ಸರಕಾರಿ ಪದವಿ ಕಾಲೇಜಿಗಿಲ್ಲ ದರಕಾರ
Team Udayavani, Apr 5, 2018, 5:00 PM IST
ದೇವದುರ್ಗ: ಪ್ರತಿ ಚುನಾವಣೆಯ ಪ್ರಕ್ರಿಯೆಗೆ ಬಳಸುವ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಕಾಲೇಜು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಇಂತಹ ದುಸ್ಥಿತಿಯಲ್ಲೇ ಇಲ್ಲಿ ಪದವಿ ತರಗತಿಗಳು ನಡೆಯುತ್ತಿದ್ದರೂ ಯಾರೊಬ್ಬರೂ ಇದರತ್ತ ಗಮನಹರಿಸದಿರುವುದು ದುರಂತವಾಗಿದೆ.
ಮಾಜಿ ಸಚಿವ ದಿ| ಬಿ. ಶಿವಣ್ಣನವರ ಅಧಿಕಾರಾವಧಿಯಲ್ಲಿ ದೇವದುರ್ಗ ಪಟ್ಟಣಕ್ಕೆ ಸರಕಾರಿ ಪದವಿ ಕಾಲೇಜು ಮಂಜೂರಾಗಿತ್ತು. ಬಳಿಕ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯ್ಕ ಆಡಳಿತಾವಧಿಯಲ್ಲಿ ಕಟ್ಟಡ ನಿರ್ಮಾಣವಾಗಿದೆ. ಸರ್ಕಾರಿ ಪದವಿ ಕಾಲೇಜು ಕಟ್ಟಡ ಅವ್ಯವಸ್ಥೆಯ ಆಗರವಾಗಿದೆ. ಕುಡಿಯಲು ನೀರಿಲ್ಲ, ಶೌಚಾಲಯವಿಲ್ಲ, ಕಾಂಪೌಂಡ್, ವಿದ್ಯುತ್ ಸೇರಿ ಮೂಲ ಸೌಕರ್ಯಗಳು ಮರೀಚಿಕೆಯಾಗಿವೆ. ಕಿಟಕಿ-ಬಾಗಿಲುಗಳು ಕಿತ್ತಿ ಹೋಗಿವೆ. ನೆಲಕ್ಕೆ ಹಾಸಲಾಗಿರುವ ಬಂಡೆಗಳು ಕುಸಿದಿವೆ. ಮಳೆ ಬಂದರೆ ಕೋಣೆಗಳೆಲ್ಲ ಸೋರಿ, ನೀರು ಮುಂದೆ ಹರಿಯದಂತಹ ವಾತಾವರಣ ನಿರ್ಮಾಣಗೊಂಡಿದೆ.
ಕಾಲೇಜು ಆರಂಭವಾಗಿ ಸುಮಾರು ವರ್ಷಗಳೇ ಕಳೆದರೂ ಕಟ್ಟಡಕ್ಕೆ ಇಂದಿಗೂ ಸುಣ್ಣಬಣ್ಣ ಬಳಿದಿಲ್ಲ. ಧೂಳು, ಜೇಡಿನ ಮಧ್ಯೆ ನಿತ್ಯ ಪಾಠಪ್ರವಚನ ಕೇಳಬೇಕಾಗಿದೆ. ಇಂಥ ಅವ್ಯವಸ್ಥೆಯ ಕಟ್ಟಡದಲ್ಲಿ ಬಿಎ ಪ್ರಥಮ, ದ್ವಿತೀಯ, ತೃತೀಯ ವರ್ಷದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಾರೆ. ಶೌಚಾಲಯ ಇಲ್ಲದ್ದರಿಂದ ವಿದ್ಯಾರ್ಥಿನಿಯರು ಪಾಡು ಹೇಳತೀರದಾಗಿದೆ. ಇಲ್ಲಿನ ಸಮಸ್ಯೆ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕಿದ್ದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಿದ್ಯಾರ್ಥಿಗಳಿಗೆ ತೊಂದರೆ: ಪದವಿ ಕಾಲೇಜು ಕಟ್ಟಡದ ಕೊಠಡಿಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದ್ದರಿಂದ ಪರೀಕ್ಷೆ ವೇಳೆ ಮೋಡ ಕವಿದರೆ ಬೆಳಕಿನ ಕೊರತೆಯಾಗಿ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗುತ್ತದೆ. ಇಲ್ಲಿನ ಸಮಸ್ಯೆ ಕುರಿತು ಎಸ್‌ಎಫ್‌ಐ ಸಂಘಟನೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡಿ ಶಾಸಕರಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.
ಸ್ಥಳೀಯ ಶಾಸಕರು ಈ ಬಾರಿ ಚುನಾವಣೆಯಲ್ಲಿ ಪುನರಾಯ್ಕೆಯಾದರೆ ಇಂಜಿನಿಯರಿಂಗ್, ಮೆಡಿಕಲ್, ಕಾನೂನು ಪದವಿ ಕಾಲೇಜು ಸೇರಿ ಇತರೆ ಕಾಲೇಜು ಮಂಜೂರಿ ಮಾಡಿಸಲಾಗುತ್ತದೆ ಎಂದು ಹೇಳುತ್ತಾರೆ. ಆದರೆ ಇರುವ ಪದವಿ ಕಾಲೇಜಿಗೆ ಮೂಲ ಸೌಕರ್ಯ ಕಲ್ಪಿಸಲು ಗಮನಹರಿಸದ ಶಾಸಕರು ಉನ್ನತ ಶಿಕ್ಷಣದ ಕಾಲೇಜುಗಳನ್ನು ಅದೇಗೆ ಮಂಜೂರಿ ಮಾಡಿಸುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಇರುವ ಶೌಚಾಲಯಕ್ಕೆ ನೀರಿಲ್ಲ: ಕಾಲೇಜು ಬಳಿ ನಿರ್ಮಿತಿ ಕೇಂದ್ರದಿಂದ ಕಳೆದ ಒಂದು ವರ್ಷದ ಹಿಂದೆ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಇದಕ್ಕೆ ನೀರಿನ ವ್ಯವಸ್ಥೆ ಇಲ್ಲದ್ದರಿಂದ ನಿರುಪಯುಕ್ತವಾಗಿದೆ.
ಇನ್ನಾದರೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಎಚ್ಚೆತ್ತುಕೊಂಡು ಸರಕಾರಿ ಪದವಿ ಕಾಲೇಜು ದುರಸ್ತಿಗೆ ಮತ್ತು ನೀರು, ವಿದ್ಯುತ್, ಶೌಚಾಲಯದಂತಹ ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ನಿಂಗಣ್ಣ ಮಕಾಶಿ ಆಗ್ರಹಿಸಿದ್ದಾರೆ.
ಚುನಾವಣೆ ಪ್ರಕ್ರಿಯೆ ನಡೆಯುವ ಕೇಂದ್ರ
ಯಾವುದೇ ಚುನಾವಣೆ ನಡೆದರೂ ಅದರ ಪ್ರಕ್ರಿಯೆಗಳು ಸರ್ಕಾರಿ ಪದವಿ ಕಾಲೇಜು ಕಟ್ಟಡದಲ್ಲೇ ನಡೆಯುತ್ತವೆ. ವಿಧಾನಸಭೆ, ಲೋಕಸಭೆ, ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳ ಪ್ರಕ್ರಿಯೆಗಳು ಇದೇ ಕಟ್ಟಡದಲ್ಲಿ ನಡೆಯುತ್ತವೆ. ಮಸ್ಟರಿಂಗ್, ಡಿ. ಮಸ್ಟರಿಂಗ್ ಸೇರಿದಂತೆ ಕೆಲವು ಬಾರಿ ಮತ ಪೆಟ್ಟಿಗೆಗಳನ್ನು ಕೂಡ ಇದೇ ಕಟ್ಟಡದಲ್ಲಿ ಸಂಗ್ರಹಿಸಿ ಫಲಿತಾಂಶ ಪ್ರಕಟಿಸಲಾಗುತ್ತಿದೆ. ಆದರೂ ಕಟ್ಟಡವನ್ನು ದುರಸ್ತಿಗೊಳಿಸಿ ಮೂಲ ಸೌಲಭ್ಯ ಕಲ್ಪಿಸುವತ್ತ ಜಿಲ್ಲಾಡಳಿತವಾಗಲಿ, ತಾಲೂಕು ಆಡಳಿತವಾಗಲಿ ಗಮನಹರಿಸಿಲ್ಲ.
ಈಡೇರದ ಡಿಸಿ ಭರವಸೆ: ಕಟ್ಟಡದ ಸಮಸ್ಯೆ ಬಗ್ಗೆ ಪತ್ರಕರ್ತರು ಹಿಂದಿನ ಜಿಲ್ಲಾ ಧಿಕಾರಿ ಸಸಿಕಾಂತ್ ಸೇಂಥಿಲ್ ಅವರ ಗಮನ ಸೆಳೆದಾಗ ಯಾರೂ ಅನುದಾನ ಕೊಡದೇ ಹೋದಲ್ಲಿ ಜಿಲ್ಲಾಧಿಕಾರಿ ತಮ್ಮ ಅನುದಾನ ಒದಗಿಸುವ ಭರವಸೆ ನೀಡಿದ್ದರು. ಆದರೆ ಇದು ಭರವಸೆಯಾಗಿಯೇ ಉಳಿದಿದೆ. ಇದುವರೆಗೆ ಕಟ್ಟಡ ದುರಸ್ತಿಗೆ, ಮೂಲ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ.
ಇದೀಗ ಮತ್ತೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಪ್ರಕ್ರಿಯೆಗಳು ಇದೇ ಕಟ್ಟಡದಲ್ಲಿ ನಡೆಯಲಿವೆ. ಚುನಾವಣಾ ಧಿಕಾರಿಗಳ ತಂಡ ಈಗಾಗಲೇ ಕಟ್ಟಡ ಪರಿಶೀಲಿಸಿ ಅವ್ಯವಸ್ಥೆಯನ್ನು ಮನಗಂಡಿದೆ. ಬೇರೆ ದಾರಿಯಿಲ್ಲದೆ ಕಟ್ಟಡದ ಸುತ್ತಲೂ ಬೆಳೆದಿರುವ ಜಾಲಿಗಿಡಗಳ ಕಟಿಂಗ್ ಕಾರ್ಯ ಭರದಿಂದ ನಡೆದಿದೆ.
ವಿಧಾನಸಭೆ ಚುನಾವಣೆಯ ಮತಪೆಟ್ಟಿಗೆಗಳನ್ನು ಸಂಗ್ರಹಿಸಲು ಈಗಾಗಲೇ ಅಧಿಕಾರಿಗಳ ತಂಡ ಸರ್ಕಾರಿ ಪದವಿ ಕಾಲೇಜು ಕಟ್ಟಡವನ್ನು ಪರಿಶೀಲಿಸಿದೆ. ಭದ್ರತೆಗಾಗಿ ಬೇಕಾಗುವ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗಾಗಿ ಕಟ್ಟಡದ ಸುತ್ತ ಬೆಳೆದಿರುವ ಜಾಲಿಗಿಡಗಳನ್ನು ತೆರವುಗೊಳಿಸುವ ಕಾರ್ಯ ಮಾಡಲಾಗುತ್ತಿದೆ.
ಅಶೋಕ ಹೀರೊಳ್ಳಿ, ತಹಶೀಲ್ದಾರ್
ನಾಗರಾಜ ತೇಲ್ಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್ ಪ್ರತಿಭಟನೆ, ವಾಡಿ ಬಂದ್
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.