ನಿಜಾಮ ಆಡಳಿತದಲ್ಲಿ ಧ್ವಜ ಹಾರಿಸಿದ್ದ ಸಾಹಸಿಗರು
Team Udayavani, Sep 17, 2022, 1:54 PM IST
ಶಹಾಬಾದ: 1947 ಆಗಸ್ಟ್ 15ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ದಿನ. ಅಂದು ರೇಡಿಯೋದಲ್ಲಿ ಬಿತ್ತರವಾದ ವಾರ್ತೆ ಕೇಳಿ ಜನರು ಆನಂದಪಟ್ಟರು. ಆದರೆ ಕರ್ನಾಟಕದ ಬೀದರ, ಗುಲಬರ್ಗಾ, ರಾಯಚೂರ, ಬಳ್ಳಾರಿ ಹಾಗೂ ಕೊಪ್ಪಳ ಹೀಗೆ ಒಟ್ಟು 5 ಜಿಲ್ಲೆಗಳು ಹೈದ್ರಾಬಾದ ಸಂಸ್ಥಾನದ ಕಪಿಮುಷ್ಠಿಯಲ್ಲಿದ್ದವು. ಈ ವಿಮೋಚನೆ ಬಿಡುಗಡೆಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ಮಾಡಿ ತ್ಯಾಗ, ಬಲಿದಾನಗಳ ಮೂಲಕ ಹೈದ್ರಾಬಾದ ಕರ್ನಾಟಕಕ್ಕೆ ನಿಜವಾದ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದು 1948 ಸೆಪ್ಟೆಂಬರ್ 17ರಂದು.
ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ಆಗಿನ ಸುಮಾರು 556 ಸಂಸ್ಥಾನಿಕ ಮಹಾರಾಜರು ತಮ್ಮ ಮನಸ್ಸಿನ ಇಚ್ಛೆಯಂತೆ ಸ್ವತಂತ್ರ ಭಾರತದ ಗಣರಾಜ್ಯದಲ್ಲಿ ಸೇರ್ಪಡೆಯಾಗುವಂತೆ ಹೇಳಿಹೋದ ಸಂದರ್ಭದಲ್ಲಿ ಅನೇಕ ಸಂಸ್ಥಾನಿಕರು ಮೀನ ಮೇಷ ಎಣಿಸದೇ ಸೇರಿಕೊಂಡರು. ಉಳಿದವುಗಳನ್ನು ಆಗಿನ ಗೃಹಮಂತ್ರಿ, ಉಕ್ಕಿನ ಮನುಷ್ಯ ಎನ್ನುವ ಖ್ಯಾತಿಯ ಸರದಾರ ವಲ್ಲಬಾಯಿ ಪಟೇಲರು ಕೆಲವರನ್ನು ಮನವೊಲಿಸಿ ಗಣರಾಜ್ಯಕ್ಕೆ ಸೇರಿಸಿದರು.
ಆದರೆ ದೇಶದಲ್ಲಿಯೇ ಅತ್ಯಂತ ದೊಡ್ಡ ಸಂಸ್ಥಾನವೆಂದು ಹೆಸರು ಪಡೆದಿದ್ದ ಹೈದ್ರಾಬಾದ ಸಂಸ್ಥಾನದ ದೊರೆ ನಿಜಾಮನಿಗೆ ಸ್ವತಂತ್ರ ಭಾರತಕ್ಕೆ ಸೇರಬಾರದೆನ್ನುವ ಇರಾದೆಯಿತ್ತು. ಈತನ ದಬ್ಟಾಳಿಕೆ ಸಹಿಸದ ಜನರು ರೊಚ್ಚಿಗೆದ್ದರು. ಇಲ್ಲಿಂದಲ್ಲೇ ದೇಶಭಕ್ತರು ತಮ್ಮ ಬಂಧ ವಿಮೋಚನೆಯ ಬಿಡುಗಡೆಗಾಗಿ ಹೋರಾಟ ನಡೆಸಿದರು. ರಾಮನಂದ ತೀರ್ಥರು, ವಿದ್ಯಾಧರ ಗುರೂಜಿ, ಶರಣಗೌಡ ಇನಾಂದಾರ ಹೀಗೆ ಅನೇಕ ಹೋರಾಟಗಾರರ ಕೊಡುಗೆ ಇದೆ. ಅಂಥಹ ಮಹನೀಯರಲ್ಲಿ ಶಹಾಬಾದನ ಸಿದ್ಧಣ್ಣ ಧನಶೆಟ್ಟಿ, ವಾಸುದೇವ ಸರ್ವೋದಯ ಹಾಗೂ ಚಂದ್ರಶೇಖರ ಭರಮಶೆಟ್ಟಿ ಅವರ ಕೊಡುಗೆ ಅಪಾರ.
ಸಿದ್ಧಣ್ಣ ಧನಶೆಟ್ಟಿ: ಅಂದು ಶಹಾಬಾದನಲ್ಲಿ ಭಾರತದ ತ್ರಿವರ್ಣ ಧ್ವಜಹಾರಿಸಲು ನಿಜಾಮ ಸರ್ಕಾರ ನಿಷೇಧ ಹೇರಿತ್ತು. ನಗರದ ಬಾಲಾಜಿ ಮಂದಿರದ ಆವರಣದಲ್ಲಿ ಆಲದ ಮರವೇರಿದ ಸಿದ್ಧಣ್ಣ ಧನಶೆಟ್ಟಿ ಯಾವುದನ್ನು ಲೆಕ್ಕಿಸದೇ ಪೊಲೀಸರಿಗೆ, ಪಹರೆಗಾರರಿಗೆ ಸಂಶಯ ಬಾರದಂತೆ, ನಿಜಾಮ ಧ್ವಜವನ್ನು ಕೆಳಗಿಳಿಸಿ, ಭಾರತ ಮಾತೆಯ ತ್ರೀವರ್ಣ ಧ್ವಜವನ್ನು ಮುಗಿಲನ್ನೇತ್ತರಕ್ಕೆ ಹಾರಿಸಿ ಹಳದಿ ಬಣ್ಣದ ನಿಜಾಮ ಸರ್ಕಾರದ ಅಸರಜಂಹಾ ಧ್ವಜವನ್ನು ಸುಟ್ಟು ಹಾಕಿದ ಸಾಹಸಿಗರು. ಇವರಿಗೆ ತಾಮ್ರ ಪತ್ರ ಹಾಗೂ ಹಲವು ಪ್ರಶಸ್ತಿಗಳು ಸಂದಿದ್ದವು. ಸಿದ್ಧಣ್ಣ ಧನಶೆಟ್ಟಿ ಅವರು ಸರದಾರ ಶರಣಗೌಡರ ಜತೆ ಅನೇಕ ಚಳವಳಿಯಲ್ಲಿ ಭಾಗವಹಿಸಿದ್ದರು.
ವಾಸುದೇವ ಸರ್ವೋದಯ: ವಾಸುದೇವ ಸರ್ವೋದಯ ವಂದೇ ಮಾತರಂ ಚಳವಳಿಯಲ್ಲಿ ಭಾಗವಹಿಸಿ 40 ಸಲ ಬಂಧನಕ್ಕೊಳಗಾಗಿದ್ದರು. ಸಿಂದಗಿ ಹಾಗೂ ದುಧನಿ ಕ್ಯಾಂಪ್‌ಗ್ಳಲ್ಲಿ ಭಾಗಹಿಸಿದ್ದರು. ನಿಜಾಮನ ಬಿಗಿ ಕಾವಲಿನಲ್ಲಿ ಕನ್ನಡ ಸಾಹಿತ್ಯ ಸಂಘದಲ್ಲಿ ಹಾರಾಡುತ್ತಿದ್ದ ನಿಜಾಮ ಸರ್ಕಾರದ ಧ್ವಜವನ್ನು ವಾಸುದೇವ ಅವರು ಕಿತ್ತೆಸೆದು ತ್ರೀವರ್ಣ ಧ್ವಜವನ್ನು ಹಾರಿ ಭಾರತ ಮಾತಾಕಿ ಜೈ ಎಂಬ ಜಯಘೋಷ ಕೂಗಿದ್ದರು. ನಿದ್ದೆಯಿಂದ ಎಚ್ಚೆತ್ತ ಪೊಲೀಸರು ಅವರನ್ನು ಬಂಧಿಸಿದ್ದರು. ನಿಜಾಮ ಸರ್ಕಾರದ ಬಿಗಿ ಭದ್ರತೆಯಲ್ಲಿ ನಡೆದ ಈ ಸಾಹಸ ಕಾರ್ಯದಲ್ಲಿ ಪಾಲ್ಗೊಂಡ ಸಿದ್ಧಣ್ಣ ಧನಶೆಟ್ಟಿ, ವಾಸುದೇವ ಸರ್ವೋದಯ ಅವರಿಗೆ ಸಿಕ್ಕ ಪ್ರತಿಫಲವೆಂದರೆ 50 ಛಡಿ ಏಟು, 6 ತಿಂಗಳ ಜೈಲು ಶಿಕ್ಷೆ. ಅಬ್ದುಲ್ ರಶೀದ್ ಚಿಟ್, ಚಂದ್ರಶೇಖರ ಭರಮಶೆಟ್ಟಿ, ತೋಟಪ್ಪ ಭರಮಶೆಟ್ಟಿ, ಶಾಮಸುಂದರ ಠಾಕೂರ, ಲಾಲಸಿಂಗ್ ಠಾಕೂರ ಹೀಗೆ ಒಬ್ಬರಲ್ಲ, ಇಬ್ಬರಲ್ಲ ಅನೇಕ ಜನರು ತಮ್ಮ ವ್ಯಯಕ್ತಿಕ ಹಿತಾಸಕ್ತಿಯನ್ನು ಬದಿಗಿಟ್ಟು, ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಜೈಲು ಅನುಭವಿಸಿದ್ದಾರೆ. ಛಡಿ ಏಟು ತಿಂದಿದ್ದಾರೆ.
ನಿಜಾಮನ ಜೈಲು: ನಗರದ ಲಕ್ಷ್ಮೀ ಗಂಜ್‌ನಲ್ಲಿರುವ ಈಗಿನ ಪತ್ರಾಂಕಿತ ಉಪಖಜಾನೆ ಕಚೇರಿ ಈ ಹಿಂದೆ ನಿಜಾಮ ಕಟ್ಟಿಸಿದ ಜೈಲಾಗಿತ್ತು. ಹೈದ್ರಾಬಾದ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿದವರನ್ನು ಹಿಡಿದು ನಿಜಾಮ ಸೈನ್ಯ ಇದೇ ಜೈಲಿನಲ್ಲಿ ಹಾಕುತ್ತಿತ್ತು.
ಕನ್ನಡ ಸಾಹಿತ್ಯ ಸಂಘ: ಅಂದಿನ ಕನ್ನಡ ಸಾಹಿತ್ಯ ಸಂಘದ ಕಟ್ಟಡ ಈಗ ಗ್ರಂಥಾಲಯ ಕಚೇರಿಯಾಗಿದೆ.
ರಜಾಕರು ವಂದೇ ಮಾತರಂ ಗೀತೆ ಹಾಡಿದರೆ ಬಾಯಲ್ಲಿ ಮೂತ್ರ ಮಾಡಿಸುತ್ತಿದ್ದರಂತೆ. ಎರಡು ಕೈಗಳನ್ನು ಕಟ್ಟಿ, ಬೂಟುಗಾಲಿನಿಂದ ಒದೆಯುತ್ತಿದ್ದರಂತೆ. ನಿಜಾಮನ ವಿರುದ್ಧ ಜೈಕಾರ ಹಾಕಿದವರಿಗೆ ಮೆಣಸಿನ ಕಾಯಿ ಪುಡಿಯನ್ನು ಮೂಗು, ಬಾಯಿ ಹಾಗೂ ಕಣ್ಣಿನಲ್ಲಿ ತುಂಬುತ್ತಿದ್ದರಂತೆ. ಅಲ್ಲದೇ ರಜಾಕರು ಹೊಕ್ಕಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಸಾಕು ಸಾಮೂಹಿಕ ಅತ್ಯಾಚಾರ ಎಸಗುತ್ತಿದ್ದರಂತೆ. ಹೀಗೆ ತಾವು ಕಂಡ ಅನುಭವವನ್ನು ನಮ್ಮ ತಂದೆ ಸಿದ್ಧಣ್ಣ ಧನಶೆಟ್ಟಿ ಅವರು ನಿಜಾಮನ ದೌರ್ಜನ್ಯದ ಕಹಿ ಅನುಭವಗಳನ್ನು ನಮಗೆ ಹೇಳುತ್ತಿದ್ದರು. -ಸೋಮಶೇಖರ ಧನಶೆಟ್ಟಿ
-ಮಲ್ಲಿನಾಥ.ಜಿ.ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.