ಸಬೂಬು ಹೇಳದೇ ಗುರಿ ತಲುಪಿ
Team Udayavani, Oct 12, 2017, 10:36 AM IST
ಕಲಬುರಗಿ: ಆಯಾ ಇಲಾಖೆಗಳಿಗೆ ನೀಡಲಾದ ಅನುದಾನ ಸಂಪೂರ್ಣ ಅನುದಾನ ಬಳಕೆಗೆ ಎಲ್ಲ ಅಧಿಕಾರಿಗಳು ಬದ್ಧರಾಗಬೇಕು. ಸಬೂಬು ಹೇಳದೇ ನಿಗದಿತ ಗುರಿ( ಸಾಧನೆ) ತಲುಪಬೇಕು ಎಂದು ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಮಾಸಿಕ ಸಭೆಯಲ್ಲಿ ಪ್ರಗತಿ ಪರಿಶೀಲಿಸಿದ ಅವರು, ಮಾರ್ಚ್ ಅಂತ್ಯದೊಳಗೆ ನಯಾ ಪೈಸೆ ಹಣ ಮರಳಿ ಹೋಗದಂತೆ ನೋಡಿಕೊಳ್ಳಬೇಕು. ಎರಡೂಮೂರು ವರ್ಷದಿಂದ ಹಲವು ಇಲಾಖೆಯಗಳಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿಲ್ಲ. ಈ ಸಲ ನಡೆಯದು. ಪ್ರಮುಖವಾಗಿ ಎರಡು ವರ್ಷಗಳ ಕುಡಿಯುವ ನೀರಿನ ಕಾಮಗಾರಿ ವಿವರಣೆ ನೀಡುವುದರ ಜತೆಗೆ ಕುಡಿಯುವ ನೀರಿನ ಕಾಮಗಾರಿಗಳಲ್ಲಿ ಲೋಪವಾಗಿರುವ ಬಗ್ಗೆ ದೂರುಗಳು ಬಂದಿರುವುದರಿಂದ ಕಾಮಗಾರಿಗಳ ವಾಸ್ತವ ಸ್ಥಿತಿ ವರದಿ ನೀಡಬೇಕು ಎಂದು ತಾಕೀತು ಸಹ ಮಾಡಿದರು.
ಕೆಲವೊಂದು ಇಲಾಖೆಗಳ ಕಾರ್ಯಕ್ರಮಗಳು ಕೆಳ ಹಂತದಲ್ಲಿ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದ್ದರಿಂದ ಎಲ್ಲ ಇಲಾಖಾಧಿಕಾರಿಗಳು ತಮ್ಮ ಇಲಾಖೆ ಸಮಗ್ರ ಕ್ರಿಯಾ ಯೋಜನೆ ಮಾಹಿತಿ ತಮಗೆ ಹಾಗೂ ಸದಸ್ಯರ ಗಮನಕ್ಕೆ ತರಬೇಕು. ಪ್ರಮುಖವಾಗಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಬೇಕು ಎಂದು ಅಧ್ಯಕ್ಷರು ಸೂಚನೆ ನೀಡಿದರು.
ಬೆಳೆ ಹಾನಿ ಜಂಟಿ ಸಮೀಕ್ಷೆ: ಕಳೆದ ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿರುವ ಬೆಳೆ ಹಾನಿಯನ್ನು ಜಂಟಿ ಸಮೀಕ್ಷೆ ಮಾಡಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೋಕಾಶಿ ಸಭೆಗೆ ಮಾಹಿತಿ ನೀಡಿದರು. ಚಿತ್ತಾಪುರ, ಸೇಡಂ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧೆಡೆಯೂ ಮಳೆಯಾಗಿದೆ. ಹೀಗಾಗಿ ತೆಗ್ಗಿನ ಪ್ರದೇಶದ ಭೂಮಿಯಲ್ಲಿನ ಬೆಳೆಯೂ ನೀರಲ್ಲಿ ನಿಂತು ಹಾಳಾಗಿದೆ. ಇದನ್ನು ಸಮೀಕ್ಷೆ ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಹೇಳಿದರು.
ಮಾತಿನ ಚಕಮಕಿ: ಕುಡಿಯುವ ನೀರಿನ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ವಿಷಯ ಸಂಬಂಧ ಸಭೆಯಲ್ಲಿ ಕರ್ನಾಟಕ ಗ್ರಾಮೀಣ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಅಭಿಯಂತರ ರೇವಣಸಿದ್ದಪ್ಪ ಹಾಗೂ ಜೆಸ್ಕಾಂ ಇಂಜನಿಯರ್ ನಡುವೆ ಮಾತಿನ ಚಕಮಕಿ ನಡೆಯಿತು. ಸಭೆಗೆ ಸುಳ್ಳು ಮಾಹಿತಿ ನೀಡಬೇಡಿ ಎಂದು ರೇವಣಸಿದ್ದಪ್ಪ ಅವರು ಜೆಸ್ಕಾಂ ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
ನಾನು ವಾಸ್ತವ ವರದಿ ಹೇಳುತ್ತಿದ್ದೇನೆ ಎಂದು ಮರು ಉತ್ತರ ನೀಡಿದ್ದಲ್ಲದೇ ಕೆಲವು ಕಾಲ ಇಬ್ಬರ ನಡುವೆ ಮಾತಿಕ ಚಕಮಕಿ ನಡೆಯಿತು. ಈ ನಡುವೆ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ಯಾಕಾಪುರ ಅವರು, ನಿರಂತರ ಜ್ಯೋತಿಯಡಿ ವಿದ್ಯುತ್ ಪರಿಕಗಳೆಲ್ಲ ಕಳಪೆಯಾಗಿವೆ. ಈ ಕುರಿತು ಅಧಿಕಾರಿಗಳ್ಯಾರು ಪರಿಶೀಲನೆ ನಡೆಸಿಲ್ಲವೇ ಎಂದು ಪ್ರಶ್ನಿಸಿದರು. ಇದಕ್ಕೆ ಜೆಸ್ಕಾಂ ಅಧಿಕಾರಿಗಳು ಉತ್ತರ ನೀಡಲೇ ಇಲ್ಲ. 768 ಜನರಿಗೆ ಡೆಂಘೀ ಖಚಿತ: ಜಿಲ್ಲೆಯಲ್ಲಿ ಸದ್ಯ 768 ಜನರಿಗೆ ಡೆಂಘೀ ಜ್ವರ ಇರುವುದು ದೃಢಪಟ್ಟಿದೆ. 70 ಸಾವಿರ ಜನರ ರಕ್ತ ಪರಿಶೀಲನೆಯಲ್ಲಿ ಇಷ್ಟು ಪ್ರಕರಣಗಳು ಪತ್ತೆಯಾಗಿವೆ. ಆದರೆ ಈಗ ಸ್ವಲ್ಪ ನಿಂತಿದೆ ಎಂದು ಹೇಳಿದರು. ಇದಕ್ಕೆ ಅಧ್ಯಕ್ಷೆ ಸುವರ್ಣಾ ಮಲಾಜಿ ಅವರು, ವರ್ಷದಿಂದ ಆಳಂದ ತಾಲೂಕಿನ ನಿಂಬರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ. ಆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿದರು. ಇಲಾಖಾ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಶೀಘ್ರದಲ್ಲೇ ಅನುದಾನ ಬರುವ ಸಾಧ್ಯತೆಗಳಿವೆ ಎಂದು ಪ್ರಭಾರಿ ಡಿಎಚ್‌ಒ ಉತ್ತರಿಸಿದರು.
ಫಲಿತಾಂಶ ಸುಧಾರಣೆಗೆ ಕ್ರಮ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಸುಧಾರಣೆಗೆ ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ರೂಪಿಸಲಾಗಿದೆ. ಇಂದಿನಿಂದ ಪ್ರತಿ ತಾಲೂಕಿನಲ್ಲಿ ಮೂರು ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕೆ ಶುರು ಮಾಡಲಾಗಿದೆ. ಮೂರು ವಿಷಯಗಳ ಕುರಿತು ನುರಿತ ಶಿಕ್ಷಕರು ವಿಶೇಷ ತರಬೇತಿ ನೀಡುವರು. ಪ್ರತಿಯೊಂದು ಕೇಂದ್ರದಲ್ಲಿ 70 ಶಿಕ್ಷಕರು ಪ್ರಸ್ತುತ ಅಕ್ಟೋಬರ್ ರಜೆ ದಿನಗಳು ಹಾಗೂ ಮುಂಬರುವ ರವಿವಾರ ದಿನದಂದು ವಿಶೇಷ ತರಗತಿ ನಡೆಸಿಕೊಡುವರು. ಮಕ್ಕಳ ಹಾಜರಾತಿಗೆ ಬಯೋ ಮೆಟ್ರಿಕ್ ವ್ಯವಸ್ಥೆ ಕಲ್ಪಿಸಲಾಗಿದೆ.ಇದಕ್ಕಾಗಿ ಪ್ರತಿ ಕೇಂದ್ರಕ್ಕೆ ಓರ್ವ ಮುಖ್ಯೋಧ್ಯಾಪಕರನ್ನು ನಿಯೋಜಿಸಲಾಗಿದೆ ಎಂದು ಡಿಡಿಪಿಐ ಶಾಂತಗೌಡ ಅವರು ಸಭೆಗೆ ವಿವರಣೆ ನೀಡಿದರು.
ಕುಸನೂರ ಹತ್ತಿರದ ಸಿದ್ದೇಶ್ವರ ನಗರದ ಕಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ಮಾಧ್ಯಮಿಕ ಶಾಲೆ ಎಂದು ಉನ್ನತೀಕರಿಸದಿರುವುದು, ಬಿಸಿಯೂಟದ ಬೇಳೆಗೆ ತಿಂಗಳ-ತಿಂಗಳ ಟೆಂಡರ್ ಕರೆಯುವುದು, ಶಿಕ್ಷಣ ಇಲಾಖೆ ಕುರಿತಾಗಿ ಸುದೀರ್ಘ ಹಾಗೂ ಬಿಸಿ-ಬಿಸಿ ಚರ್ಚೆ ಕೆಡಿಪಿ ಸಭೆಯಲ್ಲಿ ನಡೆದವು. ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಪ್ಸಿಬಾರಾಣಿ
ಕೋರ್ಲಪಾಟಿ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅರವಿಂದ ಚವ್ಹಾಣ, ದೇವಕಿ ಚನ್ನಮಲ್ಲಯ್ಯ ಹಿರೇಮಠ, ಮುಖ್ಯ ಯೋಜನಾಧಿಕಾರಿ ಪ್ರವೀಣಪ್ರೀಯ ಎನ್ ಡೇವಿಡ್ ಸೇರಿದಂತೆ ಇದ್ದರು.
ಶಿಕ್ಷಕರ ಸಂಘದ ಅಧ್ಯಕ್ಷರಿಗೆ ನೋಟಿಸ್: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಯ್ಯ ಗುತ್ತೇದಾರ ಸರಿಯಾಗಿ
ಶಾಲೆಗೆ ಹೋಗದಿರುವ ಹಾಗೂ ತಮ್ಮ ಮಕ್ಕಳನ್ನು ಎರಡು ಶಾಲೆಗೆ ಸೇರಿಸುವ ಕುರಿತಾಗಿ ನೋಟಿಸ್ ನೀಡಲಾಗಿದೆ. ಅದೇ ರೀತಿ ಸೇಡಂ ಖೊಟ್ಟಿ ದಾಖಲೆ ಸಲ್ಲಿಸಿ ನೇಮಕವಾಗಿರುವ ಕುರಿತಾಗಿ ಸುರೇಶ ಕುಲಕರ್ಣಿ ಹಾಗೂ ಸೇಡಂ ಶಿಕ್ಷಣ ಸಂಯೋಜಕರಿಗೂ ನೊಟೀಸ್ ನೀಡಲಾಗಿದೆ ಎಂದು ಡಿಡಿಪಿಐ ಶಾಂತಗೌಡ ಅವರು ಸಭೆಗೆ ಮಾಹಿತಿ ನೀಡಿದರು.
ಮಲ್ಲಯ್ಯ ಗುತ್ತೇದಾರ ಶಾಲೆಗೆ ಹೋಗದಿರುವ ಹಾಗೂ ಎರಡು ಶಾಲೆಯಲ್ಲಿ ಹಾಜರಾತಿ ಕಲ್ಪಿಸಿರುವ ಕುರಿತಾಗಿ ಸಮಗ್ರ ತನಿಖೆಗಾಗಿ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ತಂಡ ವರದಿ ನೀಡಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂಜೀವನ್ ಯಾಕಾಪುರ, ತನಿಖಾ ತಂಡ ಸಮಯ ದೂಡುವ ತಂತ್ರವಾಗಿದೆ. ಇಷ್ಟು ನೆಪ ಮಾಡಿದ್ದು ಸಾಕು. ವಾರದೊಳಗೆ ತನಿಖಾ ವರದಿ ತರಿಸಿ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.
ಭೈರಾಮಡಗಿ ರಸ್ತೆ ಕಾಮಗಾರಿ ಕಳಪೆ ವರದಿಗೆ ಸೂಚನೆ : ಅಫಜಲಪುರ ತಾಲೂಕು ಭೈರಾಮಡಗಿ-ಗೊಬ್ಬೂರ ನಡುವಿನ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಮೊದಲಿನ ರಸ್ತೆಯೇ ಚನ್ನಾಗಿತ್ತು. ಆದರೆ ಈಗ ಹೊಸದಾಗಿ ಮಾಡಿರುವ ರಸ್ತೆಯೇ ಸಂಪೂರ್ಣ ಕಳೆಪೆಯಾಗಿದೆ. ಬಸ್ ಸಹ ಸಂಚರಿಸಲು ಬಾರದಂತಾಗಿದೆ. ಹಲವು ಸಲ ಬಸ್ ಕೆಟ್ಟು ನಿಂತ ಉದಾಹರಣೆಗಳು ಸಹ ಇವೆ. ಆದ್ದರಿಂದ ಸ್ಥಳಕ್ಕೆ ಹೋಗಿ ವರದಿ ಸಲ್ಲಿಸುವಂತೆ ಜಿಪಂ ಅಧ್ಯಕ್ಷರು ಹಾಗೂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ಜಿಪಂ ಪಂಚಾಯತ ರಾಜ ಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಶರಣಪ್ಪ ನಾಗನಹಳ್ಳಿ ಅವರು, ಕಳಪೆಯಾಗಿರುವ ಬಗ್ಗೆ ದೂರುಗಳಿವೆ ಬಂದಿವೆ. ಸ್ಥಳಕ್ಕೆ ಹೋಗಿ ವರದಿ ಸಲ್ಲಿಸುವುದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Kalaburagi; ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅಪಮಾನ: ಮಿಂಚಿನ ಪ್ರತಿಭಟನೆ
ಖರ್ಗೆ ಮನೆ ಮುತ್ತಿಗೆ ಯತ್ನ: ಅಶೋಕ, ಸಿ.ಟಿ ರವಿ ಸೇರಿ ನೂರಾರು ಮುಖಂಡರು ಪೊಲೀಸ್ ವಶಕ್ಕೆ
Kalaburagi; ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್ ಅಶೋಕ್
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.