ತೊಗರಿ ಬಿತ್ತನೆಗೆ ರೈತರ ನಿರಾಸಕ್ತಿ
Team Udayavani, Jun 24, 2017, 3:03 PM IST
ಕಲಬುರಗಿ: ಸಕಾಲಕ್ಕೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿ ಬಿತ್ತನೆ ಭರಪೂರದಿಂದ ನಡೆದಿದ್ದರಿಂದ ರೈತರಿಗೆ ಬೀಜ-ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳುವಂತೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪರಿಶೀಲನೆ ನಡೆಸಿದ ಸಚಿವರು, ಜಿಲ್ಲೆಯಲ್ಲಿನ ಮಳೆ ಹಾಗೂ ಕೃಷಿ ಚಟುವಟಿಕೆಗಳ ಸಮಗ್ರ ಮಾಹಿತಿ ಪಡೆದುಕೊಂಡರು. ಕೃಷಿ ಜಂಟಿ ನಿರ್ದೇಶಕ ಜಿಲಾನಿ ಮೋಕಾಶಿ ಮಾತನಾಡಿ, ಕಳೆದ ಏಳು ವರ್ಷಗಳಲ್ಲಿಯೇ ಇದೇ ಮೊಲದ ಬಾರಿಗೆ ಮೃಗಶಿರಾ ಜೂನ್ 7ರ ಆರಂಭದೊಂದಿಗೆ ಧರೆಗಿಳಿದಿದ್ದು, ಬಿತ್ತನೆಗೆ ಸಂಪೂರ್ಣ ಅನುಕೂಲವಾಗಿದೆ.
ಮುಂಗಾರು ಹಂಗಾಮಿನ 5.70 ಲಕ್ಷ ಹೆಕ್ಟೇರ್ ಬಿತ್ತನೆ ಭೂಮಿ ಗುರಿಯಲ್ಲಿ ಈಗಾಗಲೇ ಒಂದು ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬಿತ್ತನೆಯಾಗಿದೆ. ಉದ್ದು, ಸೂರ್ಯಕಾಂತಿ ಬಿತ್ತನೆಯಾಗಿದೆ. ಕಳೆದ ವರ್ಷ ಎರಡು ಸಾವಿರ ಕ್ವಿಂಟಾಲ್ ತೊಗರಿ ಬೀಜ ಮಾರಾಟವಾಗಿತ್ತು. ಆದರೆ ಈಗ ಏನೂ ಮಾರಾಟವಾಗಿಲ್ಲ.
ಇದನ್ನೆಲ್ಲ ನೋಡಿದರೆ ತೊಗರಿ ಬಿತ್ತನೆಗೆ ರೈತರು ನಿರಾಸಕ್ತಿ ತೋರುತ್ತಿದ್ದಾರೆ ಎಂಬುದು ಕಂಡು ಬರುತ್ತಿದೆ ಎಂದು ಸಭೆ ಗಮನಕ್ಕೆ ತಂದರು. ಬೆಲೆ ಕಡಿಮೆ ಕಾರಣದಿಂದ ಸ್ವಲ್ಪ ಹಿನ್ನೆಡೆ ಹಾಕುತ್ತಿರಬಹುದು. ಆದರೆ ತೊಗರಿ ಬಿತ್ತನೆಗೆ ಇನ್ನೂ ಸಮಯವಿದೆ.
ಒಟ್ಟಾರೆ ಬೀಜ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಿ ಎಂದು ಸೂಚನೆ ನೀಡಿದ ಸಚಿವರು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಬೆಳೆವಿಮೆ ತುಂಬಲು ಇನ್ನಷ್ಟು ಪ್ರಚಾರಗೊಳಿಸಿ. ಜಿಲ್ಲೆಯಲ್ಲಿರುವ 7 ಲಕ್ಷ ರೈತರಲ್ಲಿ ಕೇವಲ ಒಂದು ಲಕ್ಷ ರೈತರು ಮಾತ್ರ ಬೆಳೆವಿಮೆ ಪ್ರಿಮೀಯಂ ತುಂಬಿರುವುದು ಸರಿಯಲ್ಲ. ಇದನ್ನು ಹೆಚ್ಚಿಗೆ ಮಾಡಿಸಬೇಕೆಂದು ತಾಕೀತು ಮಾಡಿದರು.
ಬೆಳೆವಿಮೆ ತಾರತಮ್ಯ: ನೆರೆಯ ಬೀದರ್ ಜಿಲ್ಲೆಗೆ ಕಳೆದ ವರ್ಷ 129 ಕೋಟಿ ರೂ. ಬೆಳೆವಿಮೆ ಮಂಜೂರಾಗಿದೆ. ಆದರೆ ಕಲಬುರಗಿ ಜಿಲ್ಲೆಗೆ ಕೇವಲ 3 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ. ಇದು ಅವೈಜ್ಞಾನಿಕ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಶಾಸಕ ಡಾ| ಉಮೇಶ ಜಾಧವ್ ಅಸಮಾಧಾನ ವ್ಯಕ್ತಪಡಿಸಿದರು.
ಮರಳು ದಂಧೆಗೆ ಶಾಣಪ್ಪ ಆಕ್ರೋಶ: ಮರಳು ದಂಧೆಗೆ ಯಾವುದೇ ರೂಪು ರೇಷೆಗಳಿಲ್ಲವೇ? ಬಡವರು ಮರಳು ಪಡೆಯಬೇಕಾದರೆ ಎಲ್ಲಿಗೆ ಹೋಗಬೇಕು? ಇದು ನಿಜಕ್ಕೂ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಸಭೆ ಆರಂಭವಾಗುತ್ತಿದ್ದಂತೆ ಈ ವಿಷಯ ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರ ನೀಡಿದ ಸಚಿವರು, ರಾಜ್ಯದಾದ್ಯಂತ ಮರಳಿನ ಸಮಸ್ಯೆ ಇದೆ. ಇದರ ಶಾಶ್ವತ ಪರಿಹಾರಕ್ಕೆ ಮರಳು ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಯಿಂದ ಹಿಂಪಡೆದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ವಹಿಸಲಾಗಿದೆ. ಗಣಿ ಇಲಾಖೆಯಿಂದ ಮರಳಿನ ಬ್ಲಾಕ್‌ಗಳನ್ನು ಗುರುತಿಸಿ ಹರಾಜು ಮಾಡಿ ಮರಳನ್ನು ದೊರಕಿಸಲಾಗುವುದು.
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 45 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 19 ಬ್ಲಾಕ್ ಗಳ ಹರಾಜಿಗಾಗಿ ಟೆಂಡರ್ ಕರೆಯಲಾಗಿದೆ. ಜೂನ್ 26ರಂದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತಿದೆ. ಸರ್ಕಾರಿ ಕಾಮಗಾರಿಗಳಿಗಾಗಿ 6 ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಆದಷ್ಟು ಬೇಗ ಮರಳು ಸರಾಗವಾಗಿ ದೊರೆಯಲಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ನಮ್ಮ ಗ್ರಾಮ ನಮ್ಮ ರಸ್ತೆ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಯಾವುದೇ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದರೆ ಸಂಬಂಧಪಟ್ಟ ಕಾರ್ಯನಿರ್ವಾಹಕ ಇಂಜಿನಿಯರ್ ರನ್ನು ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಎಂ ಗ್ರಾಮ ವಿಕಾಸ ಹೊಸ ಯೋಜನೆ: ಪ್ರತಿ ಗ್ರಾಮದಲ್ಲಿ ಒಂದು ಕೋಟಿ ರೂ. ಹಾಗೂ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮವನ್ನು ಒಗ್ಗೂಡಿಸಿ ಗ್ರಾಮದ ಸರ್ವತೋಮುಖ ಅಭಿವೃದ್ಧಿ ಮಾಡಲು ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆ ರೂಪಿಸಲಾಗಿದೆ.
ಆದಷ್ಟು ಬೇಗ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಗ್ರಾಮಗಳನ್ನು ಆಯ್ಕೆ ಮಾಡಿ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸಲಹೆ ನೀಡಿದರು. ಒಂದು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ 4 ಗ್ರಾಮಗಳನ್ನು ಹಾಗೂ ವಿಧಾನಪರಿಷತ್ ಸದಸ್ಯರು ಒಂದು ಗ್ರಾಮದ ಹೆಸರನ್ನು ಅಭಿವೃದ್ಧಿಗಾಗಿ ಆಯ್ಕೆ ಮಾಡಬೇಕಾಗಿದೆ.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಆಯ್ಕೆಯಾಗುವ ಪ್ರತಿ ಗ್ರಾಮಕ್ಕೆ ಗರಿಷ್ಠ ಒಂದು ಕೋಟಿ ರೂ. ಅನುದಾನದಂತೆ ರಾಜ್ಯದ ಒಟ್ಟು 1000 ಗ್ರಾಮಗಳನ್ನು ಪ್ರಸಕ್ತ ವರ್ಷ ಆಯ್ಕೆ ಮಾಡಿ ರಾಜ್ಯದ ಎಲ್ಲ ಜಿಲ್ಲೆಗಳ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಸಭೆ ಗಮನಕ್ಕೆ ತಂದರು.
ಪೊಲೀಸ್ ಕಾರ್ಯವೈಖರಿಗೆ ಬಿಆರ್ ಅಸಮಾಧಾನ: ಆಳಂದ ತಾಲೂಕಿನಲ್ಲಿ ಕಳ್ಳತನ ಹೆಚ್ಚಾಗುತ್ತಿವೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟವಾಗ್ತಾ ಇದೆ. ಕಳ್ಳರು- ಪೊಲೀಸರು ಒಗ್ಗೂಡಿದ್ದರಿಂದ ಈ ದಂಧೆಗಳಿಗೆ ನಿಯಂತ್ರಣ ಇಲ್ಲ ಎನ್ನುವಂತಾಗಿದೆ. ಅವ್ಯವಹಾರಗಳೊಂದಿಗೆ ಕೈ ಜೋಡಿಸಿರುವ ಹಾಗೂ 20 ವರ್ಷಗಳಿಂದ ಠಿಕಾಣಿ ಹೂಡಿರುವ ನಾಲ್ವರು ಪೇದೆಗಳನ್ನು ವರ್ಗಾವಣೆಗೊಳಿಸಿ ಎಂದು ಡಿಸಿ, ಎಸ್ಪಿ, ಐಜಿ ಅವರಿಗೆ ದೂರು ಸಲ್ಲಿಸಲಾಗಿದೆ.
ಆದರೂ ಯಾವುದೇ ಪ್ರಯೋಜನೆವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಳ್ಳತನ ಹೆಚ್ಚಾಗುತ್ತಿವೆ ಎಂಬುದನ್ನು ಒಪ್ಪಿಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಕುಮಾರ ಅವರು, ನಾಲ್ಕೈದು ದಿನದೊಳಗೆ ನಾಲ್ವರು ಪೇದೆಗಳನ್ನು ವರ್ಗಾಯಿಸಲಾಗುವುದು ಎಂದರು.
ಶಾಸಕ ಬಿ. ಜಿ.ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿ ಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.