ಸಂಸ್ಕೃತಿ ಬೆಳೆಸುವವರು ಕಲಾವಿದರು: ಶಿಲ್ಪಿ ಕಾಳಾಚಾರ್
Team Udayavani, Aug 31, 2018, 11:14 AM IST
ಕಲಬುರಗಿ: ಸಂಸ್ಕೃತಿ ಉಳಿಸಿ ಬೆಳೆಸುವವರು ಕಲಾವಿದರಾದರೆ, ಕಲಾಕಾರರಿಗೆ ಅವಕಾಶ ಕೊಡುವವರೇ ಅವರ ಪೋಷಕರು ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಶಿಲ್ಪಿ ರು. ಕಾಳಾಚಾರ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಹಾಗೂ ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಭಾವ ಶಿಲ್ಪ’ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಾವಿದನ ಕೈಯಲ್ಲಿ ಅರಳಿದ ಕಲಾಕೃತಿಗಳು ಸಾವಿರಾರು ವರ್ಷಗಳ ಕಾಲ ಉಳಿಯುವಂತದ್ದು. ಪ್ರತಿ ಕಲಾಕೃತಿಯೂ ಒಂದೊಂದು ಕಥೆ ಹೇಳುತ್ತದೆ. ಹೀಗಾಗಿ ಹಂಪಿಯಂತಹ ತಾಣಕ್ಕೆ ಕಲಾವಿದ ಕೆತ್ತಿದ ಕಲಾಕೃತಿಗಳನ್ನು ನೋಡಲು
ಜಗತ್ತಿನಾದ್ಯಂತ ಪ್ರವಾಸಿಗರು ಬರುತ್ತಾರೆ ಎಂದರು.
ಎಲ್ಲ ಶಿಬಿರಗಳಿಗಿಂತ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಭಾವ ಶಿಲ್ಪ ಶಿಬಿರ ಅತ್ಯಂತ ಯಶಸ್ವಿಯಾಗಿದೆ. ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಕಲಾವಿದರಿಗೆ ಹೆಚ್ಚೆಚ್ಚು ಅವಕಾಶಗಳನ್ನು ಮಾಡಿಕೊಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಕಲಾವಿದ ನಾಡೋಜ ಡಾ| ಜೆ.ಎಸ್. ಖಂಡೇರಾವ್ ಮಾತನಾಡಿ, ಕಲೆ ಭಾವನೆಗಳ ಅಖಂಡ ಅಭಿವ್ಯಕ್ತಿಯಾಗಿದೆ. ಕಲೆಯು ಮಾನವ ಸಂಸ್ಕೃತಿ ಹಾಗೂ ಜನಾಂಗದ ಸಂಸ್ಕೃತಿ ಪ್ರತಿನಿಧಿಸುತ್ತದೆ ಎಂದರು.
ವಿಶ್ವವಿದ್ಯಾಲಯದ ಪ್ರಭಾರಿ ಕುಲಪತಿ ಪ್ರೊ| ಎಸ್.ಪಿ. ಮೇಲಕೇರಿ, ಶಿಲ್ಪಕಲಾ ಅಕಾಡೆಮಿ ರಿಜಿಸ್ಟ್ರಾರ್ ಇಂದ್ರಮ್ಮ ಎಚ್.ವಿ ಮಾತನಾಡಿದರು. ಶಿಬಿರದ ನಿರ್ದೇಶಕ ನಾರಾಯಣ ಸೂತ್ರಧಾರ್ ಮತ್ತು 20 ಹಿರಿಯ ಮತ್ತು ಸಹಾಯಕ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ 10 ದಿನಗಳ ಕಾಲ ಕಲಾವಿದರು ರಚಿಸಿದ ಕುವೆಂಪು, ದ.ರಾ.
ಬೇಂದ್ರೆ, ಬುದ್ಧ, ಬಸವ, ಕನಕದಾಸ, ಗಾಂಧಿ, ಅಂಬೇಡ್ಕರ್, ಸಾವಿತ್ರಿಬಾಯಿ ಪುಲೆ, ಎಸ್. ಎಂ. ಪಂಡಿತ ಸೇರಿದಂತೆ 11 ಸಾಧಕರ ಫೈಬರ್ ಕಲಾಕೃತಿಗಳನ್ನು ಡಾ| ಜೆ.ಎಸ್. ಖಂಡೇರಾವ್ ಲೋಕಾರ್ಪಣೆಗೊಳಿಸಿದರು.
ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ| ಎಚ್.ಟಿ.ಪೋತೆ, ಶಿಲ್ಪಕಲಾ ಅಕಾಡೆಮಿಯ ಸದಸ್ಯ ಸಂಚಾಲಕ ನಿಂಗಪ್ಪಾ
ಡಿ.ಕೇರಿ, ಶಿಲ್ಪಿಗಳಾದ ಶಿವಮೊಗ್ಗದ ವಿಶಾಲ್ ಕೆ., ಬೆಂಗಳೂರಿನ ವೆಂಕಟೇಶ ಎಂ., ಕಲಬುರಗಿಯ ಜಗನ್ನಾಥ ಜಕ್ಕೇಪಳ್ಳಿ, ಮೈಸೂರಿನ ರಾಘವೇಂದ್ರ ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.