![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 9, 2020, 5:39 PM IST
ಕಲಬುರಗಿ: ವೈದ್ಯಕೀಯ ಕ್ಷೇತ್ರದಲ್ಲಿ ಈಗಾಗಲೇ ಮನೆ ಮಾತಾಗಿರುವ ಇಲ್ಲಿನ ಯುನೈಟೆಡ್ ಆಸ್ಪತ್ರೆಯಲ್ಲೀಗ ಮತ್ತೂಂದು ಕೊಡುಗೆ ಎನ್ನುವಂತೆ ಕೇಂದ್ರ ಸರ್ಕಾರದ ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್) ಅನುಮೋದಿತ ಆರ್‌ಟಿಪಿಸಿಆರ್ ಟೆಸ್ಟ್ ಸೌಲಭ್ಯ ಕಾರ್ಯಾರಂಭ ಮಾಡಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಹೊಂದಿರುವ ಏಕೈಕ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಯುನೈಟೆಡ್ ಪಾತ್ರವಾಗಿದ್ದು, ಇದು ಹೆಮ್ಮೆಯ ವಿಷಯ ಎಂದು ಯುನೈಟೆಡ್ ಆಸ್ಪತ್ರೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಡಾ| ವಿಕ್ರಮ ಸಿದ್ದಾರಡ್ಡಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ವಿಷಯ ಹಂಚಿಕೊಂಡರು.
ಕೋವಿಡ್-19ನ ದೇಶದಲ್ಲೇ ಮೊದಲ ಸಾವು ಕಲಬುರಗಿಯಲ್ಲಿ ಸಂಭವಿಸಿದ್ದು, ದಿನೇದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ. ಹೀಗಾಗಿ ರೋಗಿಗಳಿಗೆ ಸ್ಪಂದಿಸಲು ಹಾಗೂ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರದೊಂದಿಗೆ ಕೈಜೋಡಿಸಬೇಕೆಂಬ ಸಾಮಾಜಿಕ ಜವಾಬ್ದಾರಿಯೊಂದಿಗೆ ಆರ್ ಟಿಪಿಸಿಆರ್ ಟೆಸ್ಟ್ ಸೌಲಭ್ಯ (ಅಲ್ಟ್ರಾಮಾಡರ್ನ್ ಮಾಲಿಕ್ಯೂಲರ್ ಬಯೋಲಜಿ ಲ್ಯಾಬ್) ಪಡೆದು ಮುಂದಿನ ಹೆಜ್ಜೆ ಇಡಲಾಗಿದೆ. ಈ ನಿಟ್ಟಿನಲ್ಲಿ ಪ್ರಥಮ ಪರೀಕ್ಷೆ ಮೂಲಕ ಯಶಸ್ವಿಯಾಗಿದ್ದೇವೆ ಎಂದು ವಿವರಣೆ ನೀಡಿದರು.
ಇಂತಹ ಪರೀಕ್ಷಾ ಸೌಲಭ್ಯವಿರುವ ಕೇಂದ್ರದ ಅಲ್ಟ್ರಾ ಮಾಡೆಲ್ ಡೈಗ್ನೊಸ್ಟಿಕ್ ಲ್ಯಾಬ್ ಆರಂಭಿಸಲು ಜನವರಿಯಲ್ಲೇ ಯೋಜಿಸಿ ಕಾರ್ಯಪ್ರವೃತ್ತರಾಗಿದ್ದೆವು. ಈ ನಡುವೆ ಕೊರೊನಾದಿಂದಾಗಿ ಲೌಕ್ ಡೌನ್ ಎದುರಾಯಿತು. ಹೀಗಿದ್ದರೂ ಲಾಕ್ ಡೌನ್ ಅವಧಿಯಲ್ಲೇ ಬಹುತೇಕ ಪ್ರಕ್ರಿಯೆ ಮುಂದುವರಿಸಲಾಯಿತು. ಯಾಂತ್ರಿಕವಾಗಿ ನುರಿತ, ವಿವಿಧ ಆಯಾಮಗಳಲ್ಲಿ ಎನ್‌ಎಬಿಎಲ್ ನೋಡಲ್ ಏಜೆನ್ಸಿ ಪರಿಶೀಲನೆ ನಡೆಸಿ ಗ್ರೀನ್ ಸಿಗ್ನಲ್ ನೀಡಿತು. ಇದಾದ ಬಳಿಕ ಐಸಿಎಂಆರ್ ನೋಡಲ್ ಏಜೆನ್ಸಿ ನೀಡಿದ ಐದು ಪರೀಕ್ಷೆಗಳಲ್ಲಿ ರಿಪೋರ್ಟ್ ಪಡೆದು ಅನುಮೋದನೆ ನೀಡಿದೆ ಎಂದರು.
ರಾಜ್ಯದ ಕೆಲ ವೈದ್ಯಕೀಯ ಕಾಲೇಜುಗಳಲ್ಲಿ ರ್ಯಾಪಿಡ್ ಟೆಸ್ಟ್ ಸೌಲಭ್ಯವಿದೆ. ಆದರೆ ಖಾಸಗಿಯಾಗಿ ಈ ಸೌಲಭ್ಯ ಹೊಂದಿದ ಏಕೈಕ ಖಾಸಗಿ ಆಸ್ಪತ್ರೆ ತಮ್ಮದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಸಹಕಾರ ಮರೆಯಲಾಗದು. ಬೆಂಗಳೂರು ಖಾಸಗಿ ಆಸ್ಪತ್ರೆಯೊಂದರ ಲ್ಯಾಬ್‌ನ ಚೀಫ್ ಆಪರೇಟಿಂಗ್ ಆಫೀಸರ್ ಆಗಿರುವ ಚಿಂಚೋಳಿಯ ಡಾ| ಶಾಂತಕುಮಾರ ಮುರಡಾ, ಯುನೈಟೆಡ್ ಆಸ್ಪತ್ರೆ ಲ್ಯಾಬ್ ಮುಖ್ಯಸ್ಥೆ ಡಾ| ಆಯೇಷಾ ಫಾತಿಮಾ ಬಶೀರ್ ಅವರ ಶ್ರಮವೂ ಪ್ರಮುಖವಾಗಿ ಅಡಗಿದೆ ಎಂದು ವಿವರಣೆ ನೀಡಿದರು.
ಕೋವಿಡ್‌ಗೆ ಸಂಬಂಧಿಸಿದಂತೆ ಎರಡು ತಿಂಗಳಿಂದ ರ್ಯಾಪಿಡ್ ಟೆಸ್ಟ್ ಮಾಡಲಾಗುತ್ತಿದ್ದು, 300ಕ್ಕೂ ಹೆಚ್ಚು ಜನ ತಪಾಸಣೆಗೆ ಒಳಗಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಪ್ರವೇಶ ಪಡೆಯುವ ಎಲ್ಲರಿಗೂ ಕೋವಿಡ್-19 ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಒಳರೋಗಿಗಳ ಹಿತರಕ್ಷಣೆ ದೃಷ್ಟಿಯಿಂದ ಇದನ್ನು ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ಪರೀಕ್ಷೆ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಜಿಲ್ಲೆಯಲ್ಲಿರುವ ಏಕೈಕ ಇಲ್ಲಿನ ಜಿಮ್ಸ್ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗುತ್ತಿದೆ. ಸಾವಿರಾರು ಪ್ರಕರಣಗಳ ಪರೀಕ್ಷೆ ಬಾಕಿ ಉಳಿದಿವೆ. ಜಿಲ್ಲಾಡಳಿತ ಔಟ್‌ಸೋರ್ಸ್ ಆಧಾರದ ಮೇಲೆ ಅವಕಾಶ ನೀಡಿದರೆ ಸರ್ಕಾರ ನಿಗದಿಪಡಿಸಿದ ದರದಲ್ಲೇ ತಪಾಸಣೆ ನಡೆಸಲು ಸಿದ್ಧರಿದ್ದೇವೆ. ಜತೆಗೆ ಇತರ ಖಾಸಗಿ ಆಸ್ಪತ್ರೆಗಳು ಬಯಸಿದರೂ ಟೆಸ್ಟ್ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಯುನೈಟೆಡ್ ಹಾಸ್ಪಿಟಲ್, ಈ ಪ್ರದೇಶದ ಜನರಿಗೆ ನಾವು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಬದ್ಧರಾಗಿದ್ದೇವೆ. ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಬದ್ಧತೆ ಪೂರೈಸುವ ಹಾದಿಯಲ್ಲಿ ಸವಾಲನ್ನು ಜಯಿಸಲು ನಿರ್ಧರಿಸಿದ್ದೇವೆ ಎಂದು ಭರವಸೆ ನೀಡಿದರು.
ಅಲ್ಟ್ರಾಮಾಡರ್ನ್ ಆಣ್ವಿಕ ಜೀವಶಾಸ್ತ್ರ ಪ್ರಯೋಗಾಲಯ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಸುಶಿಕ್ಷಿತ ಮತ್ತು ಅರ್ಹ ಸಿಬ್ಬಂದಿ ಹೊಂದಿರುವ ಅತ್ಯಾಧುನಿಕ ಪ್ರಯೋಗಾಲಯ ಇದಾಗಿದೆ. ಜನರಿಗೆ ಸಮಗ್ರ, ವೇಗದ, ನಿಖರ ಮತ್ತು ಸಮಂಜಸವಾಗಿ ರೋಗನಿರ್ಣಯ ಬಹು ಬೇಗವಾಗಿ ಪ್ರಯೋಗಾಲಯ ಒದಗಿಸಲಿದೆ. ಸಮುದಾಯದ ಸಾಮಾನ್ಯ ಯೋಗಕ್ಷೇಮ ಖಾತ್ರಿಪಡಿಸಿಕೊಳ್ಳಲು ಅತ್ಯುನ್ನತ ಗುಣಮಟ್ಟದ ರೋಗ ನಿರ್ಣಯ ಮತ್ತು ಕ್ಷೇಮ ಸೇವೆಗಳನ್ನು ನೀಡುವ ಗುರಿ ಹೊಂದಲಾಗಿದೆ. -ಡಾ| ವಿಕ್ರಮ ಸಿದ್ದಾರಡ್ಡಿ, ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕ ಯುನೈಟೆಡ್ ಆಸ್ಪತ್ರೆ
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.