ಗಡ್ಡಿ ಸಂಕಷ್ಟ :ಕಾಪಾಡು ನೀಲಕಂಠ


Team Udayavani, Jan 8, 2018, 10:40 AM IST

gul-1.jpg

ಸುರಪುರ: ಈಜಬೇಕು ಇದ್ದು ಜಯಿಸಬೇಕು ಎನ್ನುವ ನಾಣ್ಣುಡಿ ಅಕ್ಷರಶಃ ನೀಲಕಂಠರಾಯನ ಗಡ್ಡಿ ಜನರಿಗೆ ಅನ್ವಯಿಸುತ್ತದೆ. ದಿನಬಳಕೆ ಅಗತ್ಯವಸ್ತುಗಳು ಸೇರಿದಂತೆ ಏನೇ ಬೇಕು ಎಂದರೂ ಕೃಷ್ಣಾ ನದಿ ಈಜಲೇಬೇಕು. ಹೌದು! ಇಂತಹ ಪರಿಸ್ಥಿತಿಯಾದಗಿರಿ ಜಿಲ್ಲೆ ಸುರಪುರ ತಾಲೂಕು ಕಕ್ಕೇರಾ ಪುರಸಭೆ ವಾಪ್ತಿಯ ನೀಲಕಂಠರಾಯನಗಡ್ಡಿಯಲ್ಲಿದೆ.

ಅಲ್ಲಿಯ ಜನರ ದಿನನಿತ್ಯದ ಜೀವನ ಪರಿಸ್ಥಿತಿ ನೋಡಿದಾಗ ಎಂಥವರ ಮನಸ್ಸು ಸಹ ಕರಗದೆ ಇರದು. ನಾರಾಯಣಪುರ ಜಲಾಶಯದ ಎಲ್ಲ ಕ್ರಸ್ಟ್‌ ಗೇಟ್‌ ತೆರೆದು ಕೃಷ್ಣಾ ನದಿಗೆ ನೀರು ಹರಿಸಿದರೆ ನೀಲಕಂಠರಾಯನಗಡ್ಡಿ ಸಂಪೂರ್ಣ ಜಲಾವೃತಗೊಂಡು ಹೂರ ಜಗತ್ತಿನ ಸಂಪರ್ಕ ಕಳೆದುಕೊಂಡು ಸಣ್ಣ ದ್ವೀಪದಂತಾಗುತ್ತದೆ.

ಕಕ್ಕೇರಾ ಪಟ್ಟಣದಿಂದ ಸುಮಾರು 15 ಕಿಮೀ ಅಂತರದಲ್ಲಿದೆ ನೀಲಕಂಠರಾಯನಗಡ್ಡಿ. ಸುಮಾರು 15ನೇ ಶತಮಾನದಿಂದಲೂ ನೀಲಕಂಠರಾಯನಗಡ್ಡಿಯಲ್ಲಿ ಜನವಸತಿ ಇದೆ. ವಿಜಯನಗರ ಸಾಮ್ರಾಜ್ಯ ಪತನವಾದ ನಂತರ ಉದಯಿಸಿದ ಗೋಸಲ ವಂಶದ ಮೊದಲ ರಾಜಧಾನಿ ಇದಾಗಿತ್ತು ಎಂದು ಇತಿಹಾಸ ದಿಂದ ತಿಳಿದು ಬರುತ್ತದೆ.

ಇಲ್ಲಿಯ ಜನರು ಸುಮಾರು ಆರು ಶತಮಾನಗಳಿಂದಲೂ ಸಂಕಷ್ಟ ಎದುರಿಸುತ್ತಿದ್ದಾರೆ. ಹಡಗು ಮತ್ತು ದೋಣಿ ಸೌಕರ್ಯವೂ ಇಲ್ಲ. ಪ್ರವಾಹ ಸಂದರ್ಭದಲ್ಲಿ ಜಿಲ್ಲೆ ಮತ್ತು ತಾಲೂಕು ಆಡಳಿತ ಒಂದಿಷ್ಟು ಅಗತ್ಯ ಕ್ರಮ ಕೈಗೊಂಡು ಆಹಾರ ಸಾಮಗ್ರಿ ಪೂರೈಸಿ ಕೈ ತೊಳೆದುಕೊಳ್ಳುವುದನ್ನು ಬಿಟ್ಟರೆ ಇದುವರೆಗೂ ಯಾವುದೇ ಶಾಶ್ವತ ಪರಿಹಾರ ಒದಗಿಸುವ ಗೋಜಿಗೆ ಹೋಗಿಲ್ಲ. 

ಸರಕಾರವಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ಅಲ್ಲಿಯ ಜನರ ಸಂಕಷ್ಟಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಸೌಲಭ್ಯ ಒದಗಿಸಿಕೊಡುವಲ್ಲಿ ಯಾರೊಬ್ಬರೂ ಪ್ರಾಮಾಣಿಕವಾಗಿ ಪ್ರಯತ್ನಿಸಿಲ್ಲ ಎಂಬುದಕ್ಕೆ ಇಲ್ಲಿನ ವಾಸ್ತವ ಸ್ಥಿತಿಯೇ ಸಾಕ್ಷಿ. ನೈಸರ್ಗಿಕವಾಗಿ ಈ ದ್ವೀಪ ಅತ್ಯಂತ ಎತ್ತರದಲ್ಲಿದೆ. ಸುರಕ್ಷಿತ ತಾಣವಾಗಿದೆ. ಆದ್ದರಿಂದ ಈ ಪ್ರದೇಶವನ್ನು ಗೋಸಲ ವಂಶದ ಪಿಡ್ಡನಾಯಕ ತನ್ನ ಸಾಮ್ರಾಜ್ಯ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿದ್ದ ಎಂದು ಇತಿಹಾಸದ ಮೂಲಗಳಿಂದ ತಿಳಿದು ಬರುತ್ತದೆ. ಹಾಗಾಗಿಯೇ ಈತನಿಗೆ ಗಡ್ಡಿ ಪಿಡ್ಡನಾಯಕ ಎಂಬ ಅಭಿದಾನವಿದೆ. ಸಾಹಸ ಕ್ರೀಡೆಗೆ ಈ ಪ್ರದೇಶ ಪ್ರಶಸ್ತ ಸ್ಥಳವಾಗಿದೆ. ಇಲ್ಲಿ ಸೈನಿಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಲಾಗುತಿತ್ತು. ಅಪರಾಧಿಗಳನ್ನು ನದಿಗೆ ತಳ್ಳುವ ಮೂಲಕ ಜಲ ಶಿಕ್ಷೆ ನೀಡ ಲಾಗುತ್ತಿತ್ತು ಎಂದು ತಿಳಿದು ಬರುತ್ತದೆ. 

ಒಂದೇ ಕೋಮಿನ ಸಮುದಾಯ: ಗಡ್ಡಿಯಲ್ಲಿ ನಾಯಕ ಸಮುದಾಯದ ಗೋಸಲ ವಂಶಕ್ಕೆ ಸೇರಿದ ಒಂದೇ ಕೋಮಿನವರಿದ್ದಾರೆ. ಅನ್ಯ ಜಾತಿ ಜನರಿಲ್ಲದಿರುವುದು ಇನ್ನೊಂದು ವಿಶೇಷ. ಇಲ್ಲಿಯ ಜನರು ಬಹುತೇಕವಾಗಿ ಉಳಿಮೆ ಮಾಡಿಕೊಂಡೇ ಜೀವನ ಸಾಗಿಸುತ್ತಿದ್ದಾರೆ.

ಐತಿಹಾಸಿಕ ಹಿನ್ನೆಲೆ
ಈಗಲೂ ಗಡ್ಡಿ ಸುತ್ತ ಸುಸಜ್ಜಿತವಾದ ಕೋಟೆಯಿದೆ. ನಾಲ್ಕು ದಿಕ್ಕಿನಲ್ಲಿ ಮಜಬೂತಾದ ಎತ್ತರದ ಬುರುಜಗಳು, ಮದ್ದುಗುಂಡು ಸಂಗ್ರಹಿಸಿಡುವ ಮತಾಪ ಮನೆ, ಅಗಸಿ ಸೇರಿದಂತೆ ಇತರೆ ಸ್ಮಾರಕಗಳ ಕುರುಹುಗಳು ಕಾಣಸಿಗುತ್ತವೆ. ಇಲ್ಲಿಯ ಜನರ ಆರಾಧ್ಯ ದೈವ ನೀಲಕಂಠನ ನೆಲೆಯಿಂದಲೇ ದ್ವೀಪಕ್ಕೆ ಈ ಹೆಸರು ಬಂದಿದೆ.

ಕಂದಾಯ ಇಲಾಖೆ ಹೇಳುವ ಪ್ರಕಾರ ಗಡ್ಡಿಯಲ್ಲಿ ಸದ್ಯಕ್ಕೆ 60 ಕುಟುಂಬಗಳ 300ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ.
300 ಎಕರೆಗೂ ಹೆಚ್ಚು ಕೃಷಿ ಭೂಮಿ ಇದೆ. ಇಲ್ಲಿಯ ಜನರ ಮೂಲ ಕಸಬು ಕೃಷಿಯೇ ಆಗಿದೆ. ಸರಕಾರದ ಒಡೆತನಕ್ಕೆ ಸೇರಿದ ಸಾವಿರಾರು ಎಕರೆ ಕೃಷಿ ರಹಿತ ಪಾಳು ಭೂಮಿ ಇದೆ. ತೊಗರಿ, ಸಜ್ಜೆ, ಹೆಸರು ಹಲಸಂದಿ, ಹುರುಳಿ ಸೇರಿದಂತೆ ದ್ವಿದಳ ಧಾನ್ಯ ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಕುರಿ ಸಾಕಾಣಿಕೆ ಜತೆಗೆ ದನ-ಕರು, ಮೇಕೆ ಸಾಕಿದ್ದು, ಉಪ ಕಸುಬನ್ನಾಗಿ ಹೈನುಗಾರಿಕೆ ಮಾಡಿಕೊಂಡಿದ್ದಾರೆ. 

ಪ್ರವಾಹ ಈಜಿದ್ದಳು ಗರ್ಭಿಣಿ
 ಒಂದು ತಿಂಗಳ ಮೇಲ್ಪಟ್ಟು ಪ್ರವಾಹ ಇಳಿಮುಖವಾಗುವುದಿಲ್ಲ. ಈ ಕಾರಣದಿಂದಲೇ ಅವರು ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ಮತ್ತು ದಿನಬಳಕೆ ಅಗತ್ಯವಸ್ತುಗಳನ್ನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಒಂದು ಕ್ವಿಂಟಲ್‌ವರೆಗೆ ಜೋಳ ಬೀಸಿಟ್ಟುಕೊಳ್ಳುತ್ತಾರೆ. ಇವೆಲ್ಲವುಗಳನ್ನು ತಲೆಮೇಲೆ ಹೊತ್ತು ಈಜುಕಾಯಿ ಸಹಾಯದಿಂದ ನದಿ ದಾಟಿ ದಡ ಸೇರುತ್ತಾರೆ. ಕಳೆದ ವರ್ಷ ತುಂಬು ಗರ್ಭಿಣಿಯೊಬ್ಬಳು ನದಿ ಈಜಿ ಸುರಕ್ಷಿತವಾಗಿ ದಡ ಸೇರಿ ಕಕ್ಕೇರಾ ಆರೋಗ್ಯ ಕೇಂದ್ರದಲ್ಲಿ ಹೆರಿಗೆಗೆ ದಾಖಲಾಗಿದ್ದ ಸುದ್ದಿ ರಾಜ್ಯದ ಗಮನಸೆಳೆದಿತ್ತು.

ಗುಳೆ ಸಾಮಾನ್ಯ
ಕೂಲಿ ಕೆಲಸದಿಂದಲೇ ಇಲ್ಲಿಯ ಜನರು ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಮುಂಗಾರು ಬೆಳೆ ನಂತರ ಬಹುತೇಕರು ಕೂಲಿ ಅರಸಿ ಗುಳೆ ಹೋಗುವುದು ಇಲ್ಲಿ ಸಾಮಾನ್ಯವಾಗಿದೆ. ಒಣ ಬೇಸಾಯ ಆಗಿರುವುದರಿಂದ ಗ್ರಾಮದಲ್ಲಿ ಕೂಲಿ ಸಿಗುವುದಿಲ್ಲ. ಸಮೀಪದ ಕಕ್ಕೇರಾ ಪಟ್ಟಣಕ್ಕೆ ಕೂಲಿಗೆ ಹೋದರೂ ವಾಪಾಸ್‌ ಮನೆಗೆ ಬರುವುದು ದುಸ್ತರದ ಮಾತಾಗಿದೆ. ಇತ್ತ ಕೆಲಸ ನೀಡಿ ಕಾರ್ಮಿಕರ ಗುಳೆ ತಪ್ಪಿಸುವ ಮಹತ್ವಾಕಾಂಕ್ಷಿಯಿಂದ ಆರಂಭಿಸಿದ್ದ ಉದ್ಯೋಗ ಖಾತ್ರಿ ಯೋಜನೆ ಸೌಲಭ್ಯಗಳ ಕೊರತೆಯಿಂದ ಇಲ್ಲಿ ಅನುಷ್ಠಾನವೇ ಆಗಿಲ್ಲ. ಹೀಗಾಗಿ ದೊಡ್ಡ ದೊಡ್ಡ ನಗರಗಳಿಗೆ ಕೂಲಿ ಅರಸಿ ಗುಳೆ ಹೋಗುವುದು ಅನಿವಾರ್ಯ ಎನ್ನುತಾರೆ ಗಡ್ಡಿ ಜನರು. 

ಚುನಾವಣೆ ಬಹಿಷ್ಕಾರ ಚಿಂತನೆ 
 ಗ್ರಾಮಕ್ಕೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಗಡ್ಡಿ ಜನರು ಮತದಾನ ಬಹಿಷ್ಕಾರ ಮಾಡಿದ್ದರು. ಹಾಲಿ ಮತು ಮಾಜಿ ಶಾಸಕರು ಬೆಂಬಲಗರೊಂದಿಗೆ ಗ್ರಾಮಕ್ಕೆ ಬಂದು ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿ ಮತದಾನಕ್ಕೆ ಮನವೊಲಿಸಿದ್ದರು. ಆದರೆ ಭರವಸೆ ಇದುವರೆಗೂ ಈಡೇರಿಸಿಲ್ಲ. ಚುನಾವಣೆಗೆ ಬಂದು ಹೋದವರು ತಿರುಗಿಯೂ ನೋಡಿಲ್ಲ. ಹೀಗಾಗಿ ಜನಪ್ರತಿನಿಧಿಗಳ ಮೇಲೆ ನಂಬಿಕೆ ಇಲ್ಲದಂತಾಗಿದೆ. ಇದರಿಂದ ಬೇಸತ್ತಿದ್ದೇವೆ. ಆದ್ದರಿಂದ ಈ ಬಾರಿ ವಿಧಾನಸಭೆ ಚುನಾವಣೆ ಮತದಾನ ಬಹಿಷ್ಕರಿಸಲು ಚಿಂತನೆ ನಡೆಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ

ಇಚ್ಛಾ ಶಕ್ತಿ ಪ್ರದರ್ಶಿಸಲಿ
ಸ್ಥಳಾಂತರ ವಿರೋಧಿಸುವ ಇಲ್ಲಿಯ ಜನರು ಸೌಲಭ್ಯ ಒದಗಿಸುವಂತೆ ಅಂಗಲಾಚುತ್ತಾರೆ. ಅನಾದಿ ಕಾಲದಿಂದ ಇಲ್ಲಿಯವರೆಗೆ ಇಲ್ಲಿಯ ನೆಲಕ್ಕೂ ಅವರಿಗೂ ಅವಿನಾಭಾವ ಸಂಬಂಧವಿದೆ. ಸ್ಥಳಾಂತರದಿಂದ ಸಂಬಂಧ ಕಳಚಿಕೊಳ್ಳಲು ಗಡ್ಡಿ ಜನರು ಸುತಾರಾಂ ಒಪ್ಪುತ್ತಿಲ್ಲ. ಇತ್ತ ಸರಕಾರ ಸಮಪರ್ಕವಾಗಿ ಮೂಲಸೌಕರ್ಯ ಒದಗಿಸಲು ಆಸಕ್ತಿ ತೋರುತ್ತಿಲ್ಲ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ಇಂತಹ ಎಲ್ಲ ಕಾರಣಗಳಿಂದ ಗಡ್ಡಿ ಜನರ ಪರಿಸ್ಥಿತಿ ಡೋಲಾಯಮಾನವಾಗಿದೆ. ಸರಕಾರ ಎಚ್ಚೆತ್ತುಕೊಂಡು ಗಡ್ಡಿ ಜನರಿಗೆ ಸೇತುವೆ ನಿರ್ಮಿಸಿ ಸೌಕರ್ಯ ಕಲ್ಪಿಸುವುದೇ ಕಾಯ್ದು ನೋಡಬೇಕಿದೆ. 

ಊಟಕ್ಕುಂಟು ಲೆಕ್ಕಕ್ಕಿಲ್ಲದ ಶಾಲೆ
ಗಡ್ಡಿಯಲ್ಲಿ ಶೈಕ್ಷಣಿಕ ಕೊರತೆ ಸಾಕಷ್ಟಿದೆ. ಗುಣಮಟ್ಟದ ಶಿಕ್ಷಣ ಇಲ್ಲಿಯ ಮಕ್ಕಳಿಗೆ ದೂರದ ಮಾತು. ಒಬ್ಬರೂ ಪದವೀಧರರಿಲ್ಲ. ಕನಿಷ್ಠ ಪಕ್ಷ ಪ್ರೌಢಶಾಲೆ ಶಿಕ್ಷಣ ಕಲಿತವರಿಲ್ಲ. ಕಿರಿಯ ಪ್ರಾಥಮಿಕ ಶಾಲೆ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನವಂತಿದೆ. 40ಕ್ಕೂ ಹೆಚ್ಚು ಮಕ್ಕಳ ದಾಖಲಾತಿಯಿದೆ. 30ರಿಂದ 35 ಮಕ್ಕಳು ಹಾಜರಿರುತ್ತಾರೆ. ಇದು ಏಕೋಪಾಧ್ಯಾಯ ಶಾಲೆಯಾಗಿದೆ. ನಿತ್ಯ ಮಧ್ಯಾಹ್ನ ಬಿಸಿಯೂಟ ವಿತರಿಸಲಾಗುತ್ತಿದೆ. ಪ್ರವಾಹ ಬಂದಾಗ ಶಾಲೆಗೆ ಅಘೋಷಿತ ರಜೆ ನೀಡಲಾಗುತ್ತಿದೆ. ಪ್ರವಾಹ ಇಲ್ಲದಿರುವಾಗ ಶಿಕ್ಷಕ ಸಮರ್ಪಕವಾಗಿ ಶಾಲೆಗೆ ಬರುವುದಿಲ್ಲ. ಬಂದರೂ ಕಚೇರಿ ಕೆಲಸದ ನೆಪ ಹೇಳಿ ಮಧ್ಯಾಹ್ನವೇ ಹೋಗಿ ಬಿಡುತ್ತಾರೆ. ಹೀಗಾಗಿ ಮಕ್ಕಳ ಪಾಲಿಗೆ ಶಾಲೆಯಿದ್ದರೂ ಶೈಕ್ಷಣಿಕ ಪ್ರಗತಿ ಕಾಣದಾಗಿದೆ. ಬಿಸಿಯೂಟದ ಸ್ಥಳೀಯ ಸಿಬ್ಬಂದಿಯೇ ಶಾಲೆ ಬಾಗಿಲು ತೆಗೆಯುತ್ತಾರೆ. ಊಟ ತಯಾರಿಸಿ ಮಕ್ಕಳನ್ನು ಕರೆದು ಊಟಕ್ಕೆ ಬಡಿಸುತ್ತಾರೆ. ಶಾಲೆ ಬಿಸಿಊಟಕ್ಕೆ ಮಾತ್ರ ಸೀಮಿತ ಎಂಬಂತಾಗಿದೆ.

ಕೃಷ್ಣಾ ಪವರ್‌ ನಿಂದ ಸೇತುವೆ 
ಕೃಷ್ಣಾ ಹೈಡ್ರೋಲಿಕ್‌ ವಿದ್ಯುತ್‌ ಉತ್ಪಾದನಾ ಕಂಪನಿ ವಿದ್ಯುತ್‌ ಉತ್ಪಾದನೆಗೆ ನದಿಗೆ ಉದ್ದವಾದ ತಡೆಗೋಡೆ ನಿರ್ಮಿಸಿ ಕಾಲುವೆ ಮೂಲಕ ನೀರು ಬಳಸಿಕೊಳ್ಳುತ್ತದೆ. ತಡೆಗೋಡೆ ನಿರ್ಮಾಣದಿಂದ ಗಡ್ಡಿ ಜನರಿಗೆ ನದಿ ದಾಟಲು ತೊಂದರೆ ಉಂಟಾಗದಿರಲಿ ಎನ್ನುವ ಸದುದ್ದೇಶದಿಂದ ಕಂಪನಿ ದಂಡೆಯಲ್ಲಿ ಸುಮಾರು 500 ಅಡಿಯಷ್ಟು ಕಾಲುವೆಗೆ ಪಾದಚಾರಿ ಸೇತುವೆ ನಿರ್ಮಿಸಿದೆ. ಇದನ್ನು ದಡದವರೆಗೂ ಸರ್ಕಾರ ಮುಂದುವರಿಸಿದಲ್ಲಿ ಜನರಿಗೆ ಅನುಕೂಲವಾಗಲಿದೆ.

ನದಿ ದಡದಲ್ಲಿ ಹಲವಾರು ಗಡ್ಡಿಗಳು 
ಕೃಷ್ಣಾ ನದಿ ತಟದಲ್ಲಿ ಬೆಂಚಿಗಡ್ಡಿ, ಕಡದರಗಡ್ಡಿ, ಮೇಲಿನ ಗಡ್ಡಿ, ಕೆಳಗಿನ ಗಡ್ಡಿ, ಜಂಗಿನ ಗಡ್ಡಿ, ಎತ್ತಿನ ಗಡ್ಡಿ ಎನ್ನುವ ಎಂಟಹತ್ತು
ಗಡ್ಡಿಗಳಿವೆ. ಎಲ್ಲ ಗಡ್ಡಿಗಳಲ್ಲಿ ಉತ್ತಮ ಕೃಷಿ ಭೂಮಿ ಇದೆ. ದನ-ಕರು, ಕುರಿಗಳಿಗಾಗಿ ಸಮೃದ್ಧವಾದ ಹುಲ್ಲುಗಾವಲು ಇದೆ.
ಹೀಗಾಗಿ ಇಲ್ಲಿಗೆ ಕುರಿಗಾಯಿಗಳು ಬರುವುದು ಸಾಮಾನ್ಯ. 2005-06ರಲ್ಲಿ ಪ್ರವಾಹ ಬಂದಾಗ ಕಡದರ ಗಡ್ಡಿಯಲ್ಲಿ ಸಿಕ್ಕು
ಬಿದಿದ್ದ ಕುರಿಗಾಯಿ ಸದಾಶಿವಪ್ಪ ಅವರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿತ್ತು ಎಂಬುದು ಗಮನಾರ್ಹ ಸಂಗತಿ. 

ಬ್ಯಾರೇಜ್‌ ನಿರ್ಮಾಣಕ್ಕೆ ಒತ್ತಾಯ 
ಎಲ್ಲ ಗಡ್ಡಿಗಳಲ್ಲಿ ಫಲವತ್ತಾದ ಕೃಷಿ ಭೂಮಿ ಇದೆ. ಪಕ್ಕದಲ್ಲಿಯೇ ಕೃಷ್ಣಾ ನದಿ ಹರಿಯುತ್ತಿದೆ. ಇದಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಿದರೆ ಎಲ್ಲ ಜಮೀನು ನೀರಾವರಿಗೆ ಒಳಪಡುತ್ತಿವೆ. ಇಂತಹ ಮಹತ್ವಪೂರ್ಣ ಯೋಜನೆ ಅನುಷ್ಠಾನಕ್ಕೆ ಸರಕಾರ ಮನಸ್ಸು ಮಾಡುತ್ತಿಲ್ಲ. ಪ್ರವಾಹ ಸಂದರ್ಭದಲ್ಲಿ ಒಂದಿಷ್ಟು ಅಗತ್ಯ ನೆರವು ನೀಡುತ್ತದೆ. ಇದನ್ನು ಬಿಟ್ಟು ಇನ್ನೇನನ್ನು ಮಾಡುತ್ತಿಲ್ಲ. ಬ್ರಿಡ್ಜ್ ಕಂ ಬ್ಯಾರೇಜ್‌ ನಿರ್ಮಿಸಿ ಬದುಕು ಹಸನಾಗಿಸಬೇಕು ಎಂಬುದು ಅಲ್ಲಿಯ ಜನರ ಒಕ್ಕೊರಲ ಮನವಿಯಾಗಿ¨

ಮೂಲಸೌಲಭ್ಯ ಕೊರತೆ
ಇದಕ್ಕೂ ಮೊದಲು ಗ್ರಾಪಂ ಆಗಿದ್ದ ಕಕ್ಕೇರಾ ಪುರಸಭೆಯಾಗಿ ಮೇಲ್ದರ್ಜೆಗೇರಿತು. ನೀಲಕಂಠರಾಯನಗಡ್ಡಿಯಿಂದ ಒಬ್ಬ
ಸದಸ್ಯನನ್ನು ಆಯ್ಕೆ ಮಾಡಲಾಗಿದೆ. ಶೌಚಾಲಯ, ಚರಂಡಿ, ಸಿಸಿ ರಸ್ತೆ, ಆಶ್ರಯ ಮನೆ ದೂರದ ಮಾತಾಗಿದ್ದು, ಮೂಲಭೂತ ಸೌಕರ್ಯ ಇಲ್ಲಿಯ ಜನರ ಪಾಲಿಗೆ ಗಗನ ಕುಸುಮವಾಗಿದೆ. ಇನ್ನೂ ಆರೋಗ್ಯ ಚಿಕಿತ್ಸೆಗಾಗಿ ಪರಿಪಾಟಲು ಹೇಳತೀರಾದಾಗಿದೆ. ನೆಗಡಿ, ಕೆಮ್ಮು, ಜ್ವರ ಸೇರಿದಂತೆ ಸಣ್ಣಪುಟ್ಟ ಕಾಯಿಲೆಗಳಿಗೂ ಬೆಟ್ಟದಲ್ಲಿ ಸಿಗುವ ನಾಟಿ ಔಷಧ ನೆಚ್ಚಿಕೊಂಡಿದ್ದಾರೆ.

ವಿದ್ಯುತ್‌ ಕಾಣದ ಗ್ರಾಮ
ಅಚ್ಚರಿ ಎನ್ನುವಂತೆ ಸ್ವಾತಂತ್ರ್ಯ ಬಂದು 60 ವರ್ಷ ಕಳೆದರೂ ಇಲ್ಲಿಯ ಜನ ಇದುವರೆಗೂ ವಿದ್ಯುತ್‌ ಕಂಡೇ ಇಲ್ಲ. ಗ್ರಾಮದ
ಪಕ್ಕದಲ್ಲಿಯೇ ಅಧಿಕ ಪ್ರವಾಹದ (ಹೈಟೆನ್ಷನ್‌) ವಿದ್ಯುತ್‌ ಮಾರ್ಗ ಹಾಯ್ದು ಹೋಗಿದೆ. ಆದರೆ, ವಿತರಣಾ ಕೇಂದ್ರ
ಸ್ಥಾಪಿಸಿ ವಿದ್ಯುತ್‌ ಕಲ್ಪಿಸುವ ಗೋಜಿಗೆ ಹೋಗಿಲ್ಲ. ನಾಲ್ಕು ವರ್ಷಗಳ ಹಿಂದೆ ಸೋಲಾರ್‌ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಬಹಳ ದಿನಗಳವರೆಗೆ ಬರಲಿಲ್ಲ ಬೆಳಗಿದಷ್ಟೇ ವೇಗವಾಗಿ ನಿಂತು ಹೋಗಿವೆ. ತಾಲೂಕು ಆಡಳಿತ ಇಲ್ಲವೇ ಪುರಸಭೆ ಅವುಗಳ ದುರಸ್ತಿ ಮಾಡಿಸುವಲ್ಲಿ ನಿರ್ಲಕ್ಷéವಹಿಸಿವೆ. ಹೀಗಾಗಿ ನಿತ್ಯ ಕತ್ತಲೆ ಕೂಪದಲ್ಲೇ ಜೀವನ ದೂಡುವಂತಾಗಿದೆ. ಉತ್ತಮವಾದ ರಸ್ತೆಗಳಿಲ್ಲದೆ ಕಲ್ಲು-ಮಣ್ಣಿನಿಂದ ಕೂಡಿದ ಹಾದಿಯಲ್ಲಿಯೇ ನಡೆದಾಡಬೇಕಿದೆ. ಮಕ್ಕಳು, ಗರ್ಭಿಣಿ, ವಯೋವೃದ್ಧರ ಪರಿಸ್ಥಿತಿ ಆ ದೇವರೇ ಬಲ್ಲ ಎನ್ನುವಂತಾಗಿದೆ

ತೆರವಿಗೆ ಯತ್ನ
ಹಿಂದೆ ರಾಜೂಗೌಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಸರಕಾರದ ಮೇಲೆ ಒತ್ತಡ ತಂದು ಗ್ರಾಮ ಸ್ಥಳಾಂತರಕ್ಕೆ ಯತ್ನಿಸಿದ್ದರು. 100 ಮನೆಗಳ ಮಂಜೂರಾತಿ ಪಡೆದಿದ್ದರು. ನಿವೇಶನ ಹುಡುಕಾಟದಲ್ಲಿದ್ದಾಗ ಗಡ್ಡಿ ಜನರು ಒಪ್ಪಲಿಲ್ಲ. ನಂತರ ತೂಗು ಸೇತುವೆ ನಿರ್ಮಾಣಕ್ಕಾಗಿ ನರ್ಬಾಡ್‌ನಿಂದ ಎರಡು ಕೋಟಿ ರೂ. ಅನುಮೋದನೆ ಪಡೆದಿದ್ದರು. ಗಡ್ಡಿ ಜನ ಇದನ್ನು ವಿರೋಧಿ ಸಿ ಆಟೋ, ಟಂಟಂ ಮತ್ತು ಬೈಕ್‌ಗಳಿಗೆ ಅನುಕೂಲ ಆಗುವಂತೆ ಬ್ರಿಡ್ಜ್ ನಿರ್ಮಿಸಲು ಒತ್ತಾಯಿಸಿದ್ದರು. ಪುನಃ ನಾಲ್ಕು ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅಷ್ಟರಲ್ಲಿ ವಿಧಾನಸಭೆಗೆ ಚುನಾವಣೆ ನಡೆದಿದ್ದರಿಂದ ಯೋಜನೆ ಈಡೇರಲಿಲ್ಲ.
2009-10ರಲ್ಲಿ ಪ್ರವಾಹ ಆವರಿಸಿದ್ದಾಗ ಜಿಲ್ಲಾ ಮತ್ತು ತಾಲೂಕು ಆಡಳಿತ ನೀಲಕಂಠರಾಯನಗಡ್ಡಿ ಜನರಿಗೆ ಬೋಟ್‌ ಮೂಲಕ ದಿನ ಬಳಕೆ ಸಾಮಗ್ರಿ ಮತ್ತು ಆಹಾರ ಧಾನ್ಯ ಪೂರೈಸಲು ಮುಂದಾಗಿತ್ತು. ಆದರೆ, ಪ್ರವಾಹಕ್ಕೆ ಹೆದರಿ ಬೋಟ್‌ ಪರಿಣಿತರು ನದಿಗೆ ಇಳಿಯಲಿಲ್ಲ. ಆ ಸಂದರ್ಭದಲ್ಲಿ ಮಾಜಿ ಸಚಿವ ರಾಜೂಗೌಡ ಸ್ವತಃ ನದಿಗೆ ಇಳಿದು ಬೋಟ್‌ ಮೂಲಕ ಜನರಿಗೆ ಆಹಾರ ಸಾಮಗ್ರಿ ತಲುಪಿಸಿದ್ದರು. ನಂತರ ಕಳೆದ ವರ್ಷದ ಪ್ರವಾಹ ಬಂದಾಗ ಅಂದಿನ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ ಬೋಟ್‌ ಮೂಲಕ ಗ್ರಾಮಕ್ಕೆ ತೆರಳಿ ಆಹಾರ ಧಾನ್ಯ ವಿತರಿಸಿದ್ದರು. ಅಲ್ಲದೇ ಅಲ್ಲಿನ ವಾಸ್ತವ ಸ್ಥಿತಿ ಬಗ್ಗೆ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದರು.

ಪಿಕ್‌ನಿಕ್‌ ಗೆ ಪ್ರಶಸ್ತ ತಾಣ
ಸುರಪುರ ಸಂಸ್ಥಾನದ ಉಗಮಕ್ಕೆ ನೀಲಕಂಠರಾಯನ ಗಡ್ಡಿ ಮೂಲ ಸ್ಥಾನವಾಗಿದೆ. ಇಲ್ಲಿ ಗಡ್ಡಿಪಿಡ್ಡನಾಯಕ ಆಳ್ವಿಕೆ ಮಾಡಿದ್ದ ಬಗ್ಗೆ ಅನೇಕ ಐತಿಹಾಸಿಕ ಸ್ಮಾರಕಗಳು ಈಗಲೂ ಗೋಚರಿಸುತ್ತಿವೆ. ಝುಳು ಝುಳು ಹರಿಯುವ ನದಿ, ತಂಪಾಗಿ ಬೀಸುವ ಗಾಳಿ, ಬೆಟ್ಟ, ಗುಡ್ಡ, ಗಿಡ, ಮರಗಳ ನೆರಳು, ಗಿಳಿ, ನವಿಲು ಕೋಗಿಲೆ, ಪಾರಿವಾಳ ಸೇರಿದಂತೆ ವಿವಿಧ ಹಕ್ಕಿಗಳ ಕಲರವದಿಂದ ಕೂಡಿದ ಸುಂದರವಾದ ಪರಿಸರವಿದೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳ ಪ್ರವಾಸಕ್ಕೆ ಈ ಸ್ಥಳ ಪ್ರಶಸ್ತ ತಾಣ. ನಾಡಿಗೆ ಕೊಡುಗೆ ನೀಡಿದ ಮೂಲ ಸಂಸ್ಥಾನದ ಇತಿಹಾಸವನ್ನು ಜೀವಂತವಾಗಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮ ನಿಮ್ಮಲ್ಲೆರ ಅಗತ್ಯತೆಯಾಗಿದೆ. ಈ ಕ್ಷೇತ್ರವನ್ನು ಐತಿಹಾಸಿಕ ಸ್ಮಾರಕವನ್ನಾಗಿ ಪರಿವರ್ತಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ನೇಕ ಇತಿಹಾಸ ಪ್ರೇಮಿಗಳು, ಪ್ರಜ್ಞಾವಂತರ ಒತ್ತಾಸೆಯಾಗಿದೆ

ನೀಲಕಂಠರಾಯನ ಗಡಿಗೆ ಹೀಗೆ ಹೋಗಿ
ಸುರಪುರ ತಾಲೂಕಿನಿಂದ ಕಕ್ಕೇರಾ ಮಾರ್ಗವಾಗಿ 40 ಕಿಮೀ ಕ್ರಮಿಸಿದರೆ ಬೆಂಚಿಗಡ್ಡಿ ಬರುತ್ತದೆ. ಇದು ಕೂಡ ಈ ಹಿಂದೆ
ಕೃಷ್ಣಾ ನದಿ ನೀರಿನಿಂದ ಆವೃತ್ತಗೊಂಡು ನಡುಗಡ್ಡೆಯಾಗಿ ಪರಿಣಮಿಸುತಿತ್ತು. 1998ರಲ್ಲಿ ಇದಕ್ಕೆ ಬ್ರಿಡ್ಜ್ ನಿರ್ಮಿಸಿ ಸಮಸ್ಯೆ ಹೋಗಲಾಡಿಸಲಾಗಿದೆ. ಇಲ್ಲಿಂದ 3 ಕಿಮೀ ಕ್ರಮಿಸಿದರೆ ಕೃಷ್ಣಾನದಿ ಸಿಗುತ್ತದೆ. ಒಂದು ಕಿಮೀ ನದಿ ದಾಟಿ ದಡದಿಂದ 3 ಕಿಮೀ ಎತ್ತರ ಪ್ರದೇಶದಲ್ಲಿ ನಡೆದು ಹೋದರೆ ಕೋಟೆಯೊಳಗೆ ಕಾಣುವ ಪುಟ್ಟ ಗ್ರಾಮವೇ ನೀಲಕಂಠರಾಯನ ಗಡ್ಡಿ

ಸಾಹಸಿಗರು
ಗಡ್ಡಿ ಜನರು ಸಾಹಸಕ್ಕೆ ಹೆಸರು ವಾಸಿ. ಅರಸರ ಆಳ್ವಿಕೆ ಕಾಲದಲ್ಲೇ ಇಲ್ಲಿ ಕಾಡುಮೃಗಗಳ ಹಾವಳಿ ಹೆಚ್ಚಾಗಿತ್ತು. ಅಂಥಹ ಸಂದರ್ಭದಲ್ಲಿಯೂ ಜನರು ಎದೆಗುಂದದೆ ಇಲ್ಲಿ ವಾಸಿಸುತ್ತಿದ್ದರು. ಎಂಥಹದ್ದೇ ಪ್ರವಾಹ ಬಂದರೂ ನದಿ ಈಜಿ ದಡ ಸೇರುತ್ತಿದ್ದರು. ಮಹಿಳೆಯರು, ಮಕ್ಕಳ ಆದಿಯಾಗಿ ಪ್ರತಿಯೊಬ್ಬರೂ ಈಜು ಕಲಿತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಮಹಿಳೆಯರು ಈಜುವುದರಲ್ಲಿ ಪರಿಣಿತರು. ಈಜು ಕಾಯಿ, ಮಣ್ಣಿನ ಮಡಿಕೆ ಇವರ ಈಜಿನ ಸಾಧನಗಳು. ಪ್ರವಾಹ ಬಂದಾಗ ಅಗತ್ಯ ವಸ್ತುಗಳನ್ನು ಖರೀದಿಸಿ ಇವುಗಳ ಸಹಾಯದಿಂದಲೇ ನದಿ ಈಜಿ ದಡ ತಲುಪುತ್ತಾರೆ.

ಕುಡಿಯುವ ನೀರಿನ ಸಮಸ್ಯೆ
ಗಡ್ಡಿ ಸುತ್ತಮುತ್ತ ನದಿ ಹರಿಯುತ್ತಿದ್ದರೂ ಕುಡಿಯುವ ಹನಿ ನೀರಿಗಾಗಿ ಪರಿತಪಿಸುವುದು ಮಾತ್ರ ತಪ್ಪಿಲ್ಲ. ಒಂದು ಕೊಳವೆಬಾವಿ ಕೂಡ ಈವರೆಗೂ ಕಂಡಿಲ್ಲ. ಕುಡಿಯುವ ನೀರು ತರಲು 3 ಕಿಮೀ ದೂರದ ನದಿಗೆ ನಡೆದು ಹೋಗಲೇಬೇಕು. ಅನೇಕ ಸಮಸ್ಯೆಗಳ ನಡುವೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ದಿನ ಬೆಳಗಾದರೆ ಪ್ರತಿ ಕುಟುಂಬದ ಮಹಿಳೆಯರು, ಮಕ್ಕಳು ನದಿಗೆ ಹೋಗಿ ನೀರು ತರುವುದೇ ಒಂದು ಕಾಯಕವಾಗಿದೆ. ನದಿ ದಾರಿಯೂ ಕಲ್ಲು-ಮುಳ್ಳುಗಳಿಂದಲೇ ಕೂಡಿದೆ. ಸ್ವಲ್ಪ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇಂಥಹ ಸಂದಿಗ್ಧತೆಯಲ್ಲಿ ಜೀವನ ಸಾಗಿಸುವುದು ಎಂತವರಿಗೂ ಶಾಪ ಎನಿಸದೆ ಇರದು. ಗ್ರಾಮದಲ್ಲಿ ಎಲ್ಲರೂ ಚುನಾವಣಾ ಗುರುತಿನ ಚೀಟಿ ಮತ್ತು ಆಧಾರ್‌ ಕಾರ್ಡ್‌ ಹೊಂದಿದ್ದಾರೆ. ಮತಗಟ್ಟೆ ಸ್ಥಾಪಿಸಿಲ್ಲ. ಕಕ್ಕೇರಾಕ್ಕೆ ಬಂದು ಮತದಾನ ಮಾಡಬೇಕು. ಎಲ್ಲ ಕುಟುಂಬಗಳು ಪಡಿತರ ಚೀಟಿ ಹೊಂದಿವೆ. ಆದರೆ, ಪಡಿತರ ಹಂಚಿಕೆಗೆ ಅಂಗಡಿ ಮಾತ್ರ ಇಲ್ಲ. ಕಕ್ಕೇರಾ ಪಟ್ಟಣಕ್ಕೆ ಬಂದು
ಪಡಿತರ ಪಡೆಯಬೇಕಿದೆ. ಚಿಕಿತ್ಸೆಗಾಗಿ ಆರೋಗ್ಯ ಕೇಂದ್ರವಿಲ್ಲ. ಕಕ್ಕೇರಾ ಪಟ್ಟಣಕ್ಕೆ ಬಂದು ಚಿಕಿತ್ಸೆ ಪಡೆಯಬೇಕು

ಸೌಲಭ್ಯ ಕಲ್ಪಿಸುವುದು ನನ್ನ ಬದ್ಧತೆ
ಗಡ್ಡಿ ಜನರ ಸಮಸ್ಯೆ ಬಹುದಿನದಿಂದ ಕಾಡುತ್ತಿದೆ. ಅವರಿಗೆ ಮೂಲ ಸೌಲಭ್ಯ ಕಲ್ಪಿಸುವುದು ನನ್ನ ಬದ್ಧತೆಯಾಗಿದೆ. ಬ್ರಿಡ್ಜ್ ಕೊರತೆಯಿಂದ ಅದು ಸಾಧ್ಯವಾಗಿರಲಿಲ್ಲ. ನನ್ನ ನಿರಂತರ ಪ್ರಯತ್ನದಿಂದ 1.62 ಕೋಟಿ ರೂ. ವೆಚ್ಚದಲ್ಲಿ ಪುಟ್‌ ಬ್ರಿಡ್ಜ್ ನಿರ್ಮಾಣಕ್ಕೆ ಸರಕಾರ ಮಂಜೂರಾತಿ ನೀಡಿದೆ. ಮುಖ್ಯಮಂತ್ರಿಗಳು ಈ ಯೋಜನೆಗೆ ಈಗಾಗಲೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೆಲವೇ ದಿನಗಳಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು. ಗಡ್ಡಿ ಜನರು ಆತಂಕಗೊಳ್ಳುವ ಅಗತ್ಯವಿಲ. 
 ರಾಜಾ ವೆಂಕಟಪ್ಪ ನಾಯಕ, ಸುರಪುರ ಶಾಸಕ

ಬಿಟ್ಟೋಗೋ ಮಾತೇ ಇಲ್ಲ
ಹೌದ್ರಿ..ಸರಕಾರ ಮನಿ ಕೊಡ್ತಾದ..ಹೊಲ ಏನಾರ ಕೊಡ್ತಾರೇನ್ರಿ. ಮನಿ ಬಿಟ್ಟ ಹೋದ್ರ ಹೊಲ ಏನ ಮಾಡೋದ. ಇದು ಆಗಲಾರದ ಮಾತು. ಇದು ಇವತ್ತು ನಿನ್ನೆಯದಲ್ಲಾ. ನಮ್ಮ ಮುತ್ತಾತ, ತಾತಂದಿರು ಇಲ್ಲಿ ಬಾಳ್ವೆ ಮಾಡ್ಯಾರ. ನಾವು ಇಲ್ಲೇ ಹುಟ್ಟಿವಿ..ಸಾಯೋಮಟ ಇಲ್ಲೆ ಇರಿತ್ತೀವಿ. ಬಿಟ್ಟೋಗೋ ಮಾತೇ ಇಲ್ಲ. ನಮಗ ಏನು ಬೇಕಾಗಿಲಿರಿ..ನದಿಗಿ ಬ್ರಿಡ್ಜ್ ಕಟ್ಟಿ ಊರು ಸುಧಾರಿಸದ್ರ ಸಾಕು.
 ಯಂಕಣ್ಣ ನಾಯಕ, ನೀಲಕಂಠರಾಯನಗಡ್ಡಿ ನಿವಾಸಿ

ಶೀಘ್ರ ಸೇತುವೆ ಕಾಮಗಾರಿ ಆರಂಭ
ಸೇತುವೆ ನಿರ್ಮಾಣದ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಎಚ್‌ಕೆಆರ್‌ಡಿಬಿ ಅನುದಾನದಲ್ಲಿ ಪುಟ್ಟ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ 1.75 ಕೋಟಿ ರೂ. ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ 1.62 ಕೋಟಿ ರೂ.ಗೆ ಅನುಮೋದನೆ ದೊರಕಿದೆ. ಈಗಾಗಲೇ ಮುಖ್ಯಮಂತ್ರಿ ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಶೀಘ್ರದಲ್ಲಿಯೇ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು.
 ಜೆ. ಮಂಜುನಾಥ, ಜಿಲ್ಲಾಧಿಕಾರಿ ಯಾದಗಿರಿ

10ಲಕ್ಷ ವೆಚ್ಚದಲ್ಲಿ ಕುಡಿವ ನೀರು
ನಗರೋತ್ಥಾನ ಯೋಜನೆ ಅಡಿಯಲ್ಲಿ ಕುಡಿಯುವ ನೀರು ಒದಗಿಸಲು 10 ಲಕ್ಷ ರೂ. ಮೀಸಲಿರಿಸಲಾಗಿದೆ. ಟೆಂಡರ್‌ ಮುಗಿದಿದ್ದು , ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಗ್ರಾಮದ ದುರ್ಗಮ್ಮ ದೇವಿ ದೇವಸ್ಥಾನದ ಬಳಿ 50 ಅಡಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಕೆಟ್ಟು ಹೋಗಿರುವ ಸೋಲಾರ್‌ ವಿದ್ಯುತ್‌ನ್ನು ತ್ವರಿತವಾಗಿ ದುರಸ್ತಿಗೊಳಿಸಿ ಬೆಳಕು ಒದಗಿಸುತ್ತೇನೆ. ಸೌಲಭ್ಯ ಕಲ್ಪಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇನೆ. ರಸ್ತೆ ಕೊರತೆಯಿಂದ ಸಮರ್ಪಕವಾಗಿ ಕಾರ್ಯ ನೆರವೇರುತ್ತಿಲ್ಲ.
  ಶರಣುಕುಮಾರ ಸೊಲ್ಲಾಪುರ, ಕಕ್ಕೇರಾ ಪುರಸಭೆ ವಾರ್ಡ್‌ ಸದಸ್ಯ

ಸುರಕ್ಷತೆಗೆ ಅಗತ್ಯ ಕ್ರಮ
ಪ್ರವಾಹ ಸಂದರ್ಭದಲ್ಲಿ ಗಡ್ಡಿ ಜನರ ಸುರಕ್ಷತೆಗಾಗಿ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಬೋಟ್‌ ಮೂಲಕ ಆಹಾರ ಸಾಮಗ್ರಿ ಪೂರೈಸಲಾಗುತ್ತದೆ. ಪ್ರವಾಹ ಇಳಿಮುಖ ಆಗುವರೆಗೂ ಕ್ಷಣಕ್ಷಣಕ್ಕೂ ಮಾಹಿತಿ ಪಡೆಯುತ್ತೇವೆ. ಏನು ಸಾಧ್ಯವಿದೆಯೋ ಅದನ್ನೆಲ್ಲ ತಾಲೂಕು ಆಡಳಿತ ನಿರ್ವಹಿಸುತ್ತಿದೆ. ರಸ್ತೆ ಕೊರತೆಯಿಂದ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ತೊಂದರೆಯಾಗುತ್ತಿದೆ.
 ಸುರೇಶ ಅಂಕಲಗಿ, ಸುರಪುರ ತಹಶೀಲ್ದಾರ

ಯಾರೂ ಕನ್ಯಾ ಕೊಡಲ್ಲಾರಿ
ನಮ್ಮ ಊರು, ನಮ್ಮ ಬಗ್ಗೆ ಯಾರಿಗೂ ಚಿಂತೆ ಇಲ್ರಿ. ಎಲೆಕ್ಷನ್ಯಾಗ್‌ ಬಂದಾವರು ನಂತರ ತಿರುಗಿ ಸಹ ನೋಡಲ್ರಿ, ನಮ್ಮ ಊರಿಗಿ ಏನ್‌ ಸೌಲಭ್ಯ ಇರಲಾರದಕ್ಕ ಯಾರೂ ಕನ್ಯಾ ಕೊಡಲ್ಲಾರಿ. ನಾವು ಎಲ್ಲ ಊರಿನವರಂಗ ಇರಬೇಕು. ಅದಕ್ಕೆ ನಮಗೆ ಸ್ಥಳಾಂತರ ಬ್ಯಾಡ್ರಿ..ಸೌಲಭ್ಯ ಒದಗಿಸಿ ಕೊಡ್ರಿ.
 ಪೂಜೆಪ್ಪ ಗೋವಿಂದನೇರ, ನೀಲಕಂಠರಾಯನಗಡ್ಡಿ ನಿವಾಸಿ

„ಸಿದ್ದಯ್ಯ ಪಾಟೀಲ

ಟಾಪ್ ನ್ಯೂಸ್

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maharashtra Election; BJP has nothing but 370: Mallikarjuna Kharge

Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ

Kalaburagi: Govt order to investigate KKRDB grant illegality: Complaint to election commission

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ

Kalaburagi: ರೌಡಿ ಶೀಟರ್ ಬರ್ಬರ ಹತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು

4

Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.