ಇಂದಿನಿಂದ ವಲಸಿಗರ ಪ್ರವೇಶಕ್ಕೆ ನಿರ್ಬಂಧ: ಪಾಟೀಲ
Team Udayavani, May 22, 2020, 3:58 PM IST
ಸಾಂದರ್ಭಿಕ ಚಿತ್ರ
ಆಳಂದ: ಮಹಾರಾಷ್ಟ್ರದಿಂದ ರಾಜ್ಯದ ಖಜೂರಿ, ಮಾದನಹಿಪ್ಪರಗಾ ಮತ್ತು ನಿಂಬಾಳ ಸೇರಿ ಇನ್ನಿತರ ಗಡಿ ಪ್ರದೇಶಗಳಿಂದ ಬರುತ್ತಿರುವ ಜನರಿಗೆ ಮೇ 22ರಿಂದ ಪ್ರವೇಶ ನಿರ್ಬಂಧಿಸಲಾಗಿದೆ. ಸೇವಾ ಸಿಂಧು ಪಾಸ್ ಹೊಂದಿದರೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಹೇಳಿದರು.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುತ್ತಿದ್ದವರ ಮಾಹಿತಿ ಕಲೆಹಾಕಿ ತಮ್ಮ ಕಚೇರಿಯಲ್ಲಿ ಕರೆದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬರುವವರ ಸಂಖ್ಯೆ ಸದ್ಯ ಕಡಿಮೆಯಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಸೇವಾ ಸಿಂಧು ಪಾಸ್ ಇದ್ದವರಿಗೆ ತಪಾಸಣೆ ಮೂಲಕ ಪ್ರವೇಶ ನೀಡಲಾಗುವುದು. ಒಂದೊಮ್ಮೆ ಸೇವಾ ಸಿಂಧು ಪಾಸ್ ಇಲ್ಲದೆ ಹೊಸಬರು ಪ್ರವೇಶಿಸಲು ಮುಂದಾದರೆ ಅವರನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಳ್ಳುವುದಿಲ್ಲ ಎಂದರು.
ಅನ್ಯ ಮಾರ್ಗದ ಮೂಲಕ ಖಾಸಗಿ ವಾಹನಗಳಿಂದ ಅಥವಾ ಕಾಲ್ನಡಿಗೆಯಿಂದ ಗ್ರಾಮಗಳಿಗೆ ಕೋವಿಡ್ ತಪಾಸಣೆ ಇಲ್ಲದೆ ಮನೆಗೆ ಬಂದವರ ಕುರಿತು ಸ್ಥಳೀಯರು ಅಧಿ ಕಾರಿಗಳಿಗೆ, ಪೊಲೀಸರಿಗೆ, ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಬೇಕು. ಪೊಲೀಸರು, ನಿವೃತ್ತ ಸೈನಿಕರು ಮತ್ತು ತಲಾ ಐದೈದು ತಂಡ ರಚಿಸಿ ಹದ್ದಿನ ಕಣ್ಣಿಡಲಾಗಿದೆ ಎಂದು ಹೇಳಿದರು.
ಈ ಕುರಿತು ಏನೆ ಸಮಸ್ಯೆಗಳಿದ್ದರೆ ನಾಗರಿಕರು ಸಹಾಯವಾಣಿ ಸಂಖ್ಯೆ ದೂ. 08477-202428 ಕರೆ ಮಾಡಿ ತಿಳಿಸಬೇಕು. ವಲಸೆ ಹೋಗಿ ಮರಳಿ ಊರಿಗೆ ಬಂದವರನ್ನು ಆಯಾ ಗ್ರಾಮದ ಶಾಲೆಗಳಲ್ಲಿ ಕ್ವಾರಂಟೈನ್ ಕೈಗೊಂಡು ಅವರಿಗೆ ಎಲ್ಲ ಸೌಕರ್ಯ ಒದಗಿಸಲಾಗುತ್ತಿದೆ. ಗ್ರಾಮೀಣ ಕ್ವಾರಂಟೈನ್‌ಗಳು ಸಾಲದಕ್ಕೆ ದೊಡ್ಡ ಮಟ್ಟದಲ್ಲಿ ಕಿತ್ತೂರುರಾಣಿ ಚನ್ನಮ್ಮ ವಸತಿ, ಆದರ್ಶ ಮತ್ತು ಕಸ್ತೂರ ಬಾ ಶಾಲೆಗಳಲ್ಲಿ ಕ್ವಾರಂಟೈನ್ ಸ್ಥಾಪಿಸಲಾದೆ ಎಂದರು.
ಈಗಾಗಲೇ ಒಟ್ಟು 141 ಕ್ವಾರಂಟೈನ್ ಕೇಂದ್ರಗಳಲ್ಲಿ 5,862 ಜನರು ದಾಖಲಾಗಿದ್ದು, ಇವರನ್ನು ಆಯಾ ಸಂಬಂಧಿತ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಊಟ, ವ್ಯವಸ್ಥೆ ನೋಡಿಕೊಳ್ಳುತ್ತಿದ್ದು, ಅಡುಗೆ ಸಹಾಯಕರ ಮೂಲಕ ಅಡುಗೆ ಮಾಡಿ ಉಣಬಡಿಸಲಾಗುತ್ತಿದೆ. ಕ್ವಾರಂಟೈನ್‌ಗೆ ದಾಖಲಾಗಿ 12 ದಿನಗಳ ಬಳಿಕ ಗಂಟಲು ದ್ರವ ಪರೀಕ್ಷೆ ಕಳುಹಿಸಿಕೊಡಲಾಗುವುದು. ಸಕಾರಾತ್ಮಕ ವರದಿ ಬಂದರೆ 15 ದಿನಗಳ ಬಳಿಕ ಮನೆಗೆ ಕಳುಹಿಸಲಾಗುವುದು. ಕ್ವಾರಂಟೈನಲ್ಲಿದ್ದವರು ಸಿಬ್ಬಂದಿ ಜತೆಗೆ ಅನುಚಿತ ವರ್ತಿಸುವುದು ಅಥವಾ ಬೇಕಾ ಬಿಟ್ಟಿ ಹೊರಗೆ ಓಡಾಡಿದರೆ ಅಂಥವರಿಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು. ಈ ವೇಳೆ ಹಿರೋಳಿ ಗಡಿ ತನಿಖಾಧಿಕಾರಿ ಸುರೇಂದ್ರನಾಥ, ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.