ಶಿರಪೂರ ಮಾದರಿಯಿಂದ ಆಳಂದದಲ್ಲಿ ಅಂತರ್ಜಲ ಹೆಚ್ಚಳ
Team Udayavani, Sep 2, 2022, 2:37 PM IST
ಮಾದನಹಿಪ್ಪರಗಿ: ಐದಾರು ವರ್ಷಗಳ ಹಿಂದೆ ಆಳಂದ ತಾಲೂಕು ಬರದ ಛಾಯೆಯಲ್ಲಿತ್ತು. ಮಳೆಗಾಲದಲ್ಲೂ ಮಳೆ ಅಪರೂಪವಾಗಿತ್ತು. ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಬಡಿದಾಡುವುದು ಸಾಮಾನ್ಯ ಸಂಗತಿಯಾಗಿತ್ತು. ಹಳ್ಳಿಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಕೈ ಹಿಡಿದಿದ್ದೇ ಮಹಾರಾಷ್ಟ್ರ ರಾಜ್ಯದ ಧುಳೆ ಜಿಲ್ಲೆಯ ಶಿರಪೂರ ಮಾದರಿ ಯೋಜನೆ.
ಜಾನುವಾರುಗಳಿಗೆ ನೀರು, ಮೇವಿನ ಕೊರತೆ ತೀವ್ರ ವಾಗಿದ್ದಾಗ ಆಗಿನ ಶಾಸಕರಾಗಿದ್ದ ಬಿ.ಆರ್.ಪಾಟೀಲ ಅಂದಿನ ಸರ್ಕಾರಕ್ಕೆ ಬರಗಾಲದ ವರದಿ ಸಲ್ಲಿಸಿದ್ದರು. ಹೀಗಾಗಿ ಸರ್ಕಾರ ಆಳಂದ ತಾಲೂಕಿನಲ್ಲಿ ಐದಾರು ಕಡೆ ಗೋಶಾಲೆ ತೆರೆದಿತ್ತು. ರೈತರು ತಮ್ಮ ಜಾನುವಾರುಗಳನ್ನು ಬದುಕಿಸಲು ಗೋಶಾಲೆಯಲ್ಲಿ ದನಕರುಗಳೊಂದಿಗೆ ತಿಂಗಳಗಟ್ಟಲೆ ಬೀಡುಬಿಟ್ಟಿದ್ದರು. ಆಗ ರಾಜ್ಯದಲ್ಲಿ ಅತೀ ದೊಡ್ಡ ಗೋಶಾಲೆಯನ್ನು ಮಾದನಹಿಪ್ಪರಗಿಯಲ್ಲಿ ತೆರೆಯಲಾಯಿತು. ಇದನ್ನು ನೋಡಲು ರಾಜ್ಯದ ಕೆಲ ಸಚಿವರು, ಶಾಸಕರು ಗೋಶಾಲೆಗೆ ಭೇಟಿ ನೀಡಿದ್ದರು. ಆದರೀಗ ಆಳಂದ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಚಿತ್ರಣ ಬದಲಾಗಿದೆ.
ಕಡು ಬೇಸಿಗೆ ಕಾಲದಲ್ಲೂ ಕುಡಿಯುವ ನೀರಿಗೆ ಬರವಿಲ್ಲ. ಜಾನುವಾರುಗಳಿಗೆ ಮೇವಿನ ಕೊರತೆಯಿಲ್ಲ. ಹಳ್ಳಕೊಳ್ಳ, ನಾಲಾಗಳಲ್ಲಿ ಜಾನುವಾರುಗಳಿಗೆ ನೀರು ಸಿಗುತ್ತಿದೆ. ಬಾವಿ, ಕೊಳವೆ ಬಾವಿಗಳಲ್ಲಿ ನೀರು ಬತ್ತಿಲ್ಲ. ರೈತರು ಬೇಸಿಗೆ ಕಾಲದಲ್ಲೂ ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಷ್ಟೆಲ್ಲ ಹೇಗಾಯಿತು? ಇದು ಶಿರಪುರ ಮಾದರಿಯಲ್ಲಿ ಹಳ್ಳಕೊಳ್ಳ ನಾಲಾಗಳಿಗೆ ನಿರ್ಮಿಸಿದ ಚೆಕ್ ಡ್ಯಾಂಗಳಿಂದ ಸಾಧ್ಯವಾಯಿತು.
ಮಳೆಗಾಲದಲ್ಲಿ ಬಿದ್ದ ಮಳೆ ನೀರು ಹರಿದು ಹೋಗದಂತೆ ಕೆರೆ, ಗೋಕಟ್ಟೆ ಹಳ್ಳ, ನಾಲಾಗಳಿಗೆ ಒಡ್ಡು ಕಟ್ಟಿ ನೀರು ನಿಲ್ಲಿಸಿದ್ದರಿಂದ ಸಾಧ್ಯವಾಯಿತು. ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪೂರ ತಾಲೂಕಿನಲ್ಲಿ “ಹಳ್ಳಿಗಳ ಪುನರುಜ್ಜೀವನ’ ಕಾರ್ಯಕ್ರಮದ ಮಾದರಿ ಇದು. ಮಳೆ ನೀರನ್ನು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಲು ಅಲ್ಲಿನ ಜನ ಹಳ್ಳಕೊಳ್ಳ, ನಾಲಾಗಳಿಗೆ ಒಡ್ಡು ಕಟ್ಟಿ (ಚೆಕ್ ಡ್ಯಾಂ)ದ್ದಾರೆ. ಇದರಿಂದ ಮಳೆ ನೀರು ಸಂಗ್ರಹವಾಗಿ ಅಂತರ್ಜಲ ನೀರಿನಮಟ್ಟ ಹೆಚ್ಚಳವಾಗಿದೆ. ಅಲ್ಲಿ ವಾರ್ಷಿಕ ಸರಾಸರಿ 400ಮಿ.ಮೀ ಮಳೆ ಬರುತ್ತದೆ. ಅಷ್ಟೇ ಮಳೆ ನೀರಿನ ಪ್ರಮಾಣದಲ್ಲಿ ಅಲ್ಲಿನ ರೈತರು ಸಾಕಷ್ಟು ಅಭಿವೃದ್ಧಿ ಹೊಂದಿದ್ದಾರೆ. ಅಲ್ಲಿನ ಸರಕಾರ ಮಳೆ ನೀರು ಹಿಡಿದಿಡುವ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದೆ.
ಈ ಯೋಜನೆ ಕುರಿತು ಅರಿಯಲು ಆಳಂದ ವಿಧಾನಸಭೆ ಮತಕ್ಷೇತ್ರದಲ್ಲಿ ಕಳೆದ ಅವಧಿಯಲ್ಲಿ ಶಾಸಕರಾಗಿದ್ದ ಬಿ.ಆರ್.ಪಾಟೀಲರು ಮಹಾರಾಷ್ಟ್ರ ರಾಜ್ಯದ ಧುಳೆ ಜಿಲ್ಲೆಗೆ ಅಧ್ಯಯನ ತಂಡ ಕಳುಹಿಸಿದ್ದರು. ಸ್ವತಃ ಅವರು ಹೋಗಿ ಅಲ್ಲಿನ ಜಲತಜ್ಞರಾದ ಸುರೇಶ ಖಾನಾಪುರ, ಲಾತೂರಿನ ಪಾಷಾ ಪಟೇಲ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದರು. ಪ್ರಾಯೋಗಿಕವಾಗಿ ತಾಲೂಕಿನಲ್ಲಿ ಕೆಲ ಹಳ್ಳಿಗಳಲ್ಲಿ 56ಕಿ.ಮೀ ಉದ್ದಳತೆಯಲ್ಲಿ 14ನಾಲಾಗಳಿಗೆ, 52 ಚೆಕ್ ಡ್ಯಾಂಗಳನ್ನು ನಿರ್ಮಿಸಲು ಆರ್ಥಿಕ ನೆರವಿಗಾಗಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿ.ಆರ್.ಪಾಟೀಲ ಮನವಿ ಮಾಡಿದ್ದರು. ಈ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರನ್ನು ಕರೆಯಿಸಿ ಉದ್ಘಾಟಿಸಿದ್ದರು.
ತಾಲೂಕಿನ ಬಬಲೇಶ್ವರ, ರುದ್ರವಾಡಿ, ಹೊದ ಲೂರು, ಜಂಬಗಾ(ಆರ್), ಕೋತನ ಹಿಪ್ಪರಗಾ, ಕಿಣ್ಣಿಸುಲ್ತಾನ, ಬಸವನ ಸಂಗೋಳಗಿ, ದೇಗಾಂವ್, ಪಡಸಾವಳಿ, ಖಾನಾಪುರ, ಹೆಬಳಿ, ಮಾದನಹಿಪ್ಪರಗಿ, ಚಲಗೇರಾ, ಮದಗುಣಕಿ, ಖೇಡಉಮರಗಾ, ದುತ್ತರ ಗಾಂವ್, ಸರಸಂಬಾ, ನಾಗಲೇಗಾಂವ್, ಸಕ್ಕರಗಾ, ಕಿಣ್ಣಿ ಅಬ್ಟಾಸ್, ಸಾವಳೇಶ್ವರ, ಮೋಘಾ(ಬಿ) ಮತ್ತು ಜಮಗಾ ಜೆ. ಸೇರಿದಂತೆ ಒಟ್ಟು 23 ಹಳ್ಳಿಗಳಲ್ಲಿ ಶಿರಪೂರ ಮಾದರಿ ಯೋಜನೆಯನ್ನು ಸಣ್ಣ ನೀರಾವರಿ ಇಲಾಖೆ ಕೈಗೆತ್ತಿಕೊಂಡಿತ್ತು. ಹೀಗಾಗಿ ಮಣ್ಣು ತುಂಬಿದ ನಾಲಾ ಮತ್ತು ಹಳ್ಳಗಳಲ್ಲಿ ಅಗೆತ ಶುರುಮಾಡಲಾಗಿತ್ತು. 10 ಮೀಟರ್ ಅಗಲ ಮತ್ತು 3ಮೀಟರ್ ಆಳ ತೋಡಿ, ಒಟ್ಟು 56 ಕಿ.ಮೀ ಉದ್ದದ ನಾಲೆಗಳಲ್ಲಿ 52ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಪ್ರತಿಯೊಂದು ಚೆಕ್ ಡ್ಯಾಂಗಳಲ್ಲಿ ಮೂರು ಜಲಪೂರಣ ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. ಈ ಯೋಜನೆಗೆ ಒಟ್ಟು 21.59ಲಕ್ಷ ರೂ. ತಗುಲಿದೆ.
ಈಗ ಎರಡು ವರ್ಷಗಳಿಂದ ಮಳೆ ಚೆನ್ನಾಗಿ ಬರುತ್ತಿದೆ. ಇಲ್ಲಿ ಬೇಸಿಗೆ ಕಾಲದಲ್ಲೂ ರೈತರು ನೀರಾವರಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಚೆಕ್ ಡ್ಯಾಂಗಳನ್ನು ನಿರ್ಮಿಸಿದ ನಾಲ್ಕೈದು ಕಿ.ಮೀ ದೂರದ ಬಾವಿ, ಕೊಳವೆಬಾವಿಗಳಲ್ಲಿಯೂ ಬೇಸಿಗೆಯಲ್ಲೂ ನೀರು ಕಾಣಸಿಗುತ್ತದೆ. ಒಟ್ಟಾರೆಯಾಗಿ ಶಿರಪೂರ ಮಾದರಿ ಯೋಜನೆಯಿಂದ ರೈತರ ಬಾಳಿಗೆ ಸಂತೋಷ ಒದಗಿಬಂದಿದೆ.
ಮಾಡಿದ ಕೆಲಸ ಜನರಪರವಾಗಿರಬೇಕು. ನಮ್ಮ ಅನುಕೂಲಕ್ಕಾಗಿ ಅಲ್ಲ. ಜನಮಾನಸದಲ್ಲೂ ಉಳಿಯುವಂತಹ ಕಾರ್ಯಗಳು ಬಹಳಷ್ಟಿವೆ. ಆದರೆ ಮಾಡುವ ಇಚ್ಛಾಶಕ್ತಿ ಇಲ್ಲದಿದ್ದರೇ ಅಭಿವೃದ್ಧಿ ಕುಂಠಿತವಾಗುತ್ತದೆ. ಶಿರಪೂರ ಮಾದರಿ ಯೋಜನೆ ರೈತರಿಗೆ, ಸಾರ್ವಜನಿಕರಿಗೆ ಸಂತಸ ತಂದಿದೆ. ಸರ್ಕಾರ ಈ ಯೋಜನೆಯನ್ನು ನೀರಿನ ಅಭಾವ ಇರುವ ಪ್ರದೇಶಗಳಿಗೆ ವಿಸ್ತರಿಸಬೇಕು. –ಬಿ.ಆರ್.ಪಾಟೀಲ, ಮಾಜಿ ಶಾಸಕ, ಆಳಂದ
-ಪರಮೇಶ್ವರ ಭೂಸನೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣ ತಾರ್ಕಿಕ ಅಂತ್ಯ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
Kalaburagi: ಭಾರತೀಯ ಸಂಸ್ಕೃತಿ ಉತ್ಸವ ಯಶಸ್ಸಿಗೆ ಸಕಲ ಸಿದ್ದತೆ
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
ಸಿದ್ಧಗಂಗಾ ಮಠದ ಶ್ರೀಸಿದ್ದಲಿಂಗ ಹೆಸರಿನಲ್ಲಿ ದೇಣಿಗೆ ವಸೂಲಿ: ಹಳೆ ವಿದ್ಯಾರ್ಥಿಗಳ ಬೇಸರ
Agriculture: ನೆಟೆರೋಗದಿಂದ ತೊಗರಿ ಸಂಪೂರ್ಣ ನಾಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.