ಕಲ್ಯಾಣ ಕರ್ನಾಟದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಧೂಳಿಪಟ: ಕಾಂಗ್ರೆಸ್ ವಿಶ್ವಾಸ
ಈ ಭಾಗದ ಬಗ್ಗೆ ತೋರಿರುವ ನಿರ್ಲಕ್ಷ್ಯದ ವಿರುದ್ದ ಜನ ಬೇಸತ್ತಿದ್ದಾರೆ...
Team Udayavani, Dec 8, 2022, 5:50 PM IST
ಕಲಬುರಗಿ: ರಾಜ್ಯದ ಬಿಜೆಪಿ ಸರ್ಕಾರದ ವೈಫಲ್ಯ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಬಗ್ಗೆ ತೋರಿರುವ ನಿರ್ಲಕ್ಷ್ಯದ ವಿರುದ್ದ ಜನ ಬೇಸತ್ತಿರುವುದರಿಂದ ಮುಂಬರುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಕಕ ಭಾಗದ ಎಲ್ಲ41 ಕ್ಷೇತ್ರಗಳಲ್ಲಿ ಬಿಜೆಪಿ ಧೂಳಿಪಟವಾಗಲಿದೆ ಎಂದು ಕಾಂಗ್ರೆಸ್ ನಾಯಕರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡಾ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದರಿಂದ ಪಕ್ಷಕ್ಕೆ ಆನೆಬಲ ಬಂದಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಘಟಿತ ಪ್ರಯತ್ನ ಹಾಗೂ ರಾಜ್ಯ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದರಿಂದ ಬಿಜೆಪಿ ಸಂಪೂರ್ಣ ನೆಲಕಚ್ಚಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯಸಿಂಗ್, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಇತರರು ಹೇಳಿದ್ದಾರೆ.
ಇದೇ ಡಿಸೆಂಬರ್ 10 ರಂದು ನಗರದಲ್ಲಿ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಕ್ರಾಂತಿ ಸಮಾವೇಶ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಅಭಿನಂದನಾ ಸಮಾರಂಭದ ಸಿದ್ದತೆ ಕುರಿತು ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರ ಸಂಕಟ ಹೇಳದಾಗಿದೆ. ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ನಮ್ಮ ಅಧಿಕಾರಾವಧಿಯಲ್ಲಿ ಆರ್ಟಿಕಲ್ 371 ಜೆ ವಿಧಿ ಅಡಿಯಲ್ಲಿ ಹಲವಾರು ಸಾವಿರ ಹುದ್ದೆಗಳನ್ನು ನೇಮಕಾತಿ ಮಾಡಿಕೊಂಡಿದ್ದೆವು. ಆದರೆ ಬಿಜೆಪಿ ಸರ್ಕಾರ ನೇಮಕಾತಿ ಮಾಡಿಕೊಳ್ಳದೆ ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯವೆಸಗಿದೆ. ಈ ಎಲ್ಲ ಅಂಶಗಳ ಕುರಿತು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಲು ಕಲ್ಯಾಣ ಕರ್ನಾಟಕ ಕ್ರಾಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ವಿವರಣೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಡಿಸೆಂಬರ್ 10 ರಂದು ಸನ್ಮಾನ ಮಾಡಲಿದ್ದೇವೆ. ಈ ಸಮಾರಂಭಕ್ಕೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಂದ ಕನಿಷ್ಠ 3 ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಅಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಬರಲಿರುವ ಖರ್ಗೆ ಅವರು ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ಜಗತ್ ಸರ್ಕಲ್ ವರೆಗೆ ಮೆರವಣಿಗೆಯಲ್ಲಿ ಬರಲಿದ್ದಾರೆ. ಆ ನಂತರ ಕಾರ್ಯಕ್ರಮ ನಡೆಯುವ ಎನ್ ವಿ ಶಾಲೆಯ ಆವರಣಕ್ಕೆ ಆಗಮಿಸಲಿದ್ದಾರೆ ಎಂದು ವಿವರಿಸಿದರು.
ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ ಖಂಡ್ರೆ, ಹಿಮಾಚಲದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ಅಲ್ಲಿ ಮೋದಿಯ ಮ್ಯಾಜಿಕ್ ಕೆಲಸ ಮಾಡಿಲ್ಲ. ಆದರೆ ಗುಜರಾತ್ ನಲ್ಲಿ ಅಭ್ಯರ್ಥಿ ಗಳಿಗೆ ಹೆದರಿಸಿ ಬೆದರಿಸಿ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಹೆಚ್ಚಿನ ಸೀಟುಗಳನ್ನು ಬಿಜೆಪಿ ಗೆದ್ದಿದೆ. ಆದರೆ ಗುಜರಾತ್ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಪ್ರಧಾನಿ ಮೋದಿ ಹಾಗೂ ಬಿಜೆಪಿ ವರಿಷ್ಠರು ಗುಜರಾತ್ ವಿಧಾನಸಭಾ ಚುನಾವಣೆಯನ್ನು ಕಾರ್ಪೋರೇಷನ್ ಚುನಾವಣೆ ಮಟ್ಟದಲ್ಲಿ ಪ್ರಚಾರ ಮಾಡಿದ್ದಾರೆ. ಸುಮಾರು 27 ವರ್ಷ ಅಧಿಕಾರದಲ್ಲಿದ್ದರೂ ಕೂಡಾ ಅಲ್ಲಿನ ಮುಖ್ಯಮಂತ್ರಿಗಳನ್ನು ಬದಿಗೆ ಸರಿಸಿ ತಾವೇ ಪ್ರಚಾರ ಮಾಡಿದ್ದಾರೆ. ಪ್ರಧಾನಿ ತಮ್ಮ ಸ್ವಂತ ನೆಲದಲ್ಲಿ ಚುನಾವಣೆ ಗೆದ್ದಿರುವುದು ಮಹಾನ್ ಸಾಧನೆಯಲ್ಲ. ಅಧಿಕಾರ ದುರ್ಬಳಿಕೆ ಮಾಡಿಕೊಂಡು ಗೆಲ್ಲಲಾಗಿದೆ ಎಂದು ನಾಯಕರು ವಾಗ್ದಾಳಿ ನಡೆಸಿದರು.
ಹಿಮಾಚಲದಲ್ಲಿ ನೀವು ಗೆದ್ದಿರುವುದರಿಂದ ಈಗ ಇವಿಎಂ ಮೆಷಿನ್ ಮೇಲೆ ನಂಬಿಕೆ ಬಂದಿದೆಯಾ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಶರಣಪ್ರಕಾಶ್ ಪಾಟೀಲ್ ಉತ್ತರಿಸಿ, ಕಾಂಗ್ರೆಸ್ ಒಂದು ಪಕ್ಷವಾಗಿ ಇವಿಎಂ ಬಗ್ಗೆ ತಕರಾರು ಎತ್ತಿಲ್ಲ ಆದರೆ ನಾಯಕರುಗಳು ವೈಯಕ್ತಿಕವಾಗಿ ಅಪಸ್ವರ ಎತ್ತಿರಬಹುದು ಎಂದರು. ಹಿಮಾಚಲದಲ್ಲಿ ಬಿಜೆಪಿ ಸೋತಿರುವುದು ಹೇಗೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನೇ ಕೇಳಬೇಕು ಯಾಕೆಂದರೆ ಅದು ಅವರ ತವರು ರಾಜ್ಯ ಎಂದು ತಿವಿದರು.
ಶಾಸಕರಾದ ಎಂ ವೈ ಪಾಟೀಲ್ , ಮಾಜಿ ಶಾಸಕರಾದ ಶರಣಪ್ಪ ಮಟ್ಟೂರು, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಶರಣುಮೋದಿ, ಬಸರೆಡ್ಡಿ ಪಾಟೀಲ ಅನಪೂರ, ಶಿವಾನಂದ ಪಾಟೀಲ ಸೇರಿದಂತೆ ಮತ್ತಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.