ಸಾಲ ಮನ್ನಾ ಅವ್ಯವಹಾರ ತನಿಖೆಗೆ ಒತ್ತಾಯ
Team Udayavani, Oct 26, 2018, 9:51 AM IST
ಕಲಬುರಗಿ: ಸಹಕಾರಿ ಕ್ಷೇತ್ರದಲ್ಲಿನ ರೈತರ ಸಾಲ ಮನ್ನಾದಲ್ಲಿನ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಹಾಗೂ ಆಳಂದ ತಾಲೂಕನ್ನು ಬರಪೀಡಿತ ಪ್ರದೇಶಗಳ ವ್ಯಾಪ್ತಿಗೆ ಸೇರಿಸಬೇಕೆಂದು ಒತ್ತಾಯಿಸಿ ನಗರದಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಂತರ ಸೂಪರ್ ಮಾರ್ಕೆಟ್ ರಸ್ತೆಯಲ್ಲಿರುವ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ (ಡಿಸಿಸಿ) ಬ್ಯಾಂಕ್‌ಗೆ ತೆರಳಿ ಮುತ್ತಿಗೆ ಹಾಕಿದರು.
ಜಿಲ್ಲೆಯಲ್ಲಿ ಮಳೆ ಬಾರದೆ ಬರಗಾಲ ಪರಿಸ್ಥಿತಿ ಆವರಿಸಿದ್ದು, ಜಿಲ್ಲೆಯ ತಾಲೂಕಗಳನ್ನು ಬರಗಾಲ ಪ್ರದೇಶ ಎಂದು ಘೋಷಿಸಲಾಗಿದೆ. ಆದರೆ, ಆಳಂದ ತಾಲೂಕನ್ನು ಬರ ಪೀಡಿತ ಪ್ರದೇಶ ವ್ಯಾಪ್ತಿಗೆ ಸೇರಿಸದೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತಾರಮತ್ಯ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡಿದ್ದಾಗಿ ಹೇಳಿದರೂ ಜಿಲ್ಲೆಯಲ್ಲಿ ರೈತರ ಸಾಲ ಮನ್ನಾ ಆಗಿಲ್ಲ. ಜಿಲ್ಲೆಗೆ ಒಟ್ಟು 315 ಕೋಟಿ ರೂ.ರೈತರ ಸಾಲ ಮನ್ನಾಕ್ಕೆ ಮೊತ್ತ ಬರಬೇಕಿತ್ತು. ಇದರಲ್ಲಿ 260 ಕೋಟಿ ರೂ. ಬಿಡುಗಡೆಯಾಗಿದ್ದು, 109 ಕೋಟಿ ರೂ. ಹಾಗೂ 25 ಕೋಟಿ ರೂ. ಸೇರಿ ಒಟ್ಟು 134 ಕೋಟಿ ರೂ. ಗಳನ್ನು ಅಪೆಕ್ಸ್ ಬ್ಯಾಂಕ್ ಸಾಲ ಪಾವತಿಸಲಾಗಿದೆ. ಜಿಲ್ಲೆಗೆ ಇನ್ನು 55 ಕೋಟಿ ರೂ. ಬರಬೇಕಾಗಿದೆ. ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿರುವ ಸಾಲ ಮನ್ನಾದಲ್ಲೂ 70 ಕೋಟಿ ರೂ. ಬಾಕಿ ಇದೆ ಎಂದು ವಿವರಿಸಿದರು.
ರೈತರ ಸಾಲ ಮನ್ನಾದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಜೇವರ್ಗಿ ತಾಲೂಕಿನಲ್ಲಿ ಸತ್ತವರ ಹೆಸರಿನಲ್ಲಿ ರೈತರ ಸಾಲ ಮನ್ನಾ ಮಾಡಿ ಅವ್ಯವಹಾರ ಎಸಗಲಾಗಿದೆ. ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ನಂಬರ್ ಹಾಗೂ ಮೊಬೈಲ್ ನಂಬರ್ ಜೋಡಣೆ ಮಾಡಬೇಕು. ಆದರೆ, ಬ್ಯಾಂಕ್ ಅಧಿಕಾರಿಗಳು ರೈತರ ಖಾತೆಗೆ ಆಧಾರ್, ಮೊಬೈಲ್ ನಂಬರ್ ಜೋಡಣೆಯಾದರೆ ತಮ್ಮ ಅವ್ಯವಹಾರ ಹೊರಗೆ ಬರುತ್ತದೆ ಎಂದು ಯಾವುದೇ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸದೇ ಅಕ್ರಮ ಎಸಗಿದ್ದಾರೆ. ಇದು ಕೇವಲ ಜೇವರ್ಗಿ ತಾಲೂಕಿನಲ್ಲಿ ಮಾತ್ರವಲ್ಲ ಇಡೀ ಜಿಲ್ಲೆಯಲ್ಲೂ ನಡೆದಿರುವ ಸಾಧ್ಯತೆಯಿದೆ. ಹೀಗಾಗಿ ರೈತರ ಸಾಲ ಮನ್ನಾದಲ್ಲಿನ ಅವ್ಯವಹಾರದ ತನಿಖೆಯನ್ನು ಸಿಬಿಐ ಒಪ್ಪಿಸಬೇಕೆಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಗ್ರಹಿಸಿದರು.
ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ ಅಕ್ರಮವಾಗಿ ಮರಳುಗಾರಿಕೆ ವ್ಯಾಪಕವಾಗಿ ನಡೆಯುತ್ತಿದ್ದು, ಇದಕ್ಕೆ ತಕ್ಷಣವೇ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ಆಳಂದ ಬಿಜೆಪಿ ಯುವ ಮುಖಂಡ ರಾಹುಲ್ ಬೀಳಗಿ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಬೇಕು ಹಾಗೂ ರಾಹುಲ್ ಬೀಳಗಿ ಕುಟುಂಬದವರಿಗೆ ಭದ್ರತೆ ನೀಡಬೇಕು. ವಿವಿಧ ಇಲಾಖೆಗಳಿಂದ ಮಂಜೂರಾದ ಕಾಮಗಾರಿಗಳನ್ನು ನಿರ್ಮಿತಿ ಕೇಂದ್ರ ಹಾಗೂ ಭೂಸೇನಾ ನಿಗಮಕ್ಕೆ ವಹಿಸಲಾಗಿದ್ದು, ಕಾಮಗಾರಿಗಳು ವಿಳಂಬ ಹಾಗೂ ಕಳಪೆ ಮಟ್ಟದ್ದಾಗಿದ್ದು, ಈ ಬಗ್ಗೆ ಶೀಘ್ರ ಕ್ರಮಕೈಗೊಳ್ಳಬೇಕು. ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಎಂಬಿಸಿ ಹಾಗೂ ಜೆಬಿಸಿ ಕಾಲುವೆಗಳಿಂದ ಅಚ್ಚುಕಟ್ಟು ಪ್ರದೇಶಗಳಿಗೆ ನಿಯಮಿತವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಮಾಜಿ ಸಚಿವರಾದ ಮಾಲೀಕಯ್ಯ ವಿ. ಗುತ್ತೇದಾರ್, ಬಾಬುರಾವ ಚವ್ಹಾಣ, ಮಾಜಿ ಶಾಸಕ ವಾಲ್ಮೀಕಿ ನಾಯಕ, ಜಿಪಂ ಅಧ್ಯಕ್ಷೆ ಸುವರ್ಣಾ ಎಚ್.ಮಲಾಜಿ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ, ಮುಖಂಡರಾದ ರವಿ ಬಿರಾದಾರ, ಶರಣು ಸಲಗರ, ಸಂಗಮೇಶ ನಾಗನಹಳ್ಳಿ, ಸಿದ್ದಾಜಿ ಪಾಟೀಲ, ಮಹಾದೇವ ಬೆಳಮಗಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ವಾಲ್ಮೀಕಿ ನಾಯಕ ಹಾಗೂ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಜಿಲ್ಲೆಯಾದ್ಯಂತ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಹೀಗಾಗಿ ನದಿ ಪಾತ್ರಗಳೆಲ್ಲ ಬರಿದಾಗಿ ಕುಡಿಯುವ ನೀರಿನ ಆಹಾಕಾರ ಎದುರಾಗಿದೆ. ಮರಳುಗಾರಿಕೆಯಲ್ಲಿ ಪೊಲೀಸ್ ಇಲಾಖೆಯೇ ಕೈಜೋಡಿಸಿದೆ. ಜಿಲ್ಲೆಯಲ್ಲಿ ಬರಗಾಲ ಆವರಿಸಿದ್ದರೂ ಆಳಂದ ತಾಲೂಕನ್ನು ಮಾತ್ರ ಬರ ಪ್ರದೇಶಗಳ ವ್ಯಾಪ್ತಿಗೆ ಸೇರಿಸದೆ ಅನ್ಯಾಯ ಮಾಡಲಾಗಿದೆ. ಸತ್ತವರ ಹೆಸರಲ್ಲಿ ರೈತರ ಸಾಲ ಮನ್ನಾ ಮಾಡಿ ಅವ್ಯವಹಾರ ನಡೆಸಲಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು. ರೈತರ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಬೇಕು ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ
ಜೇವರ್ಗಿ ಡಿಸಿಸಿ ಬ್ಯಾಂಕ್‌ನ ಮೂವರ ಅಮಾನತು
ಕಲಬುರಗಿ: ಹಣ ಪಡೆದೇ ರೈತರಿಗೆ ಸಾಲದ ಹಣ ಹಾಗೂ ಸಾಲ ಮನ್ನಾ ಹಣವನ್ನು ಖಾತೆಗಳಿಗೆ ಜಮಾ ಮಾಡಲಾಗುತ್ತಿದೆ ಎನ್ನುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ನ ಜೇವರ್ಗಿ ಶಾಖೆಯ ಮೇಲ್ವಿಚಾರಕ ಸೇರಿದಂತೆ ಮೂವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ರೈತರಿಂದ ಹಣ ಪಡೆದು ಸಾಲದ ಹಣ ಪಾವತಿ ಮಾಡುತ್ತಿರುವುದಲ್ಲದೇ ಬ್ಯಾಂಕ್‌ನಲ್ಲಿ ಇತರ ವ್ಯವಹಾರಗಳಲ್ಲೂ ಸಾಕಷ್ಟು ಅವ್ಯವಹಾರ ನಡೆದಿರುವುದನ್ನು ಪರಿಗಣಿಸಿ ಶಾಖೆ ಮೇಲ್ವಿಚಾರಕ ಹಣಮಂತರಾಯ ದೊರೆ, ಶಾಖಾ ವ್ಯವಸ್ಥಾಪಕ ಮಹಾಂತೇಶ ಕುಂಬಾರ ಹಾಗೂ ಸಿಪಾಯಿ ಕ್ಷೀರಲಿಂಗಯ್ಯ ಹಿರೇಮಠ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಚವ್ಹಾಣ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ರೈತರ ಜಮೀನು ಪಡೆಯಲು ಬಿಡುವುದಿಲ್ಲ: ಬಿಜೆಪಿ ಗುಡುಗು
Kalaburagi: ಪುನರ್ ವಿಂಗಡನೆ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡುವ ಸಂಚು: ಪ್ರಿಯಾಂಕ್ ಖರ್ಗೆ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
Kalaburagi: ಮಸೀದಿಗಳು ರಾಜ್ಯ ಸರ್ಕಾರವನ್ನು ಆಳುತ್ತಿವೆ: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Chittapura: ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು… ಚಾಲಕ ಮೃತ್ಯು, ಇಬ್ಬರಿಗೆ ಗಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.