ಬನದ ಸಿರಿ ನಮೋ ಬನಶಂಕರಿ
Team Udayavani, Jan 2, 2018, 11:00 AM IST
ಬಾದಾಮಿ ಅಂದಾಕ್ಷಣ ಚಾಲುಕ್ಯ ಅರಸರು ಬಿಟ್ಟು ಹೋದ ಐತಿಹಾಸಿಕ ಕಟ್ಟಡಗಳ ನೆನಪು ಒಂದೆಡೆಯಾದರೆ, ಕೋಟಿ ಕೋಟಿ ಭಕ್ತರ ಆರಾಧ್ಯ ದೇವತೆ ಬನಶಂಕರಿ ದೇವಸ್ಥಾನ ಥಟ್ಟನೆ ನೆನಪಾಗುತ್ತದೆ. ಪ್ರತಿ ವರ್ಷ ಹೊಸ ವರ್ಷದ ಮೊದಲ ತಿಂಗಳು ಈ ದೇವಿಯ ಆರಾಧನೆ ತಿಂಗಳು ಕಾಲ ನಡೆಯುತ್ತದೆ. ಇಡೀ ಉತ್ತರ ಕರ್ನಾಟಕದಲ್ಲಿ ತಿಂಗಳ ಕಾಲ ನಡೆಯುವ ವೈವಿಧ್ಯಮಯ ಜಾತ್ರೆಯಲ್ಲಿ ಬನಶಂಕರಿ ದೇವಿಯಜಾತ್ರೆ ಮೊದಲ ಸ್ಥಾನದಲ್ಲಿದೆ.
ಬಾದಾಮಿ ಪಟ್ಟಣದಿಂದ ಕೇವಲ 5 ಕಿಮೀ ದೂರದಲ್ಲಿರುವ ಬನಶಂಕರಿ ಪುಣ್ಯಕ್ಷೇತ್ರ, ಮಲಪ್ರಭಾ ನದಿಯ ಸನಿಹದಲ್ಲಿದೆ.
ರಾಜ್ಯದ ಅತ್ಯಂತ ಪ್ರಾಚೀನ ಹಾಗೂ ಪವಿತ್ರ ತೀರ್ಥ ಕ್ಷೇತ್ರಗಳಲ್ಲಿ ಇದೂ ಒಂದು. ಕ್ರಿ.ಶ 1019ರ ರಾಷ್ಟ್ರಕೂಟರ ಕಾಲದ ಶಾಸನದಲ್ಲಿ ಇದನ್ನು “ಬನದದೇವಿ’ ಎಂದು ಬಣ್ಣಿಸಲಾಗಿದೆ. ಕ್ರಿ.ಶ.1533ರ ವಿಜಯನಗರ ಅಚ್ಯುತರಾಯನ ಶಾಸನದಲ್ಲಿಯೂ ದೇವಿಯನ್ನು “ಬನದ
ಮಹಾಮಾಯೆ’ ಎಂದು ಕರೆಯಲಾಗಿದೆ. ಈ ದೇವಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಾಮಿಯ ಚಾಲುಕ್ಯ ಅರಸರು, ಈ ದೇವಿಯನ್ನು ತಮ್ಮ ಆರಾಧ್ಯ ದೇವತೆಯನ್ನಾಗಿ ಪೂಜಿಸುತ್ತಿದ್ದರು ಎಂಬ ಉಲ್ಲೇಖವಿದೆ.
ತಿಲಕಾರಣ್ಯದಲ್ಲಿ ದುರ್ಗರಕ್ತ, ಮತ್ತು ಧೂಮ್ರಾಕ್ಷರೆಂಬ ಕ್ರೂರ ರಾಕ್ಷಸರು, ಸರ್ವರಿಗೂ ತೊಂದರೆ ಕೊಡುತ್ತಾ ದೇವಲೋಕಕ್ಕೂ ದಾಳಿಯನ್ನಿಟ್ಟರು. ಅವರ ಉಪಟಳ ತಾಳಲಾರದೆ ದೇವತೆಗಳು, ದೇವಿ ಆದಿಶಕ್ತಿ ಅವರ ಮೊರೆಯನ್ನು ಮನ್ನಿಸಿ ಅತ್ಯಂತ ಉಗ್ರ ರೂಪ ತಾಳುತ್ತಾಳೆ. ತಿಲಕಾರಣ್ಯಕ್ಕೆ ಬಂದು ಆ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾಳೆ.
ದೇವಿಯ ಉಗ್ರರೂಪವನ್ನು ನೋಡಿದ ದೇವತೆಗಳು, ತ್ರಿದಂಡ ಮುನಿದ ಶರಣು ಎಂದರು. ಉಗ್ರರ ಸಂಹಾರಕ್ಕೆ ಉಗ್ರರೂಪ ತಾಳಿದ್ದ ದೇವಿ, ದೇವತೆಗಳ ಭಕ್ತಿಗೆ ಒಲಿದು ಶಾಂತ ಸ್ವರೂಪಳಾಗಿ ಬನಶಂಕರಿಯಲ್ಲಿ ನೆಲೆ ನಿಂತಳು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬನಶಂಕರಿ ದೇವಿಯ ದರ್ಶನ ಪಡೆಯಲೆಂದೇ ದೇಶದ ರಾಜಧಾನಿ ದೆಹಲಿಯಿಂದ ಹಿಡಿದು ವಿದೇಶಗಳಿಂದಲೂ ಹಲವಾರು ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಸದ್ಯ ಉಪರಾಷ್ಟ್ರಪತಿ ಆಗಿರುವ ವೆಂಕಯ್ಯ ನಾಯ್ಡು ಅವರ ಅತ್ಯಂತ ಭಕ್ತಿಭಾವದ ದೇವಸ್ಥಾನವಿದು. ಉತ್ತರ ಕರ್ನಾಟಕದ ಯಾವುದೇ ಭಾಗಕ್ಕೆ ಅವರು ಬಂದರೂ ಈ ದೇವಿಯ ದರ್ಶನ ಪಡೆದು ಮರಳುತ್ತಾರೆ. ಅವರಲ್ಲದೇ ರಾಜ್ಯ, ರಾಷ್ಟ್ರಮಟ್ಟದ ಹಲವಾರು ಗಣ್ಯರು ಈ ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ.
ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವಂತೆ ಆಯಾ ಕ್ಷೇತ್ರದ ದೇವಾನು ದೇವತೆಗಳ ಜಾತ್ರೆ ಮತ್ತು ಉತ್ಸವಗಳು ನಡೆಯುತ್ತಲೇ ಇರುತ್ತವೆ. ಆದರೆ ಬಾದಾಮಿ ಬನಶಂಕರಿ ದೇವಿ ಜಾತ್ರಾ ಮಹೋತ್ಸವ ತನ್ನ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರದೆ ರಾಜ್ಯ, ಹೊರ ರಾಜ್ಯಗಳ ಕೋಟ್ಯಂತರ ಭಕ್ತರನ್ನು ಹೊಂದಿರುವ ಬಹು ದೊಡ್ಡ ಕ್ಷೇತ್ರವಿದು. ಈ ಜಾತ್ರೆ, ಕಲಾವಿದರಿಗೆ ಮತ್ತು ಸಾವಿರಾರು ಜನ ವ್ಯಾಪಾರಸ್ಥರಿಗೆ ಆರ್ಥಿಕ ಶಕ್ತಿಯನ್ನೂ ಒದಗಿಸುತ್ತ ಬಂದಿದೆ. ಜಾತ್ರೆ ಒಂದರಲ್ಲಿಯೇ ಎಲ್ಲ ಮೂಲಗಳಿಂದ ಸೇರಿ ಕೋಟ್ಯಂತರ ರೂ.
ವ್ಯಾಪಾರ, ವಹಿವಾಟು ನಡೆಯುತ್ತದೆ. ಭಕ್ತಿ -ಭಾವಗಳ ಸಂಗಮದ ಜೊತೆಗೆ ಮನರಂಜನೆಯೂ ಈ ಜಾತ್ರೆಯ ವಿಶೇಷತೆಗಳಲ್ಲಿ ಮೊದಲಿದೆ.
ಬನಶಂಕರಿ ದೇವಿಯ ಸ್ಥಳದಲ್ಲಿ ನೂರಾರು ಅಂಗಡಿ- ಮುಂಗಟ್ಟುಗಳು ರಸ್ತೆಯ ಎರಡೂ ಬದಿಯಲ್ಲಿ ತಲೆ ಎತ್ತಿ ಯಾತ್ರಿಕರನ್ನು ತನ್ನತ್ತ ಸೆಳೆಯುತ್ತವೆ. ಜನರ ಆಡು ಭಾಷೆಯಲ್ಲಿ “ಶಂಕರಿ’ ಜಾತ್ರೆ ಎಂದು ಕರೆಯಲಾಗುತ್ತದೆ. ಈ ಜಾತ್ರೆಗೆಂದು ಸಾವಿರಾರು ಜನತೆ ಒಟ್ಟಿಗೆ ಸೇರುವುದನ್ನು ನೋಡುವುದೆ ಒಂದು ಸಂಭ್ರಮ. ಚಾಲುಕ್ಯರ ಕುಲದೇವತೆ ಆ ಶಕ್ತಿಯ ಆವತಾರವಾದ ಈ ದೇವಿ ಪ್ರಕೃತಿ ಮಡಿಲ್ಲಲ್ಲಿ ಹುದುಗಿ ಸೃಷ್ಟಿ ಸೌಂದರ್ಯವನ್ನೆಲ್ಲ ತನ್ನಲ್ಲಿಟ್ಟುಕೊಂಡು ಮನಃಶಾಂತಿ ಅರಸಿ, ತನ್ನೊಡಲಿಗೆ ಬಂದವರ ಕಷ್ಟಗಳನ್ನು ದೂರ ಮಾಡುತ್ತಾಳೆ ಎಂಬ ಅಪಾರ ನಂಬಿಕೆ- ವಿಶ್ವಾಸ ಭಕ್ತ ಕುಲಕೋಟಿಗಿದೆ
ಜಾತ್ರೆ ಜತೆಗೆ ಪ್ರವಾಸದ ಮಜಾ
ಬನಶಂಕರಿ ಜಾತ್ರೆಗೆ ಬಂದವರು ಪ್ರವಾಸದ ಖುಷಿಯನ್ನೂ ಸಂಭ್ರಮಿಸಿ ಹೋಗುತ್ತಾರೆ. ಕ್ರಿ.ಶ 6ನೇ ಶತಮಾನದವರೆಗೆ ಚಾಲುಕ್ಯ ದೊರೆಗಳಿಗೆ ರಾಜಧಾನಿಯಾಗಿದ್ದ ಹೆಮ್ಮೆ ಬಾದಾಮಿ ಪಟ್ಟಣಕ್ಕಿದೆ. ಚಾಲುಕ್ಯ ಅರಸರ ಭವ್ಯ ಪರಂಪರೆಯ ಅಪೂರ್ವ. ವಾಸ್ತುಶಿಲ್ಪ, ಕಲಾ ಸಂಪತ್ತು ಇಂದಿಗೂ ಕಲಾರಸಿಕರನ್ನು, ಸಂಶೋಧನಾ ವಿದ್ಯಾರ್ಥಿಗಳನ್ನು, ಇಡೀ ವಿಶ್ವದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಹೀಗಾಗಿ ಜಾತ್ರೆಗಾಗಿ ಬಂದವರು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡದೆ ಮರಳುವುದಿಲ್ಲ
ಪುಣ್ಯಸ್ನಾನಕ್ಕೆ ನೀರಿನ ವ್ಯವಸ್ಥೆ
ಜಾತ್ರೆಗೆ ಬರುವ ಕೋಟಿ ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿ ದೇವಿಯ ದರ್ಶನ ಪಡೆಯುವುದು ಸಂಪ್ರದಾಯ. ಅದಕ್ಕಾಗಿಯೇ ದೇವಸ್ಥಾನ ಎದುರಿನ ಹರಿದ್ರಾತೀರ್ಥ ಹೊಂಡವನ್ನೇ ಆಶ್ರಯಿಸುತ್ತಾರೆ. ಆದರೆ, ಬರದಿಂದ ಮೂರು ವರ್ಷಗಳಿಂದಲೂ ಈ ಹೊಂಡದಲ್ಲಿ ನೀರಿಲ್ಲ. ಈ ಬಾರಿ 3.25 ಕೋಟಿ ವೆಚ್ಚದಲ್ಲಿ ಮಲಪ್ರಭಾ ಎಡದಂಡೆ ಕಾಲುವೆಯಿಂದ ಹರಿದ್ರಾತೀರ್ಥ ಹೊಂಡಕ್ಕೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿದೆ.
ಹಳ್ಳಿ ಬಂಡಿಗೆ ಹೊಸ ಎತ್ತು
ರಥೋತ್ಸವದ ಮೂರನೇ ದಿನ ಸಮಸ್ತ ಗ್ರಾಮಸ್ಥರು ಸೇರಿಕೊಂಡು ಬಂಡಿಯ ಅದ್ಧೂರಿ ಮೆರವಣಿಗೆ ನಡೆಸುತ್ತಾರೆ. ಬರುವಾಗ ಬಂಡಿಗಳನ್ನು ಭಕ್ತರೇ ಎಳೆದು ತಂದಿರುತ್ತಾರೆ. ಆ ಬಂಡಿ ಮರಳಿ ಮಾಡಲಗೇರಿಗೆ ಹೋಗಲು ಇಲ್ಲಿಂದ ಹೊಸ ಎತ್ತುಗಳನ್ನು ಖರೀದಿಸಿ ಕೊಡುವುದು ಸಂಪ್ರದಾಯ. ಅದಕ್ಕಾಗಿಯೇ ಗ್ರಾಮಸ್ಥರು ಸಭೆ (ದೈವದವರು) ಸೇರಿ ಹಳ್ಳಿ ಬಂಡಿಗೆ ಎತ್ತುಗಳ ಖರೀದಿಯ ಜವಾಬ್ದಾರಿ ವಹಿಸುತ್ತಾರೆ.
ಜಾತ್ರೆಯ ಸಲುವಾಗಿ ವಿಶೇಷವಾಗಿ ಹಳ್ಳಿ ಬಂಡಿಗೆ
ಕಟ್ಟಲು ಜೋಡೆತ್ತು ಖರೀದಿ ಪ್ರಕ್ರಿಯೆ ನಡೆಯುತ್ತದೆ. ಇಡೀ ಜಾನುವಾರು ಜಾತ್ರೆಯಲ್ಲಿ ಅತ್ಯಂತ ಶುಭ್ರ ಹಾಗೂ ಕಟ್ಟುಮಸ್ತಾದ ಎತ್ತುಗಳ ಹುಡುಕಾಟದಲ್ಲಿ ಹಿರಿಯರು ತೊಡಗಿರುತ್ತಾರೆ. ಸುಮಾರು 2 ಲಕ್ಷಕ್ಕೂ ಅಧಿಕ ಹಣ ನೀಡಿ, ಹಳ್ಳಿ ಬಂಡಿಗೆ ಕಟ್ಟುವ ಎತ್ತುಗಳ ಖರೀದಿ
ನಡೆಯುತ್ತದೆ. ರೋಣ ತಾಲೂಕಿನ ಮಾಡಲಗೇರಿ ಭಕ್ತರು ಹಳ್ಳಿ ಬಂಡಿಯನ್ನು ಅವರೇ ಎಳೆದುಕೊಂಡು ಕಾಲ್ನಡಿಗೆಯಲ್ಲಿ ಬಂದಿರುತ್ತಾರೆ. ಹಳ್ಳಿ ಬಂಡಿಯಲ್ಲಿದ್ದ ಹಗ್ಗವನ್ನು ದೇವಿಗೆ ಸಮರ್ಪಿಸಿದ ಬಳಿಕ ಬಾದಾಮಿ ದೇವಿಯ ಭಕ್ತರು ಆ ಹಳ್ಳಿ ಬಂಡಿಗೆ ಎತ್ತುಗಳನ್ನು ಹೊಸದಾಗಿ ಖರೀದಿಸಿ ನೀಡುವ ನೀಡುವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.
ಪಾದಯಾತ್ರೆಯ ಸಂಭ್ರಮ
ಕರ್ನಾಟಕವೂ ಸೇರಿದಂತೆ ರಾಜ್ಯದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ಈ ದೇವಿಯ ಜಾತ್ರೆಗೆ ಬರುತ್ತಾರೆ. ಅಲ್ಲದೇ ವಿಜಯಪುರ ಜಿಲ್ಲೆಯ ಮಮದಾಪುರ, ಇಳಕಲ್ಲ, ಹುನಗುಂದ ಭಾಗದಿಂದ ಪಾದಯಾತ್ರೆ ಮೂಲಕ ಭಕ್ತ ಸಮೂಹ ಇಲ್ಲಿಗೆ ಬರುತ್ತದೆ. ಪಾದಯಾತ್ರೆ ವೇಳೆ ದೇವಿಯ ಹಾಡುಗಳನ್ನು ಹಾಡುತ್ತ ಬರುವುದೇ ವಿಶೇಷ.. ಪಾದಯಾತ್ರೆ ಕೈಗೊಂಡು ದೇವಿಯ ನಾಮಸ್ಮರಣೆ ಮೂಲಕ ಬಂದು ಹರಿದ್ರಾ ತೀರ್ಥ ಹೊಂಡದಲ್ಲಿ ಮತ್ತು ಸರಸ್ವತಿ ಹಳ್ಳದಲ್ಲಿ ಸ್ನಾನ ಮಾಡಿ ದೇವಿ ದರ್ಶನ ಪಡೆಯುತ್ತಾರೆ. ಬಾದಾಮಿ ಹಾಗೂ ಸುತ್ತಲಿನ ಗ್ರಾಮಗಳ ಜನರೂ ಬನದ ಹುಣ್ಣಿಮೆ ನಿಮಿತ್ತ ಐದು ದಿನಗಳವರೆಗೆ ಪಾದಯಾತ್ರೆ ಮೂಲಕ ಇಲ್ಲಿಗೆ ಬಂದು ದರ್ಶನ ಪಡೆಯುತ್ತಾರೆ.
ವೃತ್ತಿ ರಂಗಭೂಮಿಗೆ ವೇದಿಕೆ
ಈ ಬಾರಿಯ ಜಾತ್ರೆಯಲ್ಲೂ ನಾಟಕಗಳ ಸುಗ್ಗಿ ರಂಗಾಸಕ್ತರಿಗಿದೆ. ಮೂಂದರಗಿಯ ಶ್ರೀ 1008 ಜಗದ್ಗುರು ರೇಣುಕಾಚಾರ್ಯ ನಾಟ್ಯ ಸಂಘದಿಂದ “ಆಯಾ ನೋಡಿ ಪಾಯಾ ಹಾಕು’, ತಾಳಿಕೋಟಿಯ ಗುರುಖಾಸೆYತೇಶ್ವರ ನಾಟ್ಯ ಸಂಘದ “ಮಿಲಿó ಮಾವ ಕಂತ್ರಿ ಅಳಿಯ’, ಮಂಡಲಗಿರಿಯ ಗುರು ತೋಂಟದಾರ್ಯ ನಾಟ್ಯ ಸಂಘದಿಂದ “ತಾಯಿ ನೀಡಿದ ಶಿಕ್ಷೆ’, ಚಿತ್ತರಗಿಯ ಕುಮಾರ ವಿಜಯ ನಾಟಕ ಸಂಘದಿಂದ “ಇದ್ದಾಗ ಬರ್ತಾರ ಬಿದ್ದಾಗ ನಗ್ತಾರ’, ಮಂಡಲಗಿರಿಯ ಗುರು ಸಿದ್ದಲಿಂಗೇಶ್ವರ ನಾಟ್ಯ ಸಂಘದಿಂದ “ಗುಂಗು ಹಿಡಿಶ್ಯಾಳ ಗಂಗಿ’, ಅಶಾಪುರದ ಸಂಗಮೇಶ್ವರ ನಾಟ್ಯ ಸಂಘದಿಂದ “ಮಂಡಿ ಮಾಲಿಂಗಿ ಗಂಡ ಹಕೀಮ್’, ಕುಂಟೋಜಿಯ ಘನಮಂಟೇಶ್ವರ ನಾಟ್ಯ ಸಂಘದಿಂದ “ನನ್ನ ಹೆಂಡ್ತಿ ಯಾವಾಕೀ ನಿನ್ನ ಹೆಂಡ್ತಿ ಯಾವಾಕೀ’, ಕೆಬಿಆರ್ ಡ್ರಾಮಾ ಕಂಪನಿಯಿಂದ “ಗೆದಿಯಬೇಕು ಮಗಳೆ ಗೆದಿಯಬೇಕು’, ಗುಬ್ಬಿಯ ಬಿಎಸ್ ಆರ್ ನಾಟಕ ಕಂಪನಿಯಿಂದ “ನಗಿಸಿ ನಗಿಸಿ ಅಳಸ್ತಾಳ’, ಜೇವರಗಿಯ ವಿಶ್ವ ಜ್ಯೋತಿ ಪಂಚಾಕ್ಷರ ನಾಟ್ಯ ಸಂಘದಿಂದ “ಚಡ್ಡಿ ಚಿಲಿಕ್ಯಾ ಮಡ್ಡಿ ಮಲಿಕ್ಯಾ’ ಸೇರಿದಂತೆ ಸಮಾರು 10 ನಾಟಕಗಳು ಮತ್ತು 4 ಸಿನಿಮಾ ಥೇಟರ್‌ಗಳು ಇಲ್ಲಿವೆ.
ರಥಕ್ಕೆ ತವರು ಮನೆಯ ಹಗ್ಗ
ಬನಶಂಕರಿ ದೇವಿ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಬಳಸುವ ಹಗ್ಗದ ಬಗ್ಗೆಯೇ ಒಂದು ರೋಚಕ ಪರಂಪರೆ ಇದೆ. ಪ್ರತಿ ವರ್ಷವೂ ಈ ಜಾತ್ರೆಗೆ ಗದಗ ಜಿಲ್ಲೆಯ ರೋಣ ತಾಲೂಕಿನ ಮಾಡಲಗೇರಿ ಗ್ರಾಮದ ಗೌಡರ ಮನೆತನದಿಂದ ರಥ ಎಳೆಯುವ ಹಗ್ಗ ತರಲಾಗುತ್ತದೆ. ಶೃಂಗಾರಗೊಂಡ ಎತ್ತಿನ ಬಂಡಿಯಲ್ಲಿ ಹಗ್ಗವನ್ನಿಟ್ಟು, ಅದಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಾಡಲಗೇರಿಯಿಂದ ಬಾದಾಮಿಯತ್ತ ಎತ್ತಿನ ಬಂಡಿ ಬಂದು (ಎತ್ತಿನ ಬಂಡಿ ಇದ್ದರೂ ಅದನ್ನು ಭಕ್ತರೇ ಎಳೆದುಕೊಂಡು ಬರುವುದು ಸಂಪ್ರದಾಯ. ಇದಕ್ಕೆ ಹಳ್ಳಿ ಬಂಡಿ ಎಂದೇ ಕರೆಯುತ್ತಾರೆ) ಬನದ ಹುಣ್ಣಿಮೆಯಂದು ದೇವಿಗೆ ಸಮರ್ಪಿಸುತ್ತಾರೆ. ಬನಶಂಕರಿ ದೇವಿಯ ತವರು ಮನೆಯಿಂದ ರಥದ ಹಗ್ಗ ತರಲಾಗುತ್ತದೆ ಎಂಬ ಪ್ರತೀತಿಯೂ ಇದೆ. ಇನ್ನೊಂದು ವಿಶೇಷವೆಂದರೆ, ಎರಡೆರಡು ಎತ್ತಿನ ಜೋಡಿಯನ್ನು ಒಂದೇ ಬಂಡಿಗೆ ಕಟ್ಟಿಕೊಂಡು ಮಾಡಲಗೇರಿ ಗ್ರಾಮದಿಂದ ಬನಶಂಕರಿವರೆಗೆ ದೇವಿ ನಾಮಸ್ಮರಣೆ ಮಾಡುತ್ತ, ಬಂಡಿ ಎಳೆಯುತ್ತ ಕಾಲ್ನಡಿಗೆ ಮೂಲಕ ಬಂದು ತಲುಪುವ ಪದ್ಧತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಮಾಡಲಗೇರಿಯಿಂದ ಸಂಜೆಯ ಹೊತ್ತಿಗೆ ಬನಶಂಕರಿಗೆ ತಲುಪಿ, ನಂತರ ತೇರಿನ ಹಗ್ಗಕ್ಕೆ ಸಾಂಪ್ರದಾಯಕವಾಗಿ ಪೂಜೆ ಸಲ್ಲಿಸಿ ರಥಕ್ಕೆ ಕಟ್ಟಲಾಗುತ್ತದೆ. ಈ ಸಂದರ್ಭದಲ್ಲಿ ಇಡೀ ದಿನ ಉಪವಾಸ ವ್ರತ ಆಚರಿಸಿ ರಥೋತ್ಸವದ ನಂತರ ವ್ರತವನ್ನು ಪೂರ್ಣಗೊಳಿಸುತ್ತಾರೆ.
ಈ ಬಾರಿ ಮದ್ಯ- ಮಾಂಸ ನಿಷೇಧ
ಪಾವಿತ್ರ್ಯತೆ ಕಾಪಾಡಲು ಬನಶಂಕರಿ ದೇವಸ್ಥಾನ ಟ್ರಸ್ಟ್ ವಿಶೇಷ ಆದ್ಯತೆ ನೀಡಿದೆ. ಮೊಟ್ಟೆ, ಕೋಳಿ, ಮೇಕೆ ಸಹಿತ ಯಾವುದೇ ಮಾಂಸಾಹಾರ ಮಾರಾಟ ಮಾಡುವಂತಿಲ್ಲ. ಅಂತಹ ಮಳಿಗೆಗಳಿಗೂ ಈ ಬಾರಿ ಅನುಮತಿ ಕೊಟ್ಟಿಲ್ಲ. ಇದೆಲ್ಲಕ್ಕಿಂತ ಮಿಗಿಲಾಗಿ ಬನಶಂಕರಿ ದೇವಸ್ಥಾನ ಮತ್ತು ಈ ಗ್ರಾಮ ಚೊಳಚಗುಡ್ಡ ಗ್ರಾಪಂ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇದೇ ಮೊದಲ ಬಾರಿಗೆ ಮದ್ಯ ಮಾರಾಟ- ಸೇವನೆ ಕೂಡ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಪ್ರತಿವರ್ಷ ಬನಶಂಕರಿ ಜಾತ್ರೆ ಅದ್ಧೂರಿಯಾಗಿ ನಡೆಯುತ್ತದೆ. ಭಕ್ತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮಲಪ್ರಭಾ ಎಡದಂಡೆ ಕಾಲುವೆ ಮೂಲಕ ಹರಿದ್ರಾತೀರ್ಥ ಹೊಂಡಕ್ಕೆ ನೀರು ತುಂಬಿಸಲು ಶಾಶ್ವತ ಯೋಜನೆ ರೂಪಿಸಿ ಜಾರಿಗೊಳಿಸಲಾಗಿದೆ. ಅದಕ್ಕಾಗಿ 3.25 ಕೋಟಿ ರೂ. ಅನುದಾನ ಸರ್ಕಾರ ನೀಡಿದೆ. ಇದರಿಂದ ಪ್ರತಿ ವರ್ಷವೂ ಹೊಂಡ ತುಂಬಲಿದೆ.
ಬಿ.ಬಿ. ಚಿಮ್ಮನಕಟ್ಟಿ, ಬಾದಾಮಿ ಶಾಸಕ
ಬನಶಂಕರಿ ದೇವಿ ಜಾತ್ರೆ ಈ ಭಾಗದ ವಿಶಿಷ್ಟ ಹಾಗೂ ಅದ್ಧೂರಿ ಜಾತ್ರೆ. ಪುಣ್ಯ ಸ್ನಾನಕ್ಕಾಗಿ ಹರಿದ್ರಾತೀರ್ಥ ಹೊಂಡಕ್ಕೆ ನೀರು ತುಂಬಿಸಬೇಕೆಂಬ ಒತ್ತಾಯವಿತ್ತು. ನವಿಲುತೀರ್ಥ ಜಲಾಶಯದಿಂದ 10 ದಿನಗಳ ಕಾಲ ನಿತ್ಯ 400 ಕ್ಯುಸೆಕ್ ನೀರು ಬಿಟ್ಟಿದ್ದು, ನಾವು ನಿತ್ಯ ಕಾಲುವೆ ಪಾತ್ರದಲ್ಲಿದ್ದು, ಹೊಂಡಕ್ಕೆ ನೀರು ಬರುವಂತೆ ನೋಡಿಕೊಂಡಿದ್ದೇವೆ. ಜ.4ರವರೆಗೂ ನೀರು ಬರಲಿದೆ.
ಶಂಕರಗೌಡ ಸೋಮನಾಳ, ಉಪ ವಿಭಾಗಾಧಿಕಾರಿ
ಬನಶಂಕರಿ ಜಾತ್ರೆ ಇತಿಹಾಸ ಪ್ರಸಿದ್ಧ. ಜಾತ್ರೆ ಅಂಗವಾಗಿ ತಾಲೂಕಾಡಳಿತದಿಂದ ಎಲ್ಲ ರೀತಿಯ ಸಿದ್ಧತೆ ಮಾಡಿದೆ. ಸ್ವತ್ಛತೆ ಕಾಪಾಡಲು ಗ್ರಾಪಂಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರು, ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ರಥೋತ್ಸವ ಸುಸೂತ್ರವಾಗಿ ನಡೆಯಲು ಲೋಕೋಪಯೋಗಿ ಇಲಾಖೆಯಿಂದ ರಥದ ಪರಿಶೀಲನೆ ಕೂಡ ನಡೆಸಲಾಗಿದೆ.
ಎಸ್.ರವಿಚಂದ್ರ, ತಹಶೀಲ್ದಾರ್, ಬಾದಾಮಿ
ಶ್ರೀ ಶೈಲ ಕೆ. ಬಿರಾದಾರ/ಶಶಿಧರ ವಸ್ತ್ರದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.