ಬಲದಂಡೆಗೆ ರೈತರ ಸಾಲ ಮನ್ನಾ ತ್ಯಾಗ
Team Udayavani, Nov 17, 2018, 2:59 PM IST
ಬಾಗಲಕೋಟೆ: ಸರ್ಕಾರದ ಬೆನ್ನು ಬಿದ್ದು ಸಾಲಮನ್ನಾ ಮಾಡಿಸಿಕೊಳ್ಳುವ ರೈತರ ಕಥೆ ಒಂದೆಡೆಯಾದರೆ ಒಡಲಲ್ಲೇ ನೀರಿದ್ದರೂ ಹೊಲಕ್ಕೆ ಬಾರದ ಸ್ಥಿತಿ ಇರುವ ಬಾದಾಮಿ ತಾಲೂಕಿನ ನಾಲ್ಕು ಗ್ರಾಮಗಳ ಅನ್ನದಾತರು “ಸಾಲ ಮನ್ನಾ ಬೇಡ, ಅದೇ ಹಣವನ್ನು ಘಟಪ್ರಭಾ ಬಲದಂಡೆ ಬಲಗೊಳಿಸಲು ಬಳಸಿ’ ಎಂದು ಒತ್ತಾಯಿಸಿ ಸಿಎಂ, ಕೃಷಿ ಹಾಗೂ ಜಲಸಂಪನ್ಮೂಲ ಸಚಿವರಿಗೆ ತಮ್ಮ ಒಪ್ಪಿತ ಮನವಿ ರವಾನಿಸಲು ಸಜ್ಜಾಗಿದ್ದಾರೆ. ಬಾದಾಮಿ ತಾಲೂಕು ವ್ಯಾಪ್ತಿಯ ಕಗಲಗೊಂಬ, ಹೂಲಗೇರಿ, ಕಟಗೇರಿ ಹಾಗೂ ಕೆರಕಲಮಟ್ಟಿ
ಗ್ರಾಮಗಳ ರೈತರು ಇಂಥವೊಂದು ಒತ್ತಾಯ ಮಾಡುತ್ತಿದ್ದಾರೆ. ಘಟಪ್ರಭಾ ನದಿಯ ಹಿಡಕಲ್ ಡ್ಯಾಂನಿಂದ ನೀರಾವರಿ ಕಲ್ಪಿಸಲು 18 ವರ್ಷಗಳ ಹಿಂದೆಯೇ ಭೂಸ್ವಾಧೀನ ಮಾಡಿಕೊಂಡು ಕಾಲುವೆ ನಿರ್ಮಿಸಲಾಗಿದೆ. ಘಟಪ್ರಭಾ ಬಲದಂಡೆ ಯೋಜನೆಯಡಿ ಒಟ್ಟು 53,533 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಕಲ್ಪಿಸಬೇಕು. ಇದಕ್ಕಾಗಿ 15.52 ಟಿಎಂಸಿ ಅಡಿ ನೀರು ಹಿಡಕಲ್ ಡ್ಯಾಂನಿಂದ ಹಂಚಿಕೆ ಕೂಡ ಆಗಿದೆ. ಆದರೆ, ವಾಸ್ತವದಲ್ಲಿ ಬಾದಾಮಿ ಮತ್ತು ಬಾಗಲಕೋಟೆ ತಾಲೂಕಿನ 56,802 ಎಕರೆ ಭೂಮಿಗೆ ಈವರೆಗೂ ಹನಿ ನೀರು ಬಂದಿಲ್ಲ.
ಇದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೂ ಗೊತ್ತಿರುವ ಸಂಗತಿ. ಘಟಪ್ರಭಾ ಎಡದಂಡೆ ಕಾಲುವೆಯಡಿ ನೀರಾವರಿ ಪ್ರಮಾಣ ಸರಿಯಾಗಿ ನಡೆದಿದ್ದು, ಅಲ್ಲಿಯೂ ಸಮಸ್ಯೆ ಇದ್ದಲ್ಲಿ ಕಡೆ ಪ್ರತ್ಯೇಕ ಯೋಜನೆ ರೂಪಿಸಿ, ನೀರು ಕೊಡಲಾಗುತ್ತಿದೆ. ಆದರೆ, ಘಟಪ್ರಭಾ ಬಲದಂಡೆ ಯೋಜನೆಯಡಿ 56,802 ಎಕರೆ ಭೂಮಿಗೆ ಸಂಬಂಧಿಸಿದಂತೆ ಕಾಲುವೆ ನಿರ್ಮಾಣ ಮಾಡಿ 18 ವರ್ಷ ಕಳೆದರೂ ನೀರು ಬಂದಿಲ್ಲ. ಮುಖ್ಯವಾಗಿ ಈ ಪ್ರದೇಶ ಯೋಜನೆಯ ಕೊನೆ ಹಂತದ ಭೂಮಿಯಾಗಿದ್ದರಿಂದ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಇಂದಲ್ಲ ನಾಳೆ ನಮ್ಮ ಭೂಮಿಗೆ ನೀರು ಬರಲಿದೆ ಎಂದು ಚಾತಕ ಪಕ್ಷಿಯಂತೆ ಕಾಯ್ದು ಕುಳಿತಿದ್ದ
ರೈತರು, 18 ವರ್ಷಗಳ ಬಳಿಕ ಮೌನ ಮುರಿದಿದ್ದಾರೆ. ಇದಕ್ಕಾಗಿ ಹಲವು ಬಾರಿ ಹೋರಾಟ ಮಾಡಿದ್ದಾರೆ. ಸಿಎಂ, ನೀರಾವರಿ ಸಚಿವರಿಗೆ ನೂರಾರು ಮನವಿ ಪತ್ರಗಳು ಹೋಗಿವೆ. ಪ್ರತ್ಯುತ್ತರ ಬಿಟ್ಟರೆ ಹೊಲಕ್ಕೆ ನೀರು ಬಂದಿಲ್ಲ. ಹೀಗಾಗಿ ರೈತರು ಈಗ ಸರ್ಕಾರಕ್ಕೆ ಹೊಸ ಬೇಡಿಕೆ ಇಟ್ಟಿದ್ದಾರೆ.
ಸಾಲ ಮನ್ನಾ ಹಣ ಬೇಡ: ಕಗಲಗೊಂಬ, ಕಟಗೇರಿ, ಹೂಲಗೇರಿ, ಕೆರಕಲಮಟ್ಟಿ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರ ಎಕರೆ ಭೂಮಿ ಇದೆ. ಈ ಭಾಗದ ಪ್ರತಿಯೊಬ್ಬ ರೈತರು ಸಾಲ ಮನ್ನಾ ಹಣವನ್ನು ಸರ್ಕಾರಕ್ಕೇ ಬಿಟ್ಟು ಕೊಡುತ್ತೇವೆ. ಸರ್ಕಾರ ನಮ್ಮ ಭೂಮಿಗೆ (ಈಗಾಗಲೇ ನಿರ್ಮಾಣ ಆಗಿದ್ದರಿಂದ ಭೂಸ್ವಾಧೀನ ಅಗತ್ಯವಿಲ್ಲ) ನೀರಾವರಿ ಕಲ್ಪಿಸಬೇಕು. ಅಗತ್ಯ ಬಿದ್ದರೆ, ಸರ್ಕಾರ ಅವಕಾಶ ಕಲ್ಪಿಸಿದರೆ, ರೈತರಿಂದ ಕನಿಷ್ಠ ಪ್ರಮಾಣದ ಹಣ ಸಂಗ್ರಹಿಸಿ (ಪ್ರತಿ ರೈತನಿಂದ 6 ಸಾವಿರದಂತೆ) ಕೊಡಲೂ ಸಿದ್ಧರಿದ್ದೇವೆ. ಸಾಲ ಮನ್ನಾ ಹಣ ಜತೆಗೆ ನಾವು ಸಂಗ್ರಹಿಸಿ ಕೊಡುವ ಹಣ ಬಳಸಿಕೊಂಡು ನೀರು ಕಾಣದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಯೋಜನೆಯೂ ಸಿದ್ಧ: ಘಟಪ್ರಭಾ ಬಲದಂಡೆ ಯೋಜನೆಯ 56,802 ಎಕರೆ ಭೂಮಿಗೆ ನೀರು ಕೊಡಲು ರೈತರೇ ಖಾಸಗಿ ಎಂಜಿನಿಯರ್ ಮೂಲಕ ಯೋಜನೆ ಸಿದ್ಧಪಡಿಸಿದ್ದಾರೆ. ಜತೆಗೆ ರೈತರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳೂ ಬೀಳಗಿ ತಾಲೂಕಿನ ಅನಗವಾಡಿ ಸೇತುವೆ ಬಳಿ ಘಟಪ್ರಭಾ ನದಿಯ ನೀರನ್ನು ಎತ್ತಿ, ಹೂಲಗೇರಿ ಬಳಿ ಇರುವ ಕಾಲವೆಗೆ ಏತ ನೀರಾವರಿ ಯೋಜನೆ ಮೂಲಕ ನೀರು ಕೊಡುವ ಯೋಜನೆ ರೂಪಿಸಿದ್ದಾರೆ. ಇದಕ್ಕೆ 150 ಕೋಟಿ ಅನುದಾನ ಬೇಕಿದ್ದು, ನಮ್ಮ ಭಾಗದ ಎಲ್ಲ ರೈತರಿಗೆ ಬರುವ ಸಾಲ ಮನ್ನಾ ಯೋಜನೆಯ ಹಣವನ್ನೇ ಇದಕ್ಕೆ ಬಳಿಸಿಕೊಳ್ಳಿ ಎಂಬುದು ರೈತರ ಒತ್ತಾಯ.
ಎಷ್ಟು ಗ್ರಾಮಗಳಿಗೆ ಲಾಭ?
ಮೂರು ತಾಲೂಕಿನ 30 ಹಳ್ಳಿಗಳಿಗೆ ಅನುಕೂಲವಾಗಲಿದೆ. ಕಗಲಗೊಂಬ, ಕೆರಕಲಮಟ್ಟಿ, ಹೂಲಗೇರಿ, ಸೂಳಿಕೇರಿ,
ಕಟಗೇರಿ, ನೀರಲಕೇರಿ, ಶಿರೂರ, ಮಲ್ಲಾಪುರ, ಬೆನಕಟ್ಟಿ, ಮನ್ನಕೇರಿ, ಬೇವಿನಮಟ್ಟಿ, ಕಮತಗಿ, ಇಂಗಳಗಿ, ಹಿರೇಶೆಲ್ಲಿಕೇರಿ, ತುಳಸಿಗೇರಿ, ಸೀಮಿಕೇರಿ, ಗೋವಿನಕೊಪ್ಪ, ಚಿಕ್ಕಸಂಶಿ, ಮುರನಾಳ, ಛಬ್ಬಿ, ಬನ್ನಿದಿನ್ನಿ, ಸೊಕನಾದಗಿ, ದೇವನಾಳ, ಮುಚಖಂಡಿ, ಹಂಗರಗಿ, ಬಾಗಲಕೋಟೆ, ಹೊನ್ನಾಕಟ್ಟಿ, ಲಿಂಗಾಪುರ, ಹಿರೇಬೂದಿಹಾಳ ಮುಂತಾದ ಗ್ರಾಮಗಳಿಗೆ ಅನುಕೂಲವಾಗಲಿದೆ.
ನಮ್ಮ ಭಾಗದಲ್ಲಿ 18 ವರ್ಷಗಳ ಹಿಂದೆ ಕಾಲುವೆ ನಿರ್ಮಾಣ ಮಾಡಲಾಗಿದೆ. ಈವರೆಗೆ ನೀರು ಬಂದಿಲ್ಲ. ಎಷ್ಟೇ ಒತ್ತಾಯಿಸಿದರೂ ಹಿಡಕಲ್ ಡ್ಯಾಂನಲ್ಲಿ ನೀರಿಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಅನಗವಾಡಿ ಬಳಿ ಘಟಪ್ರಭಾ ನದಿಯಿಂದ ಬಲದಂಡೆ ಯೋಜನೆಗೆ ನೀರು ಹರಿಸಬೇಕು. ಇದಕ್ಕಾಗಿ 150 ಕೋಟಿ ಮೊತ್ತದ ಯೋಜನೆ ಸಿದ್ಧವಿದೆ. ಸರ್ಕಾರ ನಮಗೆ ಸಾಲ ಮನ್ನಾ ಹಣ ಕೊಡುವುದು ಬೇಡ. ಅದೇ ಹಣ ಇದಕ್ಕೆ ಬಳಿಸಿಕೊಳ್ಳಲಿ. ಸಚಿವ ಸಂಪುಟ ಸಭೆಯಲ್ಲಿ ವಿಶೇಷ ಅನುಮತಿ ಪಡೆದು ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಈ ನಿಟ್ಟಿನಲ್ಲಿ ಸಿಎಂ, ಕೃಷಿ ಸಚಿವರು ಹಾಗೂ ಜಲಸಂಪನ್ಮೂಲ ಸಚಿವರಿಗೆ ನಾಲ್ಕು ಗ್ರಾಮಗಳ ರೈತರು ಒಪ್ಪಿಗೆಯ ಮನವಿ ಸಲ್ಲಿಸುತ್ತೇವೆ.
ವೆಂಕಪ್ಪ ಕಲಾದಗಿ ಮತ್ತು ಗಿರೀಶ ಪಾಟೀಲ, ಕಗಲಗೊಂಬ ರೈತರು
ಶ್ರೀಶೈಲ ಕೆ. ಬಿರಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.