ರಂಗಭೂಮಿಯಿಂದ ಸಂಸ್ಕೃತಿ ಉನ್ನತಿ
Team Udayavani, Jul 19, 2018, 5:03 PM IST
ಕಲಬುರಗಿ: ರಂಗ ಎನ್ನುವ ಮಾಧ್ಯಮ ಜಾತ್ಯತೀತ ಹಾಗೂ ಕಾಲಾತೀತವಾಗಿದೆಯಲ್ಲದೇ ಸಂಸ್ಕಾರ ಮತ್ತು ಸಂಸ್ಕೃತಿ ಉಳಿದು ಬೆಳೆಯುವ ಕಾರ್ಯ ರಂಗಭೂಮಿಯಲ್ಲಿಯೇ ಅಡಕವಾಗಿದೆ ಎಂದು ಹಿರಿಯ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೇಳಿದರು.
ಬುಧವಾರ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ರಂಗಸಂಗಮ ಕಲಾವೇದಿಕೆ ವತಿಯಿಂದ ಆಯೋಜಿಸಿದ್ದ ಎಸ್.ಬಿ. ಜಂಗಮಶೆಟ್ಟಿ ಸ್ಮರಣಾರ್ಥ ರಂಗ ಪುರಸ್ಕಾರ ಸಮಾರಂಭದಲ್ಲಿ ವೃತ್ತಿ ರಂಗಭೂಮಿಯ ಸಾಧಕಿ ಸರಸ್ವತಿ ಉರುಫ್ ಜುಲೇಖಾ ಬೇಗಂ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಸಮಾಜವನ್ನು ಒಂದು ಮಾಡುವಂತಹ ಕಾರ್ಯ ನಾಟಕಗಳಿಂದ ಆಗುತ್ತದೆಯಲ್ಲದೇ ಕಲಾಸಕ್ತರು ಹಿಂದೆಂದಿಗಿಂತಲೂ ನಾಟಕದ ಕಡೆಗೆ ಮುಖ ಮಾಡಬೇಕು ಎಂದರು.
ಕರ್ನಾಟಕ ರಂಗಭೂಮಿಯ ತವರು ನೆಲ. ಇಲ್ಲಿ ಅನೇಕ ರಂಗ ಕಲಾವಿದರಿಗೆ ಆಶ್ರಯ ನೀಡಲಾಗಿದೆ. ಹೀಗಾಗಿ ರಂಗಭೂಮಿ ವಿಶ್ವವಿದ್ಯಾಲಯವಾಗಿತ್ತು. ಮನುಷ್ಯನನ್ನು ದೊಡ್ಡದನ್ನಾಗಿ ತೋರಿಸುವ ಸಿನಿಮಾಕ್ಕೂ, ಮನುಷ್ಯನನ್ನು ಚಿಕ್ಕವನನ್ನಾಗಿ ತೋರಿಸುವ ಟಿವಿಗೂ ಮತ್ತು ಇದ್ದ ಮನುಷ್ಯನನ್ನು ಇದ್ದಂತೆ ನೋಡುವ ರಂಗಭೂಮಿಗೂ ವ್ಯತ್ಯಾಸವಿದೆ ಎಂದು ಹೇಳಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ| ಮಲ್ಲೇಪುರಂ ಜಿ. ವೆಂಕಟೇಶ ಮುಖ್ಯ ಅತಿಥಿಯಾಗಿ ಮಾತನಾಡಿ, ವೃತ್ತಿರಂಗಭೂಮಿ ಅನನ್ಯ ಲೋಕ. ಕರ್ನಾಟಕ ಸಾಂಸ್ಕೃತಿಕ ಬದುಕಿಗೆ ರೂಪು ಕೊಟ್ಟಿದ್ದೆ ವೃತ್ತಿರಂಗಭೂಮಿ. ಇದರಿಂದ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಹೇಳಿದರು.
ಹಿರಿಯ ಸಾಹಿತಿ ಪ್ರೊ| ವಸಂತ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತೆ ಸರಸ್ವತಿ ಉರುಫ್ ಜುಲೇಖಾ ಬೇಗಂ ಅವರ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ಪ್ರಾಧ್ಯಾಪಕ ಡಾ| ಅಪ್ಪಗೆರೆ ಸೋಮಶೇಖರ ಮಾತನಾಡಿದರು. ಎಸ್.ಬಿ.ಜಂಗಮಶೆಟ್ಟಿ ಕುರಿತು ಪತ್ರಕರ್ತ, ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಪ್ರವೃತ್ತಿಯಲ್ಲಿ ಸಾಹಿತ್ಯ, ಸಂಗೀತ, ರಂಗಭೂಮಿ ಪೋಷಕರಾಗಿದ್ದರು ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ಚಂದ್ರಶೇಖರ್ ನಿಟ್ಟೂರೆ, ಸುಭದ್ರಾದೇವಿ ಜಂಗಮಶೆಟ್ಟಿ, ರಂಗಸಂಗಮ ವೇದಿಕೆ ಉಪಾಧ್ಯಕ್ಷೆ ಚಿನ್ನಾದೇವಿ ಶರಣು ಕಮರಡಗಿ ಹಾಜರಿದ್ದರು.
ರಂಗಸಂಗಮ ವೇದಿಕೆ ಕಾರ್ಯದರ್ಶಿ ಡಾ| ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು. ಬಿ.ಎಚ್.ನಿರಗುಡಿ ವಂದಿಸಿದರು.
ಡಾ| ಛಾಯಾ ಭರತನೂರ ಮತ್ತು ಸಂಗಡಿಗರಿಂದ ಪ್ರಾರ್ಥನಾ ಗೀತೆ, ಸಂಗೀತ ಕಾರ್ಯಕ್ರಮ ನಡೆಯಿತು. ಹಿರಿಯರಾದ ಅನಂರ ಹರಸೂರ, ಪ್ರಭಾಕರ ಸಾತಖೇಡ, ಎಲ್.ಬಿ.ಕೆ. ಆಲ್ದಾಳ, ಗವೀಶ ಹಿರೇಮಠ, ಮಿಲಿಂದ ಮಡಕಿ, ರಂಗಾಯಣ ನಿರ್ದೇಶಕ ಮಹೇಶ ಪಾಟೀಲ್, ರಂಗಕರ್ಮಿ ಪ್ರಭಾಕರ ಜೋಶಿ, ಝರಣಪ್ಪ ಚಿಂಚೋಳಿ, ಭೀಮಣ್ಣ ಬೋನಾಳ, ರವೀಂದ್ರ ಶಾಬಾದಿ, ಡಾ| ಮೀನಾಕ್ಷಿ ಬಾಳಿ ಮುಂತಾದವರಿದ್ದರು.
ಎಸ್.ಬಿ. ಜಂಗಮಶೆಟ್ಟಿ ರಂಗ ಪುರಸ್ಕಾರಕ್ಕೆ ಭಾಜನರಾದ ಸರಸ್ವತಿ ಉರುಫ್ ಜುಲೇಖಾಬೇಗಂ ಅವರಿಗೆ ಸತ್ಕಾರ, ಮೊಮೆಂಟೊ ಹಾಗೂ 10 ಸಾವಿರ ರೂ. ನಗದು ಪುರಸ್ಕಾರ ಮತ್ತು ಎರಡು ಕೆಜಿ ತೊಗರಿ ಬೇಳೆ ನೀಡುವ ಮೂಲಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.