ತೊಗರಿ ಖರೀದಿಗೆ 123 ಕೇಂದ್ರ ಸ್ಥಾಪನೆ
Team Udayavani, Dec 22, 2018, 11:30 AM IST
ಕಲಬುರಗಿ: ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದರಿಂದ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಜಿಲ್ಲೆಯಾದ್ಯಂತ 123 ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರದ ಬೆಲೆ 5675 ರೂ. ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ 425ರೂ. ಸೇರಿ ಒಟ್ಟು 6100ರೂ. ದರದಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ರೈತರಿಂದ ಖರೀದಿಸಲು ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ಡಿ. 24 ರಿಂದ ರೈತರ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿ ಸಂಬಂಧ ವಿವಿಧ ಕೃಷಿ ಸಂಬಂಧಿತ ಇಲಾಖೆಗಳು ಹಾಗೂ ತಾಲೂಕಿನ ತಹಶೀಲ್ದಾರರೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2018-19ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಸುಮಾರು 123 ಖರೀದಿ ಕೇಂದ್ರಗಳಲ್ಲಿ ಪ್ರತಿ ರೈತರಿಂದ ಗರಿಷ್ಠ 10 ಕ್ವಿಂಟಾಲ್ ಮಿತಿಗೊಳಪಟ್ಟು ತೊಗರಿ ಖರೀದಿಸಲಾಗುವುದು. ಖರೀದಿ ಕೇಂದ್ರದ ಸುತ್ತಳತೆಯ 15 ಕಿ.ಮೀ ವ್ಯಾಪ್ತಿಯ ರೈತರು ತೊಗರಿ ತಂದು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ ಎಂದು ಹೇಳಿದರು.
ಮಳೆ ಅಭಾವದಿಂದ ಬರಗಾಲ ಸ್ಥಿತಿ ಜಿಲ್ಲೆಯಲ್ಲಿ ತಲೆದೋರಿದ್ದರಿಂದ ಬೆಳೆ ವಿಮೆ ಪರಿಹಾರಕ್ಕಾಗಿ ಜಿಯೋ ಫೆನ್ಸಿಂಗ್ ಸರ್ವೇ ಮಾಡಲಾಗಿದೆ. ಈ ಸರ್ವೇ ಮೊಬೈಲ್ ಆ್ಯಪ್ ಮೂಲಕ ಮಾಡಿರುವುದರಿಂದ ಯಾವ ರೈತರು ಎಷ್ಟು ಎಕರೆಯಲ್ಲಿ ಯಾವ್ಯಾವ ಬೆಳೆ ಬೆಳೆದಿದ್ದಾರೆ ಎನ್ನುವ ಕುರಿತು ಮಾಹಿತಿ ಲಭ್ಯವಿರುತ್ತದೆ. ತೊಗರಿ ಖರೀದಿ ಸಂದರ್ಭದಲ್ಲಿ ರೈತರು ನೀಡುವ ಮಾಹಿತಿಯೊಂದಿಗೆ ಈಗಾಗಲೆ ಕಲೆಹಾಕಿರುವ ಡೇಟಾವನ್ನು ಹೊಂದಿಸಿ ರೈತರಿಂದ ತೊಗರಿ ಖರೀದಿಸಬೇಕು ಎಂದು ತಾಕೀತು ಮಾಡಿದರು.
ರೈತರು ಕಡ್ಡಾಯವಾಗಿ ಆಧಾರ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಆರ್‌ಟಿ.ಸಿ ಪ್ರತಿ ಮತ್ತು ಬೆಲೆ ದೃಢೀಕರಣ ಪತ್ರ ಒದಗಿಸುವುದು. ಗ್ರಾಮ ಲೆಕ್ಕಿಗರು ಬೆಲೆ ದೃಢೀಕರಣ ಪತ್ರ ನೀಡುವ ಮುನ್ನ ಬೆಳೆ ದರ್ಶಕ್ ಆ್ಯಪ್ ಪರಿಶೀಲಿಸಿಯೇ ನೀಡಬೇಕೆಂದರು. ಜಾಗೃತಿಗೆ ಸೂಚನೆ: ಪ್ರತಿ ರೈತರಿಂದ ಉತ್ಪನ್ನದ ಗುಣಮಟ್ಟ ಪರಿಶೀಲಿಸಿಯೆ ಖರೀದಿಸಿ ತಕ್ಷಣವೇ ಸ್ವೀಕೃತಿ ನೀಡಬೇಕು. ಆಯಾ ದಿನವೇ ಮ್ಯಾನ್ವಲ್ ಮತ್ತು ಆನ್‌ಲೈನ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಪ್ಯಾಕ್ಸ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು ರೈತರ ಬ್ಯಾಂಕ್ ಖಾತೆ ವಿವರ ಅಪಲೋಡ್ ಮಾಡುವಾಗ ಜಾಗೃತಿ ವಹಿಸಿ, ತೊಗರಿ ಖರೀದಿ ನಂತರ ಆಯಾ ರೈತರ ಖಾತೆಗೆ ಹಣ ಸಕಾಲದಲ್ಲಿ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಕಳೆದ ವರ್ಷದಂತೆ ಈ ವರ್ಷವೂ ಪ್ರತಿ ತಾಲೂಕಿಗೆ ಒಬ್ಬರು ನೋಡಲ್ ಅಧಿಕಾರಿ ಹಾಗೂ ಖರೀದಿ ಕೇಂದ್ರಗಳವಾರು ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು. ಖರೀದಿ ಕೇಂದ್ರ, ಗ್ರಾಮದ ಹೆಸರು ಸೇರಿದಂತೆ ಸಹಾಯವಾಣಿ ಸಂಖ್ಯೆ, ನೋಡಲ್ ಅಧಿಕಾರಿಗಳ ವಿವರವನ್ನು ರೈತರಿಗೆ ತಲುಪುವಂತೆ ಪ್ರಚಾರ ಕೈಗೊಳ್ಳಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳಿಗೆ ತರಬೇತಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಗಡಿಯಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುತ್ತಿರುವುದರಿಂದ ಗಡಿ ಭಾಗದಿಂದ ಪಕ್ಕದ ರಾಜ್ಯಗಳ ರೈತರು, ವರ್ತಕರು ಇಲ್ಲಿಗೆ ಬಂದು ತೊಗರಿ ಮಾರಾಟ ಮಾಡುವ ಸಂಭವವಿದೆ. ಇದನ್ನು ತಡೆಯಲು ಗಡಿ ಭಾಗದಲ್ಲಿ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗುವುದು. ಯಾರಾದರೂ ಈ ಅಕ್ರಮದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಲ್ಲಿ ಅಂತಹವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತೇವಾಂಶ ಮೀಟರ್ ಪರೀಕ್ಷಿಸಿಕೊಳ್ಳಿ: ತೊಗರಿ ಖರೀದಿ ಕೇಂದ್ರದಲ್ಲಿನ ತೂಕ ಹಾಗೂ ವೇರ್ ಹೌಸ್‌ನಲ್ಲಿನ ತೂಕ ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎಂದು ಈ ಹಿಂದಿನ ವರ್ಷದ ಅನುಭವದಿಂದ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಪ್ಯಾಕ್ಸ್ ಸಂಸ್ಥೆಯಲ್ಲಿರುವ ತೇವಾಂಶ ಮೀಟರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಎ.ಪಿ.ಎಂ.ಸಿ. ಅಧಿಕಾರಿಗಳು ಖರೀದಿ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಪರಿಶೀಲಿಸಿ ದೃಢೀಕರಣ ಸಲ್ಲಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜಾ ಪಿ. ಮಾತನಾಡಿ, ತೊಗರಿ ಖರೀದಿ ಸಂಪೂರ್ಣ ಪ್ರಕ್ರಿಯೆ ಪಾರದರ್ಶಕವಾಗಿ ಆಗಬೇಕು. ಯಾವುದೇ ಸಂಶಯಕ್ಕೆ ಎಡೆ ಮಾಡಿಕೊಡದೆ ಜಿಲ್ಲಾಡಳಿತಕ್ಕೂ ಕೆಟ್ಟ ಹೆಸರು ಬಾರದಂತೆ ಕಾರ್ಯನಿರ್ವಹಿಸಿ ಎಂದು ಪ್ಯಾಕ್ಸ್ ಸಂಸ್ಥೆಗಳಿಗೆ ನಿರ್ದೇಶನ ನೀಡಿದರು.
ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ, ಉಪನಿರ್ದೇಶಕ ಸಮದ ಪಟೇಲ್, ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ರಾಜೇಶ್ವರಿ, ಸಹಕಾರ ಇಲಾಖೆ ಸಹಾಯಕ ನಿಬಂಧಕ ರವಿಕುಮಾರ, ಮಾರ್ಕೆಟಿಂಗ್ ಫೆಡ್‌ರೇಷನ್ ಸಂಸ್ಥೆಯ ಪ್ರದೀಪ ಕುಮಾರ ಹಾಗೂ ಕೃಷಿ ಸಂಬಂಧಿತ ಇಲಾಖೆಯ, ತೊಗರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು ಹಾಜರಿದ್ದರು.
ಅವ್ಯವಹಾರವಾದಲ್ಲಿ ಫ್ಯಾಕ್ಸ್ ಸೂಪರ್ ಸೀಡ್ ತೊಗರಿ ಖರೀದಿಗೆ ಸಂಬಂ ಸಿದಂತೆ ರೈತರ ನೋಂದಣಿ ಹಾಗೂ ರೈತರಿಂದ ತೊಗರಿ ಖರೀದಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಿರ್ವಹಿಸಬೇಕು. ಮೊದಲ ಬಂದವರಿಗೆ ಮೊದಲ ಆದ್ಯತೆ ನೀಡಬೇಕು, ಸ್ಥಳೀಯರು ಹಾಗೂ ಹೊರಗಿನವರು ಎಂಬ ಬೇಧಭಾವ ಸಲ್ಲ. ಯಾವುದೇ ರೈತರಿಂದ ಅನಗತ್ಯ ಹಣ ವಸೂಲಿ ಸೇರಿದಂತೆ ಅಕ್ರಮ ದಾರಿಗೆ ಇಳಿದಿದ್ದು ಕಂಡುಬಂದರೆ ಕೂಡಲೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸೂಪರ್ ಸೀಡ್ ಮಾಡಿ ಸಹಕಾರಿ ಕಾಯ್ದೆಯನ್ವಯ ಸಂಬಂಧಿಸಿದ ಆಡಳಿತ ಮಂಡಳಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಇಲಾಖೆ ಸಹಾಯಕ ನಿಬಂಧಕರಿಗೆ ಜಿಲ್ಲಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದರು.
ಮತ್ತೆ ಹೆಸರು ಖರೀದಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2018-19ನೇ ಸಾಲಿಗೆ ಎಫ್.ಎ.ಕ್ಯೂ ಗುಣಮಟ್ಟದ ಹೆಸರುಕಾಳು ಹೆಚ್ಚುವರಿಯಾಗಿ ರೈತರಿಂದ ಖರೀದಿಸಲು ಸರ್ಕಾರ ಆದೇಶ ನೀಡಿದ್ದು, ಡಿ.24 ರಿಂದ ಖರೀದಿ ಪ್ರಕ್ರಿಯೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು ಖರೀದಿಗೆ ಕಲಬುರಗಿ ಜಿಲ್ಲೆಯಲ್ಲಿ 38 ಸಾವಿರ ರೈತರು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ ಈಗಾಗಲೆ 21 ಸಾವಿರ ರೈತರಿಂದ ಹೆಸರುಕಾಳು ಖರೀದಿ ಮಾಡಲಾಗಿದ್ದು, ಇನ್ನೂ 17 ಸಾವಿರ ಜನ ನೋಂದಣಿಯಾದ ರೈತರು ಬಾಕಿ ಉಳಿದುಕೊಂಡಿದ್ದಾರೆ. ನೋಂದಣಿಯಾಗಿ ಬಾಕಿ ಉಳಿದಿರುವ ರೈತರಿಂದ ಹೆಚ್ಚುವರಿಯಾಗಿ ಹೆಸರುಕಾಳು ಖರೀದಿಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷಕ್ಕೆ ಅವಕಾಶ ಮಾಡಿಕೊಡದೆ ಪಾರದರ್ಶಕವಾಗಿ ಖರೀದಿ ಪ್ರಕ್ರಿಯೆ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್ ಸೃಷ್ಟಿ!
Canada-India: ಕಾನ್ಸುಲರ್ ಕ್ಯಾಂಪ್ ರದ್ದು; ಕೆನಡಾಗೆ ಭಾರತ ತಿರುಗೇಟು
Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್ ದರ ಏರಿಕೆ ಶಾಕ್?
Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ರಾಜ್ಯ ಭೇಟಿ: ಕಾಂಗ್ರೆಸ್ ಕೆಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.