ ಮೊದಲ ಕಂತಿನಿಂದ ಫಲಾನುಭವಿಗಳಾಗುತ್ತಾರೆ. ದಾಖಲೆ ಪೂರ್ಣಗೊಂಡು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ರೈತರ ಖಾತೆಗೆ ನೇರವಾಗಿ ಹಣ ಬರುತ್ತದೆ.
ರಾಜ್ಯದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇಂದ್ರ ಸರ್ಕಾರದ ಆರು ಸಾವಿರ ರೂ.ಗಳೊಂದಿಗೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂ. ಹೆಚ್ಚುವರಿಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ರಾಜ್ಯದ ರೈತರಿಗೆ ಇನ್ಮುಂದೆ ಪ್ರತಿ ವರ್ಷ 10 ಸಾವಿರ ರೂ. ಆರ್ಥಿಕ ನೆರವು ಸಿಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.